ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ವಿಲೇವಾರಿ ವಿರೋಧಿಸಿ ಮಂಡೂರು ಬಂದ್

By Mahesh
|
Google Oneindia Kannada News

ಬೆಂಗಳೂರು, ಜೂ.1: ಮಂಡೂರಿನಲ್ಲಿ ಕಸ ಹಾಕದಂತೆ ಪ್ರತಿಭಟನೆಗೆ ಮುಂದಾಗಿರುವ ಸ್ಥಳೀಯರ ಮನವೊಲಿಸಲು ಬಿಬಿಎಂಪಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಪ್ರಯತ್ನ ವಿಫಲಗೊಂಡಿದೆ. ಆಮ್ ಆದ್ಮಿ ಪಕ್ಷ ಹಾಗೂ ಇನ್ನಿತರ ಸಂಘಟನೆಗಳ ನೆರವಿನಿಂದ ಮಂಡೂರಿನಲ್ಲಿ ಭಾನುವಾರ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ.

ಮಂಡೂರು ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದು, ಪ್ರಾಣ ಬೇಕಾದರೂ ಬಿಟ್ಟೇವು, ಕಸ ಹಾಕಲು ಬಿಡುವುದಿಲ್ಲ ಎಂದು ಘರ್ಜಿಸಿದ್ದಾರೆ. ಮಂಡೂರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಮೇಯರ್ ಕಟ್ಟೆ ಸತ್ಯನಾರಾಯಣ ಭೇಟಿ ನೀಡಿ ಸಂಧಾನ ಮಾತುಕತೆ ಮುಂದುವರೆಸಿದ್ದಾರೆ. ಪಕ್ಷಾತೀತವಾಗಿ ನಾವು ಮಂಡೂರಿನ ಸಮಸ್ಯೆ ಬಗೆಹರಿಸಲು ಸಿದ್ಧರಾಗಿದ್ದೇವೆ ಅದಕ್ಕಾಗಿ ಇಲ್ಲಿಗೆ ಬಂದಿದ್ದೇವೆ, ಬಿಬಿಎಂಪಿಗೆ ಸ್ವಲ್ಪ ಕಾಲಾವಕಾಶ ನೀಡಿ ಎಂದು ಅರವಿಂದ ಲಿಂಬಾವಳಿ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.[ಡಂಪಿಂಗ್ ಸ್ವಾಮಿ ಮಹಾತ್ಮೆ]

ಇದಕ್ಕೂ ಮುನ್ನ ಸಚಿವರು, ಶಾಸಕರು ಹಾಗೂ ಪಾಲಿಕೆ ಸದಸ್ಯರು ಶಾಂತಿನಗರದ ಬಿಎಂಟಿಸಿ ನಿಲ್ದಾಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿದ್ದರು. 1 ವರ್ಷದವರೆಗೆ ತಾತ್ಕಾಲಿಕವಾಗಿ ಕಸ ವಿಲೇವಾರಿಗೆ ಅವಕಾಶ ನೀಡಿದರೆ ಪರ್ಯಾಯ ಮಾರ್ಗ ಹುಡುಕಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು. ಮಂಡೂರಿನಲ್ಲಿ ಹಾಕಲಾಗಿರುವ ಕಸವನ್ನು ಕರಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಮಸ್ಯೆ ಪರಿಹರಿಸಲಾಗುವುದು. ನಿವಾಸಿಗಳ ಆರೋಗ್ಯ ಕಾಪಾಡಲು ರಾಸಾಯನಿಕಗಳನ್ನು ಕಸದ ಮೇಲೆ ಸಿಂಪಡಿಸಲಾಗುತ್ತಿದೆ ಎಂದು ಆಯುಕ್ತ ಎಂ.ಲಕ್ಷ್ಮೀನಾರಾಯಣ ಮನವಿ ಮಾಡಿದರು.

ಸಚಿವರ, ಮೇಯರ್ ಆಶ್ವಾಸನೆಗೆ ಬಗ್ಗದ ಜನತೆ

ಸಚಿವರ, ಮೇಯರ್ ಆಶ್ವಾಸನೆಗೆ ಬಗ್ಗದ ಜನತೆ

ಮಂಡೂರಿನ ಗ್ರಾಮಸ್ಥರು ಯಾವುದೇ ಆಶ್ವಾಸನೆಗೆ ಜಗ್ಗದೆ ಮಂಡೂರಿನ ಡಂಪ್ ಯಾರ್ಡ್ ಗೆ ಬೀಗ ಜಡಿದು ರಸ್ತೆಗಳಲ್ಲಿ ಕುಳಿತು ಪ್ರತಿಭಟನೆ ಮುಂದುವರೆಸಿದ್ದಾರೆ.

ಡಂಪಿಂಗ್ ಲಾರಿಗಳನ್ನು ತಡೆದು ಘಟಕದ ದ್ವಾರದ ಬಳಿಯೇ ಬಿಡಾರ ಹೂಡಿ ಆಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಮತ್ತೆ ಸೃಷ್ಟಿಯಾಗುವ ಸಾಧ್ಯತೆಯಿದೆ.

