ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡವರ ಬಾದಾಮಿ ಹಬ್ಬಕ್ಕೆ, ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ

|
Google Oneindia Kannada News

ಬೆಂಗಳೂರು, ಡಿಸೆಂಬರ್. 08: ಪೀಪೀ ಶಬ್ಧ, ಜನಜಂಗುಳಿ, ಎಲ್ಲರ ಕೈಯಲ್ಲೂ ಕಡಲೆಕಾಯಿ, ಅಲಂಕೃತಗೊಂಡ ದೊಡ್ಡ ಬಸವಣ್ಣ, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸಂಭ್ರಮಿಸುತ್ತಿರುವ ನಾಗರಿಕರು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರ ಹರಸಾಹಸ..... ಹೌದು ನಾವು ಹೇಳುತ್ತಿರುವುದು ಬಸವನಗುಡಿಯ ಪ್ರಸಿದ್ಧ ಕಡ್ಲೆಕಾಯಿ ಪರಿಷೆ ಬಗ್ಗೆಯೇ...

ಕಾರ್ತಿಕ ಮಾಸದ ಕೊನೆಯ ಸೋಮವಾರ ಪರಿಷೆಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಬಸವನಗುಡಿ ಸದ್ಯ ಗ್ರಾಮೀಣ ಭಾಗದ ಜಾತ್ರೆಯಾಗಿ ಸಂಭ್ರಮಿಸುತ್ತಿದೆ. ಬೆಂಗಳೂರು ಮಹಾನಗರದ ಪರಂಪರೆಯನ್ನು ಬಿಂಬಿಸುವ ಪರಿಷೆಯಲ್ಲಿ ಒಂದು ರೌಂಡ್ ಹಾಕಿಕೊಂಡು ಬರದಿದ್ದರೆ ಹೇಗೆ?[ಕಡ್ಲೆಕಾಯಿ ಪರಿಷೆ ಇತಿಹಾಸವೇನು?]

ನಗರದ ಸುತ್ತಲಿನ ರೈತರು ತಾವು ಬೆಳೆದ ಕಡಲೆಕಾಯಿ ತಂದು ಬಸವನಿಗೆ ಅರ್ಪಿಸಿದರು. ಎರಡು, ಮೂರು ಕಾಳಿನ ಶೇಂಗಾ, ಹಸಿ ಶೇಂಗಾ, ಹುರಿದ ಶೇಂಗಾ, ಗಿಡ್ಡ ಬೀಜದ ಕಾಯಿ, ದೊಡ್ಡ ಬೀಜದ ಕಾಯಿ, ಕಡುಗುಲಾಬಿ ಬಣ್ಣದ್ದು, ತಿಳಿಗುಲಾಬಿ.... ಅಬ್ಬಾ ಇಲ್ಲಿ ಹೇಳಿದರೆ ಏನು ಬಂತು? ಅಲ್ಲಿಗೆ ಒಂದು ಸುತ್ತು ಹೋಗಿ ಬರೋಣ...

ಕಡಲೆಕಾಯಿ ದರ ಎಷ್ಟು?

ಕಡಲೆಕಾಯಿ ದರ ಎಷ್ಟು?

ಪರಿಷೆಗೆ ಹೋಗಿ ಕಡಲೆಕಾಯಿ ತರದಿದ್ದರೆ ಹೇಗೆ? ಹಾಗಾದ್ರೆ ದರ ಗೊತ್ತಿದ್ದರೆ ಮತ್ತೂ ಒಳ್ಳೆಯದು. ಒಂದು ಪಾವ್(ಪಾತ್ರೆ) ಹಸಿ ಕಡಲೆಗೆ 20 ರಿಂದ 30 ರು., ಇದೆ. ಹುರಿದ ಕಡಲೆಯನ್ನು 30 ರಿಂದ 40ರು. ಗೆ ಮಾರಾಟ ಮಾಡಲಾಗುತ್ತಿದೆ.

 ದರ್ಶನಕ್ಕೆ ಸಾಲು

ದರ್ಶನಕ್ಕೆ ಸಾಲು

ಮೊದಲು ದೊಡ್ಡ ಗಣೇಶನ ದರ್ಶನ ಪಡೆದ ಭಕ್ತರು ನಂತರ ಬಸವಣ್ಣನ ದರ್ಶನ ಪಡೆಯಲು ತೆರಳುತ್ತಿರುವುದು ಕಂಡು ಬಂತು. ನಾಗರಿಕರು ಸ್ವಯಂ ಪ್ರೇರಿತರಾಗಿಯೇ ಸರತಿ ಸಾಲಿನಲ್ಲಿ ಚಲಿಸುತ್ತಿದ್ದದ್ದು ವಿಶೇಷ.

