ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಬಿಜೆಪಿ ಸರ್ಕಾರ ಮರೆತ ಬಿಎಸ್‌ವೈ: ಕೇಂದ್ರದ ಗುಣಗಾನ

|
Google Oneindia Kannada News

ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ರಾಜ್ಯದೆಲ್ಲೆಡೆ ತಾಲ್ಲೂಕು ಹಾಗೂ ವಿಭಾಗ ಮಟ್ಟದ ಕಾರ್ಯಕರ್ತರ ಸಮಾವೇಶಗಳನ್ನು ನಡೆಸುತ್ತಿದೆ.

ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯಲ್ಲಿ ಕಾರ್ಯಕರ್ತರ ಸಮಾವೇಶ ನಡೆದಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಕೆಲವು ಸಚಿವರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಆ ಭಾಗದ ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಆಡಳಿತದಲ್ಲಿದೆ ಎಂಬುದನ್ನು ಮರೆತಂತೆ ತೋರುತ್ತಿತ್ತು, ಇಡೀಯ ಭಾಷಣದಲ್ಲಿ ಒಮ್ಮೆಯೂ ಅವರು ರಾಜ್ಯ ಬಿಜೆಪಿ ಸರ್ಕಾರದ ಉಲ್ಲೇಖ ಮಾಡಲಿಲ್ಲ. ಕನಿಷ್ಟ ತಾವು ಸಿಎಂ ಆಗಿದ್ದಾಗ ಮಾಡಿದ ಸಾಧನೆ, ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಬಗ್ಗೆಯೂ ಅವರು ಮಾತನಾಡಲಿಲ್ಲ.

ಕಾರ್ಯಕರ್ತರ ಕರತಾಡನ, ಶಿಳ್ಳೆಗಳ ನಡುವೆ ಭಾಷಣ ಮಾಡಲು ಆಗಮಿಸಿದ ಯಡಿಯೂರಪ್ಪ, ಭಾಷಣದ ಆರಂಭದಿಂದ ಅಂತ್ಯದವರೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳುತ್ತಾ ಸಾಗಿದರು. ರಾಮ ಮಂದಿರಕ್ಕೆ ಭೂಮಿ ಪೂಜೆ, ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ, ಕಪ್ಪು ಹಣದ ವಿರುದ್ಧ ಸಮರ, ಜಿಎಸ್‌ಟಿ, ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆ, ಮನೆ-ಮನೆಗೆ ಶೌಚಾಲಯ, ಕೃಷಿಕರ ಆದಾಯ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕಾರ್ಯ, ಜನ್ ಧನ್ ಯೋಜನೆ, ಬುಲೆಟ್ ರೈಲು, ಬಡವರಿಗೆ ಕಡಿಮೆ ದರದಲ್ಲಿ ವಿಮಾನ ಯಾನ, ಆಯುಷ್ಮಾನ್ ಭಾರತ್, ಗಂಗಾ ಶುದ್ಧೀಕರಣ ಯೋಜನೆಗಳನ್ನು ಉಲ್ಲೇಖಿಸಿದ ಬಿಎಸ್‌ವೈ, ವಿದೇಶಗಳಲ್ಲಿ ಮೋದಿಗೆ ಅಪಾರ ಗೌರವಿದೆಯೆಂದು ಹೇಳಿದರು.

ಬೊಮ್ಮಾಯಿ ಬಗ್ಗೆ ಅಸಮಾಧಾನ?

ಬೊಮ್ಮಾಯಿ ಬಗ್ಗೆ ಅಸಮಾಧಾನ?

ರಾಜ್ಯ ಬಿಜೆಪಿ ಸರ್ಕಾರದ ಒಂದೂ ಸಾಧನೆಯನ್ನು ಹೇಳದ ಯಡಿಯೂರಪ್ಪ ಭಾಷಣ, ಸಿಎಂ ವಿರುದ್ಧ ಬಿಎಸ್‌ವೈಗೆ ಅಸಮಾಧಾನವಿರುವ ಅನುಮಾನ ಮೂಡಿಸುವಂತಿತ್ತು. ಕೋವಿಡ್ ಮತ್ತು ರಾಮ ಮಂದಿರ ವಿಷಯಗಳನ್ನು ಹೊರತುಪಡಿಸಿದರೆ, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ವೈ ಮಾಡಿದ್ದ ಭಾಷಣದ ಪುನರಾವರ್ತನೆಯಂತೆಯೂ ಭಾಸವಾಯಿತು.