ತ್ಯಾಜ್ಯದ ಗುಡ್ಡದಿಂದ ದುರ್ನಾತ ಹರಡದಂತೆ ತಡೆಯಲು ಬಿಬಿಎಂಪಿ ವತಿಯಿಂದ ಬಯೊ ಡಿಗ್ರೇಡಬಲ್‌ ದ್ರಾವಣ ಸುರಿಯುತ್ತಿದ್ದರೂ ದುರ್ನಾತ ಹೆಚ್ಚಾಗಿದೆ. ಇದರಿಂದಾಗಿ ಊಟ ಮಾಡುವುದೇ ಕಷ್ಟವಾಗುತ್ತಿದ್ದು, ವಾಂತಿಭೇದಿ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಚಿತ್ರ ಕೃಪೆ: ರವಿಕೃಷ್ಣಾರೆಡ್ಡಿ, ಆಮ್ ಆದ್ಮಿ ಪಕ್ಷ

ಬಿಬಿಎಂಪಿ ವಿರುದ್ಧ ಕ್ರಮಕ್ಕೆ ಸೂಚನೆ

ಬಿಬಿಎಂಪಿ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು ಮಹಾನಗರದ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕ ಹಾಗೂ ಕಾಯ್ದೆಗೆ ಅನುಗುಣವಾಗಿ ರೂಪಿಸಿ ಜಾರಿಗೊಳಿಸಲು ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ವಿರುದ್ಧ ಕ್ರಮ ಜರಗಿಸು ವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ವಾಮನ್ ಆಚಾರ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ತ್ಯಾಜ್ಯ ವಿಂಗಡಣೆ ಘಟಕವನ್ನೇ ಸ್ಥಾಪಿಸಿಲ್ಲ

ತ್ಯಾಜ್ಯ ವಿಂಗಡಣೆ ಘಟಕವನ್ನೇ ಸ್ಥಾಪಿಸಿಲ್ಲ

ಮಂಡೂರಿನಲ್ಲಿ ತ್ಯಾಜ್ಯ ವಿಂಗಡಣೆ ಘಟಕವನ್ನೇ ಸ್ಥಾಪಿಸಿಲ್ಲ. ಇಲ್ಲಿಂದ ಸೋರಿಕೆಯಾದ ಮಲಿನ ನೀರು ಪಕ್ಕದ ಪ್ರದೇಶಗಳಲ್ಲಿ ನಿಂತಿದೆ. ಉತ್ತರ ಭಾಗದಲ್ಲಿ ಇದು ಅಂತರ್ಜಲವನ್ನು ಕಲುಷಿತಗೊಳಿಸಿದೆ. ಸೊಳ್ಳೆ, ನಾಯಿ, ಹಕ್ಕಿಗಳ ಕಾಟ ವಿಪರೀತವಾಗಿದೆ. ನಾಲೆಗಳನ್ನು (ಗಾರ್ಲಂಡ್ ಕೆನಾಲ್) ಸಂಗ್ರಾಹಾಗಾರದ ಸುತ್ತ ನಿರ್ಮಿಸಿಲ. ಅಂತರ್ಜಲ ಗುಣ ಮಟ್ಟ, ಗಾಳಿಯ ಗುಣಮಟ್ಟದ ಬಗ್ಗೆ ನಿಗಾ ವಹಿಸುತ್ತಿಲ್ಲ. ಇದಲ್ಲದೆ ಈ ಪ್ರದೇಶದಲ್ಲಿ ಮಂಡಳಿಯ ಪರವಾನಗಿ ಇಲ್ಲದೆ ಮತ್ತು ಮುನ್ಸಿಪಲ್ ಘನ ತ್ಯಾಜ್ಯ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾ ಚರಣೆ ಮಾಡಲಾಗುತ್ತಿದೆ.

ಬಿಬಿಎಂಪಿಯು ಮುನ್ಸಿಪಲ್ ಘನತ್ಯಾಜ್ಯದ ನಿಯಮಗಳನ್ನು ಪಾಲಿಸುತ್ತಿಲ್ಲ ಮತ್ತು ಅನಗತ್ಯ ವಾಗಿ ನೆಪ ನೀಡುತ್ತ ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ನಷ್ಟ ಉಂಟು ಮಾಡುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಸಹಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ.
ಬಿಬಿಎಂಪಿ ಪರ್ಯಾಯ ಮಾರ್ಗ ಹುಡುಕಾಟ

ಬಿಬಿಎಂಪಿ ಪರ್ಯಾಯ ಮಾರ್ಗ ಹುಡುಕಾಟ

ಮಂಡೂರಿನಲ್ಲಿ (ನಿತ್ಯ10 ಸಾವಿರ ಟನ್‌) ದೊಡ್ಡ ಬಳ್ಳಾಪುರ (ನಿತ್ಯ 5 ಸಾವಿರ ಟನ್‌) ಮಾಗಡಿ ರಸ್ತೆಯ ಕನ್ನಹಳ್ಳಿ(6 ಸಾವಿರ ಟನ್‌) ಪ್ರದೇಶಗಳಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕಿದೆ.

