ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾನಗರಕ್ಕೆ ವೇಷ ಹೊಂದಿಕೆಯಾಗ್ದಿದ್ರೆ ಅಷ್ಟೇ ಕತೆ!

By ಮಧುಸೂದನ ಹೆಗಡೆ
|
Google Oneindia Kannada News

ನಾನೇನು ಬೆಂಗಳೂರಿಗೆ ಹೊಸಬನಲ್ಲ. ಅದಾಗಲೇ ಮಹಾನಗರಿಯ ಜಂಜಾಟದ ಬದುಕಿಗೆ ಹೊಂದಿಕೊಂಡು 5 ವರ್ಷಗಳು ಗೊತ್ತಿಲ್ಲದೇ ನಾಪತ್ತೆಯಾಗಿವೆ.

ದೀಪಾವಳಿ ರಜೆಗೆಂದು ಮನೆಗೆ ತೆರಳಿದ್ದವ ಖಾಸಗಿ ಬಸ್ಸೊಂದನ್ನು ಏರಿಕೊಂಡು ಮಹಾನಗರಿಗೆ ಬಂದಿಳಿದಿದ್ದೆ. ಮಲೆನಾಡ ಮಡಿಲಾದ ನನ್ನೂರಲ್ಲಿ ಮಳೆಯ ಲವ ಲೇಷವೂ ಇಲ್ಲ. ಆದರೆ ಬೆಂಗಳೂರು ಮಾತ್ರ ಮೋಡ ಕವಿದ ವಾತಾವರಣದಿಂದ ಮುಕ್ತವಾಗಿಲ್ಲ.

ನಾನು ಊರಿಗೆ ತೆರಳುವ ಹಿಂದಿನ ದಿನ ಒಣಗಿಸಲು ಹಾಕಿದ್ದ ಬಟ್ಟೆಗಳು ಹಾಗೆ ಇವೆ. ಹತ್ತಾರು ಬಾರಿ ಬೆಂಗಳೂರಲ್ಲಿ ಇದ್ದವರಿಗೆ ' ಬಟ್ಟೆ ಪುರಾಣ' ಹೇಳಿ ಅವರಿಗೂ ತಲೆ ನೋವು ತರಿಸಿದ್ದೆ.[ಬೆಂಗಳೂರು: ವಾಸ್ತುದೋಷ ಕಾರಣ, ನೇರಳೆ ಮರದ ಜೀವ ಹರಣ?]

bengaluru

ಹಾಂ. ಈಗ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಮನೆಯಿಂದ ಹೊರಟವನ ಬಳಿ ತಕ್ಕ ಮಟ್ಟಿಗೆ ಲಗೇಜ್ ಇತ್ತು. ಹೋಗುವಾಗ ಬೆನ್ನಿಗೆ ಒಂದೆ ಬ್ಯಾಗ್ , ಆದರೆ ಬರುವಾಗ, ಬೆನ್ನಿಗೊಂದು, ಆ ಕೈಗೊಂದು, ಈ ಕೈಗೊಂದು ಅಂಥ ಒಟ್ಟು ಮೂರು ಲಗೇಜ್. ಬೆನ್ನಿಗಿದ್ದುದರಲ್ಲಿ ಬಟ್ಟೆ-ಬರೆ ಇತ್ಯಾದಿ, ಎಡಗೈಗೆ ಹಬ್ಬಕ್ಕೆ ಮಾಡಿದ ಕಜ್ಜಾಯ ಅದು ಇದು.. ಮತ್ತೆ ಬಲಗೈಗೆ ಒಂದು 15 ಕೆಜಿ ತೂಗುವ ಅಕ್ಕಿ ಚೀಲ.

