• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕಸದ ಮಾಫಿಯಾ'ಗೆ ವೈಜ್ಞಾನಿಕತೆ ಟಚ್; ನೆದರ್‌ಲ್ಯಾಂಡ್‌ನಲ್ಲಿ ಅವ್ಯವಹಾರದ ಲಿಂಕ್?

|

ಬೆಂಗಳೂರು, ಫೆಬ್ರವರಿ 3: ಹಗರಣಗಳಿಲ್ಲದ ಸರಕಾರದ ಸಂಸ್ಥೆಗಳನ್ನು ಹುಡುಕಿಕೊಡಿ ಎನ್ನುವ ಪರಿಸ್ಥಿತಿ ಇರುವಾಗ ಬೆಂಗಳೂರು ಸ್ಥಳೀಯ ಆಡಳಿತದ ಹೊಣೆ ಹೊತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಹೇಗೆ ಸಾಧ್ಯ? ಹಾಗಂತ ಈ ಪ್ರಶ್ನೆಯನ್ನು ನಾವು ಕೇಳುತ್ತಿಲ್ಲ, ಬದಲಿಗೆ ಸ್ವತಃ ಬಿಬಿಎಂಪಿಯ ಮೇಯರ್ ಎಂ. ಗೌತಮ್ ಕುಮಾರ್‌ ಪಾಲಿಕೆಯೊಳಗೆ ಹಣಗರವೊಂದು ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ, ಅದೂ ಕಸವಿಲೇವಾರಿ ವಿಚಾರದಲ್ಲಿ.

ಬೆಂಗಳೂರಿನಲ್ಲಿ ಕಸದ ಸಮಸ್ಯೆಯ ತೀವ್ರತೆಯ ಕುರಿತು ಅರಿವು ಇರುವ ಜನರಿಗೆ, 'ಕಸದಿಂದಲೂ ರಸ' ತೆಗೆಯುವ ಮಂದಿ ಇಲ್ಲಿದ್ದಾರೆ ಎಂಬ ಸಾಮಾನ್ಯ ಜ್ಞಾನ ಇದ್ದೇ ಇದೆ. ಎಂಜಲು ಕಾಸು ಹುಡುಕುವ ಮಂದಿ ಕೋಟಿ ದಾಟಿರುವ ನಗರದ ಜನರು ನಿತ್ಯ ಬಿಸಾಡುವ ತ್ಯಾಜ್ಯದಲ್ಲೂ 'ಬೆಳೆ' ಕಂಡುಕೊಂಡಿದ್ದಾರೆ. ಹೀಗಾಗಿ 'ಕಸದ ಮಾಫಿಯಾ' ಎಂದರೆ ಇವತ್ತಿಗೆ ಹೊಸ ಸಂಗತಿ ಅಂತ ಅನ್ನಿಸುವುದಿಲ್ಲ.