ಮಾವಳ್ಳಿಪುರ ತ್ಯಾಜ್ಯ ವಿಲೇವಾರಿ ಕೇಂದ್ರದ ಮುಚ್ಚುಗಡೆಯಾಗಿದೆ. ಹೀಗಾಗಿ ಬಿಬಿಎಂಪಿ ಗುರುತಿಸಿದ ಚಿಕ್ಕನಾಗಮಂಗಲ, ದೊಡ್ಡ ಬೆಳವಂಗಲ, ಅರುದ, ತೊಗರಿಘಟ್ಟ, ಸೀಗೆಹಳ್ಳಿ, ಕನ್ನಹಳ್ಳಿ, ಗೋರೂರು, ಕೊಡಿಯಾಲ ಈ ಎಂಟು ಹೊಸ ತ್ಯಾಜ್ಯ ವಿಲೇವಾರಿ ನಿವೇಶನಗಳಲ್ಲಿ ಯಾವುದೇ ತ್ಯಾಜ್ಯ ವಿಲೇವಾರಿ ಕಾರ್ಯಾಚರಣೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಆದರೆ, ಅಲ್ಲಿನ ಗ್ರಾಮಸ್ಥರ ಒಪ್ಪಿಗೆ ಸಿಗುವುದು ಕೂಡಾ ಕಷ್ಟಕರ.

ಕಸದ ಸಮಸ್ಯೆ, ಇನ್ನೂ ಸಿಗದ ಪರಿಹಾರ

ಕಸದ ಸಮಸ್ಯೆ, ಇನ್ನೂ ಸಿಗದ ಪರಿಹಾರ

ಬೆಂಗಳೂರು ನಗರದಲ್ಲಿ 4000 ಟನ್ ಕಸ ಉತ್ಪಾದನೆಯಾಗುತ್ತಿದ್ದು ಕಸ ವಿಂಗಡಣೆ, ಘನ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ. ಬೆಂಗಳೂರಿನಲ್ಲೇ ವೈಜ್ಞಾನಿಕವಾಗಿ ಕಸ ವಿಂಗಡಣೆ, ಸಂಸ್ಕರಣೆ ನಡೆಸಲಾಗುತ್ತಿಲ್ಲ ಎಂಬ ಕೂಗು ಬಿಬಿಎಂಪಿ ಕಿವಿಗೆ ಬಿದ್ದಿಲ್ಲ. ಕಸ ಹೆಚ್ಚಾದರೆ ಬೆಂಗಳೂರಿನ ನಾಗರಿಕರೂ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದೇ ಇದೆ.

ಮಂಡೂರಿನಲ್ಲಿ ಜಲಮಾಲಿನ್ಯ ಮಾಡಿದ, ಅಂತರ್ಜಲವನ್ನು ಪ್ರದೂಷಿಸಿದ ಕುರಿತು ಜಲ ಕಾಯ್ದೆ (ಮಾಲಿನ್ಯ ತಡೆ ಮತ್ತು ನಿಯಂತ್ರಣ) 1974ರ ವಿಧಿ 43,48ರ ಅನ್ವಯ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಜರುಗಿಸಿಲ್ಲ. ಗುತ್ತಿಗೆದಾರರು, ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ ಗ್ರಾಮಸ್ಥರ ಅರೋಗ್ಯದ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಯರ್- ಸಚಿವರ ಜಂಟಿ ಸುದ್ದಿಗೋಷ್ಠಿ

ಮೇಯರ್- ಸಚಿವರ ಜಂಟಿ ಸುದ್ದಿಗೋಷ್ಠಿ

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಬಿ.ಎಸ್. ಸತ್ಯನಾರಾಯಣ, ಮಂಡೂರು ಗ್ರಾಮಸ್ಥರಿಗೆ ಬಿಬಿಎಂಪಿ ಮೇಲೆ ವಿಶ್ವಾಸ ಹೋಗಿದೆ. ಆದರೆ ಸಮಸ್ಯೆ ಉಲ್ಬಣಕ್ಕೆ ಆಸ್ಪದ ಕೊಡುವುದಿಲ್ಲ. ಕೂಡಲೆ 4 ಯೋಜನೆಗಳನ್ನು ಬಿಬಿಎಂಪಿ ಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಮಂಡೂರಿನಲ್ಲಿ ಕಸ ಸುರಿಯುದಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿ 6 ತಿಂಗಳ ಕಾಲಾವಕಾಶಬೇಕು. ಏಕಾಏಕಿ ಮಂಡೂರಿನ ಡಂಪಿಂಗ್ ಯಾರ್ಡ್ನಲ್ಲಿ ಕಸ ವಿಲೇವಾರಿ ನಿಲ್ಲಿಸಿದರೆ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ತಲೆದೋರುತ್ತದೆ ಎಂದರು.

English summary
Mandur villagers observed total Bandh today(June.1) as Aam Aadmi Party extends its support to the villagers who are victims of unscientific garbage dumping by BBMP in their backyard. Minister Ramalinga Reddy, Mayor Sathyanarayana and former minister Aravind Limbavali visited the place to pacify the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X