ಈಗ ನಾನು ಹೇಳಿದ ಮೊದಲಿನ ಸಾಲಿನ ಅರ್ಥ ವಿವರಿಸುತ್ತೇನೆ. ಶಿರಸಿಯಿಂದ ಸಾವರಿಸಿಕೊಂಡು 9.30ಕ್ಕೆ ಬಿಟ್ಟ ಬಸ್ ಬೆಂಗಳೂರಿನ ಆನಂದರಾವ್ ಸರ್ಕಲ್ ಗೆ 6.30ಕ್ಕೆ ನಿಗದಿಯಂತೆ ತಲುಪಿತ್ತು. ಅಲ್ಲಿಂದ ಕಾರ್ಪೋರೇಶನ್, ಲಾಲ್ ಬಾಗ್ ಗೇಟ್, ಸೌತ್ ಎಂಡ್ ಮೂಲಕ ತೆರಳಿ ಜಯನಗರ 4ನೇ ಬ್ಲಾಕ್ ನಲ್ಲಿ ತನ್ನ ಪ್ರಯಾಣ ಅಂತ್ಯ ಮಾಡುವುದಿತ್ತು.[ಪಾದಚಾರಿಗಳಿಗೆ ನರಕ ದರ್ಶನ ಮಾಡಿಸುವ ರೆಸಿಡೆನ್ಸಿ ರಸ್ತೆ]

ನನ್ನ ವಾಸ ಕತ್ರಿಗುಪ್ಪೆಯಲ್ಲಾದ್ದರಿಂದ ರೂಮು ಮೇಟ್ ಶರತ್ ಗೆ ಸೌತ್ ಎಂಡ್ ಗೆ ಬೈಕ್ ತರಲು ಹೇಳಿದ್ದೆ. ನಿಗದಿಯಂತೆ ನಾನು ಸೌತ್ ಎಂಡ್ ನಲ್ಲಿ ಇಳಿದೆ. ಮೊದಲೆ ಚಳಿಗೆ ಹೆದರುವ ನನಗೆ ಬೆಂಗಳೂರ ಚಳಿ ಮತ್ತಷ್ಟು ನಡುಕ ಹಚ್ಚಿತ್ತು. ತಲೆಗೆ ಪಕ್ಕಾ ರೈತರ ಶೈಲಿಯಲ್ಲಿ ಟವೆಲ್ ಸುತ್ತಿಕೊಂಡೇ ಇದ್ದೆ. ಮೈ ಮೇಲೊಂದು ಝರ್ಕೀನ್, ಜೀನ್ಸ್ ಪ್ಯಾಂಟ್ ಧರಿಸಿದ್ದರೂ ತಲೆಗಿದ್ದ ಟವೆಲ್ ನನ್ನನ್ನು ಪಕ್ಕಾ ಹಳ್ಳಿಯವನಂತೆ ಕಾಣುವಂತೆ ಮಾಡಿರಬೇಕು.(ಇದಕ್ಕೆ ಉತ್ತರ ಕೊನೆಗೆ ನಿಮಗೆ ಸಿಗುತ್ತದೆ).

ಸರಿ... ನಾನು ಸೌತ್ ಎಂಡ್ ನಲ್ಲಿ ಬಸ್ ಇಳಿದು ಗಂಟೆ ಗಡಿಯಾರದ ಬಳಿ ತೆರಳಿ ನಿಂತೆ. ಕೈಯಲ್ಲಿ ಅಕ್ಕಿ ಮೂಟೆ ಸೇರಿ ಮೂರು ಲಗೇಜ್ (ಮತ್ತೊಮ್ಮೆ ನಿಮ್ಮ ನೆನಪಿಗೆ.) ಶರತ್ ಬೆಂಗಳೂರಿಗೆ ಹಳಬನಾದರೂ ಬೆಂಗಳೂರು ದಕ್ಷಿಣಕ್ಕೆ ಹೊಸಬ. ನನ್ನದೇ ಬೈಕ್ ತೆಗೆದುಕೊಂಡು ಬರುವ ಪುಣ್ಯಾತ್ಮ ಬನಶಂಕರಿಗೆ ತೆರಳಿದ್ದ! ಆತ ಬರುವುದು ಕೊಂಚ ತಡವಾದೀತು ಎಂದು ಅತ್ತಿತ್ತ ಅಡ್ಡಾಡುತ್ತಿದೆ, ತಲೆ ಮೇಲಿನ ಟವೆಲ್ ಹಾಗೇ ಇತ್ತು.[ಕಸದ ಲಾರಿ ವೇಗವಾಗಿ ಹೋಯ್ತು, ಆಸ್ಪತ್ರೆ ತ್ಯಾಜ್ಯ ರಸ್ತೆ ಪಾಲಾಯ್ತು]

