ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಇಎ
ಬೆಂಗಳೂರು, ಮೇ 08 : ಈ ಬಾರಿಯ (2017) ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ತಲಾ ಒಂದು ಗ್ರೇಸ್ ಅಂಕ ಸಿಗಲಿದೆ.
ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ತಲಾ ಒಂದು ಪ್ರಶ್ನೆಯನ್ನು ಅಸ್ಪಷ್ಟವಾಗಿ ಕೇಳಲಾಗಿದ್ದ ಕಾರಣ ತಜ್ಞರ ಸಲಹೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2 ಗ್ರೇಸ್ ಅಂಕ ನೀಡಲಿದೆ.[ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ, ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳು]
ಭೌತಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಮೊದಲನೇ ಪ್ರಶ್ನೆ ಮತ್ತು ರಸಾಯನಶಾಸ್ತ್ರ ಪರೀಕ್ಷೆಯ 48ನೇ ಪ್ರಶ್ನೆಗೆ ಈ ಗ್ರೇಸ್ ಅಂಕ ದೊರೆತಿದೆ. ಈ ಎರಡೂ ಪ್ರಶ್ನೆಗಳು ಕೊಂಚ ಉದ್ದ ಹಾಗೂ ಅಸ್ಪಷ್ಟತೆಯಿಂದ ಕೂಡಿದ್ದವು.
ಇದರಿಂದ ಉತ್ತರ ಬರೆಯಲು ಗೊಂದಲ ಉಂಟಾಗಿದ್ದಾಗಿ ವಿದ್ಯಾರ್ಥಿಗಳು ಮತ್ತು ಕಾಲೇಜು ಉಪನ್ಯಾಸಕರಿಂದ ಆಕ್ಷೇಪಗಳು ಕೇಳಿಬಂದಿದ್ದವು. ಈ ಆಕ್ಷೇಪದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಜ್ಞರೊಂದಿಗೆ ಚರ್ಚೆ ನಡೆಸಿದರು.[ಮುಗಿದ ನೀಟ್ ಪರೀಕ್ಷೆ, ಜೂನ್ 8ಕ್ಕೆ ಫಲಿತಾಂಶ]
ಗ್ರೇಸ್ ಅಂಕ ನೀಡುವ ಮಾಹಿತಿಯನ್ನು ಪ್ರಾಧಿಕಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರದಲ್ಲೂ ನೀಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.