ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡವರ ನಿವೇಶನ ನುಂಗಿದರು; ಕೇಸಾಗುತ್ತಿದ್ದಂತೆ ನಾಪತ್ತೆಯಾದರು!

|
Google Oneindia Kannada News

ಬೆಂಗಳೂರು, ಮಾರ್ಚ್‌ 01 : ಹೊಸಕೆರೆಹಳ್ಳಿ ಕೊಳಗೇರಿ ನಿವಾಸಿಗಳಿಗೆ ನಿವೇಶನ ನೀಡುವ ಸಂಬಂಧ ಏಜೆಂಟರ ಜತೆ ಶಾಮೀಲಾಗಿ ಅಕ್ರಮ ಪರಭಾರೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರ ಪೊಲೀಸರು ಎರಡನೇ ಪ್ರಕರಣ ದಾಖಲಿಸಿದ್ದಾರೆ. ಬಿಡಿಎ ನಾಲ್ಕು ಉಪ ಕಾರ್ಯದರ್ಶಿಗಳು ಸೇರಿದಂತೆ ಹತ್ತು ಮಂದಿ ಬಿಡಿಎ ಅಧಿಕಾರಿಗಳ ವಿರುದ್ಧ ಕೇಸು ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ. ಇನ್ನು ಇದೇ ಅಕ್ರಮಕ್ಕೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಖಾಸಗಿ ಏಜೆಂಟ್, ಅಕ್ರಮ ಫಲಾನುಭವಿಗಳ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಎಸಿಬಿ ದಾಳಿಗೆ ಒಳಗಾಗಿದ್ದ ಬಿಡಿಎ ಉಪ ಕಾರ್ಯದರ್ಶಿ ಡಾ. ಸುಧಾ, ಉಪಕಾರ್ಯದರ್ಶಿಗಳಾದ ಅನೀಲ್ ಕುಮಾರ್, ಭಾಸ್ಕರ್, ಮೇಲ್ವಿಚಾರಕಿಯರಾದ ಕಮಲಮ್ಮ, ಮಹದೇವಮ್ಮ, ರವಿಶಂಕರ್, ಅಶ್ವತ್ ನಾರಾಯಣ, ವಿಷಯ ನಿರ್ವಾಹಕ ಮುನಿ ಚನ್ನೇಗೌಡ, ವೆಂಕಟರವಣಪ್ಪ, ಸಂಜಯ್ ಕುಮಾರ್ ವಿರುದ್ಧ ಶೇಷಾದ್ರಿಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಕೆಲವರು ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಉಳಿದ 46 ಖಾಸಗಿ ವ್ಯಕ್ತಿಗಳು, ಅಕ್ರಮ ಫಲಾನುಭವಿಗಳ ವಿರುದ್ಧ ಕೂಡ ಪೊಲೀಸರು ತನಿಖೆ ಆರಂಭಿಸಿದ್ದು, ಬಿಡಿಎ ಅಕ್ರಮದಲ್ಲಿ ಶಾಮೀಲಾದವರ ಬಂಧನ ಸರಣಿ ಮುಂದುವರೆದಿದೆ.

ಬಿಡಿಎ ಅಧ್ಯಕ್ಷರ ಮತ್ತು ಆಯುಕ್ತರ ನಡುವೆ ಶೀತಲ ಸಮರ ! ಬಿಡಿಎ ಅಧ್ಯಕ್ಷರ ಮತ್ತು ಆಯುಕ್ತರ ನಡುವೆ ಶೀತಲ ಸಮರ !

