ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಎಂಡ್ ಕುಡುಕರ ವೀಕೆಂಡ್ ಮಜಾ, ಪೊಲೀಸರಿಗೆ ಸಜಾ

By ಬಾಲರಾಜ್ ತಂತ್ರಿ
|
Google Oneindia Kannada News

ಶಿಗ್ಗಾಂವ್ ನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ 'ಸಂತ ಶಿಶುನಾಳರ ವೇದಿಕೆ'ಯಲ್ಲಿ ನಾಡಿನ ಮಠಾಧೀಶರು ಮುಂದಿನ ಬಜೆಟಿನಲ್ಲಾದರೂ ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸಲಿ ಎಂದು ಆಗ್ರಹಿಸಿದ್ದರು. ಆದರೆ ಅಬಕಾರಿ ಇಲಾಖೆಯಿಂದ ವಾರ್ಷಿಕ ಹದಿನಾಲ್ಕು ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತದೆ ಎಂದು ಮುಖ್ಯಮಂತ್ರಿ ಬಜೆಟ್ ಭಾಷಣದಲ್ಲಿ ಹೇಳಿಕೆ ನೀಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ 'ನೈಟ್ ಲೈಫ್' ಅನ್ನು ತಡರಾತ್ರಿಯವರೆಗೆ ವಿಸ್ತರಿಸಿದಾಗ ವಿರೋಧವಾಗಿದ್ದೇ ಹೆಚ್ಚು. ಬೆಂಗಳೂರು ನಗರದ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಒಂದು ಗಂಟೆಯವರೆಗೆ ನಶೆ ಏರಿಸಲು ಅವಕಾಶ ನೀಡಿದ ಸರಕಾರದ ಕ್ರಮದ ವಿರುದ್ದ ಸಾರ್ವಜನಿಕವಾಗಿ ಟೀಕೆಗಳ ಪ್ರವಾಹವೇ ಹರಿದಿತ್ತು. (ಮದ್ಯ ಸೇವನೆಯಿಂದ ಕ್ಯಾನ್ಸರ್ ಬಂದೀತು ಜೋಕೆ)

ಒಂದು ಕಡೆ ಅಬಕಾರಿ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿ ಇನ್ನೊಂದೆಡೆ ಪುರುಷೋತ್ತಿನಲ್ಲಿ 'ಎಣ್ಣೆ' ಹೊಡೆಯಲು ಕಾಲಾವಕಾಶ ನೀಡಿದ ಸರಕಾರದ ಕ್ರಮ ಐಟಿ - ಬಿಟಿ ಉದ್ಯೋಗಿಗಳ ಓಲೈಸಲು ಎನ್ನುವುದು ಒಂದು ಕಡೆಯಾದರೆ ತೆರಿಗೆ ಸಂಗ್ರಹ ಎನ್ನುವುದು ಇನ್ನೊಂದು.

Bar and Resturant open till mid night, more work pressure to Police department

ಪ್ರಾಯೋಗಿಕವಾಗಿ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಟ್ ಲೈಫ್ ಜಾರಿಗೆ ತಂದು ಅದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರದೆಲ್ಲಡೆ ಇನ್ನಷ್ಟು ನಶೆ ಏರಿಸಲು ಅವಕಾಶ ನೀಡುವುದು ಸರಕಾರದ ಸದ್ಯದ ಉದ್ದೇಶ. (ಬಾರ್ ರಾತ್ರಿ ಒಂದು ಗಂಟೆಯವರೆಗೆ ಓಪನ್)

ವಿಚಾರಕ್ಕೆ ಬರುವುದಾದರೆ, ಮದಿರೆಯ ನಶೆಯಲ್ಲಿ ತೇಲಾಡುತ್ತಿರುವವರನ್ನು ಕಾಪಾಡುವ ಮತ್ತು ಅವರಿಂದ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು. ಇಂತಹ ಬಾರ್ ಎಂಡ್ ರೆಸ್ಟೋರೆಂಟ್ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನೂ ನಿಯೋಜಿಸುತ್ತಿದೆ.