ಬಿಬಿಎಂಪಿ ಆಸ್ತಿಗಳ ಲೆಕ್ಕ ಕೇಳಿದ ಸಿಎಂ ಯಡಿಯೂರಪ್ಪ

ಇಷ್ಟೆಲ್ಲಾ ಪೀಠಿಕೆ ಯಾಕೆ ಎಂದರೆ, ಬಿಬಿಎಂಪಿಯ ಇತ್ತೀಚಿನ ಕಾರ್ಯಚಟುವಟಿಕೆಗಳನ್ನು ಗಮನಿಸಿದರೆ ಕಸದ ಸುತ್ತ ಹಾಗೂ ನಗರದ ನೈರ್ಮಲ್ಯದ ಸುತ್ತಲೇ ಹೆಚ್ಚು ಗಮನ ನೀಡುತ್ತಿರುವ ಹಾಗೆ ಕಾಣಿಸುತ್ತಿದೆ. ಇದಕ್ಕೆ ಆಂತರಿಕ ಕಾರಣಗಳ ಜತೆಗೆ ರಾಜ್ಯದ ಹೈಕೋರ್ಟ್‌ ಗರಂ ಆಗಿರುವುದು ಕೂಡ ಪ್ರಮುಖ ಕಾರಣ. ಇತ್ತೀಚೆಗೆ ನ್ಯಾಯಾಲಯ ಕಸದ ವಿಲೇವಾರಿ ವಿಚಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯಾಕೆ ಪಾಲಿಕೆಯನ್ನು ವಿಸರ್ಜಿಸಬಾರದು ಎಂದು ಗದರಿಸಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಗೌತಮ್ ಕುಮಾರ್ ನಗರ ಸ್ವಚ್ಛ ಸರ್ವೇಕ್ಷಣೆ ಯೋಜನೆಯ ಸುತ್ತ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ 'ಒನ್ ಇಂಡಿಯಾ ಕನ್ನಡ' ಬಿಬಿಎಂಪಿಯ ಕಸದ ಸತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಇಟ್ಟುಕೊಂಡು ಒಟ್ಟು ಮೂರು ಭಾಗಗಳಲ್ಲಿ ಸರಣಿ ವರದಿಗಳನ್ನು ಓದುಗರಿಗಾಗಿ ಇಲ್ಲಿ ನೀಡುತ್ತಿದೆ. ನೀವು ಬೆಂಗಳೂರಿಗರಾಗಿದ್ದರೆ, ಈ ಮಾಹಿತಿಯನ್ನು ತಪ್ಪದೇ ಮನನ ಮಾಡಿಕೊಳ್ಳಿ. ನಿತ್ಯ ನಗರದಲ್ಲಿ ಓಡಾಡುವ ಸಮಯದಲ್ಲಿ ಕಣ್ಣಿಗೆ ಬೀಳುವ ಕಸ ಮತ್ತು ಅದರ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಬೆಳಣಿಗೆಗಳ ಕುರಿತು ಒಳನೋಟಗಳನ್ನು ನಿಮ್ಮ ಮುಂದಿಡುವುದು ಈ ಪ್ರಯತ್ನದ ಹಿಂದಿರುವ ಉದ್ದೇಶ.

ತಲಾ ಅರ್ಧ ಕಿಲೋ ಕಸ ನಿತ್ಯ 57 ಲಕ್ಷ ಕಿಲೋ ಕಸ ಉತ್ಪಾದನೆ

ತಲಾ ಅರ್ಧ ಕಿಲೋ ಕಸ ನಿತ್ಯ 57 ಲಕ್ಷ ಕಿಲೋ ಕಸ ಉತ್ಪಾದನೆ

ರಾಜಧಾನಿ ಬೆಂಗಳೂರಿನಲ್ಲಿ ಒಂದು ದಿನಕ್ಕೆ ಉತ್ಪಾದನೆಯಾಗುವ ಕಸದ ಪ್ರಮಾಣ ಸುಮಾರು 56,70,000 ಕಿಲೋ. ಬೆಂಗಳೂರಿನ ಜನ ಸಂಖ್ಯೆ ಒಂದು ಕೋಟಿ ಅಂದುಕೊಂಡರೆ, ಪ್ರತಿಯೊಬ್ಬರು ತಲಾ ಅರ್ಧ ಕೆಜಿಯಷ್ಟು ಕಸವನ್ನು ಪ್ರತಿನಿತ್ಯ ರಸ್ತೆಗೆ ಸುರಿಯುತ್ತಾರೆ. ಇದರಲ್ಲಿ ಶೇ. 84 ರಷ್ಟು ಹಸಿ ಕಸ, ಶೇ. 28ರಷ್ಟು ಒಣ ತ್ಯಾಜ್ಯ, ಶೇ. 6ಷ್ಟು ಜಡ ತ್ಯಾಜ್ಯ ಹಾಗೂ ಶೇ. 6ರಷ್ಟು ಜಡ ತ್ಯಾಜ್ಯ ಎಂಬುದು ಬಿಬಿಎಂಪಿಯಲ್ಲಿ ಲಭ್ಯ ಇರುವ ಮಾಹಿತಿ. ಇವತ್ತಿಗೆ ಜನಸಾಮಾನ್ಯರೂ ಕೂಡ ಕಸವನ್ನು ಕನಿಷ್ಟ ಮೂರು ವಿಭಾಗಗಳಾಗಿ ವಿಂಗಡಿಸಿ ಪಾಲಿಕೆಯ ಕಡೆಯಿಂದ ಬರುವ ಸಂಗ್ರಹಕಾರರಿಗೆ ನೀಡಬೇಕು. ಹಸಿ, ಒಣ ಹಾಗೂ ಪ್ಲಾಸ್ಟಿಕ್ ಕಸಗಳನ್ನು ವಿಭಾಗಿಸಿ ನೀಡಿದರೆ ಮಾತ್ರವೇ ಪಾಲಿಕೆ ಸ್ವೀಕರಿಸುತ್ತದೆ ಎಂಬುದು ನಿಯಮ. ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಾರದಿದ್ದರೂ, ಇತ್ತೀಚೆಗೆ ಕಸದ ವಿಲೇವಾರಿಯಲ್ಲಿ ಒಂದಷ್ಟಾದರೂ ಶಿಸ್ತು ಬಂದಿದೆ.

