ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರದ ಜನರೇನು ಮೂರ್ಖರಲ್ಲ : ಬಚ್ಚೇಗೌಡ

By ಪ್ರಸಾದ ನಾಯಿಕ
|
Google Oneindia Kannada News

(ಬಚ್ಚೇಗೌಡರ ಸಂದರ್ಶನದ ಮುಂದುವರಿದ ಭಾಗ)

ಪ್ರಶ್ನೆ : ಕುಮಾರಸ್ವಾಮಿಯವರ ಪ್ರವೇಶದಿಂದ ನಿಮ್ಮ ಗೆಲುವಿನ ಸಾಧ್ಯತೆಗೆ ತೊಂದರೆಯಾಗಿದೆಯಾ?

ಬಚ್ಚೇಗೌಡ : ನೋಡಿ, ಯಾವುದೇ ರಾಜಕಾರಣಿ ಜನರನ್ನು ಒಂದು ಸಾರಿ ಮೂರ್ಖರನ್ನಾಗಿ ಮಾಡಬಹುದು. ಪದೇ ಪದೇ ಮೂರ್ಖರನ್ನಾಗಿ ಮಾಡೋಕಾಗಲ್ಲ. ಅವರು ರಾಮನಗರದ ಜನರನ್ನು ಹೇಗೆ ನಡುನೀರಲ್ಲಿ ಕೈಬಿಟ್ಟರು ಅನ್ನೋದು ಚಿಕ್ಕಬಳ್ಳಾಪುರದ ಜನತೆಗೆ ಗೊತ್ತಿದೆ. ರಾಮನಗರದ ಜನ ಮಾಡಿದ ತಪ್ಪನ್ನ ಇಲ್ಲಿನ ಜನ ಮಾಡಲ್ಲ ಅನ್ನೋ ನಂಬಿಕೆ ನನಗಿದೆ.

ಪ್ರಶ್ನೆ : ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಈಗ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಇವರ ವರ್ಚಸ್ಸಿನ ವಿರುದ್ಧ ನಿಮಗೆ ಗೆಲುವು ಸಾಧ್ಯವೇ?

ಬಚ್ಚೇಗೌಡ : ವೀರಪ್ಪ ಮೊಯ್ಲಿ ಕ್ಷೇತ್ರದ ಜನತೆಗೆ ಏನು ಮಾಡಿದ್ದಾರೆ ಅನ್ನೋದನ್ನ ನೀವು ಇಲ್ಲಿನ ಜನರನ್ನ ಕೇಳಬೇಕು. ಚುನಾವಣೆ ಹತ್ತಿರ ಆಗುತ್ತಿದ್ದಂತೆ ಎತ್ತಿನಹೊಳೆ ಯೋಜನೆಯನ್ನು ಉದ್ಘಾಟನೆ ಮಾಡೋ ಹಾಗೆ ನಾಟಕ ಆಡಿ ಜನರ ಕಣ್ಣಿಗೆ ಮಣ್ಣೆರಚುವುದಕ್ಕೆ ಪ್ರಯತ್ನಿಸಿದರು. ಆದರೆ ಜನ ಮರುಳಾಗಲಿಲ್ಲ. ಅವರಿಗೆ ಕಪ್ಪು ಭಾವುಟ ತೋರಿಸಿ ಅವರ ಬಣ್ಣ ಬಯಲು ಮಾಡಿದರು. ಯಾರು ದೊಡ್ಡವರು, ಯಾರು ಚಿಕ್ಕವರು ಅನ್ನೋದನ್ನ ಚುನಾವಣೆ ನಿರ್ಧರಿಸುತ್ತದೆ.

Chikkaballapur BJP candidate BN Bache Gowda interview - part2

ಪ್ರಶ್ನೆ : ಕುಮಾರಸ್ವಾಮಿ ಪ್ರವೇಶದಿಂದ ಇಲ್ಲಿನ ಸ್ಪರ್ಧೆ ವೀರಪ್ಪ ಮೊಯ್ಲಿ ವರ್ಸಸ್ ಕುಮಾರಸ್ವಾಮಿ ಆಗಿದೆಯಾ?

ಬಚ್ಚೇಗೌಡ : ಖಂಡಿತಾ ಇಲ್ಲ. ನೋಡಿ ಇದೆಲ್ಲಾ ಕೆಲವು ಮಾಧ್ಯಮದವರ ಸೃಷ್ಟಿ. ಸ್ಪರ್ಧೆ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ. ಬಹುಶ: ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮುಖಾಮುಖಿ ಸ್ಪರ್ಧಿಸುತ್ತಿರೋದರಿಂದ ಮಾಧ್ಯಮ ಸ್ವಲ್ಪ ಈ ವಿಷಯಕ್ಕೆ ಪ್ರಾಮುಖ್ಯತೆ ಕೊಟ್ಟಿರಬಹುದು. ಆದರೆ ವಸ್ತುಸ್ಥಿತಿ ಏನು ಅಂದರೆ ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತು ನನಗೆ ಬಹಳ ಬೆಂಬಲ ಇದೆ.

