ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಮುಂದೇನು ಕಾದಿದೆಯೋ ಭಗವಂತಾ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 30 : ಒಂದು ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಿಸಿದೆ. ತುಂಬಿ ಹರಿದ ಕೆರೆ ಕಟ್ಟೆಗಳು, ಮನೆಮನೆಗೆ ನುಗ್ಗಿದ ನೀರು, ರಸ್ತೆಗಳಲ್ಲಿ ಪರದಾಡಿದ ಚಾಲಕರು. ಕಳೆದ ವರ್ಷ ಚೆನ್ನೈನಲ್ಲಿ ಸಂಭವಿಸಿದ ಅನಾಹುತದಿಂದ ಬೆಂಗಳೂರು ಸ್ವಲ್ಪದರಲ್ಲೇ ಪಾರಾಗಿದೆ. ಇದು ಮತ್ತೆ ಸಂಭವಿಸುವುದಿಲ್ಲ ಅಂತ ಏನು ಗ್ಯಾರಂಟಿ?

2005ರಲ್ಲಿ ಇದೇ ರೀತಿ ದುರಂತ ಸಂಭವಿಸಿತ್ತು. ಆಗಲೂ ಕೆರೆಯ ಆಸುಪಾಸಿರುವ ಬಡಾವಣೆಗಳು ಮುಳುಗಿ ನೀರು ಕುಡಿದಿದ್ದವು. ಆಗ ಅಹೋರಾತ್ರಿ ಸುರಿದಿದ್ದು 12 ಸೆಂಮೀನಷ್ಟು ಮಳೆ. ಗುರುವಾರ ರಾತ್ರಿ ಸುರಿದಿದ್ದು ಕೇವಲ 7 ಸೆಂ.ಮೀ. ಹದಿನೈದರಿಂದ ಇಪ್ಪತ್ತು ಸೆಂ.ಮೀ ಮಳೆಯಾದರೆ ಬೆಂಗಳೂರು ಏನಾದೀತು? ಊಹಿಸಿಕೊಳ್ಳಿ!

ಹೂಳು ತುಂಬಿಕೊಂಡ ಕೆರೆಗಳು ಉಕ್ಕಿ ಹರಿದವು, ಬೆಳ್ಳಂದೂರು ಕೆರೆಯಿಂದ ವಿಷಯುಕ್ತ ರಾಸಾಯನಿಕ ನೊರೆ ಸುತ್ತಲಿನ ಬಡಾವಣೆಗಳಲ್ಲೆಲ್ಲ ಹಾರಾಡಿತು, ನೀರಿನಲ್ಲಿ ಸಿಲುಕಿದವರನ್ನು ಪಾರು ಮಾಡಲು ಬೋಟನ್ನೂ ತರಬೇಕಾಯಿತು. ಹತ್ತು ವರ್ಷಗಳಲ್ಲಿ ಬೆಂಗಳೂರು ಅಗಾಧವಾಗಿ ಬೆಳೆದಿದೆ, ವರ್ಷದಿಂದ ವರ್ಷಕ್ಕೆ ಬೆಂಗಳೂರಿನ ಸ್ಥಿತಿ ಅಧೋಸ್ಥಿತಿಗಿಳಿಯುತ್ತಿದೆ.

ಇದಕ್ಕೆ ಯಾರನ್ನು ದೂರುವುದು? ಸಹಜವಾಗಿ ಎಲ್ಲರ ದೃಷ್ಟಿ ನೆಟ್ಟುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಲೆ! ಮಳೆಗಾಲಕ್ಕೆ ಮೊದಲೇ ತುಂಬಿಕೊಂಡಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದು ಬಿಬಿಎಂಪಿಯ ಅಧಿಕಾರಿಗಳ ಮಹಾಪರಾಧವೇ. ಆದರೆ, ಬಿಬಿಎಂಪಿಯೊಂದೇ ಈ ಎಲ್ಲ ಅನಾಹುತಗಳಿಗೆ ಕಾರಣವಾ?

ರಾಜಾ ಕಾಲುವೆ ಮೇಲೆ ಅರಮನೆ!

ರಾಜಾ ಕಾಲುವೆ ಮೇಲೆ ಅರಮನೆ!

ಹತ್ತು ವರ್ಷಗಳಲ್ಲಿ ಪಕ್ಕದ ರಾಜ್ಯದ ಎಷ್ಟು ಜನರು ಬೆಂಗಳೂರನ್ನು ಬಂದು ಸೇರಿಕೊಂಡಿಲ್ಲ? ಎಷ್ಟು ಜನರು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಮನೆಮಠಗಳನ್ನು ಕಟ್ಟಿಕೊಂಡಿಲ್ಲ? ಎಷ್ಟು ನಿವಾಸಿಗಳು (ಹಲವಾರು ರಾಜಕಾರಣಿಗಳನ್ನೂ ಸೇರಿಸಿ) ರಾಜಾ ಕಾಲುವೆ ಮೇಲೆ ತಮ್ಮ 'ಅರಮನೆ' ಸೃಷ್ಟಿಸಿಕೊಂಡಿಲ್ಲ?

