ಆಸಿಡ್ ನಾಗೇಶ್ ಅನ್ನು ಬಂಧಿಸಿದ ಪೊಲೀಸರಿಗೆ ಸಚಿವ ಅರಗ ಜ್ಞಾನೇಂದ್ರ ಅಭಿನಂದನೆ
ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ ಯುವತಿಯ ಮೇಲೆ ಆಸಿಡ್ ಎರಚುವಿಕೆಯಂತಹ ಅಮಾನುಷ ಕೃತ್ಯ ಎಸಗಿ ಪರಾರಿಯಾಗಿದ್ದ ಕಿರಾತಕ ನಾಗೇಶ್ ಎಂಬ ಆರೋಪಿಯನ್ನು ನಮ್ಮ ಪೊಲೀಸರು, ಅತ್ಯಂತ ಶ್ರಮ ಹಾಗೂ ದಕ್ಷತೆಯಿಂದ ನೆರೆಯ ತಮಿಳುನಾಡು ರಾಜ್ಯದಲ್ಲಿ ಅಡಗಿದ್ದವನನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಆಸಿಡ್ ದಾಳಿಯ ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟುವುದರ ಮೂಲಕ ನಮ್ಮ ಪೊಲೀಸರು, ದೇಶದಲ್ಲಿಯೇ ಅತ್ಯಂತ ದಕ್ಷತೆಯ ಹಾಗೂ ವೃತ್ತಿಪರ ಪಡೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಆಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್ ಕಾಲಿಗೆ ಗುಂಡೇಟು
ತಮಿಳುನಾಡು ಪೊಲೀಸರೂ, ಹೀನ ಕೃತ್ಯ ನಡೆಸಿದ ಅಪರಾಧಿಯನ್ನು ಬಂಧಿಸುವ ಕಾರ್ಯದಲ್ಲಿ ನಮ್ಮ ಪೊಲೀಸರಿಗೆ ನೆರವಾಗಿದ್ದಾರೆ. ಅವರಿಗೂ ನನ್ನ ಅಭಿನಂದನೆಗಳು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಅಪರಾಧಿ ವಿರುದ್ಧದ ಕಠಿಣ ಕಾನೂನು ಕ್ರಮ:
ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ದಾಳಿ ನಡೆಸಿರುವ ಅಪರಾಧಿಗೆ ಉಗ್ರ ಶಿಕ್ಷೆಯಾಗುವಂತೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಆರೋಪಿಯ ವಿಚಾರಣೆ ನಡೆಸಿ ಎಲ್ಲಾ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆ ಆಗುವ ಮೂಲಕ ಸಂತ್ರಸ್ತ ಮಹಿಳೆಗೆ ಹಾಗೂ ಕುಟುಂಬ ವರ್ಗಕ್ಕೆ ಸ್ವಲ್ಪವಾದರೂ ನೆಮ್ಮದಿ ದೊರಕಿದಂತಾಗುವುದು ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಸಂತ್ರಸ್ತ ಮಹಿಳೆ ಆರೋಗ್ಯದಲ್ಲಿ ಚೇತರಿಕೆ:
ಆಸಿಡ್ ನಾಗೇಶ್ ನಡೆಸಿದ ದಾಳಿಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವತಿ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆ
ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.