ಹೋದ ವಾರಾಂತ್ಯದಲ್ಲಿ ನೈಟ್ ಲೈಫಿಗೆ ನಿರೀಕ್ಷೆಯಂತೆ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿತ್ತು. ಜೊತೆಗೆ, ಪೊಲೀಸರೂ ಓವರ್ ಟೈಂ ಮಾಡುವುದೂ ತಪ್ಪಿಲ್ಲ. ಮೊದಲೇ ಸಿಬ್ಬಂದಿ ಕೊರತೆಯಿಂದ ಪರದಾಡುತ್ತಿರುವ ಇಲಾಖೆಗೆ ರಾಜ್ಯ ಸರಕಾರ ಮತ್ತಷ್ಟು ಹೈರಾಣವಾಗುವ ಬೋನಸ್ ಅನ್ನು ನೀಡಿದೆ.

ನಗರದ ಚರ್ಚ್ ಸ್ಟ್ರೀಟ್ ವ್ಯಾಪ್ತಿಯಲ್ಲಿರುವ ಪಬ್ ನಿಂದ ಹೊರಬಂದ, ಫುಲ್ ಕಿಕ್ ನಲ್ಲಿದ್ದ ಕನ್ನಡೇತರನೊಬ್ಬನನ್ನು ಈ ಹೊಸ ನೈಟ್ ಲೈಫ್ ಪದ್ದತಿಯ ಬಗ್ಗೆ ಕೇಳಿದಾಗ " ಇದೊಂದು ಉತ್ತಮ ಪದ್ದತಿ. ಆದರೆ ಪೊಲೀಸರು ನಮಗೆಲ್ಲಾ ಸೂಕ್ತ ರಕ್ಷಣೆ ಕೊಡುವ ಜವಾಬ್ದಾರಿಯನ್ನು ಹೊರಬೇಕು, ಆಗ ಮಾತ್ರ ಈ ಪದ್ದತಿ ಇನ್ನಷ್ಟು ಯಶಸ್ವಿಯಾಗಲು ಸಾಧ್ಯ' ಎಂದು ಅಭಿಪ್ರಾಯ ಮಂಡಿಸುತ್ತಾನೆ.

'ಅದೇನು ದೇಶ ಮೆಚ್ಚುವ ಕೆಲಸ ಮಾಡಿದ್ದಾನೋ ಇವನಿಗೆ ರಕ್ಷಣೆ ನೀಡೋಕೆ' ಎಂದು ಓವರ್ ಟೈಂ ಮಾಡುತ್ತಾ ಅಲ್ಲೇ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ಗೊಣಗುತ್ತಿದ್ದದ್ದೂ ಅಷ್ಟೇ ಸತ್ಯ? ಇವರ ಕುಡಿದು ಕುಪ್ಪಳಿಸುವ ಸ್ವೇಚ್ಚಾಚಾರಕ್ಕೆ ಪೊಲೀಸರು ಕಾಯ ಬೇಕಂದರೆ ಇದೆಂಥಾ ನ್ಯಾಯ?

ನಗರದ ಬಹುತೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳಿಗೆ ಇಂತ ದಿನವೇ 'ವೀಕ್ಲಿ ಆಫ್' ಎಂದಿಲ್ಲ. ಕೊಟ್ಟಾಗ ಇಸ್ಕೋ ಬೇಕು, argument ಮಾಡೋ ಹಾಗಿಲ್ಲ. ಆ ಮಟ್ಟಿಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ ಪೊಲೀಸ್ ಇಲಾಖೆಯಲ್ಲಿ. (ಮದ್ಯ ವಿಸ್ತರಣೆ ಪೊಲೀಸರಿಗೆ ಸವಾಲು)

ರಾಜ್ಯದಲ್ಲಿ ಪೊಲೀಸ್ ಮತ್ತು ಗೃಹ ರಕ್ಷಕ ಇಲಾಖೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ಕೊರತೆಯಿದೆ. ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಪ್ರತಿ ವರ್ಷ ಎಂಟು ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಜಾರ್ಜ್ ಹೋದ ವರ್ಷ ಸೆಪ್ಟಂಬರ್ ನಲ್ಲಿ ಹೇಳಿಕೆ ನೀಡಿದ್ದರು. ಅದು ಯಾವಾಗ ಕಾರ್ಯರೂಪಕ್ಕೆ ಬರುತ್ತೋ? ಬಹುಷ: ಸಾರ್ವತ್ರಿಕ ಚುನಾವಣೆಯ ನಂತರವಷ್ಟೇ ಅದಕ್ಕೆ ಉತ್ತರ ಸಿಗಬಹುದು.

