ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಥೆ 4 : ಮಾಯಾನಗರಿ ಬೆಂಗಳೂರು ಮತ್ತು ಮಾಯದಂಥ ಬಿಎಂಟಿಸಿ ಬಸ್ಸು!

|
Google Oneindia Kannada News

ಬೆಂಗಳೂರು ಎಂಬ ಮಾಯಾನಗರಿಯಲ್ಲೊಮ್ಮೆ ಓಡಾಡಿದರೆ ನೂರು ಕತೆಗಳು ಹುಟ್ಟಿಕೊಳ್ಳುತ್ತವೆ. ಭೂಮಿಗೆಲ್ಲ ದೈತ್ಯ ಬಳ್ಳಿಗಳು ಸುತ್ತಿಕೊಂಡಂತೆ ಕಾಣುವ ಫ್ಲೈ ಓವರ್ ಗಳು, ಗಗನಚುಂಬಿ ಕಟ್ಟಡಗಳು, ಝಗಮಗಿಸುವ ಮಾಲ್ ಗಳು, ಕಣ್ಮುಚ್ಚಿ ಬಿಡುವಷ್ಟರಲ್ಲಿ ನಮ್ಮನ್ನು ತಲುಪಬೇಕಾದ ಸ್ಥಳಕ್ಕೆ ತಲುಪಿಸುವ ಮೆಟ್ರೋ, ಸುಸಜ್ಜಿತ ವಿಮಾನ ನಿಲ್ದಾಣ... ಆಹಾ, ಏನಿಲ್ಲ ಈ ಉದ್ಯಾನ ನಗರಿಯಲ್ಲಿ?!

ಇಷ್ಟೆಲ್ಲ ಇದ್ದರೂ ನೈಜ ಬೆಂಗಳೂರಿನ ಚಿತ್ರಣ ಅನುಭವಕ್ಕೆ ಬರಬೇಕಂದ್ರೆ ಒಂದೇ ಒಂದು ಬಾರಿಯಾದರೂ ಬೆಂಗಳೂರಿನ ಹೆಮ್ಮೆಯ ಬಿಎಂಟಿಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ಹತ್ತಲೇಬೇಕು!

ಹೌದು, ಬೆಂಗಳೂರಿನ 80 , 100 ಅಡಿ ರಸ್ತೆಗಳಿಗೆ ಗಜಗಾಂಭೀರ್ಯ ನೀಡಿದ್ದು ಇವೇ ಬಿಎಂಟಿಸಿ ಬಸ್ ಗಳು! ಹಳ್ಳಿಗಳಿಂದ ಏಕಾಏಕಿ ಬೆಂಗಳೂರಿಗೆ ಬಂದವರಿಗೆ ಈ ಬಿಎಂಟಿಸಿ ಬಸ್ಸುಗಳು ಅಚ್ಚರಿ ಎನ್ನಿಸಲಿಕ್ಕೆ ಸಾಕು. ಒಂದು ಬಸ್ಸಿ ಮಿಸ್ಸಾದ್ರೆ ಮಧ್ಯಾಹ್ನದವರೆಗೂ ಬೇರೆ ಬಸ್ಸಿಲ್ಲ ಅಂತ ತಲೆಮೇಲೆ ಕೈಹೊತ್ತು ಕೂರುತ್ತಿದ್ದ ಹಳ್ಳಿಯ ಬದುಕು ಇಲ್ಲಿ ಊಹೆಗೂ ನಿಲುಕೋಲ್ಲ.

ನಿಮಿಷಕ್ಕೊಂದರಂತೆಯೋ, ಮೂವತ್ತು ಸೆಕೆಂಡಿಗೊಂದರಂತೆಯೋ ಬರುವ, ಇಷ್ಟೆಲ್ಲ ಫ್ರಿಕ್ವೆನ್ಸಿ ಇದ್ದರೂ ತುಂಬಿ ತುಳುಕುವ ಈ ಬಸ್ಸುಗಳ ಕುರಿತು ಅಚ್ಚರಿ ಮೂಡದಿದ್ದರೆ ಹೇಗೆ?!

ಬಸ್ಸಿನ ಕೊರತೆ ಎಂದು ಬೆಂಗಳೂರಿಗರ್ಯಾರೂ ದೂರು ನೀಡದ ಮಟ್ಟಿಗೆ ಬಿಎಂಟಿಸಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆಂದೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿಯೂ ಅದರ ಮುಡಿಯೇರಿದೆ. ಬೆಂಗಳೂರಿಗರಿಗೆ ವರದಾನ ಎನ್ನಿಸಿರುವ ಬಿಎಂಟಿಸಿ ಬಸ್ಸು ಬದುಕಿನ ನೂರಾರು ಹೊಳಹುಗಳನ್ನು ಪರಿಚಯಿಸುತ್ತದೆ.

