• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಕ್ರೈಂ ಸುದ್ದಿ Videos: ಫುಟ್‌ಪಾತ್ ತೆರವು ವೇಳೆ ಪೊಲೀಸರ ಕೈ ಕಚ್ಚಿದ ಮಹಿಳೆ

|
Google Oneindia Kannada News

ಬೆಂಗಳೂರು, ಆಗಸ್ಟ್ 2: ಸಿಲಿಕಾನ್ ಸಿಟಿನಲ್ಲಿ ನಿತ್ಯ ನಡೆಯುವ ಅಪರಾಧಗಳು ಒಂದು ಎರಡಲ್ಲ. ಪೊಲೀಸರು 24X7 ಕರ್ತವ್ಯ ನಿರ್ವಹಿಸಿದರೂ ರಾಜ್ಯ ರಾಜಧಾನಿಯಲ್ಲಿ ನಡೆಯುವ ಅಪರಾಧಗಳ ಸಂಖ್ಯೆ ಕಡಿಮೆ ಆಗುವುದೇ ಇಲ್ಲ. ಒಂದಿಲ್ಲ ಒಂದು ಕಾರಣಕ್ಕೆ ಪ್ರತಿನಿತ್ಯ ನಡೆಯುವ ಅಪರಾಧಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳ ಆಸುಪಾಸಿನಲ್ಲಿ ನಡೆದ ಅಪರಾಧಗಳು. ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪರಾಧಿಗಳು ಮತ್ತು ಮಾಡಿದ ಅಪರಾಧಗಳ ಜೊತೆಗೆ ಪೊಲೀಸರು ಎದುರಿಸಿದ ಸವಾಲುಗಳ ಕುರಿತು ಈ ಸುದ್ದಿಗಳೇ ಸಾರಿ ಹೇಳುತ್ತವೆ. ಸಿಲಿಕಾನ್ ಸಿಟಿಯಲ್ಲಿ ನಡೆದ ಪ್ರಮುಖ ಕ್ರೈಂ ಸುದ್ದಿಗಳನ್ನು ವಿಡಿಯೋ ಸಮೇತವಾಗಿ ಓದುಗರ ಮುಂದೆ ಇರಿಸುವ ಸಣ್ಣ ಪ್ರಯತ್ನವೇ ಈ ಬೆಂಗಳೂರು ಕ್ರೈಂ ಸುದ್ದಿಗಳ ಸುರಳಿ.

ಸಿಲಿಕಾನ್ ಸಿಟಿಯಲ್ಲಿ ಮಹಿಳೆಯೊಬ್ಬರು ಪೊಲೀಸರ ಕೈ ಕಚ್ಚುವುದಕ್ಕೆ ಕಾರಣವೇನು?, ಹಾಡಹಗಲಿನಲ್ಲೇ ವ್ಯಕ್ತಿಯ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ್ದು ಯಾಕೆ?, ಬೆಂಗಳೂರಿನ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ನಡೆಸಿದ ದಾಳಿ ಹೇಗಿತ್ತು?, ಮನೆ ಮುಂದಿನ ಬೈಕ್ ಎಗರಿಸುತ್ತಿದ್ದ ಆರೋಪಿಗಳು ಅಂದರ್ ಆಗಿದ್ದು ಹೇಗೆ?, ಆಫ್ರಿಕನ್ ಪ್ರಜೆಗಳ ಪ್ರತಿಭಟನೆ ನಡೆಸಿದ್ದು ಏಕೆ ಅವರ ಮೇಲೆ ಪೊಲೀಸರು ಲಾಠಿ ಬೀಸಿದ್ದು ಏಕೆ ಎನ್ನುವುದನ್ನು ಇಲ್ಲಿನ ವಿಡಿಯೋ ಸಮೇತ ಸುದ್ದಿಯಲ್ಲಿ ತಿಳಿಯೋಣ.

ಫುಟ್‌ಪಾತ್ ಖಾಲಿ ಮಾಡಿಸುವ ವೇಳೆ ಖಾಕಿ ಕೈ ಕಚ್ಚಿದ ಮಹಿಳೆ:

ಸಿಲಿಕಾನ್ ಸಿಟಿಯ ಚಿಕ್ಕಪೇಟೆಯಲ್ಲಿ ಪೊಲೀಸರು ಫುಟ್‌ಪಾತ್ ತೆರೆವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಹಿಳೆಯೊಬ್ಬರು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ತಮಗೆ ಏಕೆ ತೊಂದರೆ ಕೊಡುತ್ತೀರಿ ಎಂದು ಖಾಕಿ ಎದುರು ಕೂಗಾಡಿದ ಮಹಿಳೆ, ತೆರವು ಕಾರ್ಯದ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ.

   ಬೆಂಗಳೂರು: ಫುಟ್‌ಪಾತ್‌ ಅಂಗಡಿ ತೆರವು ವೇಳೆ ಪೊಲೀಸ್‌ ಸಿಬ್ಬಂದಿ ಕೈ ಕಚ್ಚಿದ ಮಹಿಳೆ..!