ಕೆರೆ ಅಷ್ಟೊಂದು ನೀರು ಹಿಡಿದಿಡಲು ಹೇಗೆ ಸಾಧ್ಯ

ಕೆರೆ ಅಷ್ಟೊಂದು ನೀರು ಹಿಡಿದಿಡಲು ಹೇಗೆ ಸಾಧ್ಯ

ರಾಜಾ ಕಾಲುವೆ ಮೇಲೆ ಮನೆಗಳು ಎದ್ದಿದ್ದರಿಂದ ಬಿಬಿಎಂಪಿಗೆ ಚರಂಡಿಗಳನ್ನು ಸ್ವಚ್ಛ ಮಾಡಲು ಹೇಗೆ ಸಾಧ್ಯ? ಕೆರೆಗಳು ಒತ್ತುವರಿಯಾಗಿ, ಮನೆಗಳು ನಿರ್ಮಾಣವಾಗಿದ್ದರಿಂದ ಅಷ್ಟೊಂದು ನೀರನ್ನು ಕೆರೆಗಳು ಹಿಡಿದಿಟ್ಟುಕೊಳ್ಳುವುದು ಹೇಗೆ ಸಾಧ್ಯ? ಬೆಂಗಳೂರಿನ ಎಷ್ಟು ಅಪಾರ್ಟುಮೆಂಟುಗಳು ಎಲ್ಲಾ ನಿಯಮಗಳನ್ನು ಪಾಲಿಸಿ ನಿರ್ಮಾಣವಾಗಿವೆ?

ಮಳೆಕೊಯ್ಲು ಪದ್ಧತಿಗೆ ಎಳ್ಳುನೀರು

ಮಳೆಕೊಯ್ಲು ಪದ್ಧತಿಗೆ ಎಳ್ಳುನೀರು

ಕಾಂಕ್ರೀಟ್ ಕಾಡಿನ ಸಹಸ್ರಾರು ಮನೆಗಳಲ್ಲಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸದಿದ್ದರಿಂದ ಮಳೆನೀರೆಲ್ಲ ಭೂಮಿಗಿಳಿಯದೆ ಚರಂಡಿಯನ್ನು ಸೇರುತ್ತಿವೆ. ರೇನ್ ವಾಟರ್ ಹಾರ್ವೆಂಸ್ಟಿಂಗ್ ಮಾಡಿಸುವುದು ಪ್ರತಿಯೊಬ್ಬ ನಿವಾಸಿಯ ಕರ್ತವ್ಯವಲ್ಲವೆ? ಈ ಕರ್ತವ್ಯವನ್ನು ನಾವೇಕೆ ನಿಭಾಯಿಸುವುದಿಲ್ಲ?

ಬಿಬಿಎಂಪಿಯಿಂದ ಬೇಕಾಬಿಟ್ಟಿ ಪರವಾನಗಿ

ಬಿಬಿಎಂಪಿಯಿಂದ ಬೇಕಾಬಿಟ್ಟಿ ಪರವಾನಗಿ

ಅಪಾರ್ಟ್ಮೆಂಟುಗಳಿಗೆ ಪರವಾನಗಿ ನೀಡುವಾಗ ಬಿಬಿಎಂಪಿ ಕೂಡ ಹಲವಾರು ನಿಯಮಗಳನ್ನು ಗಾಳಿಗೆ ತೂರಿದೆ. ಕಂಡಕಂಡ ಬಿಲ್ಡರುಗಳಿಗೆ ಬೇಕಾಬಿಟ್ಟಿ ಪರವಾನಗಿ ನೀಡಿದೆ. ಹೀಗಾಗಿಯೇ ರಾಜಾ ಕಾಲುವೆ ಮೇಲೆ ಅಪಾರ್ಟ್ಮೆಂಟುಗಳು ತಲೆಯೆತ್ತಿವೆ. ಎಷ್ಟು ಅಪಾರ್ಟ್ಮೆಂಟುಗಳಲ್ಲಿ ರೇನ್ ವಾಟರ್ ಹಾರ್ವೆಂಸ್ಟಿಂಗ್ ನಿಯಮದ ಪ್ರಕಾರ ವೈಜ್ಞಾನಿಕವಾಗಿ ಮಾಡಲಾಗಿದೆ?

