• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಾರ್ಡ್ ರಚನೆ ವಿವಾದ: ಮೀಸಲು ನಿಗದಿ ಅಂತಿಮಗೊಳಿಸದಂತೆ ಹೈಕೋರ್ಟ್ ತಾಕೀತು

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು,ಆ.11. ಬಿಬಿಎಂಪಿ ವಾರ್ಡ್ ರಚನೆ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು, ಸದ್ಯಕ್ಕೆ ವಾರ್ಡ್ ವಾರು ಮೀಸಲು ಅಂತಿಮಗೊಳಿಸದಂತೆ ಆದೇಶ ನೀಡಿದೆ. ಇದರಿಂದಾಗಿ ಸದ್ಯಕ್ಕೆ ಸರ್ಕಾರ ಬಿಬಿಎಂಪಿ ವಾರ್ಡ್ ವಾರು ಮೀಸಲು ಕುರಿತು ಅಂತಿಮ ಆದೇಶವನ್ನು ಹೊರಡಿಸಲಾಗದು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ಪುನರ್ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ. ಜೊತೆ ಆ.16ರವರೆಗೆ ವಾರ್ಡ್‌ವಾರು ಮೀಸಲು ಪಟ್ಟಿ ಅಂತಿಮಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ವಕೀಲ ಎಸ್. ಇಸ್ಮಾಯಿಲ್ ಜಬಿವುಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ಇದೇ ಮೊದಲ ಬಾರಿಗೆ ಅರ್ಜಿ ವಿಚಾರಣೆಗೆ ಬಂದಿದೆ. ಈಗಲೇ ಯಾವುದೇ ಮಧ್ಯಂತರ ಆದೇಶ ನೀಡಲಾಗದು. ಪ್ರತಿವಾದಿಗಳಾದ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ವಾದ ಆಲಿಸಬೇಕಿದೆ. ವಾರ್ಡ್ ವಾರು ಮತದಾರರ ಪಟ್ಟಿ ಸಿದ್ಧವಾಗಿದೆಯೇ ಎಂದು ಕೇಳಬೇಕಿದೆ. ಪ್ರತಿವಾದಿಗಳ ವಾದ ಆಲಿಸಿದ ಬಳಿಕವೇ ಮಧ್ಯಂತರ ಆದೇಶದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಆ.16ಕ್ಕೆ ಮುಂದೂಡಿದ ನ್ಯಾಯಪೀಠ, ಅಲ್ಲಿಯವರೆಗೆ ವಾರ್ಡ್‌ವಾರು ಮೀಸಲು ಪಟ್ಟಿ ಅಂತಿಮಗೊಳಿಸಬಾರದು ಎಂದು ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿತು.

ಜನಸಂಖ್ಯೆ ನಿಗದಿಯಲ್ಲಿ ತಾರತಮ್ಯ:

ಅರ್ಜಿದಾರರ ಪರ ವಕೀಲರು ಹಾಜರಾಗಿ, ಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಲಾಗಿದೆ. ಹಾಗೆಯೇ, ವಾರ್ಡ್‌ಗಳ ಜನಸಂಖ್ಯೆ ನಿಗದಿಯಲ್ಲೂ ತಾರತಮ್ಯ ಮಾಡಲಾಗಿದೆ. ಆದ್ದರಿಂದ ವಾರ್ಡ್ ಮರು ವಿಂಗಡಣೆಯ ಅಧಿಸೂಚನೆ ರದ್ದುಪಡಿಸಬೇಕು. ಈ ಅರ್ಜಿ ಇತ್ಯರ್ಥವಾಗುವವರೆಗೆ ಬಿಬಿಎಂಪಿ ವಾರ್ಡ್‌ಗಳಿಗೆ ಮೀಸಲು ಪಟ್ಟಿ ಅಂತಿಮಗೊಳಿಸುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಗೋವಿಂದರಾಜನಗರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಅಲ್ಲದೆ, ವಾರ್ಡ್‌ಗಳ ಸಂಖ್ಯೆ ಸಹ ಹೆಚ್ಚಿಸಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಹಿಂದೆ ಏಳು ವಾರ್ಡ್‌ಗಳು ಇದ್ದವು. ಇದೀಗ ಪ್ರಸಿದ್ಧ ಕೆ.ಆರ್. ಮಾರ್ಕೆಟ್ ವಾರ್ಡ್ ಕೈಬಿಟ್ಟು ವಾರ್ಡ್‌ಗಳ ಸಂಖ್ಯೆಯನ್ನು ಆರಕ್ಕೆ ಇಳಿಸಲಾಗಿದೆ. ಆ ಮೂಲಕ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ಪುನರ್ ರಚನೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಅಲ್ಲದೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳನ್ನು ಪುನರ್ ರಚಿಸಿ 2023ರ ಜು.14ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಹೊಸದಾಗಿ ವಾರ್ಡ್‌ಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಐತಿಹಾಸಿಕ ಕೆ.ಆರ್. ಮಾರ್ಕೆಟ್ ವಾರ್ಡ್ ಮರು ರಚಿಸಬೇಕು. ಈ ಅರ್ಜಿ ಇತ್ಯರ್ಥಗೊಳ್ಳುವ ತನಕ ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಹಲವು ಅರ್ಜಿಗಳು ಸಲ್ಲಿಕೆ:

ಪದ್ಮನಾಭ ನಗರ, ಶಾಂತಿ ನಗರ ಮತ್ತು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಪ್ರಶ್ನಿಸಿಯೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಆ ಅರ್ಜಿಗಳ ಪರ ವಕೀಲರೂ ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠದ ಮುಂದೆ ಹಾಜರಾಗಿ ತಮ್ಮ ಮನವಿಗಳ ಕುರಿತು ಗಮನ ಸೆಳೆದರು. ಆದರೆ, ಕೆಲ ಅರ್ಜಿಗಳಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿ ಮಾಡಿರಲಿಲ್ಲ. ಹಾಗಾಗಿ, ಆಯೋಗವನ್ನು ಪ್ರತಿವಾದಿ ಮಾಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

Recommended Video

   Pakistanದ ಈ ಮೂವರನ್ನು ಕಂಟ್ರೋಲ್ ಮಾಡಿದ್ರೆ ಟೀಮ್ ಇಂಡಿಯಾ ಗೆದ್ದ ಹಾಗೇನೇ... | *Cricket | OneIndia Kannada
   English summary
   The BBMP ward formation controversy has taken a new turn and has ordered not to finalize the ward wise reservation for the time being. Because of this, the government cannot issue a final order on BBMP ward-wise reservation for now.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X