• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಲೋಕ 15ರ ಸಂಭ್ರಮ, ಮರಕಿಣಿ ಟಚ್ ಸ್ಕ್ರೀನ್ ರಿಲೀಸ್

By Mahesh
|

ಕನ್ನಡ ಸಿನಿಮಾ ಪತ್ರಿಕೋದ್ಯಮ ಅಂದಾಕ್ಷಣ ನೆನಪಾಗುವ ಹೆಸರು ಉದಯ ಮರಕಿಣಿ. ಸಿನಿಮಾ ಲೇಖನಗಳಿಗೊಂದು ಘನತೆ ಮತ್ತು ಸಿನಿಮಾ ವಿಮರ್ಶೆಗಳಿಗೊಂದು ಹೊಸ ಆಯಾಮ ನೀಡಿದವರು ಮರಕಿಣಿ.

ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಅಡ್ಯನಡ್ಕವೆಂಬ ಪುಟ್ಟ ಊರಿಂದ ಬೆಂಗಳೂರೆಂಬ ಜನಾರಣ್ಯ ಪ್ರವೇಶ ಮಾಡಿದ ಉದಯ್ ಹೊಟ್ಟೆಪಾಡಿಗಾಗಿ ನಾನಾ ರೀತಿಯ ಉದ್ಯೋಗಗಳನ್ನು ಮಾಡಿ ಕೊನೆಗೆ ಸೆಟ್ಲ್ ಆಗಿದ್ದು ಪತ್ರಿಕೋದ್ಯಮದಲ್ಲಿ. ಆರಂಭದಲ್ಲಿ ಅರಗಿಣಿ ಸಿನಿಮಾ ವಾರಪತ್ರಿಕೆ, ಅಲ್ಲಿಂದ ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಸುವರ್ಣ ನ್ಯೂಸ್ ಹೀಗೇ ಸಿನಿಮಾ ಪತ್ರಕರ್ತರಾಗಿಯೇ ಗುರುತಿಸಿಕೊಂಡು ಸಾಕಷ್ಟು ಹೆಸರು ಮಾಡಿರುವ ಉದಯ್ ಸದ್ಯಕ್ಕೆ ಹಾಯ್ ಬೆಂಗಳೂರ್ ಬಳಗದ ಓ ಮನಸೇ ಪತ್ರಿಕೆಯ ಸಂಪಾದಕ.

ಸಂಯುಕ್ತ ಕರ್ನಾಟಕದ ಸಂಪಾದಕ ಕೆ. ಶಾಮರಾಯರಿಂದ ಶುರುವಾಗಿ ವೈಎನ್ಕೆ, ಸಿ. ಸೀತಾರಾಮ್, ಎಸ್.ಕೆ. ಶಾಮ ಸುಂದರ, ಎಚ್.ಆರ್. ರಂಗನಾಥ್, ರವಿ ಬೆಳಗೆರೆ, ಕೆ. ಸತ್ಯನಾರಾಯಣ, ವೆಂಕಟನಾರಾಯಣ, ವಿಶ್ವೇಶ್ವರ ಭಟ್ - ಹೀಗೇ ಪತ್ರಿಕೋದ್ಯಮದ ದೊಡ್ಡದೊಡ್ಡ ಹೆಸರುಗಳ ಜೊತೆ ದುಡಿದಿದ್ದು ಇವರ ಹೆಗ್ಗಳಿಕೆ.