ಬಸ್ಸಿನ ತುಂಬ ತುಂಬಿ ತುಳುಕುವ ವಿಭಿನ್ನ ಮನಸ್ಥಿತಿಯ ಜನರ ವರ್ತನೆ, ಮಾತು, ಜಗಳ ಎಲ್ಲವೂ ಹೊಸ ಪಾಠವನ್ನೇನನ್ನೋ ಕಲಿಸಿದಂತೆನ್ನಿಸುತ್ತದೆ.

ಬೆಳ್ಳಂಬೆಳಗ್ಗೆ ಜಗಳದ ಸುಪ್ರಭಾತ

ಬೆಳ್ಳಂಬೆಳಗ್ಗೆ ಜಗಳದ ಸುಪ್ರಭಾತ

ಬಿಎಂಟಿಸಿ ಬಸ್ಸಿನಲ್ಲಿ ಜಗಳವಾಗದ ದಿನವೇನಾದರೂ ಇದೆಯಾ ಎಂದು ಯೋಚಿಸಿದರೆ ಹಲವರಿಗೆ ಉತ್ತರ ಸಿಕ್ಕಲಿಕ್ಕಿಲ್ಲ. ಯಾಕಂದ್ರೆ ಬೆಳ್ಳಂಬೆಳಗ್ಗೆ ಒಲ್ಲದ ಮನಸ್ಸಿನಿಂದ ಎದ್ದು, ಗಡಿಬಿಡಿಯಲ್ಲಿ ಮನೆಕೆಲಸ, ತಿಂಡಿ ಮುಗಿಸಿ ಓಡಿ ಬಂದು ಆಫೀಸಿನ ಒತ್ತಡದ ಬಗ್ಗೆ ಯೋಚಿಸುತ್ತ ಬಸ್ಸಿನಲ್ಲಿ ನಿಂತರೆ ಸಾಕು, ಪಕ್ಕದಲ್ಲೇ ಶುರುವಾಗತ್ತೆ ರಗಳೆ! ನಮ್ಮ ಪಾಡಿಗೆ ನಾವು ನಿಂತಿದ್ರೂ ಕಿಚಾಯಿಸಿ, 'ಅಯ್ಯೋ ಕಣ್ಣು ಕಾಣ್ಸಲ್ವಾ? ಮೈಮೇಲೇ ಬೀಳ್ತೀರಲ್ಲ... ಸರ್ಯಾಗಿ ನಿಂತ್ಕೊಳ್ರಿ' ಎಂದು ಜಗಳಕ್ಕೆ ನಿಲ್ಲುವ ಜನರ ಬಗ್ಗೆ ಒಮ್ಮೆ ರೇಜಿಗೆ ಹುಟ್ಟೋದು ಸುಳ್ಳಲ್ಲ.

ಕಾಸಾ..? ಪಾಸಾ..?!

ಕಾಸಾ..? ಪಾಸಾ..?!

ತುಂಬಿ ತುಳುಕೋ ಜನರ ನಡುವಲ್ಲೂ ಅದ್ಹೇಗೋ ಜಾಗ ಮಾಡಿಕೊಂಡು, ಕಾಸಾ... ಪಾಸಾ... (ಟಿಕೆಟ್ಟಾ ಅಥವಾ ಪಾಸ್ ಇದೆಯಾ?) ಎನ್ನುತ್ತ, ಆ ಜನಜಂಗುಳಿಯಲ್ಲೂ ಹಾಸ್ಯದ ಹೊನಲು ಹರಿಸೋ ಕಂಡಕ್ಟರ್! ಎಷ್ಟೇ ತಮಾಷೆ ಮಾಡಿದರೂ, ಕೊನೆಗೊಮ್ಮೆ ಸಹನೆ ಕಳೆದುಕೊಂಡು, 'ಎಲ್ರೋ ಎರಡು ಸಾವಿರದ ನೋಟು ಕೊಟ್ಬಿಟ್ರೆ, ಚಿಲ್ರೆಗೆ ನಾನೇನ್ ಮಾಡ್ಲಿ? ನಾನೇನು ಆರ್ ಬಿಐ ನಾ? ಚಿಲ್ರೆ ಇಲ್ಲಾ ಅಂದ್ರೆ ಇಳ್ಕೊಳಿ' ಎಂದು ಜೋರುಧ್ವನಿ ಹೊರಡಿಸಿ ಮುಖಕೆಂಪಂಗೆ ಮಾಡಿಕೊಳ್ತಾನೆ.

ಲೇಡೀಸ್ ಸೀಟಿನ ವ್ಯಾಮೋಹ!

ಲೇಡೀಸ್ ಸೀಟಿನ ವ್ಯಾಮೋಹ!

ಯಾವುದೇ ಬಿಎಂಟಿಸಿ ಬಸ್ ಹತ್ತಿದರೂ ಲೇಡೀಸ್ ಸೀಟಿನಲ್ಲಿ ಕುಳಿತ ಯುವಕನೋ, ಮಧ್ಯವಯಸ್ಕನೋ ಒಬ್ಬ ನಿದ್ದೆಯ ನಾಟಕವಾಡುವ ದೃಶ್ಯ ಮಾಮೂಲು! ಕೂತಿದ್ದು ಲೇಡೀಸ್ ಸೀಟಿನಲ್ಲಿ, ಯಾರಾದ್ರೂ ಎಬ್ಬಿಸಿಬಿಟ್ಟರೆ ಅಂತ ಕಣ್ಣು ಮುಚ್ಚಿಕೊಂಡು ನಿದ್ದೆಯ ನಾಟಕವಾಡುತ್ತ ಕೂರುವವರನ್ನೂ ಬಡಿದು ಎಬ್ಬಿಸಿ, ಇದು ಲೇಡೀಸ್ ಸೀಟ್, ಎದ್ದೇಳಿ ಎಂದು ತಮ್ಮ ಹಕ್ಕು ಚಲಾಯಿಸುವ ಗಟ್ಟಿಗಿತ್ತಿ ಮಹಿಳೆಯರು ಆವತ್ತಿನ 'ಮಿಸ್ ಬಿಎಂಟಿಸಿ ಬಸ್' ಪಟ್ಟ ಅಲಂಕರಿಸೋದು ಗ್ಯಾರಂಟಿ! ನಾಲ್ಕೈದು ಜನ ಜಗಳವಾಡಿ, ಲೇಡೀಸ್ ಸೀಟ್ ನಿಂದ ಏಳಿ ಎಂದು ಕೂಗಾಡಿದರೂ, ಯಾವುದನ್ನೂ ತಮಗೆ ಮುಟ್ಟಿಸಿಕೊಳ್ಳದೆ ನಿಶ್ಚಿಂತೆಯಿಂದ ಕೂರುವ ಪುರುಷರೂ ಇಲ್ಲದಿಲ್ಲ!

ನೂರಾರು ಕತೆಗಳು ತೆರೆಯೋ ಹೊತ್ತು...

ನೂರಾರು ಕತೆಗಳು ತೆರೆಯೋ ಹೊತ್ತು...

ಕಾಲಿಡುವುದಕ್ಕೂ ಜಾಗವಿಲ್ಲದ ಬಸ್ಸಿನಲ್ಲೂ ನಿಂತು, ಆ ಗಲಾಟೆಯ ನಡುವಲ್ಲೂ ಪ್ರಿಯತಮನೊಂದಿಗೆ ರೊಮ್ಯಾಂಟಿಕ್ ಸಂಭಾಷಣೆಯಲ್ಲಿ ತೊಡಗುವ ಹುಡುಗಿ, ಬಸ್ಸಿನ ಹಿಂಭಾಗದಲ್ಲೆಲ್ಲೋ ನಿಂತು, ಮುಂಭಾಗದಲ್ಲಿ ನಿಂತ ಚೆಂದದ ಹುಡುಗಿಯೊಂದಿಗೆ ಕಣ್ಣಿನಲ್ಲೇ ಮಾತನಾಡುವ ಹುಡುಗ, ಪರಿಚಯವೇ ಇಲ್ಲದ ಸಹಪ್ರಯಾಣಿಕನ್ನು ಅರೆಕ್ಷಣದಲ್ಲಿ ಪರಿಚಯಿಸಿಕೊಂಡು ತಮ್ಮ ಸಾಂಸಾರಿಕ ತಾಪತ್ರಯಗಳನ್ನೆಲ್ಲ ಹೇಳಿಕೊಳ್ಳುವ ವೃದ್ಧ, ಆಫೀಸಿನ ತಲೆಬಿಸಿಯ ಕುರಿತು ಬಸ್ಸಿನಲ್ಲಿಯೇ ತನ್ನ ಸಹೋದ್ಯೋಗಿಯೊಂದಿಗೆ ರೋದಿಸುವ ಮಹಿಳೆ, ಈ ಎಲ್ಲವೂ ತನಗೆ ಮಾಮೂಲು ಎಂಬಂತೆ ಬಸ್ಸಿನ ತೂರಾಟದ ನಡುವಲ್ಲೂ ಆವತ್ತು ಖಾಲಿಯಾದ ಟಿಕೇಟ್ ಸಂಖ್ಯೆಯನ್ನು ಎಂಟ್ರಿ ಮಾಡುತ್ತ ಕುಳಿತ ಕಂಡಕ್ಟರ್, ನೂರು ಜನರ ಸಾರಥಿಯಾಗಿ, ಬೆಂಗಳೂರು ರಸ್ತೆಯ ಹಳ್ಳಕೊಳ್ಳಗಳನ್ನೂ ಸಲಿಸಾಗಿ ಹತ್ತಿಸಿ, ಎತ್ತಿನ ಗಾಡಿಯ ಪ್ರಯಾಣದ ಅನುಭವ ನೀಡುವ ಚಾಲಾಕಿ ಚಾಲಕ... ತರಹೇವಾರಿ ಸ್ವಭಾವಗಳು ತೆರೆದುಕೊಳ್ಳೋದು ಬಿಎಂಟಿಸಿ ಬಸ್ಸಿನಲ್ಲೇ!