   ಪೊಲೀಸರು ಮಹಿಳೆಯ ಮೊಬೈಲ್ ಕಿತ್ತುಕೊಳ್ಳುತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಮಹಿಳೆಯು ಪೊಲೀಸ್ ಸಿಬ್ಬಂದಿಯ ಕೈಯನ್ನೇ ಕಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಕೆ ಆರ್ ಮಾರುಕಟ್ಟೆ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


   ಹಾಡಹಗಲೇ ವ್ಯಕ್ತಿ ಮೇಲೆ ಹಲ್ಲೆ:

   ಬೆಂಗಳೂರಿನ ಸಂಜಯ್ ನಗರದಲ್ಲಿ ಹಾಡಹಗಲೇ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಾಮಮೂರ್ತಿ ನಗರ ನಿವಾಸಿ ಆಗಿರುವ 55 ವರ್ಷದ ಮುನಿರಾಜು ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.

   ಸಾರ್ವಜನಿಕರ ಎದುರಿನಲ್ಲೇ ಹಲ್ಲೆ ನಡೆಸಲಾಗಿದ್ದು, ಈ ವೇಳೆ ಮಹಿಳೆಯರು ಕಿರುಚಾಡುತ್ತಿದ್ದರೂ ಅದ್ಯಾವುದಕ್ಕೂ ಕ್ಯಾರೆ ಎನ್ನದೇ ಕಬ್ಬಿಣದ ಸಲಾಕೆ ಮತ್ತು ವಿಕೆಟ್ ಬಳಸಿ ಹಲ್ಲೆ ನಡೆಸಲಾಗಿದೆ. ಮುನಿರಾಜು ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಹಲ್ಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಪಕ್ಕದ ಕಟ್ಟಡದ ಬಳಿ ಬಿಸಾಡಿ ಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


   ರೌಡಿಶೀಟರ್ ಮನೆಗಳ ಮೇಲೆ ಮುಂದುವರಿದ ದಾಳಿ:

   ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪಶ್ಚಿಮ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿದರು. ಮಾಗಡಿ ರಸ್ತೆ, ಕೆ ಪಿ ಅಗ್ರಹಾರ ವ್ಯಾಪ್ತಿಯಲ್ಲಿರುವ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದರು. ಡಿಸಿಪಿ, ಎಸಿಪಿ ಹಾಗೂ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ದಾಳಿ ನಡೆಸಲಾಯಿತು. ಈ ವೇಳೆ ಮನೆಗಳಲ್ಲೇ ಪರಿಶೀಲನೆ ನಡೆಸಲಾಗಿದ್ದು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್ ಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


   ಮನೆ ಮುಂದಿನ ಬೈಕ್ ಕದಿಯುತ್ತಿದ್ದ ಇಬ್ಬರ ಬಂಧನ:

   ಬೆಂಗಳೂರಿನಲ್ಲಿ ಮನೆ ಎದುರಿಗೆ ನಿಲ್ಲಿಸುವ ಬೈಕ್ ಅನ್ನು ಯಾವಾಗ ಯಾರು ಎಗರಿಸಿಕೊಂಡು ಹೋಗುತ್ತಾರೋ ಏನೋ ಎಂಬ ವಾತಾವರಣ ಸೃಷ್ಟಿಯಾಗಿತ್ತು. ಮನೆ ಮುಂದಿನ ಬೈಕ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕದಿಯುತ್ತಿದ್ದ ಇಬ್ಬರು ಖದೀಮರನ್ನು ಚಂದ್ರ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

   ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಕೈಫ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ 3.5 ಲಕ್ಷ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


   ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿಚಾರ್ಜ್:


   ಬೆಂಗಳೂರಿನ ಜೆ ಸಿ ನಗರ ಠಾಣೆ ಎದುರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದ ಪ್ರತಿಭಟನಾನಿರತ ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ. 5 ಗ್ರಾಂ ಎಂಡಿಎಂಎ ಡ್ರಗ್ಸ್ ಜೊತೆಗೆ ಪೊಲೀಸರು ಆಫ್ರಿಕನ್ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಆರೋಪಿ ಸಾವನ್ನಪ್ಪಿದ್ದು, ಪೊಲೀಸರ ವಿರುದ್ಧ ಆಫ್ರಿಕನ್ ಪ್ರಜೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಪೊಲೀಸ್ ಠಾಣೆ ಬಳಿಯೇ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾನಿರತರ ಮಧ್ಯೆ ವಾಗ್ವಾದ ನಡೆದಿದ್ದು, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಇನ್ನು ಸ್ಥಳಕ್ಕೆ ಸ್ವತಃ ಡಿಸಿಪಿ ಹಾಗೂ ಎಸಿಪಿ ಸೇರಿದಂತೆ ಹಿರಿಯ ಅಧಿಕಾರಿ ದೌಡಾಯಿಸಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

   English summary
   Bengaluru Crime News Roundup (02nd august 2021): Get latest crime news from Bengaluru Today& top crime news headlines, high court verdicts, crime videos, rape and criminal cases. Read about Bengaluru's latest crime cases online at Oneindia Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X