ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮಸ್ಯೆಗಳ ಆಗರವಾಗುತ್ತಿರುವ ಬೆಂಗಳೂರು, ಬಿಬಿಎಂಪಿ ನಿಜಕ್ಕೂ ಅಸ್ತಿತ್ವದಲ್ಲಿದೆಯೇ?

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಗುಂಡಿ ಬಿದ್ದ ರಸ್ತೆಗಳು, ಕಸದ ರಾಶಿಗಳಿಂದ ಬೆಂಗಳೂರು ತುಂಬಿಹೋಗಿದೆ. ಇದರಿಂದಾಗಿ ಉದ್ಯಾನ ನಗರವಾಗಿದ್ದ ಬೆಂಗಳೂರು ಕೊಳಚೆ ಮತ್ತು ಕಸದ ನಗರವಾಗಿ ಮಾರ್ಪಟ್ಟಿರುವುದು ವಿಪರ್ಯಾಸ. ಮಾರೇನಹಳ್ಳಿ, ಬೆಲ್ಲಹಳ್ಳಿ ಮತ್ತು ಮಿಟಗಾನಹಳ್ಳಿ ಕ್ವಾರಿಗಳು ಭರ್ತಿಯಾಗಿದ್ದು, ಕಸವನ್ನು ವಿಲೇವಾರಿ ಮಾಡಲು ಪರ್ಯಾಯ ಜಾಗವಿಲ್ಲದೆ, ಕಸವನ್ನು ನಗರದ ಬೀದಿ ಬೀದಿಗಳಲ್ಲಿ ಗುಡ್ಡೆ ಹಾಕಲಾಗಿದ್ದು, ಬೀದಿಗಳೇ ಕಸ ವಿಲೇವಾರಿ ಘಟಕಗಳಂತಾಗಿವೆ ಎಂದು ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ, ಆರೋಪಿಸಿದೆ.

ಟೆಂಡರ್ ಕರೆದು ಕಸವನ್ನು ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಸಮಯ ವಿಳಂಬ ಮಾಡಿ ಇದುವರೆಗೆ ಮೂರು ಬಾರಿ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಿದೆ. ಆ ಮೂಲಕ KRIDL (ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ)ಗೆ ಕಸ ವಿಲೇವಾರಿ ಜವಾಬ್ದಾರಿಯನ್ನು ವಹಿಸಿ, ದುಡ್ಡಿನ ಲೂಟಿ ಹೊಡೆಯುವ ಹುನ್ನಾರವನ್ನು ಬಿಬಿಎಂಪಿ ಮಾಡಿದೆ.

ಬಿಬಿಎಂಪಿಯ ಕಳ್ಳಾಟ ಮತ್ತು ಕಳಪೆ ಕಾಮಗಾರಿಗಳಿಂದಾಗಿ ರಸ್ತೆಗಳು ಮಳೆನೀರಿನಲ್ಲಿ ತೋಯ್ದು ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಹೆಚ್ಚು ವಾಹನ ದಟ್ಟಣೆ ಇರುವ ನಗರದಲ್ಲಿ ಅಫಘಾತಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿವೆ. ಸಾರ್ವಜನಿಕರು ಅಪಘಾತದ ಭೀತಿಯಿಂದಲೇ ವಾಹನ ಚಲಾಯಿಸುವಂತಹ ಭಯದ ವಾತಾವರಣ ಬೆಂಗಳೂರಿನಲ್ಲಿ ಸೃಷ್ಟಿಯಾಗಿದೆ. ರಸ್ತೆಗುಂಡಿಗಳಲ್ಲಿ ನಿಂತ ನೀರು ಕೊಳಚೆಯಾಗಿ, ಕಸವು ರಸ್ತೆ ಬದಿಯೇ ಕೊಳೆತು ಸಾಂಕ್ರಮಿಕ ರೋಗಗಳನ್ನು ಹರಡುವ ವೈರಾಣುಗಳ ಉತ್ಪಾದನಾ ತಾಣವಾಗಿದೆ.