ಟಿಕೆಟ್ ಆಕಾಂಕ್ಷಿಗಳಿಗೆ ಎಚ್ಚರಿಕೆ

ಟಿಕೆಟ್ ಆಕಾಂಕ್ಷಿಗಳಿಗೆ ಎಚ್ಚರಿಕೆ

ಭಾಷಣದ ನಡುವೆ ಕಾಂಗ್ರೆಸ್‌ ಅನ್ನು ಟೀಕಿಸಿದ ಬಿಎಸ್‌ವೈ, ಈ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದರು. ಅಲ್ಲದೆ, ಈ ಬಾರಿಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಎಚ್ಚರಿಕೆಯನ್ನೂ ನೀಡಿದ ಬಿಎಸ್‌ವೈ, 'ಈ ಬಾರಿ ಟಿಕೆಟ್ ಅನ್ನು ನಾವು ನೀಡುವುದಿಲ್ಲ. ಕೇಂದ್ರವೇ ಕ್ಷೇತ್ರವಾರು ಮೂರು ಸಮೀಕ್ಷೆಗಳನ್ನು ನಡೆಸಿ ಯಾರ ಪರ ಜನಪರ ಒಲವಿರುತ್ತದೆಯೋ ಅವರಿಗೆ ಟಿಕೆಟ್ ನೀಡಲಿದೆ'' ಎಂದರು.

ಹಣ ದಾನ ಮಾಡಿ ಎಂದ ಎಂಟಿಬಿ!

ಹಣ ದಾನ ಮಾಡಿ ಎಂದ ಎಂಟಿಬಿ!

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಬಿಜೆಪಿಯನ್ನು 150 ಕ್ಷೇತ್ರಗಳಿಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಲು ಕಾರ್ಯಕರ್ತರು, 'ತನು-ಮನ-ಧನ' ದಾನ ಮಾಡಬೇಕು ಎಂದರು. ಎಂಟಿಬಿ ಮಾತಿಗೆ ನಕ್ಕ ಸಚಿವ ಸುಧಾಕರ್, ಕೋಲಾರ ಸಂಸದ ಮುನಿಸ್ವಾಮಿ, ಧನ ಬೇಡ ಎಂದು ಹೇಳಿ ಎಂದರು. ಕಾರ್ಯಕರ್ತರೂ ಸಹ ಹಣ ಕೊಡಕ್ಕಾಗಲ್ಲ ಎಂದರು. ಆದರೆ ಮತ್ತೆ ಎಂಟಿಬಿ ಅದೇ ಮಾತುಗಳನ್ನು ಪುನರುಚ್ಚರಿಸಿದಾಗ ಸಭೆಯಲ್ಲಿ ಮತ್ತೆ ಜೋರು ನಗು.

