ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಕಸ್ಟಡಿಗೆ ಕೇಳಿ ಸಿಬಿಐ ಅರ್ಜಿ
ಬೆಂಗಳೂರು, ನವೆಂಬರ್ 25: ಐಎಂಎ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಲು ಸಿಬಿಐ ಮುಂದಾಗಿದೆ. ಈ ಕುರಿತು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಆರೋಪಿ ಬೇಗ್ ರನ್ನು ವಿಚಾರಣೆಗೆ ಒಳಪಡಿಸಲು ಕಸ್ಡಡಿಗೆ ಕೇಳಿದೆ.
ಐಎಂಎ ಕಂಪನಿಂದ ನಾನೂರು ಕೋಟಿ ರೂಪಾಯಿ ಪಡೆದ ಆರೋಪ ರೋಷನ್ ಬೇಗ್ ಮೇಲೆ ಕೇಳಿ ಬಂದಿತ್ತು. ಐಎಂಎ ಹಗರಣ ಬೆಳಕಿಗೆ ಬರುವ ಆರಂಭದ ದಿನಗಳಲ್ಲಿ ಪ್ರಮುಖ ಆರೋಪಿ ಮನ್ಸೂರ್ ಕಾನ್ ವಿಡಿಯೋ ಮಾಡಿದ್ದ. ಜತೆಗೆ ಅಂದಿನ ನಗರ ಪೊಲೀಸ್ ಆಯುಕ್ತರಿಗೂ ಅಡಿಯೋ ರವಾನಿಸಿದ್ದ.
ಅದರ ಪ್ರಕಾರ ರೋಷನ್ ಬೇಗ್ ಅವರು ಐಎಂಎನಿಂದ ಕೋಟ್ಯಂತರ ರೂಪಾಯಿ ಪಡೆದ ಕೊಂಡ ಆರೋಪ ಕೇಳಿ ಬಂದಿತ್ತು. ಆರೋಪದ ಹಿನ್ನೆಲೆಯಲ್ಲಿ ಬೇಗ್ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೆ ಒಳಪಡಿಸಲು ಮುಂದಾಗಿತ್ತು.ಸ ಇದಾದ ಬಳಿಕ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಉಪ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದರು.
ಕಳೆದ ಭಾನುವಾರ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬಂಧನದ ಬಳಿಕ ಪುಲಿಕೇಶಿನಗರದಲ್ಲಿರುವ ಅವರ ನಿವಾಸ ಪುತ್ರ ರೋಹಾನ್ ಕಚೇರಿ ಮೇಲೆ ದಾಳಿ ನಡಿಸಿ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದಕ್ಕೂ ಮೊದಲೇ ಐಎಂಎ ಸಂಸ್ಥೆಯ ಬ್ಲೇಡ್ ಸ್ಕೀಮ್ ಗಳ ಬಗ್ಗೆ ಶಾಸಕ ರೋಷನ್ ಬೇಗ್ ಪ್ರಚಾರ ಪಡಿಸಿ ಅದರಿಂದ ಲಾಭ ಮಾಡಿಕೊಂಡ ಬಗ್ಗೆ ಐಎಂಎ ಪ್ರಕರಣದ ಸಂತ್ರಸ್ತರ ಅರ್ಜಿಗಳ ವಿಚಾರಣೆಗೆ ರಚಿಸಿರುವ ಸಕ್ಷಮ ಪ್ರಧಿಕಾರ ಮುಖ್ಯಸ್ಥ ಹರ್ಷ ಗುಪ್ತಾ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಪತ್ರದಲ್ಲಿ ರೋಷನ್ ಬೇಗ್ ಮತ್ತು ಐಎಂಎ ಸಂಸ್ಥೆ ಜತೆಗಿನ ಸಂಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದರ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಮಾಹಿತಿ ತರಿಸಿಕೊಳ್ಳಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಬಹಿರಂಗವಾಗಿತ್ತು.
ಸದ್ಯ ಜೈಲಿನಲ್ಲಿರುವ ರೋಷನ್ ಬೇಗ್ ಅವರಿಗೆ ಆರೋಗ್ಯದಲ್ಲಿ ಏರು ಪೇರಾಗಿತ್ತು. ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆ ಸಹ ನಡೆಸಲಾಗಿದೆ. ವಿಚಾರಣೆ ನಡೆಸಲು ಯಾವುದೇ ಅಭ್ಯಂತರ ಇಲ್ಲ ಎಂದು ವೈದ್ಯಾಧಿಕಾರಿಗಳು ಖಚಿತ ಪಡಿಸಿದ ಹಿನ್ನೆಲೆಯಲ್ಲಿ ಬೇಗ್ ಅವರನ್ನು ಇದೀಗ ವಶಕ್ಕೆ ಪಡದು ವಿಚಾರಣೆ ನಡೆಸಲಿದ್ದಾರೆ.