ಜನವೋ ಜನ

ಜನವೋ ಜನ

ಪರಿಷೆ ಸೋಮವಾರದಿಂದ ಆರಂಭವಾಗಿದ್ದರೂ ಶನಿವಾರದಿಂದಲೇ ನಾಗರಿಕರು ಆಗಮಿಸುತ್ತಿದ್ದಾರೆ. ಸಂಜೆ ವೇಳೆಯಲ್ಲಿ ಜನಜಂಗುಳಿ ಅಧಿಕವಾಗಿರುತ್ತದೆ. ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಬಿಎಂಎಸ್ ಕಾಲೇಜುವರೆಗೂ ಕಡಲೆಕಾಯಿ, ಕಳ್ಳೆಪುರಿ, ತಿಂಡಿ-ತಿನಿಸು ಆಟಿಕೆ ಸಾಮಾನುಗಳು, ಗೃಹಾಲಂಕಾರ ವಸ್ತುಗಳು, ಬಲೂನ್ ಅಂಗಡಿಗಳು ತಲೆ ಎತ್ತಿವೆ.

ಪ್ಲಾಸ್ಟಿಕ್ ಮುಕ್ತ ಕನಸಾಯಿತೆ?

ಪ್ಲಾಸ್ಟಿಕ್ ಮುಕ್ತ ಕನಸಾಯಿತೆ?

ಪ್ಲಾಸ್ಟಿಕ್ ಮುಕ್ತ ಪರಿಷೆ ಬಿಬಿಎಂಪಿ ಮುಂದಿನ ಸವಾಲಾಗಿತ್ತು. ಬಿಎಂಎಸ್ ಕಾಲೇಜಿನವರು ನೀಡಿದ ಬಟ್ಟೆ ಬ್ಯಾಗ್ ಖಾಲಿಯಾದ ಮೇಲೆ ವ್ಯಾಪಾರಿಗಳು ಪ್ಲಾಸ್ಟಿಕ್ ಮೊರೆ ಹೋಗಿದ್ದಾರೆ. ಆದರೆ ಕೆಲವರು ಹೆಚ್ಚಿನ ಹಣ ನೀಡಿ ಬಟ್ಟೆಯ ಬ್ಯಾಗ್ ನಲ್ಲೇ ವ್ಯವಹರಿಸುತ್ತಿರುವುದು ಕಂಡು ಬಂತು.

ಚಿಣ್ಣರ ಕಲರವ

ಚಿಣ್ಣರ ಕಲರವ

ಹಸಿ ಕಡಲೆಕಾಯಿ, ಹುರಿದ, ಬೇಯಿಸಿದ ಕಡಲೆಕಾಯಿ, ಖಾರ- ಮಂಡಕ್ಕಿ, ಬಾಂಬೆ ಮಿಠಾಯಿ ತಿನಿಸುಗಳನ್ನು ಮನಸೋ ಇಚ್ಛೆ ಸವಿದ ಮಕ್ಕಳು(ವಿದ್ಯಾರ್ಥಿನಿಯರು ಕಡಿಮೆ ಇಲ್ಲ!) ಕೊಲಂಬಸ್, ಬ್ರೇಕ್ ಡಾನ್ಸ್, ಜಾಯಿಂಟ್ ವ್ಹೀಲ್, ಮಕ್ಕಳಿಗಾಗಿ ಜೋಕಾಲಿ, ಆಡಿ ನಲಿದರು.

ಸಿಸಿ ಕ್ಯಾಮರಾ ಕಣ್ಣು

ಸಿಸಿ ಕ್ಯಾಮರಾ ಕಣ್ಣು

ಭದ್ರತೆ ದೃಷ್ಟಿಯಿಂದ ಪ್ರಮುಖ ಸ್ಥಳಗಳಲ್ಲಿ ಹಾಗೂ ದೇವಸ್ಥಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದರೂ ಸಂಪೂರ್ಣ ವ್ಯಾಪ್ತಿಯನ್ನು ಕವರ್ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಮೆಟಲ್ ಡಿಕ್ಟೆಟರ್ ಇಟ್ಟಿಲ್ಲ.