ಅನ್ಯಮನಸ್ಕರಾಗಿದ್ದ ಅರುಣ್ ಸಿಂಗ್

ಅನ್ಯಮನಸ್ಕರಾಗಿದ್ದ ಅರುಣ್ ಸಿಂಗ್

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕಾರ್ಯಕ್ರಮದಲ್ಲಿ ಅನ್ಯಮನಸ್ಕರಾಗಿದ್ದರು. ಯಡಿಯೂರಪ್ಪ ಅವರ ಪಕ್ಕದ ಕುರ್ಚಿಯಲ್ಲಿಯೇ ಕುಳಿತಿದ್ದರೂ ಆರಂಭದಲ್ಲಿ ಔಪಚಾರಿಕವಾಗಿ ಮಾತನಾಡಿಸಿದ್ದು ಬಿಟ್ಟರೆ ಬಹುತೇಕ ತಮ್ಮದೇ ಲೋಕದಲ್ಲಿ ಅರುಣ್ ಸಿಂಗ್ ಲೀನರಾಗಿದ್ದರು. ಯಡಿಯೂರಪ್ಪ ಪಕ್ಕದಲ್ಲಿ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಅರುಣ್ ಸಿಂಗ್ ಬಗ್ಗೆ, 'ಯಾರೀತ ಯಡಿಯೂರಪ್ಪಾಜಿ ಪಕ್ಕ ಕಾಲ ಮೇಲೆ ಕಾಲು ಹಾಕಿ ಕೂತಿದ್ದಾನಲ್ಲ'' ಎಂದು ಕಾರ್ಯಕರ್ತರು ತಮ್ಮ-ತಮ್ಮಲ್ಲೆ ಪಿಸುಮಾತಿನಲ್ಲಿಯೇ ಮಾತನಾಡಿಕೊಂಡಿದ್ದು ಕೇಳಿಸಿತು. ಆದರೆ ಭಾಷಣದ ಸಮಯದಲ್ಲಿ ಯಡಿಯೂರಪ್ಪ ಅವರನ್ನುದ್ದೇಶಿಸಿ, ''ಯಡಿಯೂರಪ್ಪ ಕರ್ನಾಟಕದ ನಂಬರ್ ಒನ್ ನಾಯಕ'' ಎಂದರು ಅರುಣ್ ಸಿಂಗ್.

ಆರ್.ಅಶೋಕ್-ಸುಧಾಕರ್-ಸಿಟಿ ರವಿ ಮಾತು

ಆರ್.ಅಶೋಕ್-ಸುಧಾಕರ್-ಸಿಟಿ ರವಿ ಮಾತು

ಆರಂಭದಲ್ಲಿ ಮಾತನಾಡಿದ ಸಿಟಿ ರವಿ, ''ಡಿಜೆ ಕೆಜಿ ಹಳ್ಳಿ, ಹಿಜಾಬ್, ಹುಬ್ಬಳ್ಳಿ ಗಲಭೆಗಳ ಬಗ್ಗೆ ಮಾತನಾಡಿ, ಮುಸ್ಲಿಂ ಧಂಗೆಕೋರರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿವೆ. ಕುಂಕುಮ ಇಟ್ಟವರು ಬಾಂಬ್ ಹಾಕಿಲ್ಲ ಎಂದ ಸಿ.ಟಿ.ರವಿ, ಇನ್ನು ಮುಂದೆ ಯಾರಾದರೂ ಕಲ್ಲು ತೂರಾಟ ಮಾಡಿದರೆ ಬುಲ್ಡೋಜರ್, ಜೆಸಿಬಿಗಳು ಬುದ್ಧಿಕಲಿಸಲು ಹೋಗುತ್ತವೆ,'' ಎಂದರು.

ಆರ್.ಅಶೋಕ್ ಮಾತನಾಡಿ, ''ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ 'ಟೈಟ್' ವಾರ್ ನಡೆಯುತ್ತಿದೆ. ನಾವು ಚುನಾವಣೆಗೆ ಸಿದ್ಧರಾಗುತ್ತಿದ್ದೇವೆ, ಆದರೆ ಅಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಜಗಳವೇ ಅಂತ್ಯಗೊಂಡಿಲ್ಲ,'' ಎಂದರು.

ಸುಧಾಕರ್ ಮಾತನಾಡಿ, ''ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದ ಎಲ್ಲ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬರಬೇಕು ಅದಕ್ಕಾಗಿ ಶ್ರಮ ವಹಿಸಿ,'' ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Recommended Video

ಭೂಕಂಪದಿಂದ‌ ಪಾರಾಗಲು 20 ಗಂಟೆ ರೆಫ್ರಿಜರೇಟರ್ ನಲ್ಲಿ ಅಡಗಿದ್ದ 11 ವರ್ಷದ ಬಾಲಕನ ರೋಚಕ ಕತೆ | Oneindia Kannada

English summary
BS Yediyurappa did not mention BJP state government achievements. He only talked about Modi government's achievement in his speech in party workers meet happened in Bengaluru Rural Vijayapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X