ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ, ವೈದ್ಯಕೀಯ ಸಚಿವರ ನೆರವಿನಿಂದ 'ನೀಟ್' ಆಯ್ತು ಪರೀಕ್ಷೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್.14: ನೀಟ್ ಪರೀಕ್ಷೆ ಬರೆಯಬೇಕು ಎಂದುಕೊಂಡ ವಿದ್ಯಾರ್ಥಿನಿಗೆ ಕೊರೊನಾವೈರಸ್ ಸೋಂಕು ಅಡ್ಡಿಯಾಗಿತ್ತು. ಬಹುದಿನಗಳ ಆಶಾಗೋಪುರವೇ ಕಳಚಿತು ಎನ್ನುವಷ್ಟರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನೆರವಿನಿಂದ ವಿದ್ಯಾರ್ಥಿನಿಯ ಕನಸು ನನಸಾಗಿದೆ.

ಭವಿಷ್ಯದ ಬಗ್ಗೆ ಚಿಂತೆಗೀಡಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಲ್ಲೇನಹಳ್ಳಿಯ ವಿದ್ಯಾರ್ಥಿನಿ ತನುಜಾ ಕರೇಗೌಡ್ರ ನೀಟ್ ಪರೀಕ್ಷೆ ಬರೆಯುವುದಕ್ಕೆ ಬುಧವಾರ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಬೆಂಗಳೂರಿನ ಬಸವನಗುಡಿಯ ಕೇಂದ್ರದಲ್ಲಿ ವಿದ್ಯಾರ್ಥಿನಿ ತನುಜಾ ನಿರಾತಂಕವಾಗಿ ನೀಟ್ ಪರೀಕ್ಷೆ ಬರೆದಿದ್ದಾರೆ.

ನೀಟ್ 2020 ಪರೀಕ್ಷೆ ಫಲಿತಾಂಶ ಯಾವಾಗ? ಎಲ್ಲಿ ನೋಡ್ಬಹುದು?ನೀಟ್ 2020 ಪರೀಕ್ಷೆ ಫಲಿತಾಂಶ ಯಾವಾಗ? ಎಲ್ಲಿ ನೋಡ್ಬಹುದು?

ಶಿವಮೊಗ್ಗದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ತನುಜಾ ವೈದ್ಯೆಯಾಗಿ ಸಮಾಜದ ಸೇವೆ ಮಾಡುವ ಕನಸು ಹೊತ್ತಿದ್ದಾರೆ. ಮಗಳ ಕನಸಿಗೆ ಕೃಷಿಕರಾಗಿರುವ ತಂದೆ ನಾಗರಾಜ ಹೆಗಲಾಗಿ ನಿಂತಿದ್ದಾರೆ. ಕಳೆದ ವರ್ಷವಷ್ಟೇ ತನುಜ ಪಿಯುಸಿ ಪೂರ್ಣಗೊಳಿಸಿದ್ದರು. ವಿದ್ಯಾರ್ಥಿನಿ ಪ್ರತಿಭೆ ಮೆಚ್ಚಿದ್ದ ನವೋದಯ ಶಾಲೆಯ ಆಡಳಿತ ಮಂಡಳಿ ಪುಣೆಯಲ್ಲಿ ನಡೆಯುವ ಕೋಚಿಂಗ್ ‍ಗೂ ತನುಜಾರನ್ನು ಆಯ್ಕೆ ಮಾಡಿತ್ತು.

ಕಂಟೇನ್ಮೆಂಟ್ ಝೋನ್ ನಲ್ಲಿ ತನುಜಾ ಮನೆ

ಕಂಟೇನ್ಮೆಂಟ್ ಝೋನ್ ನಲ್ಲಿ ತನುಜಾ ಮನೆ

ಕಳೆದ ಸೆಪ್ಟೆಂಬರ್.13 ರಂದು ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನೀಟ್ ಪರೀಕ್ಷೆಗಳನ್ನು ಏರ್ಪಡಿಸಿತ್ತು. ಈ ವೇಳೆ ವಿದ್ಯಾರ್ಥಿನಿ ತನುಜಾ ನಿವಾಸವಿರುವ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಿರಲಿಲ್ಲ. ಅಲ್ಲದೇ ಅಂದು ತನುಜಾರಲ್ಲಿ ಸ್ವಲ್ಪ ಜ್ವರ ಕಾಣಿಸಿಕೊಂಡ ಹಿನ್ನೆಲೆ ನೀಟ್ ಪರೀಕ್ಷೆ ಬರೆಯಬೇಕೆಂಬ ಕನಸು ಈಡೇರಿರಲಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದ ನಂತರ ಎನ್‍ಟಿಎ ಮತ್ತೊಮ್ಮೆ ಪರೀಕ್ಷೆ ಏರ್ಪಡಿಸಿದ್ದು, ಈ ಬಾರಿ ಪರೀಕ್ಷೆ ಬರೆಯಲು ಕೊವಿಡ್-19 ಸಂಬಂಧಿತ ವರದಿ ಹಾಗೂ ದಾಖಲೆಗಳನ್ನು ಇ-ಮೇಲ್ ಮೂಲಕ ಕಳುಹಿಸುವಂತೆ ಎನ್‍ಟಿಎ ಸೂಚಿಸಿತ್ತು.