ಕನ್ನಡ ಪ್ರಭದ ಸಿನಿಮಾ ಪುರವಣಿ ಚಿತ್ರಪ್ರಭ ದೇಶದಲ್ಲಿಯೇ ನಂಬರ್ ಒನ್ ಸಿನಿಮಾ ಪುರವಣಿ ಎಂಬ ಮಟ್ಟಕ್ಕೇರುವುದಕ್ಕೆ ಸೀತಾರಾಮ್, ಶಾಮ್ ಮತ್ತು ಉದಯ್ - ಈ ತ್ರಿವಳಿಗಳೇ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು. ಅನಂತರದ ದಿನಗಳಲ್ಲಿ ಜೋಗಿ ಈ ತಂಡವನ್ನು ಸೇರಿಕೊಂಡರು. ಅದರಿಂದ ಚಿತ್ರೋದ್ಯಮ ಮತ್ತು ಸಿನಿಮಾ ಓದುಗರಿಗೆ ಆದ ಲಾಭ ಅಷ್ಟಿಷ್ಟಲ್ಲ.

ಸಿನಿಮಾ ಪತ್ರಕರ್ತರಾಗಿ ಹೆಚ್ಚಕಮ್ಮಿ ಮೂರು ದಶಕಗಳ ಅನುಭವ ಇದ್ದರೂ ಇಲ್ಲಿಯತನಕ ಉದಯ್ ಒಂದೇ ಒಂದು ಪುಸ್ತಕವನ್ನೂ ಬರೆಯಲಿಲ್ಲ ಅನ್ನುವುದು ಅಚ್ಚರಿಯ ಸಂಗತಿ. ಈಗ ಅವರ ಗೆಳೆಯರ ಒತ್ತಾಸೆ ಮೇರೆಗೆ ಅವರ ಮೊದಲ ಪುಸ್ತಕ ‘ಟಚ್ ಸ್ಕ್ರೀನ್' (ಮೂರು ದಶಕಗಳ ಸಿನಿಮಾ ಶಿಕಾರಿ) ಪ್ರಕಟವಾಗುತ್ತಿದೆ. ಉದಯ ಮರಕಿಣಿರವರ 'ಉಮ ಕಾಲಂ' ಈಗ 'ಟಚ್ ಸ್ಕ್ರೀನ್' ಆಗಿ ಪುಸ್ತಕ ರೂಪದಲ್ಲಿ ಬರುತ್ತಿದ್ದು ಪುಸ್ತಕಕ್ಕೆ ಆಕರ್ಷಕ ವಿನ್ಯಾಸವನ್ನು ವೀರೇಶ್ ಹೊಗೆಸೊಪ್ಪಿನವರ್ ಹೊದೆಸಿದ್ದಾರೆ.

ಚಿತ್ರಲೋಕ ಡಾಟ್ ಕಾಂನ 15ನೇ ವರ್ಷಾಚರಣೆ

ಚಿತ್ರಲೋಕ ಡಾಟ್ ಕಾಂನ 15ನೇ ವರ್ಷಾಚರಣೆ

ಕೆ.ಎಂ. ವೀರೇಶ್ ಅವರ ಸಂಪಾದಕತ್ವದ ‘ಚಿತ್ರಲೋಕ ಡಾಟ್ ಕಾಂ' ವೆಬ್ ಸೈಟಲ್ಲಿ ಕಳೆದ ಒಂದು ವರ್ಷದಿಂದ ಪ್ರಕಟವಾಗುತ್ತಿರುವ ‘ಉಮ ಕಾಲಂ'ನ ಸಂಗ್ರಹರೂಪವಿದು.

ಸರಳ, ಸುಭಗ ಶೈಲಿಯಲ್ಲಿ ಬರೆಯುವ ಉದಯ್ ಅವರ ಲೇಖನಗಳು ಸಮಕಾಲೀನ ಕನ್ನಡ ಸಿನಿಮಾ ಚರಿತ್ರೆಯ ಕೆಲವು ಪುಟಗಳನ್ನು ತೆರೆದಿಡುತ್ತದೆ. ಇದೇ ಜುಲೈ 3ರಂದು ಚಿತ್ರಲೋಕ ಡಾಟ್ ಕಾಂನ 15ನೇ ವರ್ಷದ ಹುಟ್ಟುಹಬ್ಬದ ಜೊತೆಗೇ ಈ ಪುಸ್ತಕವೂ ಲೋಕಾರ್ಪಣೆಯಾಗಲಿದೆ.