ಪಾಲಿಕೆಗೆ ಕಣ್ಣಿಗೆ ಮಣ್ಣೆರಚಿದ ಬಗೆ ಕಸದಲ್ಲೂ ರಸ ಕಂಡುಕೊಂಡವರು

ಪಾಲಿಕೆಗೆ ಕಣ್ಣಿಗೆ ಮಣ್ಣೆರಚಿದ ಬಗೆ ಕಸದಲ್ಲೂ ರಸ ಕಂಡುಕೊಂಡವರು

ಜನ ಸಾಮಾನ್ಯರು, ಸಣ್ಣ ಉದ್ಯಮಗಳು, ಕೈಗಾರಿಕೆಗಳಿಂದ ಹೊರಬೀಳುವ ತ್ಯಾಜ್ಯ ಸಂಗ್ರಹಕ್ಕೆ ಹಿಂದೆ ವೈಜ್ಞಾನಿಕ ಪದ್ಧತಿಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಸದ ವಿಲೇವಾರಿ ಗುತ್ತಿಗೆ ಪಡೆದುಕೊಂಡವರು ನೀಡಿದ ಲೆಕ್ಕವೇ ಅಂತಿಮವಾಗುತ್ತಿತ್ತು. ಉದಾಹರಣೆಗೆ ಜಯನಗರದ ಒಂದು ವಾರ್ಡ್‌ನಲ್ಲಿ ಒಂದು ಟನ್ ಕಸ ವಿಲೇವಾರಿಗೆ ಲಭ್ಯಗುತ್ತಿದ್ದರೆ ಗುತ್ತಿಗೆದಾರರು ಒಂದೂವರೆ ಟನ್ ಕಸದ ಲೆಕ್ಕ ನೀಡುತ್ತಿದ್ದರು. ಇದೊಂದು ಮಾಫಿಯಾದ ರೂಪ ಪಡೆದುಕೊಂಡು ವ್ಯಾಪಕ ಚರ್ಚೆಗೆ ಒಳಗಾದ ನಂತರ ಬಿಬಿಎಂಪಿ ಕಸ ವಿಲೇವಾರಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಮುಂದಾಯಿತು. ಈ ಹಿನ್ನೆಲೆಯಲ್ಲಿ ಜಾರಿಗೆ ಬಂದಿದ್ದೇ ವೈಜ್ಞಾನಿಕ ಕಸ ವಿಲೇವಾರಿ ಪ್ರಕ್ರಿಯೆಗಳು.

ಕಾಂಪೌಂಡ್‌ಗೆ ಮೂತ್ರ ಮಾಡುವವರೇ ಎಚ್ಚರ...!

