ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಲಭೆ: ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಹೈಕಮಾಂಡ್ ಗರಂ

|
Google Oneindia Kannada News

ಬೆಂಗಳೂರು, ಆ. 18: ಬೆಂಗಳೂರಿನ ಕೆ.ಜಿ. ಹಳ್ಳಿ ಗಲಭೆ ಪ್ರಕರಣ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಡೆ, ರಾಜ್ಯ ಬಿಜೆಪಿ ಘಟಕದ ಪ್ರತಿಕ್ರಿಯೆ ಹಾಗೂ ರಾಜ್ಯ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ರೀತಿಗೆ ಹೈಕಮಾಂಡ್ ಅತೃಪ್ತಿ ವ್ಯಕ್ತಪಡಿಸಿದೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ಕಳೆದ ಮಂಗಳವಾರ ರಾತ್ರಿ ಫೇಸ್‌ಬುಕ್‌ ಕಮೆಂಟ್‌ಗೆ ಸಂಬಂಧಿಸಿದಂತೆ ಡಿ.ಜಿ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ದೊಡ್ಡ ಗಲಭೆ ಆಗಿತ್ತು. ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ಲೂಟಿ ಮಾಡಲಾಗಿತ್ತು. ಒಂದು ಸಮುದಾಯದ ಜನರು ಗಲಭೆಯಲ್ಲಿ ಭಾಗವಹಿಸಿದ್ದರು. ಗಲಭೆ ಬಳಿಕ ರಾಜ್ಯ ಬಿಜೆಪಿ ಸರ್ಕಾರ ನಡೆದುಕೊಂಡು ರೀತಿ, ತೆಗೆದುಕೊಂಡ ನಿರ್ಧಾರಗಳು ಹಾಗೂ ಸರ್ಕಾರದ ಸಚಿವರ ಹೇಳಿಕೆಗಳಿಗೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಬಿಜೆಪಿ ಮೂಲಗಳಿಂದಲೇ ತಿಳಿದು ಬಂದಿದೆ.

ಬೆಂಗಳೂರು ಗಲಭೆ

ಬೆಂಗಳೂರು ಗಲಭೆ

ಕಳೆದ ಮಂಗಳವಾರ ರಾತ್ರಿ ನಡೆದ ಗಲಭೆಯಲ್ಲಿ ಒಂದು ಸಮುದಾಯದ ಜನರು ಮತ್ತೊಂದು ಸಮುದಾಯದ ಜನರ ಮನೆಗಳನ್ನು ಟಾರ್ಗೆಟ್ ಮಾಡಿದ್ದರು. ಆದರೆ ಅದೊಂದು ಕೋಮು ಗಲಭೆ ಅಲ್ಲ ಎಂಬುದು ಸರ್ಕಾರ ಹಾಗೂ ಪೊಲೀಸ್ ಇಲಾಖೆಗಳಿಗೆ ಆರಂಭದಲ್ಲಿಯೆ ಗೊತ್ತಿತ್ತು. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಇಡೀ ಪ್ರಕರಣವನ್ನು ತಾಳ್ಮೆಯಿಂದಲೇ ನಿರ್ವಹಿಸಿತು. ರಾಜ್ಯ ಸರ್ಕಾರ ಪ್ರಕರಣವನ್ನು ನಿರ್ವಹಿಸಿದ ರೀತಿಗೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹೇಳಿ ಕೇಳಿ ನಡೆದಿದ್ದು ಒಂದು ಸಮುದಾಯಕ್ಕೆ ಸೇರಿದ್ದ ಜನರ ದೊಂಬಿ. ಅದನ್ನು ರಾಜ್ಯ ಸರ್ಕಾರವಾಗಲಿ, ರಾಜ್ಯ ಬಿಜೆಪಿ ಘಟಕವಾಗಲಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಿಜೆಪಿ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ತಕ್ಷಣವೇ ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ಕೊಟ್ಟಿದೆ.

'ಪೂರ್ವ ನಿಯೋಜಿತ' ಅಸಮಾಧಾನ

'ಪೂರ್ವ ನಿಯೋಜಿತ' ಅಸಮಾಧಾನ

ಗಲಭೆ ಕುರಿತಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಘಟನೆ ನಡೆದಾಗ ಗೃಹಸಚಿವ ಬಸವರಾಜ್ ಬೊಮ್ಮಾಯಿ ಉಡುಪಿಯಲ್ಲಿದ್ದರು. ಇಡೀ ಬೆಂಗಳೂರು ಆತಂಕಗೊಳ್ಳುವಂತಹ ಘಟನೆ ನಡೆದರೂ ತಕ್ಷಣ ಅವರು ಹಿಂದಿರುಗಲಿಲ್ಲ. ಮರುದಿನ ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟರು.

ಇದರೊಂದಿಗೆ ಇಡೀ ಗಲಭೆ ಪೂರ್ವ ನಿಯೋಜಿತ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿಕೆ ಕೊಟ್ಟಿದ್ದಕ್ಕೂ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬೊಮ್ಮಾಯಿ ಅವರ ಪೂರ್ವನಿಯೋಜಿತ ಹೇಳಿಕೆಗೆ ರಾಜ್ಯ ಬಿಜೆಪಿಯಲ್ಲಿಯೂ ಅಸಮಾಧಾನ ವ್ಯಕ್ತವಾಗಿತ್ತು. ಘಟನೆ ಪೂರ್ವ ನಿಯೋಜಿತ ಎಂದು ಸ್ವತಃ ಗೃಹಸಚಿವರೇ ಹೇಳಿಕೆ ಕೊಟ್ಟರೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿರಲಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ ಎಂದು ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರ ಗಂಭೀರವಾಗಿಲ್ಲ

