• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾನ ಪ್ರಿಯ ಸವಾರರೇ; ಇಂದಿನಿಂದ ಸಂಚಾರ ಪೊಲೀಸರ ಸ್ಟ್ರಾ ಊದಬೇಕು ಗಮನವಿರಲಿ!

|
Google Oneindia Kannada News

ಬೆಂಗಳೂರು,ಸೆ. 25: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಪಾನ ಪ್ರಿಯ ವಾಹನ ಸವಾರರ ತಪಾಸಣೆಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿತ್ತು. ಬೆಂಗಳೂರಿನಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರು ಇವತ್ತಿನಿಂದ ಕಾರ್ಯಾಚರಣೆಗೆ ಇಳಿಯಲಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವರನ್ನು ತಪಾಸಣೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಆದೇಶ ಮಾಡಿದ್ದಾರೆ. ಮಾತ್ರವಲ್ಲ ಪಾನ ಪ್ರಿಯರಿಗೆ ಪ್ರತ್ಯೇಕವಾಗಿ ಸ್ಟ್ರಾ ಕೊಟ್ಟು ಮದ್ಯಪಾನ ಮಾಡಿರುವುದನ್ನು ತಪಾಸಣೆ ಮಾಡಲು ಮಾರ್ಗಸೂಚಿಯನ್ನು ಇದೇ ವೇಳೆ ಬಿಡುಗಡೆ ಮಾಡಿದ್ದಾರೆ. ಅದರ ಪ್ರಕಾರ ಸಂಚಾರ ಪೊಲೀಸರು ತಡೆಯುವ ವಾಹನ ಸವಾರರು ಇವತ್ತಿನಿಂದ ಸ್ಟ್ರಾ ಊದಬೇಕು. ಮದ್ಯಪಾನ ಮಾಡಿರುವುದು ಪತ್ತೆಯಾದರೆ, ವಾಹನ ಅಲ್ಲೇ ಬಿಟ್ಟು ಪರ್ಯಾಯ ವಾಹನದಲ್ಲಿ ಮನೆಗೆ ಹೋಗಬೇಕು. ಬಳಿಕ ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳಬೇಕು. ಈಗಾಗಲೇ ಒಂದು ಸಲ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಬಿದ್ದಿದ್ದರೆ ಅಂತಹವರ ಚಾಲನಾ ಪರವಾನಗಿ ರದ್ದು ಪಡಿಸಲಾಗುತ್ತದೆ.

ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಗೆ ಇವತ್ತಿನಿಂದ ಅಧಿಕೃತವಾಗಿ ಚಾಲನೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ, ತಜ್ಞರ ಸಲಹೆಯಂತೆ 2020 ಮಾರ್ಚ್ ನಿಂದ ಕುಡಿದು ವಾಹನ ಚಾಲನೆ ಮಾಡುವರ ವಿರುದ್ಧದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದನ್ನೇ ದುರುಪಯೋಗ ಪಡಿಸಿಕೊಂಡು ಕುಡಿದು ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದರಿಂದ ಬೆಂಗಳೂರು ನಗರದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಮುಗ್ಧರು ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶದ ಬಹುತೇಕ ಮಹಾನಗರಗಳಲ್ಲಿ ಎರಡನೇ ಅಲೆ ಬಳಿಕ ಡ್ರಿಂಕ್ ಅಂಡ್‌ ಡ್ರೈವ್ ಗೆ ಚಾಲನೆ ನೀಡಲಾಗಿದ್ದು, ತಜ್ಞರ ಸಲಹೆ ಮೇರೆಗೆ ಬೆಂಗಳೂರಿನಲ್ಲಿ ಸಹ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಆರಂಭಿಸಿದ್ದೇವೆ. ಕಳೆದ ಎರಡು ವಾರದಿಂದ ತಪಾಸಣೆ ನಡಸಿದ್ದು, ಅನುಮಾನಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹಲವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇಂದಿನಿಂದ ಅಧಿಕೃತವಾಗಿ ಡ್ರಿಂಕ್ ಅಂಡ್ ಡ್ರೈವ್ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ. ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕೋವಿಡ್ ಸುರಕ್ಷತಾ ನಿಯಮಗಳೊಂದಿಗೆ ಪಾನ ಪ್ರಿಯರಿಗೆ ಸಂಚಾರ ಪೊಲೀಸರು ಮದ್ಯಪಾನ ಪರೀಕ್ಷೆ ನಡೆಸಲಿದ್ದಾರೆ. ಈ ಕುರಿತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಇಂತಿವೆ.

ನಂ. 1: ಕುಡಿದು ವಾಹನ ಚಾಲನೆ ಮಾಡುತ್ತಿದ್ದಾರೆ ಎಂದು ಅನುಮಾನ ಬಂದವರಿಗೆ ಪ್ರತ್ಯೇಕ ಸ್ಟ್ರಾ ಬಳಿಸಿ ತಪಾಸಣೆಗೆ ಒಳಪಡಿಸುವುದು.

ನಂ. 2: ಹೊಸ ಆಲ್ಕೋ ಮೀಟರ್ ಮೂಲಕ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ.