ಎನ್ ಟಿಎ ನೀಡಿದ ಅವಕಾಶದಿಂದ ಮತ್ತೆ ಸಂತಸಗೊಂಡ ತನುಜಾರಿಗೆ ದಾಖಲೆಗಳನ್ನು ಇ-ಮೇಲ್ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಹಳ್ಳಿಯಲ್ಲಿನ ನೆಟ್ ವರ್ಕ್ ಸಮಸ್ಯೆ, ಕೊವಿಡ್ ವರದಿಗೆ ಸಂಬಂಧಿಸಿದ ದಾಖಲೆ ರವಾನಿಸುವುದಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಪರೀಕ್ಷೆ ಬರೆಯಲಿದ್ದ ಮತ್ತೊಂದು ಅವಕಾಶವೂ ತಪ್ಪಿತ್ತು.

ತನುಜಾ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ

ತನುಜಾ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ

ನೀಟ್ ಪರೀಕ್ಷೆಗಾಗಿ ದಾಖಲೆಗಳನ್ನು ರವಾನಿಸುವಲ್ಲಿ ತಮಗಾದ ಸಮಸ್ಯೆ ಬಗ್ಗೆ ವಿದ್ಯಾರ್ಥಿನಿ ತನುಜಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದನ್ನು ಗಮನಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ.ಸುಧಾಕರ್ ಮಧ್ಯಪ್ರವೇಶಿಸಿ ನೆರವು ನೀಡಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎನ್ ಟಿಎ ತಾಂತ್ರಿಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಮೂಲಕ ವಿದ್ಯಾರ್ಥಿನಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸಿಎಂ, ಸಚಿವರಿಗೆ ತನುಜಾ ಪೋಷಕರ ಕೃತಜ್ಞತೆ

ಸಿಎಂ, ಸಚಿವರಿಗೆ ತನುಜಾ ಪೋಷಕರ ಕೃತಜ್ಞತೆ

"ಮಗಳು ಇನ್ನು ನೀಟ್ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ ಎಂಬ ಆತಂಕ ಉಂಟಾಗಿತ್ತು. ಆದರೆ ಸರಿಯಾದ ಸಮಯದಲ್ಲಿ ಸಿಎಂ, ಸಚಿವರು ಮಧ್ಯಪ್ರವೇಶಿಸಿದ್ದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ದಾಖಲೆಗಳನ್ನು ಸಲ್ಲಿಸುವುದು ತಡವಾಗಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಪರೀಕ್ಷೆ ನಡೆಸುವ ಏಜೆನ್ಸಿಯವರು ಹೇಳಿದ್ದರು. ಸಿಎಂ ಹಾಗೂ ಸಚಿವರಿಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ತನುಜಾ ತಾಯಿ ಹಿರಿಯಮ್ಮ ಕೃತಜ್ಞತೆ ತಿಳಿಸಿದ್ದಾರೆ.

Recommended Video

Kusuma ಗೆ ದೊಡ್ಡ Shock | Oneindia Kannada
ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ ತನುಜಾ ಅನಿಸಿಕೆ

ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ ತನುಜಾ ಅನಿಸಿಕೆ

"ಸರ್ಜನ್ ಆಗಿ ಜನರ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಕನಸನ್ನು ಹೊಂದಿದ್ದೇನೆ. ಈಗ ನೀಟ್ ಪರೀಕ್ಷೆಯನ್ನು ಯಾವುದೇ ಆತಂಕ ಇಲ್ಲದೆ ಬರೆದಿದ್ದೇನೆ. ಪರೀಕ್ಷೆ ಬಹಳ ಚೆನ್ನಾಗಿತ್ತು ಎಂದೆನಿಸಿದೆ. ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸಿಎಂ ಹಾಗೂ ಸಚಿವರಿಗೆ ಧನ್ಯವಾದ" ಎಂದು ವಿದ್ಯಾರ್ಥಿನಿ ತನುಜ ಹೇಳಿದ್ದಾರೆ.

English summary
CM And Health Minister Rescue Of Student Who Was Struggling To Appear For NEET Exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X