'ಟಚ್ ಸ್ಕ್ರೀನ್' ಬಗ್ಗೆ ಉದಯ್ ಗೆಳೆಯರ ಮಾತು

'ಟಚ್ ಸ್ಕ್ರೀನ್' ಬಗ್ಗೆ ಉದಯ್ ಗೆಳೆಯರ ಮಾತು

'ಟಚ್ ಸ್ಕ್ರೀನ್' ಬಗ್ಗೆ ಹಾಯ್ ಬೆಂಗಳೂರ್ ಸಂಪಾದಕ ರವಿಬೆಳಗೆರೆ, ಕನ್ನಡಪ್ರಭ ಸಂಪಾದಕ ವಿಶ್ವೇಶ್ವರ ಭಟ್, ಉದಯವಾಣಿ ಸಂಪಾದಕ ರವಿ ಹೆಗಡೆ, ಉದಯವಾಣಿ ಪುರವಣಿ ಸಂಪಾದಕ ಜೋಗಿ ಮತ್ತು ಚಿತ್ರಲೋಕ ಸಂಪಾದಕ ಕೆ.ಎಂ. ವೀರೇಶ್ ಬರೆದಿರುವ ಲೇಖನಗಳಿಂದ ಕೆಲವು ಆಯ್ದಭಾಗಗಳನ್ನು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ.

ರವಿ ಬೆಳಗೆರೆ ಮಾತುಗಳು

ರವಿ ಬೆಳಗೆರೆ ಮಾತುಗಳು

ಉದಯ ಮರಕಿಣಿ! ಆ ಹೆಸರೇ ಆಪ್ಯಾಯಮಾನವಾದುದು. ಅಸಲು ಆತನನ್ನು ಬಲ್ಲವರಿಗೆ.ನಮ್ಮ ಆಸುಪಾಸಿನಲ್ಲಿಯೇ ಅವನಿಲ್ಲವೇನೋ ಎನಿಸುವಷ್ಟು silent ಜೀವಿ ಉದಯ. ಅವನು ಸಿನೆಮಾ ವಿಭಾಗದವನೇ ಆದರೂ ಮನಸ್ಸಿಗೆ ತಟ್ಟುವಂತಹ ಲೇಖನಗಳನ್ನು ಹೆಚ್ಚು ಪ್ರಯಾಸ ಪಡದೆ ಸುಲಲಿತವಾಗಿ ಬರೆಯಬಲ್ಲ. ನಮ್ಮನ್ನು ಸುಮಾರು ಇಪ್ಪತ್ತು ವರ್ಷ ಹೆಣೆದು, ಗಟ್ಟಿಯಾಗಿ ಬಂಧಿಸಿಟ್ಟದ್ದೇ ಅವನ ಬರವಣಿಗೆ. . I am his fan.

ವಿಶ್ವೇಶ್ವರ ಭಟ್, ಕನ್ನಡಪ್ರಭ ಸಂಪಾದಕ

ವಿಶ್ವೇಶ್ವರ ಭಟ್, ಕನ್ನಡಪ್ರಭ ಸಂಪಾದಕ

ಸಿನಿಮಾ ವಿಮರ್ಶೆಗೆ ಹೊಸ ಆಯಾಮ ಕೊಟ್ಟಿದ್ದೇ ಉದಯ್. ಸಿನಿಮಾ ವಿಮರ್ಶೆಯ ಪರಿಭಾಷೆಯನ್ನೇ ಅವರು ಬದಲಿಸಿದರು. ಸಿನಿಮಾ ಚೆನ್ನಾಗಿಲ್ಲ, ಹೀರೋ ನಟನೆ ಕೆಟ್ಟದಾಗಿದೆ, ನಿರ್ದೇಶನ ಚೆನ್ನಾಗಿಲ್ಲ, ಅದರ ಬದಲು ಆ ಸಿನಿಮಾವನ್ನು ನೋಡದಿರುವುದೇ ವಾಸಿ ಎಂಬುದನ್ನು ಉದಯ್ ಎಷ್ಟು ಡಿಪ್ಲೊಮೆಟಿಕ್ ಪೋಯಟಿಕ್ ಹಾಗೂ ಪಾಲಿಟಿಕಲ್ ಕರೆಕ್ಟ್ ಆಗಿ ಬರೆಯುತ್ತಿದ್ದರೆಂದರೆ, ಅದನ್ನು ಓದಿದ ನಾಯಕ, ನಾಯಕಿಗಾಗಲಿ, ನಿರ್ದೇಶಕನಿಗಾಗಲಿ ಬೇಸರವಾಗುತ್ತಿರಲಿಲ್ಲ. ಆದರೆ ಪ್ರೇಕ್ಷಕನಿಗೆ ನ್ಯಾಯ ಸಿಗುತ್ತಿತ್ತು.

ಈ ವಿಮರ್ಶಾ ಬರಹದಲ್ಲಿ ಉದಯ್ ವಾರದಿಂದ ವಾರಕ್ಕೆ ಹೊಸ ಹೊಸ ಪ್ರಯೋಗವನ್ನು ಮಾಡಿದರು. ಗೇಲಿ, ಟೀಕೆ, ಪ್ರಹಾರವನ್ನೂ ಸಜ್ಜನಿಕೆ, ಸೃಜನಶೀಲತೆಯ ಸಂಪನ್ನತೆಯಲ್ಲಿಯೇ ಮಾಡಿದರು. ಅಪ್ಪಿತಪ್ಪಿಯೂ ನಂಜು, ಮತ್ಸರ, ವೃತ್ತಿಧರ್ಮಕ್ಕೆ ಅಂಟಿಕೊಳ್ಳುವ ಜಣುಕುಗಳು ಅವರನ್ನು ಸುತ್ತಿಕೊಳ್ಳಲಿಲ್ಲ. ಕೆಲವೊಮ್ಮೆ ಉದಯ್ ಬರೆದ ವಿಮರ್ಶೆಯನ್ನು ಓದಿ, ಸಿನಿಮಾ ನೋಡಿ ಬರುತ್ತಿದ್ದೆ. ಆನಂತರ ಪುನಃ ಅವರ ವಿಮರ್ಶೆಯನ್ನು ಓದಿದರೆ ಉದಯ್ ಗ್ರಹಿಕೆ, ಚಿಂತನೆ, ವಿಸ್ತಾರ, ಅರ್ಥವಾಗುತ್ತಾ ಭಾಷೆಯಾಗಿ, ಕಲೆಯಾಗಿ, ಮಾಧ್ಯಮವಾಗಿ ಸಿನಿಮಾವೂ ಇನ್ನಷ್ಟು ಗಾಢವಾಗಿ ಅರ್ಥವಾಗುತ್ತಿತ್ತು.

ರವಿ ಹೆಗಡೆ, ಉದಯವಾಣಿ ಸಂಪಾದಕ

ರವಿ ಹೆಗಡೆ, ಉದಯವಾಣಿ ಸಂಪಾದಕ

ಗೆಳೆಯ ವೀರೇಶನ ಚಿತ್ರಲೋಕ ಡಾಟ್ ಕಾಮ್‌ನಲ್ಲಿ ಉದಯ್ ಅಂಕಣವನ್ನು ನಾನೂ ವಾರ ವಾರ ಓದುತ್ತಾ ಬಂದಿದ್ದೇನೆ. ಕೆಲವೊಮ್ಮೆ ವಾರಕ್ಕೆರಡರಂತೆ ಅವರು ಬರೆದದ್ದೂ ಉಂಟು. ಅವೆಲ್ಲವನ್ನೂ ಓದುತ್ತಾ ಇದ್ದಾಗ, ಉದಯ್ ಚಿತ್ರರಂಗದ ಸಹವಾಸ ಮತ್ತು ಅನುಭವ ಹೇಗೆ ಕಾಲಕ್ರಮೇಣ ಮಾಗುತ್ತಾ ಬಂದಿದೆ ಮತ್ತು ಚಿತ್ರರಂಗದ ಮೇಲೊಂದು ಅತ್ಯುತ್ತಮ ಭಾಷ್ಯ ಆಗಿಬಿಟ್ಟಿದೆ ಎನ್ನುವುದನ್ನೂ ಗಮನಿಸಿದ್ದೇನೆ.

ಒಬ್ಬ ನಟನ, ನಟಿಯ, ನಿರ್ಮಾಪಕನ, ನಿರ್ದೇಶಕನ ಬಗ್ಗೆ ಬರೆಯುತ್ತಲೇ ಅದನ್ನು ಇಡೀ ಚಿತ್ರೋದ್ಯಮದ ಕುರಿತ ಬರಹವೂ ಆಗುವಂತೆ ಮಾಡಬಲ್ಲ ಜಾಣ್ಮೆ ಅವರಿಗಿದೆ. ಹೀಗಾಗಿ ಇಲ್ಲಿರುವ ಇಷ್ಟೂ ಲೇಖನಗಳನ್ನು ಓದಿದವರಿಗೆ ಕನ್ನಡ ಚಿತ್ರರಂಗದ ಸಮಕಾಲೀನ ಚರಿತ್ರೆಯನ್ನು ಓದಿದ ಅನುಭವ ಆಗುತ್ತದೆ. ಅದು ಉದಯ್ ಒಳಗಿರುವ ಬರಹಗಾರನ ಗ್ರೇಟ್‌ನೆಸ್.

ಉದಯ್ ಬಗ್ಗೆ ಜೋಗಿ ಹೇಳಿದ್ದೇನು?

ಉದಯ್ ಬಗ್ಗೆ ಜೋಗಿ ಹೇಳಿದ್ದೇನು?

ನಾನು ಬಲ್ಲಂತೆ ಭಾರತದಲ್ಲೇ ಉದಯ್ ಮರಕಿಣಿಯಷ್ಟು ಪ್ರಬುದ್ಧವಾದ ಒಳನೋಟಗಳುಳ್ಳ, ನಿರ್ವ್ಯಾಜ ಪ್ರೀತಿಯುಳ್ಳ ಸಿನೆಮಾ ಬರಹಗಳನ್ನು ಬರೆದವರನ್ನು ನಾನಂತೂ ನೋಡಿಲ್ಲ. ಎಷ್ಟೋ ಸಲ ಉದಯ್ ಬರೆದ ಲೇಖನಗಳನ್ನು ಓದಿ ನಾನು ದಂಗಾಗಿದ್ದೇನೆ. ಆ ಬರಹಕ್ಕೆ ತುತ್ತಾದವರು ಅವರನ್ನು ಸುಮ್ಮನೆ ಬಿಡುತ್ತಾರಾ ಅಂತ ಕಂಗಾಲಾಗಿದ್ದೇನೆ.

ಮಾರನೇ ದಿನ ಅವರೇ ಕಚೇರಿಗೆ ಬಂದು ಕಣ್ಣೀರಾಗಿ ಉದಯ್ ಮುಂದೆ ಕೂತಿದ್ದನ್ನು ನೋಡಿದ್ದೇನೆ. ಉದಯ್ ಒಳಗೊಬ್ಬ ತಾಯಿಯನ್ನೂ ತಂದೆಯನ್ನೂ ಅಣ್ಣನನ್ನೂ ಗೆಳೆಯನನ್ನೂ ಚಿತ್ರೋದ್ಯಮದ ಬಹುತೇಕರು ಕಂಡಿದ್ದಾರೆ. ತಪ್ಪುಗಳನ್ನು ಹೇಳದೆಯೇ ತಪ್ಪು ಮಾಡಿದ್ದೀರಿ ಅನ್ನುವುದನ್ನು ದಾಟಿಸುವ ಶಕ್ತಿ ಅವರ ಬರಹಗಳಿಗಿದೆ.