ನೆದರ್‌ಲ್ಯಾಂಡ್‌ ಕಂಪನಿ ಹೆಸರಿನಲ್ಲಿ

ನೆದರ್‌ಲ್ಯಾಂಡ್‌ ಕಂಪನಿ ಹೆಸರಿನಲ್ಲಿ

ಕಸ ವಿಲೇವಾರಿಯಲ್ಲಿ ವೈಜ್ಞಾನಿಕತೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಪಾಲಿಕೆ ಸುಮಾರು 200 ಸ್ಥಳಗಳಲ್ಲಿ ಸೈಂಟಿಫಿಕ್ ವೇಸ್ಟ್ ಕಲೆಕ್ಷನ್ ಬಿನ್‌ಗಳನ್ನು ಅಳವಡಿಸಲು ತೀರ್ಮಾನ ಮಾಡಿದ್ದು 2018ರಲ್ಲಿ. ಆ ವರ್ಷದ ಮಾರ್ಚ್ ತಿಂಗಳ 19ರಂದು ವೈಜ್ಞಾನಿಕವಾಗಿ ಕಸ ಸಂಗ್ರಹಿಸುವ ಡಬ್ಬಿಗಳನ್ನು ಅಳವಡಿಸಲು ಕಾರ್ಯಾದೇಶವೊಂದು ಹೊರಬಿತ್ತು. ಅದರ ಪ್ರಕಾರ ಈ ಡಬ್ಬಿಗಳನ್ನು ತರುವುದು ಮತ್ತು ಅವುಗಳನ್ನು ಮುಂದಿನ ಐದು ವರ್ಷಗಳ ಕಾಲ ನಿರ್ವಹಣೆ ಮಾಡುವ ಹೊಣೆಯನ್ನು ನೆದರ್‌ಲ್ಯಾಂಡ್‌ ಮೂಲದ ಜೋಂಟಾ (Zonta) ಹೆಸರಿನ ಕಂಪನಿಗೆ ಒಟ್ಟು 55.27 ಕೋಟಿ ರೂಪಾಯಿಗಳ ಗುತ್ತಿಗೆ ನೀಡಲಾಯಿತು. ಆದರೆ ಇಲ್ಲಿಯೂ ಅಧಿಕಾರಿಗಳು ತಮ್ಮ ಹಳೆಯ ಚಾಳಿಯನ್ನು ಪ್ರದರ್ಶಿಸಿದ್ದಾರೆ ಎಂಬುದು ಈಗ ಅನುಮಾನಕ್ಕೆ ಕಾರಣವಾಗಿದೆ. ವಿಶೇಷ ಅಂದರೆ ಖುದ್ದು ಮೇಯರ್ ಗೌತಮ್ ಕುಮಾರ್ ಈ ಡಬ್ಬಿಗಳನ್ನು ಅಳವಡಿಕೆಯನ್ನು ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ನೆದರ್‌ಲೆಂಡ್ ಯುರೋದಲ್ಲಿ ನಾಮ ಹಾಕಿದ್ರಾ?

ನೆದರ್‌ಲೆಂಡ್ ಯುರೋದಲ್ಲಿ ನಾಮ ಹಾಕಿದ್ರಾ?

ZONTA ಕಂಪೆನಿ ತನ್ನ ಕೋಟೆಷನ್‌ನಲ್ಲಿ ಒಂದು ಡಬ್ಬಿಗೆ 1,24,757 ನೆದರ್‌ಲ್ಯಾಂಡ್‌ ಯುರೋ ಎಂದು ನಮೂದಿಸಿದೆ. ಇದು ರುಪಾಯಿಗೆ ಪರಿವರ್ತಿಸಿದಾಗ ಸುಮಾರು 1 ಲಕ್ಷ ಸಾವಿರ ರುಪಾಯಿ ಆಗುತ್ತದೆ. (ನೆದರ್‌ಲ್ಯಾಂಡ್‌ನ 0.013 ಯುರೋ ಒಂದು ರುಪಾಯಿಗೆ ಸಮ) ಆದರೆ, ಒಂದು ಡಬ್ಬಿಗೆ 3 ಲಕ್ಷ ರುಪಾಯಿ (ನಿರ್ವಹಣೆ ಸೇರಿ) ಪಾವತಿಸಿರುವುದು ಗೊತ್ತಾಗಿದೆ.

'ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?

ಡಬ್ಬಿಗಳಲ್ಲೂ ಅಕ್ರಮದ ವಾಸನೆ ಮೇಯರ್ ಬರೆದ ಪತ್ರದಲ್ಲೇನಿದೆ?

ಡಬ್ಬಿಗಳಲ್ಲೂ ಅಕ್ರಮದ ವಾಸನೆ ಮೇಯರ್ ಬರೆದ ಪತ್ರದಲ್ಲೇನಿದೆ?