ಪ್ರಶ್ನೆ : ನೀವು ಹಿಂದೆ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಮಂತ್ರಿಯಾಗಿದ್ದರೂ, ನಿಮ್ಮ ಕೊಡುಗೆ ಏನಿದ್ದರೂ ಹೊಸಕೋಟೆಗೆ ಮಾತ್ರ ಎಂಬ ಟೀಕೆ ಇದೆ!

ಬಚ್ಚೇಗೌಡ : ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೂ. 3,000 ಕೋಟಿ ತಂದು ರಸ್ತೆ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ, ಹಲವಾರು ಕಟ್ಟಡಗಳ ನಿರ್ಮಾಣ ಇತ್ಯಾದಿ ಕೆಲಸ ಮಾಡಿದ್ದೇನೆ. ನನ್ನ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಒಂದು ಪ್ರಗತಿಪರ ಜಿಲ್ಲೆಯಾಗಿ ಬೆಳೆದು ಬಂದಿದೆ. ಬೆಂಗಳೂರು ಗ್ರಾಮಾಂತರ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ನಾನು ಕಾರ್ಮಿಕ ಹಾಗೂ ರೇಷ್ಮೆ ಮಂತ್ರಿಯಾಗಿದ್ದಾಗ, ಹಾಗೂ ಹಿಂದೆ ೯೦ರ ದಶಕದಲ್ಲಿ ಪಶುಸಂಗೋಪನೆ, ನಗರಾಭಿವೃದ್ಧಿ, ಸಾರಿಗೆ ಸಚಿವನಾಗಿದ್ದಾಗ ನೀಡಿದ ಕೊಡುಗೆ ಎಲ್ಲರಿಗೂ ಗೊತ್ತಿದೆ. ನಾನು ಕಾರ್ಮಿಕ ಸಚಿವನಾಗಿ ಹಿಂದೆಂದೂ ಆಗಿಲ್ಲದಷ್ಟು ಕೆಲಸವನ್ನ ಮಾಡಿದ್ದೇನೆ.

ಪ್ರಶ್ನೆ : ನೀವು ರಾಜ್ಯದಲ್ಲಿ ಶಾಸಕರಾಗಿದ್ದೋರು ಹಾಗೂ ಮಂತ್ರಿಯಾಗಿದ್ದೋರು. ಮೊಯ್ಲಿಯಂತಹ ಅನುಭವಿಯನ್ನು ಬಿಟ್ಟು ನಿಮ್ಮನ್ನು ಯಾಕೆ ಗೆಲ್ಲಿಸಿ ಜನ ದೆಹಲಿಗೆ ಕಳುಹಿಸಬೇಕು?

ಬಚ್ಚೇಗೌಡ : ಹೋಲಿಕೆ ಮಾಡೋದರಲ್ಲಿ ಅರ್ಥ ಇಲ್ಲ. ಹಾಗೇ ಇಲ್ಲಿ ಬರಿ ಅನುಭವ ಮುಖ್ಯ ಆಗಲ್ಲ. ಜನರಿಗೆ ನನ್ನ ಮನವಿ ಇಷ್ಟೆ. ನಾನು ಇಷ್ಟು ದಿನ ನುಡಿದಂತೆ ನಡೆದಿರೋ ರಾಜಕಾರಣಿ. ಸುಳ್ಳು ಹೇಳೊದಿಕ್ಕೆ, ಕಣ್ಣೀರು ಸುರಿಸೋದಿಕ್ಕೆ ನನಗೆ ಬರೋಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ನಾನೊಂದು ಮಾರ್ಗಸೂಚಿ ಹಾಕಿಕೊಂಡಿದ್ದೀನಿ. ಅದರ ಪ್ರಕಾರ ನಡೀತಿನಿ. ಈ ಕ್ಷೇತ್ರ ಬಿಟ್ಟು ಇನ್ನೊಂದು ಕಡೆ ಹೋಗೋಲ್ಲ. ಅದು ಜನತೆಗೂ ಗೊತ್ತಿದೆ. ಹಾಗೇನೆ ಒಂದು ಸಲ ದೆಹಲಿ ಕಡೆ ಮುಖ ಮಾಡಿದ್ರೆ ಈ ಕಡೆ ಮುಖ ತಿರುಗಿಸದೇ ಇರೋ ವ್ಯಕ್ತಿ ನಾನಲ್ಲ. ಅದೂ ಸಹ ಜನತೆಗೆ ಗೊತ್ತಿದೆ. ಈ ಕ್ಷೇತ್ರದ ಒಳಿತಿಗೆ ಕೆಲಸ ಮಾಡ್ತೀನಿ.

English summary
B.N. Bache Gowda (72) is known for his straight forwardness and bold speeches. The veteran BJP politician has taken on Veerappa Moily (Congress) and H.D. Kumaraswamy (JDS) in Chikkaballapur Lok Sabha election 2014. Bache Gowda shares his ideas in an interview with Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X