ರೈತರ ಹೋರಾಟ ಬೆಂಬಲಿಸಿ, ಕಾಂಗ್ರೆಸ್ನಿಂದ ರಾಜಭವನ ಚಲೋ
ಬೆಂಗಳೂರು,ಜನವರಿ 20: ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಧ್ವನಿ ಎತ್ತಿರುವ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ.
ರಾಜ್ಯದ ಎಲ್ಲೆಡೆಯಿಂದ ಪಕ್ಷದ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಲಿದ್ದು, ಸುಮಾರು 8-10 ಸಾವಿರ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಈ ಹೋರಾಟದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ನಾಯಕರು, ಮುಖಂಡರು, ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ನಗರದ ಮೆಜಸ್ಟಿಕ್ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬಂದು ಸಮಾವೇಶಗೊಳ್ಳಲಿರುವ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಮೆರವಣಿಗೆ ನಡೆಸಲಿದ್ದಾರೆ.
12 ಗಂಟೆ ಸುಮಾರಿಗೆ ಅಲ್ಲಿ ಸಮಾವೇಶ ನಡೆಯಲಿದ್ದು, ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರು ಮಾತನಾಡಲಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಕೊರೋನಾ ಪರಿಹಾರ ನೀಡುವುದು ತಡವಾಗುತ್ತಿದೆ. ಬೆಳಿ ಏರಿಕೆ, ತೆರಿಗೆ ಏರಿಕೆಯಂತಹ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ಇದೇ ವೇಳೆ ಧ್ವನಿ ಎತ್ತಲಿದೆ.
ಈ ಸರ್ಕಾರದಿಂದ ನೊಂದಿರುವ ರೈತರು, ಎಲ್ಲಾ ವರ್ಗದ ಜನ ಈ ಪ್ರತಿಭಟನಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ. ನಾವು ಪಕ್ಷದ ಕಾರ್ಯಕರ್ತರ ಎಲ್ಲಾ ವಾಹನಗಳು ಬೆಳಗ್ಗೆ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಬಳಿ ಬಂದು, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ತೆರಳಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆಂದು ವಿವರಿಸಿದರು.
ಬಳಿಕ ವಿವಾದಿತ ಕೃಷಿ ಕಾಯ್ದೆಗಳನ್ನು ಪಾವಸ್ ಪಡೆಯಬೇಕು, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಕೋವಿಡ್ ನಿಂದ ಮೃತಪಟ್ಟ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ವಾರಿಯರ್ಸ್ ಗಳಿಗೆ ಕೂಡಲೇ ನಿಗದಿತ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ.
ರಾಜಭವನ ಚಲೋ ಇರುವುದರಿಂದ ಕಬ್ಬನ್ ಪಾರ್ಕ್, ಡಾ. ಅಂಬೇಡ್ಕರ್ ವೀದಿ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ.
ಪರ್ಯಾಯ ಮಾರ್ಗ: ಬೆಂಗಳೂರಿನ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಕಾರ್ಪೊರೇಷನ್, ವಿಧಾನಸೌಧ, ಬನಶಂಕರಿಯತ್ತ ತೆರಳುವ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ.
ಓಕಳಿಪುರಂ ಜಂಕ್ಷನ್ಗೆ ವಾಹನಗಳಿಗೆ ಪ್ರವೇಶ ಇಲ್ಲ. ಓಕಳಿಪುರಂನಿಂದ ಕೃಷ್ಣ ಫ್ಲೋರ್ ಮಿಲ್ ಕಡೆ ಡೈವರ್ಟ್ ಮಾಡಲಾಗಿದೆ. ಶಾಂತಲಾ ಸಿಲ್ಕ್ ನಿಂದ ಮೆಜೆಸ್ಟಿಕ್ ಗೆ ಬರುವ ವಾಹನ ಡೈವರ್ಟ್ ಮಾಡಲಾಗಿದೆ. ಮಲ್ಲೇಶ್ವರಂ ಸರ್ಕಲ್ನಲ್ಲಿಯೇ ವಾಹನಗಳ ಡೈವರ್ಟ್ ಮಾಡಲಾಗಿದ್ದು ರೇಸ್ಕೋರ್ಸ್ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಪ್ರತಿಭಟನಾ ರ್ಯಾಲಿ ಆರಂಭವಾಗುತ್ತಿದ್ದಂತೆ ಕೆಲ ರಸ್ತೆಗಳಲ್ಲಿ ಸಂಚಾರ ಬಂದ್ ಆಗಲಿದೆ. ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ಇಂದು ರ್ಯಾಲಿ ಆರಂಭವಾಗುತ್ತಿದ್ದಂತೆ ಶೇಷಾದ್ರಿ ರೋಡ್ ಬಂದ್ ಆಗಲಿದೆ. ಟ್ರಾಫಿಕ್ ನಿಯಂತ್ರಣಕ್ಕೆ 220 ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಲಾಗಿದೆ