ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬೆಂಗಳೂರು ಜಲ ಮಂಡಳಿಯ ಹಂಗಿಲ್ಲ!

ಇತ್ತೀಚಿನ ವರ್ಷಗಳಷ್ಟೇ ತನ್ನ ಮೇಲ್ಛಾವಣೆ ಮೇಲೆ ಸೌರಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ವಿಚಾರದಲ್ಲಿ ಸ್ವಾವಲಂಬಿಯಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣವು, ನೀರಿನ ವಿಚಾರದಲ್ಲೂ ಸ್ವಾವಲಂಬನೆ ಸಾಧಿಸಿದೆ.

By ಚೇತನ್ ಓ.ಆರ್
|
Google Oneindia Kannada News

ಬೆಂಗಳೂರು, ಮಾರ್ಚ್ 3: ಚಿನ್ನಸ್ವಾಮಿ ಕ್ರೀಡಾಂಗಣವು ನೀರಿನ ವಿಚಾರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದು ಈ ವಿಚಾರದಲ್ಲಿ ಬೆಂಗಳೂರು ಜಲಮಂಡಳಿಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ವಕ್ತಾರರಾದ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ವರ್ಷದ ಹಿಂದೆ ಐಪಿಎಲ್ ವೇಳೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಕೆಯಾಗುವ ನೀರಿನ ಬಗ್ಗೆ ಕೆಲವರು ದನಿಯೆತ್ತಿದ್ದರು. ಈಗ ಮತ್ತೆ ಅದೇ ಚರ್ಚೆಗೆ ಚಾಲ್ತಿಗೆ ಬಂದಿದೆ. ಇದಕ್ಕೆ ಕಾರಣ ಮಾ. 4ರಿಂದ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ.

Chinnaswamy stadium of Bengaluru self reliant for water

ಪುಣೆಯಲ್ಲಿ ಇತ್ತೀಚೆಗೆ ನಡೆದಿದ್ದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತಕ್ಕೆ, ದ್ವಿತೀಯ ಪಂದ್ಯದಲ್ಲಿ ಗೆಲ್ಲುವ ಒತ್ತಡದಲ್ಲಿದೆ. ಅದಲ್ಲದೆ, ಬೆಂಗಳೂರು ಪಿಚ್ ಭಾರತಕ್ಕೆ ಲಕ್ಕಿ ಎಂಬ ಅಭಿಪ್ರಾಯವಿರುವುದರಿಂದ ಈ ಪಂದ್ಯಕ್ಕೆ ಭಾರೀ ಮಹತ್ವ ಬಂದಿದೆ.

ಆದರೆ, ಇದೇ ಸಂದರ್ಭದಲ್ಲಿ, ಇತ್ತೀಚೆಗೆ, ಮಾಧ್ಯಮವೊಂದು ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಅಭಾವವಿದ್ದರೂ, ಮಾರ್ಚ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ- ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ನೀರು ಪೋಲು ಮಾಡುವುದು ಸರಿಯಲ್ಲವೆಂಬ ಅರ್ಥದಲ್ಲಿ ವರದಿಯೊಂದನ್ನು ಪ್ರಕಟಿಸಿತ್ತು.

ಆ ವರದಿಯ ಹಿನ್ನೆಲೆಯಲ್ಲಿ, ತಮ್ಮನ್ನು ಸಂಪರ್ಕಿಸಿದ 'ಒನ್ ಇಂಡಿಯಾ'ಕ್ಕೆ ವಿವರಣೆ ನೀಡಿದ ವಿನಯ್, ಕ್ರೀಡಾಂಗಣವು ತನ್ನದೇ ಆದ ನೀರಿನ ಮೂಲಗಳನ್ನು ಹೊಂದಿದೆಯಾದ್ದರಿಂದ ಜಲಮಂಡಳಿಯಿಂದ ಸರಬರಾಜು ಆಗುವ ನೀರಿನ ಮೇಲೆ ಅವಲಂಬನೆಗೊಳ್ಳುವ ಪ್ರಮೇಯವೇ ಎದುರಾಗಿಲ್ಲ ಎಂದು ತಿಳಿಸಿದ್ದಾರೆ.

ಚಾಲನೆಯಲ್ಲಿವೆ ಆರು 4 ಕೊಳವೆ ಬಾವಿ: ವಿನಯ್ ಅವರು ನೀಡಿದ ವಿವರಣೆಯ ಪ್ರಕಾರ, ಕಾಲಾನುಕ್ರಮದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬೋರ್ ವೆಲ್ ಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೆ, ಮಳೆಕೊಯ್ಲು ವ್ಯವಸ್ಥೆಯನ್ನೂ ಕ್ರೀಡಾಂಗಣ ಹೊಂದಿದೆ. ಈ ಎರಡೇ ವ್ಯವಸ್ಥೆಗಳಿಂದಲೇ ಇಡೀ ಕ್ರೀಡಾಂಗಣದ ದೈನಂದಿನ ನೀರಿನ ನಿರ್ವಹಣೆ ಸಾಧ್ಯವಾಗುತ್ತಿದೆ.

ತ್ಯಾಜ್ಯ ನೀರು ನಿರ್ವಹಣಾ ಘಟಕವಿದೆ: ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಎದುರಿನಲ್ಲೇ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಆರಂಭಿಸಲಾಗಿದೆ. ಇದರಿಂದಲೇ ದಿನವೊಂದಕ್ಕೆ 2 ಲಕ್ಷ ನೀರನ್ನು ಶುದ್ಧೀಕರಿಸಿ ಪಡೆಯಲಾಗುತ್ತಿದೆ. ಕಬ್ಬನ್ ಪಾರ್ಕ್ ಮೂಲಕ ಬರುವ ಒಳಚರಂಡಿ ನೀರು ಹಾಗೂ ಕ್ರೀಡಾಂಗಣದಲ ಸುತ್ತ ಮುತ್ತಲಿನ ತ್ಯಾಜ್ಯ ನೀರು ಸಾಗುವ ಮಾರ್ಗಗಳಿಂದ ನೀರನ್ನು ಚಿನ್ನಸ್ವಾಮಿ ಕ್ರೀಡಾಂಗಣದೊಳಕ್ಕೆ ತಂದು ಅದನ್ನು ಆನಂತರ, ತ್ಯಾಜ್ಯ ನೀರು ಸಂಸ್ಕರಣಾ ಘಟಕ್ಕೆ ಹಾಯಿಸಿ ಅಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ.

ಯಾವುದೇ ಕ್ರಿಕೆಟ್ ಪಂದ್ಯಕ್ಕಾಗಿ ಮೈದಾನವನ್ನು ಸಿದ್ಧಗೊಳಿಸಬೇಕಾದಲ್ಲಿ ಪ್ರತಿ ದಿನ 30 ಸಾವಿರ ಲೀಟರ್ ನಷ್ಟು ನೀರು ಬೇಕು. ಇನ್ನು, ಟೆಸ್ಟ್ ಪಂದ್ಯವು ಐದು ದಿನಗಳ ಕಾಲ ನಡೆಯುವುದರಿಂದ ನೀರಿನ ಅವಶ್ಯಕತೆ ಈ ಪಂದ್ಯಕ್ಕೆ ಸಹಜವಾಗೇ ಹೆಚ್ಚಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಪಂದ್ಯಗಳನ್ನು ಆಯೋಜಿಸುವ ಅವಕಾಶ ಬಂದಲ್ಲಿ ನೀರಿಗಾಗಿ ತಡಕಾಡಬೇಕಾಗುತ್ತದೆ ಎಂಬ ಮುಂದಾಲೋಚನೆಯಿಂದಲೇ ಕೆಎಸ್ ಸಿಎ ಈ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದೆ.

ಈ ರೀತಿ, ದೇಶದಲ್ಲಿ ಇಂಥದ್ದೊಂದು ಸೌಲಭ್ಯವನ್ನು ಅಳವಡಿಸಿಕೊಂಡ ಮೊಟ್ಟ ಮೊದಲ ಕ್ರೀಡಾಂಗಣವಿದು ಎಂಬ ಹಿರಿಮೆಯೂ ಇದರದ್ದಾಗಿದೆ.

ಹಾಗಾದರೆ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಜಲಮಂಡಳಿಯಿಂದ ನೀರಿನ ಸಂಪರ್ಕವೇ ಇಲ್ಲವೇ ? ಎಂಬ ಪ್ರಶ್ನೆ ಏಳುವುದು ಸಹಜ. ಹೌದು. ಚಿನ್ನಸ್ವಾಮಿಗೆ ಜಲ ಮಂಡಳಿಯಿಂದ ನೀರಿನ ಸಂಪರ್ಕವಿದೆ. ಆದರೆ, ಮಂಡಳಿಯಿಂದ ಬರುವ ನೀರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಇರುವ ಕ್ಲಬ್ ಹೌಸ್ ಹಾಗೂ ಕ್ಯಾಂಟೀನ್ ಗಳಿಗೆ ಬಳಕೆ ಮಾಡಲಾಗುತ್ತದೆಯಷ್ಟೇ.

ಪಕ್ಕದ ಉದ್ಯಾನಕ್ಕೂ ಕ್ರೀಡಾಂಗಣದಿಂದ ನೀರು!: ಮೇಲೆ ತಿಳಿಸಿದಂತೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ದೊರೆಯುವ ನೀರಿನ ಬಹುಪಾಲು ಕ್ರೀಡಾಂಗಣದ ಉಪಯೋಗಕ್ಕೆ ಸಂದ ಮೇಲೆಯೂ ಇನ್ನೂ ಹೆಚ್ಚು ನೀರು ಉಳಿಯುವುದರಿಂದ ಅದನ್ನು ಕ್ರೀಡಾಂಗಣದ ಪಕ್ಕದಲ್ಲೇ ಇರುವ ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಉದ್ಯಾನವನಕ್ಕೂ ನೀಡಲಾಗುತ್ತಿದೆ.

English summary
Chinnaswamy cricket stadium of Bengaluru has its own water resources and is not dependent of Bengaluru water board. The stadium has 4 bore wells, rain water harvesting system and sewage water treatment plant in its premises to extract enough of water for its daily use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X