ಯಾಕ್ರೀ ಹೀಗ್ ಮಾಡಿದ್ರಿ ಎಂದು ಮೇಲೆ ಬೀಳುವುದಕ್ಕೂ, ತಪ್ಪಾಗಿ ಹೋಯ್ತಲ್ವಾ, ಹೋಗ್ಲಿ ಬಿಡಿ, ಮನುಷ್ಯ ತಪ್ಪು ಮಾಡದೇ ಮತ್ಯಾರು ಮಾಡ್ತಾರೆ ಎಂದು ಹೇಳುವುದಕ್ಕೂ ಇರುವ ವ್ಯತ್ಯಾಸವನ್ನು ನೀವು ಉದಯ್ ಬರಹಗಳಲ್ಲಿ ಮಾತ್ರ ಕಾಣುವುದಕ್ಕೆ ಸಾಧ್ಯ.

ಕೆ.ಎಂ. ವೀರೇಶ್, ಚಿತ್ರಲೋಕ.ಕಾಂ ಸಂಪಾದಕ

ಕೆ.ಎಂ. ವೀರೇಶ್, ಚಿತ್ರಲೋಕ.ಕಾಂ ಸಂಪಾದಕ

ಉದಯ್ ಅವರಲ್ಲಿ ನಾನು ಕಂಡ ಒಂದು ವಿಶೇಷತೆ ಎಂದರೆ ಅವರ ಸ್ಮರಣಶಕ್ತಿ. ಯಾವುದೇ ಪ್ರೆಸ್‌ಮೀಟ್ ಆಗಲಿ, ಸಿನಿಮಾ ಕಾರ್ಯಕ್ರಮವಾಗಿರಲಿ ಅವರು ಪೆನ್ನು, ಪೇಪರ್ ಹಿಡಿದುಕೊಂಡು ಬಂದವರೇ ಅಲ್ಲ. ಅಲ್ಲಿ ನಡೆಯುವುದೆಲ್ಲವೂ ಅವರ ಮಿದುಳಲ್ಲೇ ಶೇಖರಗೊಂಡು ಹಾಳೆಗೆ ಇಳಿಯುತ್ತಿತ್ತು ಹಾಗೂ ಎಲ್ಲಾ ವಿವರಗಳೂ ಅತ್ಯಂತ ನಿಖರವಾಗಿರುತ್ತಿದ್ದವು.

ಸಿನಿಮಾ ವಿಮರ್ಶೆಗಳಿಗೆ ಹೊಸ ರೂಪ ಮತ್ತು ಆಯಾಮವನ್ನು ತಂದುಕೊಟ್ಟ ಖ್ಯಾತಿಯೂ ಉದಯ್ ಅವರಿಗೇ ಸಲ್ಲಬೇಕು. ಚಿತ್ರಪ್ರಭದಲ್ಲಿ ಅವರು ಬರೆಯುತ್ತಿದ್ದ ವರದಿಗಳು, ಲೇಖನಗಳು ಮತ್ತು ಚಿತ್ರವಿಮರ್ಶೆಗಳು ತುಂಬಾ ಜನಪ್ರಿಯವಾಗಿದ್ದವು. ಕನ್ನಡ ಚಿತ್ರರಂಗದ ಪಾಲಿಗೆ ಅವರು ಆಪ್ತಮಿತ್ರನೇ ಆಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada film website Chitraloka Dot Com is celebrating its 15th Birthday and O Manase Editor Udaya Marakini's 'Touch Screen' book will be released on July.3. This book is collection of 'Uma column' published in KM Veeresh's Chitraloka.com. Here we present foreword 'Touch Screen' book to by Vishveshwar Bhat, K.M Veeresh, Jogi, Ravi Bhat and others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more