ಬಿಡಿಎ ನಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೆ ವಹಿಸಿ ಬಿಡಿಎ ಆಯಕ್ತ ಎಚ್‌.ಆರ್. ಮಹದೇವ ಆದೇಶಿಸಿದ್ದರು. ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಬಿಡಿಎ ಜಾಗೃತ ದಳದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಅಕ್ರಮಕ್ಕೆ ಸಂಬಂಧಸಿದಂತೆ ವರದಿ ನೀಡಿದ್ದರು. ವರದಿಯಲ್ಲಿ ಬಿಡಿಎ ಗೆ ಸುಳ್ಳು ದಾಖಲೆ ಸಲ್ಲಿಸಿ ಅಕ್ರಮವಾಗಿ ನಿವೇಶನ ಪಡೆದಿರುರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ಬಿಡಿಎ ಉಪ ಕಾರ್ಯದರ್ಶಿಗಳೇ ಶಾಮೀಲಾಗಿ ಅಕ್ರಮ ಎಸಗಿರುವ ಸಂಗತಿ ವರದಿಯಿಂದ ಬಹಿರಂಗವಾಗಿತ್ತು. ವರದಿ ಆಧರಿಸಿ ಕ್ರಿಮಿನಲ್ ದಾವೆ ಹೂಡಿ ತನಿಖೆ ನಡೆಸುವಂತೆ ಬಿಡಿಎ ಆಯುಕ್ತರು ಆದೇಶ ನೀಡಿದ್ದರು. ಆದೇಶದ ಹಿನ್ನೆಲೆಯಲ್ಲಿ ಮೊದಲು ಒಂದು ಪ್ರಕರಣ ದಾಖಲಿಸಿದ್ದ ಶೇಷಾದ್ರಿಪುರ ಪೊಲೀಸರ ಪೊಲೀಸರು ಇದೀಗ ಇನ್ನೊಂದು ಪ್ರಕರಣದಲ್ಲಿ 56 ಮಂದಿಯನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ.

Bengaluru, BDA site allotment scam: FIR registered against 10 BDA officials

ಏನಿದು ಅಕ್ರಮ: ಬನಶಂಕರಿ ಮೂರನೇ ಹಂತ ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂಬರ್ 89, 90, 91 ರಲ್ಲಿ ತೆರವಾಗಿದ್ದ ಗುಡಿಸಲು ನಿವಾಸಿಗಳಿಗೆ ಬಿಡಿಎ ವತಿಯಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ನಿರಾಶ್ರಿತ ಗುಡಿಸಲು ನಿವಾಸಿಗಳಿಗೆ ನಿವೇಶನ ಹಂಚುವ ಸಂಬಂಧ ಅಕ್ರಮ ಆಗಿರುವ ಬಗ್ಗೆ ಅನಾಥ ಮಕ್ಕಳ ಅಭಿವೃದ್ಧಿ ಸಂಸ್ಥೆ ನೀಡಿದ ದೂರು ಆಧರಿಸಿ ತನಿಖೆ ನಡೆಸುವಂತೆ ಬಿಡಿಎ ಆಯುಕ್ತರು ಆದೇಶಿಸಿದ್ದರು. ತನಿಖೆ ನಡೆಸಿದ್ದ ಬಿಡಿಎ ಜಾಗೃತ ದಳದ ಅಧಿಕಾರಿಗಳು, ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿದ್ದ ಜಾಗಕ್ಕೆ ಬದಲಾಗಿ 541 ನಿವೇಶನ ನೀಡಲು ತೀರ್ಮಾನಿಸಲಾಗಿತ್ತು. ಮೊದಲ ಹಂತದಲ್ಲಿ 238 ಗುಡಿಸಲು ನಿವಾಸಿಗಳಿಗೆ 30 x 20 ನಿವೇಶನ ಹಂಚಿಕೆ ಮಾಡಲಾಗಿತ್ತು. ಉಳಿಕೆ 180 ಮಂದಿಗೆ ಪ್ರಾಧಿಕಾರದಿಂದ ಇತರೆ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡುವ ಸಂಬಂಧ ಶಿಫಾರಸು ಮಾಡಲಾಗಿತ್ತು. ಈ ಸಂಬಂಧ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಿ 2017 ರಲ್ಲಿ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಬಿಡಿಎ ಅಧ್ಯಕ್ಷರಿಗೆ ಟಾಂಗ್ ಕೊಟ್ಟ ಆಯುಕ್ತರು ! ಬಿಡಿಎ ಅಧ್ಯಕ್ಷರಿಗೆ ಟಾಂಗ್ ಕೊಟ್ಟ ಆಯುಕ್ತರು !