ನಾನು ಅತ್ತಿತ್ತ ಓಡಾಡುತ್ತಿದ್ದೆ. ಇದ್ದಕ್ಕಿದ್ದಂತೆ ಟ್ರಾಫಿಕ್ ಉಪ ಆಯುಕ್ತರ ಕಚೇರಿ ಎದುರಿಗಿದ್ದ ಆಟೋ ಚಾಲಕನೊಬ್ಬ ನಾನಿಟ್ಟ ಅಕ್ಕಿ ಮೂಟೆ ಮತ್ತು ಕಜ್ಜಾಯದ ಚೀಲವನ್ನು ಹೊತ್ತೇ ಒಯ್ದಿದ್ದ. ಅವನಿಗೆ ಕಳ್ಳತನ ಮಾಡುವ ಉದ್ದೇಶ ಇರಲಿಲ್ಲ ಎನ್ನೋದು ಪಕ್ಕಾ. ಆದರೆ ನನ್ನ 'ವೇಷ' ವನ್ನು ನೋಡಿ ಹಳ್ಳಿಯವನೆಂದು ಭಾವಿಸಿ ಆಟೋ ಹತ್ತಿಸಿ ಸರಿಯಾಗಿ ಪೀಕುವನಿದ್ದ.

ತಕ್ಷಣ ಅವನಿದ್ದಲ್ಲಿಗೆ ತೆರಳಿ 'ಯಾಕೆ ಹೀಗೆ ಮಾಡಿದಿರಿ? ಎಂದು ಪ್ರಶ್ನೆ ಮಾಡಿದ್ದಕ್ಕೆ ಆತ ನೀಡಿದ ಉತ್ತರ 'ಇದರಲ್ಲೇನು ಬಂಗಾರವಿದೆಯಾ? ಹೌದು ಸ್ವಾಮಿ ಇದರಲ್ಲಿ ಬಂಗಾರವೇ ಇದೆ, ಅಕ್ಕಿ ಬಂಗಾರವೇ.. ಬಂಗಾರವನ್ನು ತಿನ್ನಲಿಕ್ಕಾಗಲ್ಲ. ಇದನ್ನು ತಿನ್ನಬಹುದು ಎಂದು ಗಡುಸಾಗಿ ಉತ್ತರ ಕೊಟ್ಟೆ. ಆಟೊ ಚಾಲಕರು ಗಪ ಚುಪ್. ಅಷ್ಟರಲ್ಲಿ ಮತ್ತೊಬ್ಬ ನನ್ನ ಸಮಾಧಾನ ಮಾಡಲು ಬಂದ.

ನಾನು ಹಳ್ಳಿಯವನ ಥರವೇ ಮಾತನಾಡಿ ಏನು ಮಾಡುತ್ತಾರೆ, ನೋಡೆ ಬಿಡೋಣ ಎಂದು ಅಂದುಕೊಂಡಿದ್ದೆ, ಆದರೆ ಬೆಳಗ್ಗೆಯೇ ಕಚೇರಿಗೆ ತೆರಳಬೇಕಿತ್ತು. ಅಷ್ಟರಲ್ಲಿ ಶರತ್ ಸಹ ಬಂದಿದ್ದ. ಬೈಕ್ ಏರಿ ಕತ್ರಿಗುಪ್ಪೆ ಕಡೆ ಪ್ರಯಾಣ ಬೆಳೆಸಿದೆ.

ಬೆಂಗಳೂರಿನ ಆಟೋ ಚಾಲಕರು ಯಾಕೆ ಹೀಗೆ ಮಾಡ್ತಾರೋ? ನಿಜವಾಗಿಯೂ ಬಂದವ ಬೆಂಗಳೂರಿಗೆ ಹೊಸಬನೆ ಆಗಿದ್ದರೆ ಏನು ಮಾಡುತ್ತಿದ್ದರೋ? ಅವರಿಗೆ ಗೊತ್ತು! ನಿಮಗೂ ಒಂದೆಲ್ಲಾ ಒಂದು ಬಾರಿ ಇಂಥ ಅನುಭವ ಆಗಿರಬಹುದಲ್ಲವೇ?

English summary
A Bengaluru resident shares his experience when he landed on a chilling morning from Sirsi after spending warm Deepavali holidays with relatives at his native place.. Though Bengaluru is not new to him, people were there around to fool him. Be careful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X