ಬಿಬಿಎಂಪಿ ನೂತನ ಆಯುಕ್ತರಾಗಿ ಬಿಎಚ್ ಅನಿಲ್ ಕುಮಾರ್ ನೇಮಕ ಬಿಬಿಎಂಪಿ ನೂತನ ಆಯುಕ್ತರಾಗಿ ಬಿಎಚ್ ಅನಿಲ್ ಕುಮಾರ್ ನೇಮಕ

ಇದೆಲ್ಲರಿಂದಾಗಿ ಬೆಂಗಳೂರಿನಾದ್ಯಂತ ಡೆಂಘೀ ಜ್ವರ ತಾಂಡವವಾಡುತ್ತಿದ್ದು, ಬೆಂಗಳೂರಿನ 62 ವಾರ್ಡ್ ಗಳು ಡೆಂಘೀ ಪೀಡಿತ ವಾರ್ಡ್ ಗಳಪಟ್ಟಿಯಲ್ಲಿವೆ. 2019ರ ಜನವರಿಯಿಂದ ಇಲ್ಲಿಯವರೆಗೆ 5352 ಡೆಂಘೀ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ದಾಖಲಾಗಿವೆ. ಒಂದು ಕೋಟಿಗೂ ಅಧಿಕ ಜನರಿರುವ ಬೆಂಗಳೂರಿನಲ್ಲಿ ಜನರ ಆರೋಗ್ಯಕ್ಕಾಗಿ 2018-19ನೇ ಸಾಲಿನಲ್ಲಿ 100 ಕೋಟಿ ರೂಗಳಿಗಿಂತ ಹೆಚ್ಚು ಅನುದಾನವನ್ನು ಮೀಸಲಿಟ್ಟಿದ್ದು ಕೇವಲ 31 ಕೋಟಿ ರೂಗಳನ್ನು ಖರ್ಚುಮಾಡಿದೆ. ಇದರಲ್ಲಿ ಸರಾಸರಿ 29 ರೂಗಳನ್ನಷ್ಟೇ ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಖರ್ಚು ಮಾಡಿದೆ. ಇಂತಹ ನಿರ್ಲಕ್ಷ್ಯವನ್ನು ನೋಡಿದರೆ, ಬಿಬಿಎಂಪಿಯ ಕಾರ್ಪೋರೇಟರ್ ಗಳೇ ಅನಾರೋಗ್ಯಕ್ಕೆ ತುತ್ತಾಗಿ ಕೆಲಸ ಮಾಡಲಾಗದೆ ಸೊರಗಿಹೋಗಿದ್ದಾರೆಯೇ ಎಂದೆನಿಸುತ್ತದೆ.

ಘನತ್ಯಾಜ್ಯ ವಿಲೇವಾರಿ ಘಟಕ

ಘನತ್ಯಾಜ್ಯ ವಿಲೇವಾರಿ ಘಟಕ

NGT(ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ)ಯು ಪ್ರತಿ ವಾರ್ಡ್ ನಲ್ಲಿಯೂ ಜೈವಿಕ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು ಎಂದು ಹೇಳಿತ್ತು. ಆದರೆ ಅದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲು ಸಾಧ್ಯವಿಲ್ಲ, ಎಲ್ಲಾ ವಾರ್ಡ್ ಗಳಲ್ಲಿಯೂ ನಮ್ಮಲ್ಲಿ ಜಾಗವಿಲ್ಲ ಎಂದು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬೇಜವಾಬ್ದಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಕಸವನ್ನು ಮರುಬಳಕೆಗೆ ಬಳಸಿಕೊಂಡು ವಿದ್ಯುತ್, ಗೊಬ್ಬರದಂತಹ ಹಲವು ಉತ್ಪನ್ನಗಳನ್ನು ತಯಾರಿಸುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿರುವ ಸಂದರ್ಭದಲ್ಲಿಯೂ, ಆಯಾ ವಾರ್ಡ್ ಗಳಲ್ಲಿಯೇ ಕಸವನ್ನು ವಿಲೇವಾರಿ ಮಾಡಲಾಗದಷ್ಟು ಅಸಮರ್ಥ ಅಧಿಕಾರಿಗಳು ಹಾಗೂ ಬೇಜವಾಬ್ದಾರಿ ಕಾರ್ಪೋರೇಟರ್ ಹೊಂದಿರುವ ಬೆಂಗಳೂರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ತಗೆದುಕೊಳ್ಳದೇ ಇರುವುದು ಶೋಚನೀಯ. ಬಿಬಿಎಂಪಿ ಆಯಕ್ತರಾಗಿ ಹೊಸದಾಗಿ ನೇಮಕಗೊಂಡಿರುವ ಅನಿಲ್ ಕುಮಾರ್ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ.

ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡ ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡ

ಒಂದು ತಿಂಗಳಾದರೂ ಬಿಎಸ್ವೈ ಏಕಪಾತ್ರಾಭಿನಯ

ಒಂದು ತಿಂಗಳಾದರೂ ಬಿಎಸ್ವೈ ಏಕಪಾತ್ರಾಭಿನಯ

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಒಂದು ತಿಂಗಳಾದರೂ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾಗದೆ ನಾಮಕಾವಸ್ಥೆಯ ಸಚಿವ ಸಂಪುಟದೊಂದಿಗೆ ಏಕಪಾತ್ರ ಅಭಿನಯ ಮಾಡುತ್ತಿದ್ದಾರೆ. ಅಲ್ಲದೇ, ತನ್ನ ಅಧಿಕಾರ ಸ್ಥಾಪಿಸಲು ಬಿಬಿಎಂಪಿಯ ಬಜೆಟನ್ನು ತೆಡೆಹಿಡಿದಿರುವುದು ಒಂದೆಡೆಯಾದರೆ, ಸಚಿವ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೇ ಇಲ್ಲದಿರುವುದು ಮತ್ತೊಂದೆಡೆಯಾಗಿದೆ. ಇದೆಲ್ಲದರ ಜೊತೆಗೆ ಬಿಬಿಎಂಪಿ ಮೇಯರ್ ಅವರ ಅಧಿಕಾರಾವಧಿ ಮುಗಿಯುತ್ತಾ ಬಂದಿದ್ದು, ಬಿಬಿಎಂಪಿಯಲ್ಲೂ ಆಪರೇಷನ್ ನಡೆಸಿ ಬಿಜೆಪಿ ಆಧಿಕಾರ ಹಿಡಿಯಲು ಹವಣಿಸುತ್ತಿದೆ.

ಕಾರ್ಪೋರೇಟರ್ ಗಳು ಅಧಿಕಾರದಲ್ಲಿದ್ದರೂ ಏನೂ ಮಾಡ್ತಿಲ್ಲ

ಕಾರ್ಪೋರೇಟರ್ ಗಳು ಅಧಿಕಾರದಲ್ಲಿದ್ದರೂ ಏನೂ ಮಾಡ್ತಿಲ್ಲ

ಇದೆಲ್ಲದರಿಂದಾಗಿ ಕಾರ್ಪೋರೇಟರ್ ಗಳು ಅಧಿಕಾರದಲ್ಲಿದ್ದರೂ ಏನೂ ಮಾಡಲಾಗುತ್ತಿಲ್ಲವೆಂಬಂತೆ ಗೊಂದಲ್ಲಿರುವಂತೆ ನಾಟಕ ಆಡುತ್ತಿದ್ದಾರೆ. ಒಟ್ಟಿನಲ್ಲಿ ಸಚಿವರೇ ಇಲ್ಲದ ನಗರಾಭಿವೃದ್ಧಿ ಇಲಾಖೆ ಮತ್ತು ಬಜೆಟ್ ಅನುಷ್ಠಾನಗೊಳಿಸುವ ಅಧಿಕಾರವಿಲ್ಲದ ಬಿಬಿಎಂಪಿಯ ಅವಸ್ಥೆಗಳಿಂದಾಗಿ ಬೆಂಗಳೂರಿಗೆ ದಿಕ್ಕು-ದಾರಿ ಎರಡೂ ಇಲ್ಲದೆ, ಬೆಂಗಳೂರು ಸಮಸ್ಯೆಗಳ ಆಗರವಾಗಿ, ಜನರು ಪರಿತಪಿಸುವಂತಾಗಿದೆ.

ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ನಂತರ ವಾರದಲ್ಲಿ ಮೂರು ದಿನ ದೆಹಲಿ ಸುತ್ತಾಡುತ್ತಿದ್ದಾರೆ. ಅವರ ದೆಹಲಿ ಸುತ್ತಾಟದಿಂದಲೂ ರಾಜ್ಯಕ್ಕೆ ಕವಡೆ ಕಾಸಿನ ಉಪಯೋಗವಾಗಿಲ್ಲ. 2015ರಲ್ಲಿ ಬಿಬಿಎಂಪಿಯಲ್ಲಿ ಹೊಸದಾಗಿ ಆಡಳಿತ ರಚನೆಯಾದಾಗಿನಿಂದ ಇಲ್ಲಿಯವರೆಗೂ ಬಿಬಿಎಂಪಿಯ ಕಾರ್ಪೋರೇಟರ್ ಗಳು ಮಳೆ ಬಂದು ಗುಂಡಿ ಬಿದ್ದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವುದು, ಒಂದಷ್ಟು ಕಾಮಗಾರಿಗಳನ್ನು ಮಾಡಿಸಿ ಕಮಿಷನ್ ಪಡೆಯುವುದನ್ನು ಬಿಟ್ಟರೆ ಬೆಂಗಳೂರಿಗೆ ಬೇಕಾದ ಒಂದಾದರೂ ಸಮರ್ಪಕ ಯೋಜನೆಯನ್ನು ರೂಪಿಸಿಲ್ಲ.

 ಈಗಲಾದರೂ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಲಿ

ಈಗಲಾದರೂ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಲಿ

• ರಾಜ್ಯ ಸರ್ಕಾರ ತಡೆಹಿಡಿದಿರುವ ಬಿಬಿಎಂಪಿ ಬಜೆಟನ್ನು ತುರ್ತಾಗಿ ಅನುಷ್ಠಾನ ಮಾಡಬೇಕು.

• ಬೆಂಗಳೂರಿನ ಬಗ್ಗೆ ಕಾಳಜಿ ಇರುವ ನಗರಾಭಿವೃದ್ಧಿ ಸಚಿವರನ್ನು ಕೂಡಲೇ ನೇಮಕ ಮಾಡಿ, ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯೋನ್ಮುಖರಾಗಬೇಕು.

• ಎಲ್ಲಾ ವಾರ್ಡ್ ಗಳಲ್ಲಿಯೂ ಜೈವಿಕ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಬೇಕು.

• ಕಸ ವಿಲೇವಾರಿಯ ಟೆಂಡರ್ ಪ್ರಕ್ರಿಯೆಯನ್ನು ಇನ್ನೂ ಸಮಯವಿಳಂಬ ಮಾಡದೆ ಪ್ರಕ್ರಿಯೆ ಮುಗಿಸಬೇಕು.

• ಪ್ರತಿ ವಾರ್ಡ್ಗಳಿಗೂ ಅಗತ್ಯವಿರುವಷ್ಟು ಪೌರ ಕಾರ್ಮಿಕರನ್ನು ನೇಮಿಸಬೇಕು. ಅವರು ಸುರಕ್ಷಿತವಾಗಿ ಕೆಲಸ ಮಾಡಲು ಬೇಕಾಗಿರುವ ಸಾಮಗ್ರಿಗಳನ್ನು ಒದಗಿಸಬೇಕು.

• ಬೆಂಗಳೂರು ಜನರ ಆರೋಗ್ಯಕ್ಕೆ ಮೀಸಲಿಟ್ಟಿರುವ ಹಣವನ್ನು ಸಮರ್ಪಕವಾಗಿ ಬಳಸಿ, ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕು.

• ರಸ್ತೆಗಳಲ್ಲಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಿಸಬೇಕು. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಮುಂದಿನ ಟೆಂಡರ್ ಗಳಿಗೆ ನಿರ್ಭಂದಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ.

ಮೇಲಿನ ಆಗ್ರಹಗಳನ್ನು ತುರ್ತಾಗಿ ಕೈಗೆತ್ತಿಕೊಂಡು ಕೆಲಸ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನಾದ್ಯಂತ ಜನಪರ ಸಂಘಟನೆಗಳನ್ನು ಒಟ್ಟುಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡುತ್ತೇವೆ.

English summary
Bangalore today is riddled with potholed roads and garbage dumps everywhere you look. It has gone from being the garden city to a city of filth and sewage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X