ಮೊದಲೇ, ಕೆಲಸದ ಒತ್ತಡದಿಂದ ಹೈರಾಣವಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ನೈಟ್ ಲೈಫ್ ಅನ್ನುವುದು ಮತ್ತಷ್ಟು ಒತ್ತಡ ತರುವುದಂತೂ ನಿಜ. ನಶೆ ಏರಿದಾಗ ಮನುಷ್ಯ 'ತಾನಾಗಿರುವುದಿಲ್ಲ' ಎನ್ನುವ ಮಾತಿದೆ. ಇಂತವರೆಲ್ಲಾ ಸೇಫಾಗಿ ಮನೆ ಸೇರುವವರೆಗೆ ರಕ್ಷಣೆ ನೀಡುವ ಗುರುತರ ಜವಾಬ್ದಾರಿ ಇಲಾಖೆ ವಹಿಸಿ ಕೊಳ್ಳಬೇಕಂದರೆ ಏನರ್ಥ?

ಇನ್ನು ಟ್ರಾಫಿಕ್ ಪೊಲೀಸರಿಗೆ ವಾಹನ ಚಾಲಕರು 'ಡ್ರಿಂಕ್ ಎಂಡ್ ಡ್ರೈವ್' ಕಾನೂನು ಮೀರ ಬಾರದೆನ್ನುವ ಕಟ್ಟುನಿಟ್ಟಿನ ಆದೇಶ. ಅಪರಾತ್ರಿಯಲ್ಲಿ ರಸ್ತೆ ಮಧ್ಯೆ ನಂತು ಬಂದು ಹೋಗುವವರನ್ನು ನಿಲ್ಲಿಸಿ ಆ ಅನ್ನು.. ಆ ಅನ್ನು ಎಂದು ಕೇಸು ಜಡಾಯಿಸುವ ಮತ್ತಷ್ಟು ಕೆಲಸದ ಒತ್ತಡ. (ಪೆಗ್ ಏರಿಸುವ ಮುನ್ನವೇ ಗ್ರಾಹಕ ಟೈಟ್)

ಬೆಂಗಳೂರು ಪೊಲೀಸ್ ಕಮಿಷನರ್ ವ್ಯವಸ್ಥೆ ಸುವರ್ಣಮಹೋತ್ಸವ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಾದರೂ ಪೊಲೀಸ್ ಸಿಬ್ಬಂದಿಗಳು ಪಡುತ್ತಿರುವ ಕೆಲಸದ ಒತ್ತಡವನ್ನು ಕಮ್ಮಿ ಮಾಡುವ ಪ್ರಾಮಾಣಿಕ ಕೆಲಸಕ್ಕೆ ನೈಟ್ ಲೈಫ್ ಜಾರಿಗೆ ತಂದ ಇದೇ ಸಿದ್ದರಾಮಯ್ಯ ಸರಕಾರ ಮುಂದಾಗಲಿ.

ದೆವ್ವಗಳು ಓಡಾಡುವ ಸಮಯದಲ್ಲಿ ಉಳ್ಳವರು ಮಾಡುವ ನಶೆಯ ಮೋಜಿನಾಟಕ್ಕೆ ಪೊಲೀಸ್ ಇಲಾಖೆ ರಕ್ಷಣೆ ನೀಡುವ ಪದ್ದತಿಗೆ ಕಡಿವಾಣ ಬೀಳಲಿ.

ನೈಟ್ ಲೈಫ್ ಅವಧಿ ವಿಸ್ತರಣೆಯಿಂದ ಯಾರಿಗೆ ಲಾಭ? ನಿಮ್ಮ ಮತ ಚಲಾಯಿಸಿ

English summary
Karnataka government decision to open the Bar and Resturant till 1 AM in certian police limits in Bangalore, more work pressure to Police department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X