ಸರ್ಕಾರ ಗಂಭೀರವಾಗಿಲ್ಲ

ಪ್ರಕರಣವನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಷ್ಟು ಸರ್ಕಾರ ತೆಗೆದುಕೊಂಡಿಲ್ಲ ಎಂದು ಹೈಕಮಾಂಡ್ ಹೇಳಿದೆಯಂತೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ಪ್ರಕರಣದ ಬಗ್ಗೆ ಎಲ್ಲೂ ಕಠಿಣ ಶಬ್ದಗಳಲ್ಲಿ ಖಂಡಿಸಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಬಿಜೆಪಿ ಹೈಕಮಾಂಡ್ ನಿಂದ ರಾಜ್ಯ ಘಟಕಕ್ಕೆ ಮರುದಿನವೇ ಮರುದಿನವೇ ಸೂಚನೆ ಬಂದಿದೆ.


ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಆ್ಯಕ್ಟಿವ್ ಆಯಿತು. ಹೀಗಾಗಿ ಪ್ರಕರಣದ ಕುರಿತಂತೆ ವಿರೋಧ ಪಕ್ಷಗಳಿಗೆ ಆಹಾರವಾಗದ ರೀತಿಯಲ್ಲಿ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹಾಕಲು ಬಿಜೆಪಿಯಲ್ಲಿ ಯೋಜನೆ ಹಾಕಿಕೊಂಡಿದೆ. ತನ್ನದೇ ಪಕ್ಷಗಳ ನಿಯೋಗಗಳ ಮುಖಾಂತರ ಗೃಹಸಚಿವರನ್ನು ಭೇಟಿ ಮಾಡಿ ಆರೋಪಿಗಳ ಬಂಧನ, ಆಸ್ತಿ ನಷ್ಟ ವಸೂಲಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಲು ಪಕ್ಷದಲ್ಲಿ ತೀರ್ಮಾನವಾಗಿವೆ ಎನ್ನಲಾಗಿದೆ.

ಬಿಜೆಪಿ ಸಮಿತಿ ರಚನೆ

ಬಿಜೆಪಿ ಸಮಿತಿ ರಚನೆ

ಕೇಂದ್ರ ಬಿಜೆಪಿಯಿಂದ ಖಡಕ್ ಸೂಚನೆ ಬರುತ್ತಿದ್ದಂತೆಯೆ ರಾಜ್ಯ ಬಿಜೆಪಿ ಘಟಕ ಎಚ್ಚೆತ್ತುಕೊಂಡಿದೆ. ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಕೊಡಲು ಸಮಿತಿ ರಚನೆ ಮಾಡಿದೆ. ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರ ನೇತೃತ್ವದಲ್ಲಿ ಆರು ಜನರ ಸಮಿತಿ ರಚನೆ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೇ ರಾಜ್ಯ ಕಾಂಗ್ರೆಸ್ ಘಟಕ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಿಬಿಟ್ಟಿತ್ತು.

ಜೊತೆಗೆ ಸರ್ಕಾರದ ನಿರ್ಬಂಧದ ಮಧ್ಯೆಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಓಲೈಕೆಗೆ ಮುಂದಾಗದೇ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಅಮಾಯಕರ ಬಂಧನ ಬೇಡ ಎಂದುಬಿಟ್ಟರು. ಇದು ರಾಜಕೀಯವಾಗಿ ಬಿಜೆಪಿಗೆ ಆದ ಮೊದಲ ಹಿನ್ನಡೆ ಎಂದೇ ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಹೀಗಾಗಿ ಕೇಂದ್ರ ಬಿಜೆಪಿ ನಾಯಕರೇ ತೀವ್ರವಾಗಿ ಹೇಳಿಕೆ ಕೊಟ್ಟರು.

ಬಿ.ಎಲ್. ಸಂತೋಷ್ ವಾಗ್ದಾಳಿ

ಬಿ.ಎಲ್. ಸಂತೋಷ್ ವಾಗ್ದಾಳಿ

ಯಾವಾಗ ರಾಜ್ಯ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಘಟಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಅರಿವಿಗೆ ಬಂತೊ, ಆಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ನೇರವಾಗಿ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಬಿ.ಎಲ್. ಸಂತೋಷ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಬಿಜೆಪಿ ರಾಷ್ಟ್ರೀಯ ನಾಯಕರು ಅಗ್ರೆಸ್ಸಿವ್ ಆರೋಪ-ಪ್ರತ್ಯಾರೋಪ ಮಾಡಿದರು. ಮೂಲ ಬಿಜೆಪಿ ನಾಯಕರಂತೆ ಇತ್ತೀಚೆಗೆ ಬಿಜೆಪಿ ಸೇರಿದವರು ಸೂಕ್ಷ್ಮ ವಿಚಾರಗಳತ್ತ ಗಮನ ಹರಿಸುತ್ತಿಲ್ಲ ಎಂದು ಹೈಕಮಾಂಡ್ ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಇಡೀ ಪ್ರಕರಣವನ್ನು ರಾಜ್ಯ ಬಿಜೆಪಿ ಘಟಕ ಹಾಗೂ ರಾಜ್ಯ ಬಿಜೆಪಿ ಸರ್ಕಾರ ನಿರ್ವಹಣೆ ಮಾಡಿದ ರೀತಿಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.

English summary
The BJP High Command has expressed its displeasure over the handling the KG halli riot incident in Bengaluru. , Chief Minister B.S. Yediyurappa raection The BJP High Command expressed dissatisfaction with CM Yediyurappa's actions, Home Minister Basavaraj Bommai's statement and the state BJP unit's response and the state BJP government's decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X