ಮಾನವೀಯತೆಗೂ ಇಲ್ಲಿದೆ ಜಾಗ

ಮಾನವೀಯತೆಗೂ ಇಲ್ಲಿದೆ ಜಾಗ

ಗರ್ಭಿಣಿಯರೋ, ಪುಟ್ಟ ಮಕ್ಕಳನ್ನು ಕಂಕುಳಿನಲ್ಲಿ ಹೊತ್ತು ಬರುವವರೋ, ರೋಗಿಗಳೋ, ವೃದ್ಧರೋ ಬಂದರೆ ಸ್ವ ಇಚ್ಛೆಯಿಂದ ಎದ್ದುನಿಂತು ಅವರಿಗೆ ಸೀಟು ಬಿಟ್ಟುಕೊಡುವವರೂ ಇಲ್ಲದಿಲ್ಲ. ಮೊದಲೇ ಸೀಟು ಹಿಡಿದು ಕುಳಿತವರು, ಮಣಬಾರದ ಬ್ಯಾಗು ಹೊತ್ತ ಶಾಲೆಯ ಮಕ್ಕಳ ಕೈಲಿ ಬ್ಯಾಗನ್ನು ಪಡೆದು, ಕೆಲ ಹೊತ್ತು ಅದನ್ನು ತಮ್ಮ ಕಾಲಮೇಲಿಟ್ಟುಕೊಂಡು ಭಾರ ಕಡಿಮೆ ಮಾಡುವವರೂ ಇದ್ದಾರೆ. ಅಂಗವಿಕಲರು, ಕುರುಡರು ಯಾರೇ ಬಸ್ಸು ಹತ್ತಿದರೂ ಅವರಿಗೀ ಮಾನವೀಯತೆಯಿಂದ ಸೀಟು ಬಿಟ್ಟುಕೊಟ್ಟು, ಕೊನೆಗೆ ಅವರು ಬಸ್ಸಿನಿಂದ ಇಳಿಯುವಾಗಲೂ ಅವರಿಗೆ ಸಹಾಯ ಮಾಡುವ ಮಾನವೀಯ ಅಂತಃಕರಣಗಳೂ ಬಸ್ಸಿನುದ್ದಕ್ಕೂ ಸಾಕಷ್ಟು ಸಿಗುತ್ತವೆ.

ಬೆಂಗಳೂರಿಗೆ ವರದಾನ

ಬೆಂಗಳೂರಿಗೆ ವರದಾನ

ಬೆಂಗಳೂರಿನ ಗಲ್ಲಿ ಗಲ್ಲಿಗೂ ತಲುಪುವ ಬಿಎಂಟಿಸಿ ಇಲ್ಲದ ಬೆಂಗಳೂರನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಬೆಂಗಳೂರಿನ ಮಧ್ಯಮ, ಬಡ ವರ್ಗದ ಜನರು ಸಾರಿಗೆಗಾಗಿ ಇಂದಿಗೂ ಅವಲಂಬಿಸಿರುವುದು ಬಿಎಂಟಿಸಿ ಬಸ್ ಅನ್ನೇ. ಹೊಸ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಆಧುನಿಕತೆಗೆ ತೆರೆದುಕೊಳ್ಳುತ್ತ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತ ಬಿಎಂಟಿಸಿ ಬೆಂಗಳೂರಿಗರ ನೆಚ್ಚಿನ ಸಾರಿಗೆ ಸಂಸ್ಥೆ ಎನ್ನಿಸಿದೆ.

ಬೆಂಗಳೂರನ್ನು ಅರ್ಥೈಸಿಕೊಳ್ಳಬೇಕಂದ್ರೆ ಒಂದೇ ಒಂದು ಬಾರಿಯಾದರೂ ಮರೆಯದೆ, ಬಿಎಂಟಿಸಿ ಬಸ್ ಹತ್ತಿ!

English summary
If yolu want to undersatand the real life of garden city Bengaluru, you have to travel by Bengaluru Metropolitan Transport Corporation Buses. The journey in BMTC bus will undoubtedly teach you so many lessons of life and the experience of the journey will also give a new dimension to the life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X