ಸೈನಿಕರ ಶವ ಪೆಟ್ಟಿಗೆಯಲ್ಲೂ ಲಂಚ ತಿಂದ ಇತಿಹಾಸ ಇರುವ ದೇಶದಲ್ಲಿ ಕಸದ ಡಬ್ಬಿಗಳಲ್ಲಿ ಖರೀದಿಯಲ್ಲಿ ನಿಯತ್ತನ್ನು ನಿರೀಕ್ಷಿಸಲು ಹೇಗೆ ಸಾಧ್ಯವಿದೆ? ಈ ಕುರಿತು ಪಾಲಿಕೆ ಮೇಯರ್ ಬರೆದ ಪತ್ರ 'ಒನ್ ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ. ಇದರ ಪ್ರಕಾರ, ನೆದರ್‌ಲ್ಯಾಂಡ್‌ ಕಂಪನಿ ಕಡೆಯಿಂದ ಒಂದು ಕಸ ಸಂಗ್ರಹಿಸುವ ಡಬ್ಬಿಗೆ 5.92 ಲಕ್ಷವನ್ನು ಬಿಬಿಎಂಪಿ ಪಾವತಿ ಮಾಡಿದೆ. ಆದರೆ ವಾಸ್ತವದಲ್ಲಿ ಇಂತಹದೊಂದು ಡಬ್ಬಿಯ ಬೆಲೆ 1. 5 ಲಕ್ಷವನ್ನೂ ಮೀರುವುದಿಲ್ಲ. ಅಂದರೆ ವೈಜ್ಞಾನಿಕ ಕಸ ಸಂಗ್ರಹಿಸುವ ಡಬ್ಬಿಯ ಮಾರುಕಟ್ಟೆಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿಗೆ ಹಣವನ್ನು ಕಂಪನಿಗೆ ಪಾವತಿ ಮಾಡಲಾಗಿದೆ. ಯಾಕೆ ಹೀಗೆ ಬಿಬಿಎಂಪಿ ಅಧಿಕಾರಿಗಳು ಜನರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಸದ್ಯ ಇದರ ಸುತ್ತ ನಡೆಯುತ್ತಿರುವ ಪಾಲಿಕೆ ಒಳಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಮೇಯರ್ ಗೌತಮ್ ಕುಮಾರ್ ಕೊಂಚ ಗಂಭೀರವಾಗಿಯೇ ಈ ಪ್ರಕರಣವನ್ನು ಪರಿಗಣಿಸುವಂತೆ ಕಾಣಿಸುತ್ತಿದೆ. ಇದೇ ವರ್ಷದ ಜನವರಿ 14ರಂದು ಅವರು ಪಾಲಿಕೆ ಆಯುಕ್ತರ ಅಡಿಯಲ್ಲಿ ಬರುವ ತಾಂತ್ರಿಕ ನಿಗಾ ಘಟಕಕ್ಕೆ ಪತ್ರ ಬರೆದಿದ್ದು, ವರದಿಯನ್ನು ನೀಡುವಂತೆ ಸೂಚನೆ ನೀಡಿದ್ದಾರೆ.

ಡಬ್ಬಿ ಮಾತ್ರ ಅಲ್ಲ ಟ್ರಕ್ ಖರೀದಿಯಲ್ಲೂ ಅಕ್ರಮದ ಶಂಕೆ

ಡಬ್ಬಿ ಮಾತ್ರ ಅಲ್ಲ ಟ್ರಕ್ ಖರೀದಿಯಲ್ಲೂ ಅಕ್ರಮದ ಶಂಕೆ

ಇದೇ ಪತ್ರದಲ್ಲಿ ಮೇಯರ್, "ಡಬ್ಬಿಗಳ ಅಳವಡಿಕೆ ಮತ್ತು 8 ಟ್ರಕ್ ಖರೀದಿಗೆ ಪ್ರತ್ಯೇಕ ಟೆಂಡರ್ ಕರೆದಿಲ್ಲ. ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಪ್ರತ್ಯೇಕ ಟೆಂಡರ್‌ನೂ ಕರೆದಿಲ್ಲ. ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಅನುಭವ ಇಲ್ಲದ ಕಂಪೆನಿಗೆ ಟೆಂಡರ್ ನೀಡಲಾಗಿದೆ'' ಎಂದು ತಿಳಿಸಿದ್ದಾರೆ. ಜತೆಗೆ, "ತ್ಯಾಜ್ಯ ಸಾಗಾಣಿಕೆಯ ಟ್ರಕ್‌ಗಳಿಗೆ ಯಾವ ಆಧಾರದ ಮೇಲೆ 49 ಲಕ್ಷ ರುಪಾಯಿ ಮೂಲ ದರವನ್ನು ನಿಗದಿಪಡಿಸಲಾಗಿದೆ'' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಹೈಕೋರ್ಟ್‌ ಆದೇಶವಿದ್ದಾಗೂ ತ್ಯಾಜ್ಯ ಡಬ್ಬಿಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಫುಟ್ ಪಾತ್ ಮೇಲೆ ಡಬ್ಬಿಗಳನ್ನು ಅಳವಡಿಸದ್ದಕ್ಕೆ ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಈ ಹಗರಣದ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಿ, ನನಗೆ ಕೆಲವು ಅನುಮಾನಗಳು ಇರುವುದರಿಂದ ಕೆಲವು ಸ್ಪಷ್ಟೀಕರಣಗಳೊಂದಿಗೆ ವರದಿ ಕೇಳಿದ್ದೇನೆ'' ಎಂಬುದು ಮೇಯರ್ ಎಂ. ಗೌತಮ್ ಕುಮಾರ್ 'ಒನ್‌ ಇಂಡಿಯಾ ಕನ್ನಡ'ಕ್ಕೆ ನೀಡಿದ ಪ್ರತಿಕ್ರಿಯೆ.

