ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಬೆಂಗಳೂರಿನಲ್ಲಿವೆ 2 ಲಕ್ಷ ಅನಧಿಕೃತ ಕಟ್ಟಡಗಳು

|
Google Oneindia Kannada News

ಬೆಂಗಳೂರು ಜೂನ್ 9: ಬೆಂಗಳೂರು ನಗರದಲ್ಲಿ ಸುಮಾರು 2 ಲಕ್ಷ ಅನಧಿಕೃತ ಹಾಗೂ ಮೂಲ ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿವೆ ಎಂದು ಬಿಬಿಎಂಪಿ ತಿಳಿಸಿದೆ.

ಅನಧಿಕೃತ ಕಟ್ಟಡಗಳ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಡೆಸುತ್ತಿರುವ ಸರ್ವೆ ಹಿನ್ನೆಲೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

ಹೊಸೂರು ತನಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸರ್ಕಾರದ ಅನುಮೋದನೆಹೊಸೂರು ತನಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸರ್ಕಾರದ ಅನುಮೋದನೆ

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ರವೀಂದ್ರ ಪಿ. ಎನ್., "ನಗರದಲ್ಲಿ ಮೂಲ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ 16,086 ಕಟ್ಟಡಗಳನ್ನು ಪಾಲಿಕೆ ಗುರುತಿಸಿದೆ. ಅದೇ ರೀತಿ ಬಿ ಖಾತಾ ಅಡಿಯಲ್ಲಿ ಬರುವ 1,81,236 ಕಟ್ಟಡಗಳನ್ನು ಗುರುತಿಸಲಾಗಿದೆ. ಬಿ ಖಾತಾ ಅಡಿಯಲ್ಲಿ ಬರುವ ಕಟ್ಟಡಗಳು ಅನಧಿಕೃತ ಅಥವಾ ಅಕ್ರಮವಾಗಿದೆ,'' ಎಂದು ತಿಳಿಸಿದರು.

ಕರ್ನಾಟಕ ಹೈಕೋರ್ಟ್‌ನಿಂದ ಒತ್ತಡ ಹೆಚ್ಚಾದ ನಂತರ ಪಾಲಿಕೆಯ ಸರ್ವೆ ಕಾರ್ಯ ವೇಗ ಪಡೆದುಕೊಂಡಿತು. ಸದ್ಯ ಸರ್ವೆ ಕಾರ್ಯ ಪ್ರಗತಿಯಲ್ಲಿರುವುದರಿಂದ ಅನಧಿಕೃತ ಹಾಗೂ ಮೂಲ ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆ: ಜೂ.20ಕ್ಕೆ ಪ್ರಧಾನಿ ಶಂಕುಸ್ಥಾಪನೆ- ಸಿಎಂ ಬೊಮ್ಮಾಯಿಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆ: ಜೂ.20ಕ್ಕೆ ಪ್ರಧಾನಿ ಶಂಕುಸ್ಥಾಪನೆ- ಸಿಎಂ ಬೊಮ್ಮಾಯಿ

"ಸರ್ವೆಯನ್ನು ಪೂರ್ಣಗೊಳಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಸರ್ವೆ ಕಾರ್ಯವನ್ನು ತ್ವರಿತಗತಿಯಲ್ಲಿ ಪುರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ನಮಗೆ ಸೂಚಿಸಿದ್ದಾರೆ,'' ಎಂದು ರವೀಂದ್ರ ಹೇಳಿದರು.

ಕೋರ್ಟ್ ತೀರ್ಪಿನ ಅನುಸಾರ ಕ್ರಮ

ಕೋರ್ಟ್ ತೀರ್ಪಿನ ಅನುಸಾರ ಕ್ರಮ

"ಬಿ ಖಾತಾ ಆಸ್ತಿ ಮತ್ತು ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣದ ವಿಚಾರದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿದೆ. ಪಾಲಿಕೆಯು ಸದ್ಯ ತ್ವರಿತಗತಿಯಲ್ಲಿ ಈ ರೀತಿಯ ಕಟ್ಟಡಗಳ ಸರ್ವೆ ನಡೆಸುತ್ತಿದೆ. ಮುಂದೆ ನ್ಯಾಯಾಲಯ ತೀರ್ಪಿನ ಅನುಸಾರ ಈ ರೀತಿಯ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಆಯುಕ್ತರು ಮಾಹಿತಿ ನೀಡಿದರು.