ಪ್ರಾಥಮಿಕ ಚಿಕಿತ್ಸೆ

ಪ್ರಾಥಮಿಕ ಚಿಕಿತ್ಸೆ

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಜನರ ಆರೋಗ್ಯ ಕಾಪಾಡುತ್ತಿದೆ. ಗಣೇಶ್ ಭವನದ ಬಳಿ ಒಂದು ಮತ್ತು ದೊಡ್ಡ ಬಸವನಗುಡಿ ದೇವಾಲಯದ ಎದುರು ಇನ್ನೊಂದು ಪ್ರಾಥಮಿಕ ಚಿಕಿತ್ಸಾ ಘಟಕ ತೆರೆಯಲಾಗಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರು ಮತ್ತು ಅಪಘಾತ ಮಾಡಿಕೊಂಡವರಿಗೆ ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಿದ್ದೇವೆ ಎಂದು ಬನಶಂಕರಿ ಆಸ್ಪತ್ರೆ ಹಿರಿಯ ಆರೋಗ್ಯ ಸಹಾಯಕ ರಾಜಶೇಖರ್ ತಿಳಿಸಿದರು.

ಸಂಚಾರ ಬದಲು

ಸಂಚಾರ ಬದಲು

ಲಾಲ್‌ಬಾಗ್ ಪಶ್ಚಿಮ ದ್ವಾರದಿಂದ ವಾಣಿವಿಲಾಸ್ ರಸ್ತೆ, ಚಾಮರಾಜಪೇಟೆ 5ನೇ ಮುಖ್ಯರಸ್ತೆ ಹಾಗೂ ಗಾಂಧಿಬಜಾರ್ ಮುಖ್ಯರಸ್ತೆ ಕಡೆಯಿಂದ ಹನುಮಂತನಗರಕ್ಕೆ ಹೋಗುವ ವಾಹನಗಳು ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲತಿರುವು ಪಡೆಯಬೇಕು.

 ವಾಹನ ನಿಲುಗಡೆಗೆ ವ್ಯವಸ್ಥೆ

ವಾಹನ ನಿಲುಗಡೆಗೆ ವ್ಯವಸ್ಥೆ

ಆಗಮಿಸುವ ಭಕ್ತರಿಗೆ ನ್ಯಾಷನಲ್ ಕಾಲೇಜು ಆಟದ ಮೈದಾನ, ಕೊಹಿನೂರು ಆಟದ ಮೈದಾನ, ಹಯವದನ ರಸ್ತೆ ಗವಿಪುರ, ಬಸವನಗುಡಿ ರಸ್ತೆ ಮತ್ತು ಸಾಯಿರಂಗ ಆಟದ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ನಮಗೆ ಜಾಗವಿಲ್ಲ!

ನಮಗೆ ಜಾಗವಿಲ್ಲ!

ಕಡಲೆಕಾಯಿ ಪರಿಷೆಯಲ್ಲಿ ಮೊದಲು ರೈತರೇ ಅಂಗಡಿ ಹಾಕಿ ಮಾರಾಟ ಮಾಡುತ್ತಿದ್ದರು. ದಿನವೊಂದಕ್ಕೆ ಸಾವಿರ ರು. ಬಾಡಿಗೆ ನಿಗದಿ ಮಾಡಿದ್ದರೂ ಪರವಾಗಿಲ್ಲ ಅಂಗಡಿ ಹಾಕೋಣ ಎಂದು ಬಂದರೆ ಜಾಗವೇ ಇರಲ್ಲ. ವ್ಯಾಪಾರಿಗಳು ಮೊದಲೇ ಜಾಗವನ್ನು ಆಕ್ರಮಣ ಮಾಡಿ ಇಟ್ಟುಕೊಂಡಿರುತ್ತಾರೆ ಎಂದು ಬ್ಯುಗಲ್ ರಾಕ್ ಪಾರ್ಕ್ ಬಳಿ ಕಡಲೆಕಾಯಿ ಅಂಗಡಿ ಹಾಕಿಕೊಂಡು ವ್ಯಾಪಾರವಿಲ್ಲ ಎಂದು ಚಡಪಡಿಸುತ್ತಿರುವ ರೈತರೊಬ್ಬರು ಹೇಳಿದರು.

English summary
Bengaluru: The celebration already begin at the area around Doddabasavanagudi (Bull Temple) in Basavanagudi, Bengaluru. Historical Kadlekai Parishe (Groundnut fair) giving a different experience to all citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X