ಹಗರಣದ ರೂವಾರಿಗಳು ರಾಜಕೀಯ ಕಚ್ಚಾಟಕ್ಕೆ ಮುನ್ನುಡಿ?

ಹಗರಣದ ರೂವಾರಿಗಳು ರಾಜಕೀಯ ಕಚ್ಚಾಟಕ್ಕೆ ಮುನ್ನುಡಿ?

ಗಮನಾರ್ಹ ಸಂಗತಿ ಏನೆಂದರೆ, ವೈಜ್ಞಾನಿಕ ಕಸ ಸಂಗ್ರಹ, ವಿಲೇವಾರಿ ಹೆಸರಿನಲ್ಲಿ ಇಂತಹದೊಂದು ವ್ಯವಹಾರ ನಡೆದಾಗ ಪಾಲಿಕೆಯ ಮೇಯರ್ ಆಗಿದ್ದವರು ಸಂಪತ್ ಕುಮಾರ್. ಕೆ. ಜೆ. ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಮೂರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಅಂದಾಜಿಸಲಾದ ಈ ಪ್ರಕರಣವನ್ನು ಬಿಜೆಪಿ ಕೆದಕಲು ಮುಂದಾಗಿರುವುದು ಪಾಲಿಕೆ ಒಳಗೆ ರಾಜಕೀಯ ಕಿತ್ತಾಟಕ್ಕೆ ಮುನ್ನಡಿ ಬರೆಯುವ ಲಕ್ಷಣಗಳು ಕಾಣಿಸುತ್ತಿವೆ. ಮೇಯರ್ ಪತ್ರದ ಕುರಿತು ಒನ್‌ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಮೇಯರ್ ಸಂಪತ್ ರಾಜ್, ಅಧಿಕಾರಿಗಳು ಏನೇನು ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮೇಯರ್‌ಗೆ ಅಧಿಕಾರ ಇದೆ. ಆದರೆ, ರಾಜಕೀಯ ದುರುದ್ದೇಶ ಇದರಲ್ಲಿ ಇರಬಾರದು ಎಂದಿದ್ದಾರೆ. ಇಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳೇನೆ ಇರಲಿ, ಕಸದ ವಿಚಾರದಲ್ಲಿ ಇನ್ನಷ್ಟು ಬಿಗಿಯಾದ ಕ್ರಮಗಳು, ಇಚ್ಚಾಶಕ್ತಿಯನ್ನು ಬಿಬಿಎಂಪಿ ಪ್ರದರ್ಶಿಸಲೇಬೇಕಿದೆ. ಈಗಾಗಲೇ ಹೈಕೋರ್ಟ್‌ ಕೂಡ ಸ್ಥಳೀಯ ಆಡಳಿತಕ್ಕೆ ಛೀಮಾರಿ ಹಾಕಿದೆ. ಈ ಹಿನ್ನೆಲೆಯನ್ನು ಮೇಯರ್ ಪಡೆದುಕೊಳ್ಳುವ ಜೋಂಟಾ ಕಂಪನಿ ಖರೀದಿ ಬಗೆಗಿನ ವರದಿ ಮತ್ತು ಮುಂದಿನ ಕ್ರಮಗಳು ಗಮನ ಸೆಳೆಯಲಿವೆ.

English summary
In 2018, officials of the BBMP Polyculture Solid Waste Management Division have heard allegations of illegal purchases of Scientific Waste Collection Bins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more