ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರಮಂಗಲದ ಕಪ್ಪು ಸುಂದರ ಹಾರ್ನ್ ಗೆಲ್ಲ ಜಗ್ಗಲ್ಲ!

By ಇರ್ಫಾನ್ ಖಾನ್
|
Google Oneindia Kannada News

ಬೆಳಗ್ಗೆ ಕೊಂಚ ಲೇಟಾಗಿಯೇ ಏಳುತ್ತೀರಿ. ಗಡಿಬಿಡಿಯಲ್ಲಿ ಬೆಳಗಿನ ಕೆಲಸ ಎಲ್ಲ ಮುಗಿಸಿ, ಹಿಡಿಸಿದಷ್ಟು ತಿಂಡಿ ತಿಂದು ಕಚೇರಿಗೆ ಹೊರಡುತ್ತೀರಿ. ಕಚೇರಿ ತಲುಪಲು ಎಷ್ಟು ಸಮಯ ಬೇಕು? ಎಷ್ಟು ಟ್ರಾಫಿಕ್ ಸಿಗ್ನಲ್ ದಾಟಬೇಕು? ಎಲ್ಲೆಲ್ಲಿ ಗುಂಡಿಗಳಿವೆ? ಅವೈಜ್ಞಾನಿಕ ಹಂಪ್ ಗಳಿವೆ ಎಂಬುದನ್ನೆಲ್ಲ ಮನಸ್ಸಿನಲ್ಲೆ ಲೆಕ್ಕ ಹಾಕಿಕೊಂಡು ಗೇಟ್ ಲಾಕ್ ಮಾಡಿ ಹೊರ ಬೀಳುವಷ್ಟರಲ್ಲಿ ಇಸ್ತ್ರಿ ಮಾಡಿದ್ದ ಬಟ್ಟೆ ಅರ್ಧ ಹೊಳಪು ಕಳೆದುಕೊಂಡಿರುತ್ತದೆ.

ಒಳಗಿನ ಗಲ್ಲಿಗಳನ್ನೆಲ್ಲ ಮುಗಿಸಿ ಮುಖ್ಯ ರಸ್ತೆಗೆ ವಾಹನವನ್ನು ಇಳಿಸಿದ್ದೆ ತಡ ತಾ ಮುಂದು, ನಾ ಮುಂದು ಎಂದು ನುಗ್ಗಿಸುವವರ ಜತೆ ಸಂದಿಯಲ್ಲಿ ನುಗ್ಗಲೇಬೇಕು. ಇಲ್ಲವಾದಲ್ಲಿ ಮಧ್ಯಾಹ್ನ ಕಚೇರಿ ತಲುಪಬೇಕಾದೀತು! ಅಂತೂ ಒಂದು ಅರ್ಧ ದೂರ ಬಂದಿದ್ದೇವೆ ಎಂದಿಟ್ಟುಕೊಳ್ಳಿ ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ಬೀಳುತ್ತದೆ. ಬೇರೆ ದಾರಿಯಲ್ಲಿ ಹೋಗಬೇಕಿತ್ತು ಎಂದು ನಮ್ಮನ್ನು ನಾವೇ ಹಳಿದುಕೊಳ್ಳಲು ಮರೆಯಲ್ಲ.

bbmp

ಮೈಸೂರ್ ಬ್ಯಾಂಕ್, ಶಿಕ್ಷಕರ ಸದನದ ಎದುರು ಅದೆಷ್ಟೋ ದಿನಗಳಿಂದ ಮುಗಿಯದ ಫುಟ್ ಪಾತ್ ಕಾಮಗಾರಿ, ಅಲ್ಲಲ್ಲಿ ಬಿಬಿಎಂಪಿಯವರು ಕಿತ್ತು ಹಾಕಿರುವ ಕಲ್ಲುಗಳು, ಜಲಮಂಡಳಿಯವರ ಗುಂಡಿಗಳು, ಬಿಎಸ್ ಎನ್ ಎಲ್ ನರು ಅರ್ಧ ಅಗೆದು ಬಿಟ್ಟ ಹೊಂಡಗಳು ಅಯ್ಯೋ ... ಲಿಸ್ಟ್ ಸದ್ಯಕ್ಕೆ ಮುಗಿಯದು. ಇದೆಲ್ಲದರ ಜತೆಗೆ ಹೊಸ ಸೇರ್ಪಡೆ ( ಮೊದಲಿನಿಂದಲೂ ಇದ್ದದ್ದೇ ಬಿಡಿ) ಮಧ್ಯ ರಸ್ತೆಯೇ ತನ್ನ ರಾಜ ಮಾರ್ಗ ಎಂದು ವಿಹರಿಸುವ ಬಿಡಾಡಿ ದನಗಳು, ಹೋರಿಗಳು.

