ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಬ್ ಸ್ಫೋಟ ನಂತರದ 10 ಪ್ರಮುಖ ಬೆಳವಣಿಗೆ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 29: "ಹೌದು, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬಾಂಬ್ ಸ್ಫೋಟ ಉಗ್ರರದ್ದೇ ಕೃತ್ಯ"

ಹೀಗೆಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ದೃಢಪಡಿಸಿದ್ದಾರೆ. ಬಾಂಬ್ ಸ್ಫೋಟಗೊಂಡಿರುವ ಕಾರಣ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದರ್ಥವಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸ್ಪಷ್ಟಪಡಿಸಿದ್ದಾರೆ.

bomb

1) ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಪ್ರತಿಬಂಧ ಹೇರುವುದಿಲ್ಲ ಎಂದು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೊದಲು ತಿಳಿಸಿದ್ದಂತೆ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳು ಡಿಸೆಂಬರ್ 31ರ ರಾತ್ರಿ 12 ಗಂಟೆಗಿಂತ ಹೆಚ್ಚು ಸಮಯ ತೆರೆದಿರಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ. [ಹೊಸ ವರ್ಷಾಚರಣೆ ಕೈಬಿಡುವುದು ಲೇಸು]

2) ಮಧ್ಯ ಪ್ರದೇಶದಿಂದ 2013ರಲ್ಲಿ ಸಿಮಿ ಸಂಘಟನೆಯ ಐವರು ಶಂಕಿತ ಉಗ್ರರು ಜೈಲಿನಿಂದ ಪರಾರಿಯಾಗಿದ್ದರು. ಆದ್ದರಿಂದ ಈಗ ಬೆಂಗಳೂರಿನಲ್ಲಿ ಓರ್ವ ಮಹಿಳೆಯನ್ನು ಬಲಿ ತೆಗೆದುಕೊಂಡಿರುವ ಬಾಂಬ್ ಸ್ಫೋಟವನ್ನು ಅವರೇ ನಡೆಸಿದ್ದು ಎಂಬ ಶಂಕೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಕಿರಣ್ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.

3) ಆದರೆ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಇನ್ನೂ ಸ್ಪಷ್ಟ ಹೇಳಿಕೆ ನೀಡಿಲ್ಲ. ಬೆಂಗಳೂರು ಬಾಂಬ್ ಸ್ಫೋಟದ ಕುರಿತು "ಅಗತ್ಯವಾದರೆ ಮಾತ್ರ" ಎನ್ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ನಡೆಸಲಾಗುವುದು ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. [ಬಾಂಬ್ ಗೆ ಬೆದರದ ಜನ, ಜೀವನ ಸರ್ವೇಸಾಮಾನ್ಯ]

4) ಬಾಂಬ್ ಸ್ಫೋಟ ನಡೆದು 15 ಗಂಟೆಗಳೇ ಕಳೆದರೂ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಸ್ಫೋಟಿಸಿರುವ ಬಾಂಬ್ ಕಡಿಮೆ ಶಕ್ತಿಯುತವಾಗಿದ್ದ ಕಾರಣ ಭಯೋತ್ಪಾದಕರ ಉದ್ದೇಶ ಭಯ ಮೂಡಿಸುವುದು ಹಾಗೂ ಹೊಸ ವರ್ಷದ ಸಂಭ್ರಮಕ್ಕೆ ತಣ್ಣೀರೆರೆಚುವುದೇ ಆಗಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

5) ಅಮೋನಿಯಂ ನೈಟ್ರೇಟ್‌ನಿಂದ ತಯಾರಿಸಿದ್ದ ಬಾಂಬ್‌ಗೆ ಟೈಮರ್ ಅಳವಡಿಸಿ ರೆಸ್ಟೋರೆಂಟ್‌ ಆವರಣದಲ್ಲಿದ್ದ ಗಿಡದ ಮಧ್ಯೆ ಅಡಗಿಸಿಡಲಾಗಿತ್ತು ಎಂದು ಪೊಲೀಸ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

bhavani

6) ಬಾಂಬ್ ಸ್ಫೋಟದಲ್ಲಿ ತೀವ್ರ ಗಾಯಗೊಂಡಿದ್ದ ಭವಾನಿ (38) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರೆಸ್ಟೋರೆಂಟ್ ಆವರಣದಲ್ಲಿ ನಡೆಯುತ್ತಿದ್ದಾಗ ಬಾಂಬ್ ಸ್ಫೋಟಿಸಿದ್ದು, ಚೂರುಗಳು ಅವರ ತಲೆಗೆ ಹೊಕ್ಕಿದ್ದವು. ಚೆನ್ನೈ ನಿವಾಸಿ ಭವಾನಿ ರಜಾ ಕಳೆಯಲೆಂದು ಬೆಂಗಳೂರಿಗೆ ಬಂದಿದ್ದರು.

7) ಮೃತ ಭವಾನಿ ಸಂಬಂಧಿಕನಾದ ಕಾರ್ತಿಕ್ ಎಂಬುವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ವಿನಯ್ ಮತ್ತು ಸಂದೀಪ್ ಎಂಬಿಬ್ಬರಿಗೆ ಗಾಯಗಳಾಗಿದ್ದು, ಹೊಸಮಠ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

8) ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಿದೆ. [ಮೆಹದಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ]

9) "ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಹೊಸ ವರ್ಷ ಆಚರಣೆಯ ಸಂದರ್ಭ ಪೊಲೀಸರು ನಗರದೆಲ್ಲೆಡೆ ಗಸ್ತು ತಿರುಗಲಿದ್ದಾರೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ. [ಮೆಹದಿ ಗುಪ್ತದಳದ ಕಣ್ಣುತಪ್ಪಿಸಿದ್ದು ಹೇಗೆ]

10) ಪೊಲೀಸರಿಂದ ಭದ್ರತಾ ಲೋಪವಾಗಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ. ಮೆಹದಿ ಮಸ್ರೂರ್ ಬಿಸ್ವಾಸ್‌ನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

English summary
Union Minister of State for Home Kiren Rijiju Monday said the explosion outside a restaurant in the church street of Bangalore was "definitely a terror attack".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X