ಸಾವಿರಾರು ಮನೆಗಳ ಮಾಲೀಕರಿಗೆ ನೋಟಿಸ್

ಸಾವಿರಾರು ಮನೆಗಳ ಮಾಲೀಕರಿಗೆ ನೋಟಿಸ್

ಅಕ್ರಮ ಕಟ್ಟಡಗಳ ಬಗ್ಗೆ ಇದುವರೆಗೂ ಎಷ್ಟು ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಕೆಲವು ತಿಂಗಳ ಹಿಂದೆ ಅನಧಿಕೃತ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ ಇದುವರೆಗೆ ಎಷ್ಟು ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ ಎಂಬುದರೆ ಬಗ್ಗೆ ಸದ್ಯ ನನ್ನ ಬಳಿ ಅಧಿಕೃತ ಮಾಹಿತಿ ಇಲ್ಲ,'' ಎಂದು ಹೇಳಿದರು.

ಮಾರ್ಚ್‌ನಲ್ಲಿ ಸಾವಿರಾರು ಮನೆಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿತ್ತು. ಮೂರು ದಿನಗಳ ಒಳಗಾಗಿ ಪಟ್ಟಿ ಮಾಡಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ, ಇಲ್ಲದಿದ್ದರೆ ತಮ್ಮ ಆಸ್ತಿಯನ್ನು ಅನಧಿಕೃತ ಎಂದು ಘೋಷಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು. ಒಟ್ಟು ಈ ರೀತಿಯ 10,000 ನೋಟಿಸ್‌ಗಳನ್ನು ವಿತರಿಸಲಾಗಿದೆ.

ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

"ಈ ರೀತಿಯ ಅನಧಿಕೃತ ಅಥವಾ ಅಕ್ರಮ ಕಟ್ಟಡಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳ ಸಭೆ ನಡೆಸಿ ತೀರ್ಮಾನಿಸಲಿದ್ದಾರೆ. ಅಕ್ರಮ-ಸಕ್ರಮ ಯೋಜನೆಯೂ ಕೂಡ ನ್ಯಾಯಾಲಯದಲ್ಲಿದೆ. ಹಾಗಾಗಿ ನಾವು ಸದ್ಯ ದತ್ತಾಂಶ ಸಂಗ್ರಹ ಮತ್ತು ಸರ್ವೆ ಕಾರ್ಯದಲ್ಲಿ ತೊಡಗಿದ್ದೇವೆ,'' ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ರವೀಂದ್ರ ಮಾಹಿತಿ ನೀಡಿದರು.

ಹೈಕೋರ್ಟ್‌ನಿಂದ ಪಾಲಿಕೆಗೆ ತರಾಟೆ

ಹೈಕೋರ್ಟ್‌ನಿಂದ ಪಾಲಿಕೆಗೆ ತರಾಟೆ

ಇನ್ನೊಂದೆಡೆ ಬೆಂಗಳೂರು ನಗರದಲ್ಲಿನ ಅನಧಿಕೃತ ಕಟ್ಟಡಗಳ ತೆರವು ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯಪೀಠ ಸೋಮವಾರ ವಿಚಾರಣೆ ವೇಳೆ, ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೂರು ವರ್ಷಗಳು ಬೇಕೆ ಎಂದು ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿತು.

"ಇದೇ ವೇಳೆ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಬಿಬಿಎಂಪಿ ಜನರಿಗೆ ಅನಗತ್ಯವಾಗಿ ತೊಂದರೆ ನೀಡಬಾರದು. ನಿಯಮಗಳನ್ನು ಉಲ್ಲಂಘಿಸಿದ್ದರಷ್ಟೇ ಕ್ರಮ ಕೈಗೊಳ್ಳಬೇಕು, ಸಣ್ಣ-ಪುಟ್ಟ ಉಲ್ಲಂಘನೆಗೆ ನಿಯಮಗಳಲ್ಲಿ ಅವಕಾಶವಿದ್ದರೆ ಅದಕ್ಕೆ ದಂಡ ಕಟ್ಟಿಸಿಕೊಂಡು ಅಂತಹ ಕಟ್ಟಡ ಸಕ್ರಮಗೊಳಿಸಲು ಕ್ರಮವನ್ನು ಕೈಗೊಳ್ಳಬೇಕು'' ಎಂದು ಸೂಚನೆ ನೀಡಿತ್ತು.

Recommended Video

Suresh Kumar: ಹೊರಟ್ಟಿ ಗೆಲುವು ನಿಶ್ಚಿತ- ಶಿಕ್ಷಣ ಸಚಿವ ನಾಗೇಶ | OneIndia Kannada

English summary
There are nearly 2 lakh unauthorised buildings in the Bengaluru city according to BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X