ಕೋರಮಂಗಲದ ಎನ್ ಜಿವಿ ಬಳಿ ಹೋರಿಯೊಂದು ಪ್ರತಿದಿನ ಬೆಳಗ್ಗೆ ಮಧ್ಯ ರಸ್ತೆಯಲ್ಲೇ ವಿರಾಜಮಾನನಾಗಿರುತ್ತಾನೆ. ಯಾವ ಹಾರ್ನ್ ಶಬ್ದಕ್ಕೂ ಈತ ಬಗ್ಗಲ್ಲ. ರಸ್ತೆಯಲ್ಲಿ ಸಾಗುವವರು 15 ರಿಂದ 20 ನಿಮಿಷ ಹೋರಿ ಪ್ರತಾಪ ಅನುಭವಿಸಲೇಬೇಕು. ಮಾರುಕಟ್ಟೆ ತ್ಯಾಜ್ಯವನ್ನು ತಿಂದು ರಾತ್ರಿಯೆಲ್ಲಾ ಡ್ಯೂಟಿ ಮಾಡಿದ ಹೋರಿಗೆ ನಿದ್ರೆ ಬೇಕು ಬಿಡಿ! ಕಪ್ಪು ಬಣ್ಣದ ಸುಂದರಾಂಗ ಎಳೆ ಬಿಸಿಲಿಗೆ ಮೈ ಒಡ್ಡಿ ಮಲಗಿರುವುದು ನೋಡಲು ಚೆನ್ನ, ಆದರೆ ಸವಾರರಿಗೆ??

bbmp

ರಸ್ತೆಯಲ್ಲಿ ಅಡ್ಡಾದಿಟ್ಡಿ ಓಡಾಡುವವರಿಗೆ ದಂಡ ವಿಧಿಸಲು ಬಿಬಿಎಂಪಿ ಮತ್ತು ಪೊಲೀಸರು ಆದೇಶ ಹೊರಡಿಸಿದ್ದಾರೆ. ಆದರೆ ರಸ್ತೆಯಲ್ಲೇ ಮಲಗಿ ಜನರ ಪ್ರಾಣ ಹಿಂಡುವ ಹೋರಿಗೆ ದಂಡ ವಿಧಿಸಲು ಸಾಧ್ಯವೇ? ಅಥವಾ ಹೋರಿಯ ಮಾಲಿಕನನ್ನು ಹಿಡಿದು ದಂಡ ಹಾಕಬಹುದೇ? ಉತ್ತರವನ್ನು ಸ್ಥಳೀಯ ಟ್ರಾಫಿಕ್ ಪೊಲೀಸರೇ ಹೇಳಬೇಕು.

ಒಂದು ವೇಳೆ ದಂಡ ಹಾಕಿದರೆ, ಕೆಆರ್ ಮಾರುಕಟ್ಟೆ ಬಳಿ ಓಡಾಡುವ ಎಲ್ಲ ಹೋರಿ ಮತ್ತು ದನಗಳು ಸೇರಿಕೊಂಡು ಪ್ರಾಣಿ ದಯಾ ಸಂಘಕ್ಕೆ ದೂರು ನೀಡಬಹುದು! ಇಲ್ಲಾ ನಮ್ಮ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ನ್ಯಾಯಾಲಯದ ಮೊರೆ ಹೋಗಲೂಬಹುದು![ಯುಪಿ ಪೊಲೀಸರಿಗೆ ಕೋಳಿ ಹಿಡಿಯುವ ಕಾಯಕ!]

bbmp

ಹೋರಿ ತಾಪತ್ರಯಕ್ಕೆ ಮುಕ್ತಿ ಕಾಣಿಸಿದರೆ ಕೋರಮಂಗಲ ರಸ್ತೆಯಲ್ಲಿ ಓಡಾಡುವವರು ನಿಟ್ಟುಸಿರು ಬಿಡಬಹುದು. ಆದರೆ ಬೆಂಗಳೂರಿನ ಉಳಿದ ರಸ್ತೆಗಳ ಕತೆ? ಯಶವಂತಪುರ, ಮಲ್ಲೇಶ್ವರಂ ಮತ್ತು ಕೆಆರ್ ಮಾರುಕಟ್ಟೆ ಹೋರಿ ಸಂಘಟನೆಗಳು ಈ ಸುದ್ದು ಕೇಳಿ ಈಗಾಗಲೇ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿವೆಯಂತೆ? ಇಂಥ ತೊಂದರೆ ತೊಡಕನ್ನು ಯಾವ ಸಮಸ್ಯೆ ಉಂಟಾಗದಂತೆ ನಿಭಾಯಿಸುವ ಹೊಸ ಐಡಿಯಾ ನಿಮ್ಮ ಬಳಿ ಇದ್ದರೆ ಧಾರಾಳವಾಗಿ ಪ್ರತಿಕ್ರಿಯೆ ಕಳಿಸಿ.

English summary
This Hefty Bull is the Main reason for Traffic Jam near NGV Koramangala Everyday. No matter How much you Honk or Try to ssusshhh it, It doesnt move an inch and just because of that there is atleast a traffic jam for 15 to 20 mins there everyday. Though this can be avoided If the owner of the bull takes proper care of it. Can an Article be written on it As to why shouldn't cow or Bull owners be fined for it ??
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X