ನಂ.3 : ಪ್ರತಿ ಸಂಚಾರ ಪೊಲೀಸ್ ಠಾಣೆಗೆ ಹತ್ತು ಆಲ್ಕೋ ಮೀಟರ್ ವಿತರಣೆ.

ನಂ.4: ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವ ಸಂಚಾರ ಪೊಲೀಸರು ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಧರಿಸಿರಬೇಕು. ಪ್ರತಿ ತಪಾಸಣೆ ಬಳಿಕ ಹ್ಯಾಂಡ್ ಸಾನಿಟೈಸ್ ಮಾಡಬೇಕು.

ನಂ. 5: ಸ್ಯಾನಿಟೈಸ್ ಆದ ಆಲ್ಕೋಮೀಟರ್ ನ್ನು ಜಿಪ್ ಲಾಕ್ ಕವರ್ ನಲ್ಲಿರಿಸಿ ಉಪಯೋಗಿಸಿದ ನಂತರ ಪ್ರತ್ಯೇಕವಾಗಿಡಬೇಕು.

Cation for Bengalurians: Bengaluru traffic police launches Drink and drive from sep 25 in Bengaluru city

ನಂ. 6: ಡ್ರಿಂಕ್ ಅಂಡ್ ಡ್ರೈವ್ ಗೆ ಬಳಸಿದ ಆಲ್ಕೋ ಮೀಟರ್ ಪುನಃ ಮೂರು ದಿನ ಉಪಯೋಗಿಸದದಂತೆ ನೋಡಿಕೊಳ್ಳಬೇಕು.

ನಂ. 7: ಮದ್ಯಪಾನ ಮಾಡಿರುವುದು ಕಂಡು ಬಂದಲ್ಲಿ ಮಾತ್ರ ಆಲ್ಕೋ ಮೀಟರ್ ಬಳಕೆ ಮಾಡಬೇಕು.

ನಂ. 8: ಆಲ್ಕೋ ಮೀಟರ್ ತಪಾಸಣೆಗೆ ನಿರಾಕರಿಸುವ ವಾಹನ ಸವಾರರನ್ನು ಮೆಡಿಕಲ್ ಪರೀಕ್ಷೆಗೆ ಒಳಪಡಿಸಬೇಕು.

ಪೊಲೀಸರ ಜತೆ ಘರ್ಷಣೆ ಮಾಡಿದ್ರೆ ರೌಡಿ ಶೀಟರ್:

ಇನ್ನು ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದರೆ ಅಂತಹವರ ವಿರುದ್ಧ ರೌಡಿ ಖಾತೆ ತೆರೆಯಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ. ತಪಾಸಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದರೆ, ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿಯೊಂದನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಟೋಯಿಂಗ್ ವಿಚಾರದಲ್ಲಿ ಸಾರ್ವಜನಿಕರೊಂದಿಗೆ ಜಟಾಪಟಿ ನಡೆಯುತ್ತಿದ್ದು, ಟೋಯೀಂಗ್ ಮಾಡುವಾಗ ಪೊಲೀಸ್ ಇಲಾಖೆಗೆ ಲೈವ್ ಸ್ಟ್ರೀಮಿಂಗ್ ನೀಡಬೇಕು. ಟೋಯಿಂಗ್ ವಾಹನದಲ್ಲಿ ಎಎಸ್ಐ ಇರಬೇಕು. ಟೋಯಿಂಗ್ ಮುನ್ನ ವಾಹನದಲ್ಲಿ ಅನೌನ್ಸ್ ಮಾಡಬೇಕು. ವಾಹನದ ನಾಲ್ಕು ಭಾಗ ಕ್ಲಿಕ್ಕಿಸಬೇಕು. ಆ ಬಳಿಕವೇ ವಾಹನ ಟೋಯಿಂಗ್ ಮಾಡಲು ಸೂಚಿಸಲಾಗಿದೆ. ಟೋಯೀಂಗ್ ಮುನ್ನ ಬಂದರೆ ನೋ ಪಾರ್ಕಿಂಗ್ ಅಪರಾಧಕ್ಕೆ ದಂಡ ಪಾವತಿಸಿ ವಾಹನ ಮಾಲೀಕರು ವಾಹನ ಬಿಡಿಸಿಕೊಳ್ಳಬಹುದು ಎಂದು ರವಿಕಾಂಗತೇಗೌಡ ಸ್ಪಷ್ಟನೆ ನೀಡಿದ್ದಾರೆ. ಟೋಯಿಂಗ್ ನಿಯಮ ಉಲ್ಲಂಘನೆ ಮಾಡಿದ ವಾಹನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದರು.

   ಚೆನ್ನೈ ವಿರುದ್ಧ ಸೋಲಿಗೆ ವಿರಾಟ್ ನೇರವಾಗಿ ದೂರಿದ್ದು ಯಾರನ್ನು ಗೊತ್ತಾ? | Oneindia Kannada
   English summary
   Bengaluru joint police commissioner of traffic B.R. Ravikantegowda announcement about Drink and drive in Bengaluru city know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X