ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸಂಚಾರ ದಟ್ಟಣೆ, ಆಯುಕ್ತರಿಂದ ಜಂಕ್ಷನ್ ಪರಿಶೀಲನೆ

|
Google Oneindia Kannada News

ಬೆಂಗಳೂರು ಜು.6: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಪ್ರಮುಖ ಜಂಕ್ಷನ್‌ಗಳಿಗೆ ಮಂಗಳವಾರ ತಡರಾತ್ರಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಈ ಪೈಕಿ ಸದಾ ಜನ ದಟ್ಟಣೆಯಿಂದ ತುಂಬಿರುವ ಸಾರಕ್ಕಿ ಜಂಕ್ಷನ್, ಜಯದೇವ ಫ್ಲೈ ಓವರ್, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಇಬ್ಬಲೂರು ಜಂಕ್ಷನ್‌ಗಳಿಗೆ ಭೇಟಿ ಸಂಚಾರಿ ಪೊಲೀಸರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ರಸ್ತೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಸಂಚಾರ ಸುಗಮ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಸಭೆ ನಡೆಸಿ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವಂತೆ ಸೂಚಿಸಿದ್ದರು. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದರು.

ಸಾರಕ್ಕಿ ಜಂಕ್ಷನ್ ಪರಿಶೀಲನೆ

ಸಾರಕ್ಕಿ ಜಂಕ್ಷನ್ ಪರಿಶೀಲನೆ

ಸಿಂಧೂರ ರಸ್ತೆ- ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ಅಳವಡಿಸಿದ ರಸ್ತೆ ನಾಮಫಲಕ, ಬೆಸ್ಕಾಂನ ಕಾಂಕ್ರೀಟ್ ಹಾಗೂ ಝೀರೋ ಟಾಲರೆನ್ಸ್ ಬೋರ್ಡ್‌ ಸ್ಥಳಾಂತರಿಸಿ. ಪಾದಚಾರಿ ಮಾರ್ಗ ಸರಿಪಡಿಸಿ ವಾಹನಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ನೀಡಿ. ಬಿಎಂಆರ್ ಸಿಎಲ್ ಫಿಲ್ಲರ್‌ಗೆ ಅಳವಡಿಸಿದ ಸಿಗ್ನಲ್ ಲೈಟ್ ಇನ್ನೂ ಮೂರು ಅಡಿಗೆ ಎತ್ತರಿಸಿ ಎಂದು ಪರಿಶೀಲನಾ ವೇಳೆ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಸಾರಕ್ಕಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ಜೆ. ಪಿ. ನಗರ ಮೆಟ್ರೋ ನಿಲ್ದಾಣದ 14ನೇ ಇ ರಸ್ತೆಯಿಂದ ಪಾದಚಾರಿ ಮಾರ್ಗ ಮೂಲಕ ಕನಕಪುರ ರಸ್ತೆಗೆ ಬರುವುದರಿಂದ ಅಪಘಾತ ಉಂಟಾಗುತ್ತಿವೆ. ಅಪಘಾತ ಸಂಭವಿಸಿದಂತೆ 14ನೇ ಇ ಅಡ್ಡರಸ್ತೆ, ಕನಕಪುರ ಮುಖ್ಯ ರಸ್ತೆಯ ಮಧ್ಯ ಪಾದಚಾರಿ ಮಾರ್ಗಕ್ಕೆ ಗ್ರೀಲ್, ಕಂಬ ಅಳವಡಿಸಿ. ಅಲ್ಲಲ್ಲಿ ಹಾಳಾಗಿರುವ ಪಾದಾಚಾರಿ ಮಾರ್ಗ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.

ಕೋಣನಕುಂಟೆಯಿಂದ ಬಂದ ವಾಹನಗಳಿಗೆ ಸಾರಕ್ಕಿ ಜಂಕ್ಷನ್ ಬಳಿ ರಿಂಗ್ ರಸ್ತೆಗೆ ಎಡ ತಿರುವು ಪಡೆಯಲು ತೊಡಕಾಗಿರುವ ಮರಗಳ‌ ಕೊಂಬೆ ಕತ್ತರಿಸಬೇಕಿದೆ. ಬೆಸ್ಕಾಂ ಅಳವಡಿಸಿರುವ ಸೀಮೆಂಟ್ ಕಂಬ ಸ್ಥಳಾಂತರಿಸಿ, ಸರ್ವೀಸ್ ರಸ್ತೆಯನ್ನು ರಿಂಗ್ ರಸ್ತೆ ಮಟ್ಟಕ್ಕೆ ಎತ್ತರಿಸಿ ಡಾಂಬರೀಕರಣ ಮಾಡಲು ಕ್ರಮವಹಿಸಿ. ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಜಂಕ್ಷನ್ ಅಭಿವೃದ್ಧಿ ಗೊಳಿಸುವ ಸಂಬಂಧ ವಿನ್ಯಾಸ ಸಿದ್ದಪಡಿಸಿದ್ದಾರೆ. ಹಾಲಿ ಸಮಸ್ಯೆಗಳನ್ನು ಬಗೆಹರಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಎಂದು ಆಡಳಿತಗಾರ ರಾಕೇಶ್ ಸಿಂಗ್ ತಾಕೀತು ಮಾಡಿದರು.

