ಬಿಡಿಎ ಇ-ಹರಾಜಿನಲ್ಲಿ 628 ಮೂಲೆ ನಿವೇಶನಗಳ ಭರ್ಜರಿ ಸೇಲ್ !
ಬೆಂಗಳೂರು, ಮೇ 20: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಮೂಲೆ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ 628 ನಿವೇಶನಗಳು ಮಾರಾಟವಾಗಿವೆ.
ಮಾರಾಟವಾದ 628 ನಿವೇಶನಗಳ ಮೂಲ ದರ ಕೇವಲ 391 ಕೋಟಿ ರೂ. ಆಗಿದ್ದು, ಈ ನಿವೇಶನಗಳ ಬಹಿರಂಗ ಇ ಹರಾಜು ಪ್ರಕ್ರಿಯೆ ಮಾಡಿದ್ದರಿಂದ 628 ನಿವೇಶನಗಳು 589 ಕೋಟಿ ರೂ.ಗೆ ಮಾರಾಟವಾಗಿವೆ. 197. 45 ಕೋಟಿ ರೂ. ಅಧಿಕ ಆದಾಯ ಸಂಗ್ರಹ ಮಾಡಿದಂತಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲೆ ನಿವೇಶನ ಇ ಹರಾಜು ಪ್ರಕ್ರಿಯೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2022ರ ಏಪ್ರಿಲ್-ಮೇ ಮಾಹೆಯಲ್ಲಿ ಮೂಲೆ ನಿವೇಶನಗಳ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದರಲ್ಲಿ ಸಾರ್ವಜನಿಕರ ಮುಕ್ತ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲಾಗಿತ್ತು. ಒಟ್ಟು 1036 ನಿವೇಶನಗಳನ್ನು ಇ-ಹರಾಜಿಗಿಡಲಾಗಿತ್ತು, ಅದರಲ್ಲಿ 628 ನಿವೇಶನಗಳು ಮಾರಾಟ ಮಾಡಿ ಸುಮಾರು 197 ಕೋಟಿ ರೂ. ಮೊತ್ತ ಹಣವನ್ನು ಮೂಲ ದರಕ್ಕಿಂತಲೂ ಹೆಚ್ಚು ಗಳಿಸುವಲ್ಲಿ ಬಿಡಿಎ ಯಶಸ್ವಿಯಾಗಿದೆ. ಈ ಮೂಲಕ ಶೇ. 50 ರಷ್ಟು ಹೆಚ್ಚು ಆದಾಯ ಗಳಿಸಿದಂತಾಗಿದೆ.
1 ನಿವೇಶನ 4.39 ಕೋಟಿ ರೂ.ಗೆ ಮಾರಾಟ:
ಪ್ರಸ್ತುತ ಇ-ಹರಾಜಿನಲ್ಲಿ ಬನಶಂಕರಿ 2ನೇ ಹಂತದಲ್ಲಿ ಒಟ್ಟು 162.11 ಚದರ ಮೀಟರ್ ಅಳತೆಯ ನಿವೇಶನ ಪ್ರತಿ ಚದರ ಮೀಟರ್ ಗೆ 2,70,800/- ರೂ. ಗಳಂತೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಇದರಿಂದ ಒಟ್ಟು 4.39 ಕೋಟಿ ರೂ. ಗಳಿಗೆ ಮಾರಾಟವಾಗಿ ಅತ್ಯಂತ ಹೆಚ್ಚು ಬೆಲೆಗೆ ಮಾರಾಟವಾದ ನಿವೇಶನ ಎಂಬ ದಾಖಲೆ ಸೃಷ್ಟಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ಅಭಿವೃದ್ಧಿ ಪಡಿಸಿರುವ ಕೆಂಪೇಗೌಡ ಬಡಾವಣೆಯ 7ನೇ ಹಂತದ ನಿವೇಶನವೊಂದು 1,14,600 ರೂ ಪ್ರತಿ ಚದರ ಮೀಟರ್ ಗೆ ದಾಖಲೆ ಬೆಲೆಗೆ ಮಾರಾಟವಾಗಿದೆ.
ನಗರದ ಬನಶಂಕರಿ, ಜೆಪಿ ನಗರ, ಅರ್ಕಾವತಿ ಬಡಾವಣೆ, ರಾಜ್ ಮಹಲ್ ವಿಲಾಸ್, ಕೆಂಪೇಗೌಡ ಬಡಾವಣೆ, ಅಂಜನಾಪುರ, ಬಿಟಿಎಂ, ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಹಲವು ಪ್ರತಿಷ್ಠಿತ ಹಾಗೂ ನೂತನ ಬಡಾವಣೆಗಳಲ್ಲಿದ್ದ ವಿವಿಧ ವಿಸ್ತೀರ್ಣದ ಮೂಲೆ ಹಾಗೂ ಮಧ್ಯಂತರ ನಿವೇಶನಗಳನ್ನು ಇ-ಹರಾಜು ಮಾಡಲಾಗಿದೆ. ಶೀಘ್ರದಲ್ಲಿ ಮತ್ತೊಂದು ಇ-ಹರಾಜು ನಡೆಸಲು ಬಿಡಿಎ ಚಿಂತನೆ ಮಾಡಿದೆ.