ಕೆರೆಗಳು ಸತ್ತು ಹೋಗುತ್ತಿವೆ

ಕೆರೆಗಳು ಸತ್ತು ಹೋಗುತ್ತಿವೆ

ಕಳೆದ ಶತಮಾನದ ಮಧ್ಯದಲ್ಲಿ ಬೆಂಗಳೂರಿನಲ್ಲಿ 260ಕ್ಕೂ ಹೆಚ್ಚು ಜೀವಂತ ಕೆರೆಗಳಿದ್ದವು. ಬೆಂಗಳೂರನ್ನು ತಂಪಾಗಿಡುವಲ್ಲಿ ಅವು ಪ್ರಧಾನ ಪಾತ್ರ ವಹಿಸಿದ್ದವು. ಅವುಗಳಿಂದಾಗಿ ಅಂತರ್ಜಲ ಕೂಡ ಉತ್ತಮ ಸ್ಥಿತಿಯಲ್ಲಿತ್ತು. ಈಗೇನಾಗಿದೆ? ಕೆರೆಗಳು ಸತ್ತು ಹೋಗುತ್ತಿವೆ, ಅವುಗಳ ಜಾಗದಲ್ಲಿ ವಸತಿ ಸಮುಚ್ಚಯಗಳು ಏಳುತ್ತಿವೆ.

ಕಸದ ಗುಂಡಿಗಳಾಗಿರುವ ಬೆಂಗಳೂರು ಕೆರೆ

ಕಸದ ಗುಂಡಿಗಳಾಗಿರುವ ಬೆಂಗಳೂರು ಕೆರೆ

ಹಲವಾರು ಕೆರೆಗಳು ಕಸದ ಗುಂಡಿಗಳಾಗಿವೆ, ಜೊಂಡು ಎಲ್ಲೆಂದರಲ್ಲಿ ಬೆಳೆದಿದೆ, ಹಲವೆಡೆ ಪಾರ್ಕುಗಳು ನಿರ್ಮಾಣವಾಗಿವೆ, ಅನೇಕ ಕೆರೆಗಳಲ್ಲಿ ಶತಮಾನಗಳಿಂದ ಹೂಳು ತುಂಬಿಕೊಂಡಿದೆ. ಹೀಗಿದ್ದ ಮೇಲೆ ಕೆರೆಗಳು ಉಳಿಯುವುದಾದರೂ ಹೇಗೆ? ಅನೇಕ ಕಡೆಗಳಲ್ಲಿ ಕೆರೆಗಳನ್ನು ಪುನರುಜ್ಜೀವನಗೊಳಿಸಲು ನಿವಾಸಿಗಳೇ ಶ್ರಮಿಸುತ್ತಿದ್ದಾರೆ.

ಇದ್ದರೂ ಸತ್ತಂತಿವೆ ಕೆರೆಗಳು

ಇದ್ದರೂ ಸತ್ತಂತಿವೆ ಕೆರೆಗಳು

ಎನರ್ಜಿ ಮತ್ತು ವೆಟ್ ಲ್ಯಾಂಡ್ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, 1962ರ ಸುಮಾರಿನಲ್ಲಿ ಇದ್ದ 262 ಕೆರೆಗಳಲ್ಲಿ ಈಗ ಉಳಿದಿರುವುದು ಕೇವಲ 127 ಮಾತ್ರ! ಅವುಗಳಲ್ಲಿ ಕೇವಲ 81 ಕೆರೆಗಳು ಮಾತ್ರ ಉಸಿರಾಡಿಸುತ್ತಿವೆ, ಉಳಿದವು ಇದ್ದರೂ ಸತ್ತಂತಿವೆ. ಇದು ಹೀಗೇ ಮುಂದುವರಿದರೆ... ಬೆಂಗಳೂರಿಗೆ ಮುಂದೇನು ಕಾದಿದೆಯೋ ಭಗವಂತಾ!

ಕೆರೆಗಳ ಮಹತ್ವ ಸಂಪೂರ್ಣ ಮರೆತಿದ್ದೇವೆ

ಕೆರೆಗಳ ಮಹತ್ವ ಸಂಪೂರ್ಣ ಮರೆತಿದ್ದೇವೆ

ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಬೆಂಗಳೂರು ದಕ್ಷಿಣಕ್ಕೆ ಹೋಲಿಸಿದರೆ ಬೆಂಗಳೂರು ಉತ್ತರದಲ್ಲಿನ ಕೆರೆಗಳ ಸ್ಥಿತಿ ಶೋಚನೀಯವಾಗಿದೆ. ನಗರ ಓತಪ್ರೋತವಾಗಿ ಬೆಳೆಯುತ್ತಿರುವುದೇ ಇದಕ್ಕೆ ಕಾರಣ. ಕಳೆದ ದಶಕದಲ್ಲಿ ಕೆರೆಗಳ ಮಹತ್ವವನ್ನು ಮರೆತಿರುವುದೂ ಇದಕ್ಕೆ ಮೂಲ ಕಾರಣ.

English summary
Had Bengaluru seen more rains than what it received on Wednesday and Thursday, it could well been a Chennai like situation. It was a wake up call and unless and until the civic bodies wake up and pull up their socks immediately the situation can only go from bad to worse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X