ಈ ಮಧ್ಯೆ, ಅನುಮೋದಿತ 180 ಫಲಾನುಭವಿಗಳ ಪೈಕಿ 32 ಅನರ್ಹ ಫಲಾನುಭವಿಗಳಿಗೆ ನಿಯಮ ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿ ಪ್ರಾಧಿಕಾರಕ್ಕೆ ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ನಿಗದಿತ 30x 20 ನಿವೇಶನ ಬದಲಿಗೆ ಹೆಚ್ಚಿನ ಅಳತೆಯ ನಿವೇಶನಗಳನ್ನು ಒಬ್ಬರಿಗೆ ಎರಡು ಮತ್ತು ಮೂರು ನಿವೇಶನ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಆರು ನಿವೇಶನಗಳಿಗೆ ನಿಗದಿತ ಮೌಲ್ಯ ಕೂಡ ಪಾವತಿಯಾಗಿರುವುದಿಲ್ಲ. ಜತೆಗೆ ಬಾಕಿ 30 ನಿವೇಶನ ಬಿಡಿಎ ನಗರ ಯೋಜನೆ ವಿಭಾಗದಲ್ಲಿ ಅನುಮೋದನೆ ಪಡೆದಿಲ್ಲ ಎಂಬ ಸಂಗತಿ ತನಿಖೆಯಲ್ಲಿ ಬಯಲಿಗೆ ಬಂದಿದೆ. ಪ್ರಾಧಿಕಾರಕ್ಕೆ ಸುಳ್ಳು ಮಾಹಿತಿ ನೀಡಿ, ನಕಲಿ ದಾಖಲೆಗಳನ್ನು ಸಲ್ಲಿಸಿ ಬಿಡಿಎಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಲಪಟಾಯಿಸಿರುವ ಸಂಬಂಧ ಇದೀಗ ಎರಡನೇ ಪ್ರಕರಣದ ತನಿಖೆ ಆರಂಭಾಗಿದೆ. ಈ ಕುರಿತ ಬಿಡಿಎ ಜಾಗೃತ ದಳದ ಅಧಿಕಾರಿಗಳು ನೀಡಿದ ವರದಿ ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ವಿರುವುದು ಕಂಡು ಬಂದಿದ್ದು ಇದರಲ್ಲಿ ಬಿಡಿಎ ಉಪ ಕಾರ್ಯದರ್ಶಿಗಳೇ ಶಾಮೀಲಾಗಿರುವುದು ಪತ್ತೆಯಾಗಿದೆ.

Bengaluru, BDA site allotment scam: FIR registered against 10 BDA officials

ಆಯುಕ್ತರ ದಿಟ್ಟ ಕ್ರಮ: ಇತ್ತೀಚೆಗೆ ಬಿಡಿಎ ಆಯುಕ್ತ ಎಚ್‌.ಆರ್ . ಮಹದೇವ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ನಡುವೆ ದೊಡ್ಡ ವಿವಾದ ಉಂಟಾಗಿತ್ತು. ಆಯುಕ್ತರೇ ಅಕ್ರಮಗಳನ್ನು ಪೋಷಣೆ ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ಆಪಾದಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಆಯುಕ್ತರು ನಾನು ಬಂದ ಮೇಲೆ ಬಿಡಿಎ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದೇನೆ. ತಪ್ಪು ಮಾಡಿದರೆ ನನ್ನ ಸಹೋದರರನ್ನು ಕ್ಷಮಿಸುವುದಿಲ್ಲ. ನನ್ನ ಗಮನಕ್ಕೆ ಬಂದ ಎಲ್ಲಾ ಅಕ್ರಮಗಳನ್ನು ತನಿಖೆಗೆ ಒಳಪಡಿಸಿ ಕ್ಲೀನ್ ಮಾಡುತ್ತಿದ್ದೇನೆ. ಇದೇ ನನಗೆ ದೊಡ್ಡ ಸಮಸ್ಯೆ ತಂದೊಡ್ಡಿದೆ ಎಂದು ಮಾಧ್ಯಮಗಳ ಎದುರು ಬೇಸರ ತೋಡಿಕೊಂಡಿದ್ದರು. ಇದೀಗ ಬಿಡಿಎ ಕ್ಲೀನ್ ಮಾಡುವ ಭಾಗ 2 ಕ್ಕೆ ಚಾಲನೆ ಸಿಕ್ಕಿದಂತಾಗಿದೆ.

English summary
Seshadripura police have filed a criminal case against ten BDA officers in connection with the Hosakerelli BDA site allotment scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X