ಜಯದೇವ ಮೇಲ್ಸೇತುವೆ ಪರಿಶೀಲನೆ

ಜಯದೇವ ಮೇಲ್ಸೇತುವೆ ಪರಿಶೀಲನೆ

ಜಯದೇವ ಮೇಲ್ಸೇತುವೆ ಈಸ್ಟ್ ಎಂಡ್ ಮುಖ್ಯ ರಸ್ತೆಯ ರೋಡ್ ಸರ್ಪೇಸಿಂಗ್ ಸರಿಪಡಿಸುವ, ವಿದ್ಯುತ್ ದೀಪಗಳನ್ನು ಅಳವಡಿಸುವ, ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ತಪ್ಪಿಸಲು ನಡೆಯುತ್ತಿರುವ ಡ್ರೈನೇಜ್ ಕಾಮಗಾರಿ ಪ್ರಗತಿಯಲ್ಲಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ. ಕೆಲವೆಡೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವ ಜತೆಗೆ ಸರ್ವೀಸ್ ರಸ್ತೆ ಬದಿ ಹಾಕಲಾದ ಕಟ್ಟಡ ಅವಶೇಷಗಳನ್ನು ತೆರವುಗೊಳಿಸುವಂತೆ ಮೆಟ್ರೋ ಅಧಿಕಾರಿಗಳಿಗೆ ರಾಕೇಶ್ ಸಿಂಗ್ ಸೂಚಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್

ಸಿಲ್ಕ್ ಬೋರ್ಡ್ ಜಂಕ್ಷನ್

ಬಿ. ಟಿ. ಎಂ ಲೇಔಟ್ - ಸಿಲ್ಕ್ ಬೋರ್ಡ್ ಕಡೆಗೆ ಎರಡು ಬದಿ ಚರಂಡಿ ಹಾಳಾಗಿದ್ದು, ಮಳೆ ಬಂದರೆ ಚರಂಡಿ ನೀರು ಮತ್ತು ಮಳೆ ನೀರು ಸೇರಿ ರಾಜಕಾಲುವೆಯಿಂದ ಉಕ್ಕಿ ಹರಿದು ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ರಾಜಕಾಲುವೆ ವಿಭಾಗದಿಂದ ಕೂಡಲೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು. ಹೊಸೂರು ರಸ್ತೆ - ಬಿಟಿಎಂ ರಸ್ತೆ ಕಡೆಗೆ ಹೋಗುವ ಸ್ಥಳದಲ್ಲಿರುವ ಕಾಲುವೆ ಮೇಲೆ ಬಿಎಂಆರ್ ಸಿಎಲ್ ನಿಂದ ಸ್ಲ್ಯಾಬ್ ಅಳವಡಿಸಿರುವುದು ಸುಗಮ ಸಂಚಾರಕ್ಕೆ ತೊಂದರೆ ಆಗಿದೆ. ಆದ್ದರಿಂದ ಸ್ಲ್ಯಾಬ್ ಮಟ್ಟವನ್ನು ರಸ್ತೆ ಮಟ್ಟಕ್ಕೆ ಮಾಡಿ ಇಳಿಸಿ ಸಂಚಾರಕ್ಕೆ ಅನುವು ಮಾಡಬೇಕು ಎಂದು ಸೂಚಿಸಲಾಯಿತು.

ಸಿಲ್ಕ್ ಬೋರ್ಡ್-ಬಿಟಿಎಂ ಲೇಔಟ್ ಬಸ್ ನಿಲ್ದಾಣದವರೆಗೆ ರಸ್ತೆ ಸರ್ಪೇಸಿಂಗ್ ಮಾಡಲು ಬಿಎಂಆರ್ ಸಿಎಲ್‌ಗೆ ಸೂಚಿಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಎಸ್ಆರ್ ಬಡಾವಣೆ ಕಡೆಗಿನ ಸರ್ವೀಸ್‌ ರಸ್ತೆ ಸಮೀಪ ಮುಖ್ಯರಸ್ತೆಗೆ ಪಾದಚಾರಿ ಮೇಲುಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಇಬ್ಬಲೂರು ಜಂಕ್ಷನ್

ಇಬ್ಬಲೂರು ಜಂಕ್ಷನ್

ಇಬ್ಬಲೂರು ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಕಡೆಗೆ ವಾಟರ್ ಲಾಗಿಂಗ್ ಆಗದಿರಲು ಕೈಗೊಂಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕಿದೆ. ಸರ್ಜಾಪುರ ರಸ್ತೆಯಿಂದ ಬಂದು ಹೊರ ವರ್ತುಲ ರಸ್ತೆಗೆ ಹೋಗುವ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಲು ವೃತ್ತದಲ್ಲಿರುವ 2 ಐ ಲ್ಯಾಂಡ್ ಗಳನ್ನು ಮರು ವಿನ್ಯಾಸಗೊಳಿಸಿ. ಹರಳೂರು ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ ವರೆಗೆ ಎರಡು ಬದಿ ಪಾದಚಾರಿ ಮಾರ್ಗ ಅಭಿವದ್ಧಿಪಡಿಸುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ತಿಳಿಸಿದರು.

ಪರಿಶೀಲನೆ ವೇಳೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶ ಅಂಜುಮ್ ಫರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಜಯರಾಂ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೆ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ಪಾಲಿಕೆಯ ವಲಯ ಮತ್ತು ವಿಶೇಷ ಆಯುಕ್ತರು, ಬಿಎಂಆರ್ ಸಿಎಲ್ ನ ಇನ್ನಿತರ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

English summary
Bruhat Bengaluru Mahanagara Palike (BBMP) Chief Commissioner Tushar Girinath visited and verified to heavy traffic Junctions in Bengaluru city at Tuesday midnight, take necessary action in Juncotion for reduse the traffic, advised by Tushar Girinath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X