ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂ ಸೆಂಟ್ರಲ್ ಕ್ಷೇತ್ರದ ಆಮ್ ಆದ್ಮಿ ಬಾಲಕೃಷ್ಣನ್ ಸಂದರ್ಶನ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 29- ಬೆಂಗಳೂರಿನ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಇಬ್ಬರು ಪ್ರಮುಖ ಟೆಕ್ಕಿಗಳು ಕಣಕ್ಕಿಳಿಯುವ ಮೂಲಕ ರಾಜ್ಯದ ರಾಜಧಾನಿಯಲ್ಲಿ ಲೋಕಸಭಾ ಚುನಾವಣೆಗೆ ವಿಶೇಷ ಮೆರುಗು ತಂದಿದ್ದಾರೆ. ಗಮನಾರ್ಹವೆಂದರೆ ಇಬ್ಬರೂ ಒಂದೇ ಕಂಪನಿಯಿಂದ, ಒಂದೇ ಸ್ಕೂಲ್ ಆಫ್ ಥಾಟ್ ನಿಂದ ಬಂದವರು. ಆದರೆ ಇಬ್ಬರೂ 'ಪರಸ್ಪರ ವಿರೋಧಿ ಮನೋಭಾವದ ಪಕ್ಷಗಳನ್ನು' ಆರಿಸಿಕೊಂಡು ಚುನಾವಣೆಗಿಳಿದಿದ್ದಾರೆ.

ಒಬ್ಬರು ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಪಕ್ಷದ ಪರ ನಂದನ್ ನಿಲೇಕಣಿ, ಮತ್ತೊಬ್ಬರು ಆಮ್ ಆದ್ಮಿ ಪಕ್ಷದ ಬಾಲಕೃಷ್ಣನ್ ಅವರು. ಬಾಲಕೃಷ್ಣನ್ ಅವರಿಗೆ ತಾವು ರಾಜಕೀಯಕ್ಕೆ ಬಂದಿರುವುದೇಕೆ? ಇಲ್ಲಿನ ಸಮಸ್ಯೆಗಳು ಏನು? ಎಂಬುದರ ಬಗ್ಗೆ ಸ್ಪಷ್ಟ ಆಲೋಚನೆ/ ಚಿಂತನೆಗಳಿದ್ದಂತಿವೆ. (ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಿರುಪರಿಚಯ)

'ಅಲ್ರೀ, ರಸ್ತೆ/ಕಸ/ಫುಟ್ಪಾತು ಸ್ಥಳೀಯ ಆಡಳಿತದ ಸಮಸ್ಯೆಗಳಲ್ವೇನ್ರಿ? ಆದ್ರೆ ಅವೆ ಇಂದು ಸಂಸದೀಯ ಚುನಾವಣಾ ವಿಷಯಗಳಾಗಿವೆ! ಇದಲ್ವೇ ನಾಡಿನ ದೌರ್ಭಾಗ್ಯವೆಂದರೆ?' ಎಂದು ಸಮ ತರಾಟೆಗೆ ತೆಗೆದುಕೊಂಡಿದ್ದಾರೆ, ಬಾಲಕೃಷ್ಣನ್. ಇನ್ನೂ ಅನೇಕ ವಿಷಯಗಳ ಒಳಸುಳಿಗಳನ್ನು ಅವರು ಬಿಡಿಸಿಟ್ಟಿದ್ದಾರೆ. ಸಂದರ್ಶನ ಮುಗಿಸಿದ ನಂತರ - ಯಸ್, ಸ್ಪಷ್ಟ ಮತ್ತು ಸದುದ್ದೇಶದೊಂದಿಗೇ ಬಾಲಕೃಷ್ಣನ್ ಕಣಕ್ಕಿಳಿದಿದ್ದಾರೆ ಅನ್ನಿಸುತ್ತಿದೆ.

AAP candidate V Balakrishnan interview

1985ರಿಂದ ಬೆಂಗಳೂರಿನಲ್ಲೇ ವಾಸವಾಗಿರುವ ನೆರೆಯ ತಮಿಳುನಾಡಿನ ಬಾಲಕೃಷ್ಣನ್ ಅವರು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಆಮ್ ಆದ್ಮಿ ಪಕ್ಷದ ಸೇನಾನಿ ವಿ ಬಾಲಕೃಷ್ಣನ್ ಅವರು 'ಒನ್ಇಂಡಿಯಾಕನ್ನಡ'ಕ್ಕೆ ನೀಡಿರುವ ವಿಶೇಷ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ, ಇಂದಿನ ಓದುಗರೇ ಏಪ್ರಿಲ್ 17ರ ಮತದಾರರಾಗಿರಬಹುದು. ಹಾಗಾಗಿ ಮತದಾನ ಮಾಡುವ ಮುನ್ನ ಬಾಲಕೃಷ್ಣನ್ ಎತ್ತಿರುವ ವಿಷಯಗಳ ಬಗ್ಗೆ ಒಮ್ಮೆ ನೀವೂ ಯೋಚಿಸಿ ನೋಡಿ.

ರಾಜಕೀಯಕ್ಕೆ ಬಂದು ಒಂದೆರಡು ತಿಂಗಳಾಗಿವೆ. ಈಗ ಹೇಳಿ, ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತಿರುವುದು ಏಕೆ? ನಿಮ್ಮ ಉದ್ದೇಶ/ಗುರಿಯೇನು?
ವಿ ಬಾಲಕೃಷ್ಣನ್: ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯಬೇಕು ಎಂದು ನಾನು ಜೀವನದಲ್ಲಿ ಅನೇಕ ಬಾರಿ ಅಂದುಕೊಳ್ಳುತ್ತಿದ್ದೆ. ಇನ್ಫೋಸಿಸ್ ಬಿಡುವ ಸಂದರ್ಭದಲ್ಲಿ ನನ್ನ ಕಣ್ಣ ಮುಂದೆ ಕಾಣಿಸಿಕೊಂಡಿದ್ದು ಆಮ್ ಆದ್ಮಿ ಪಕ್ಷ. ಅದು ನಿಷ್ಕಳಂಕ ಮತ್ತು ಪ್ರಾಮಾಣಿಕ ಆಡಳಿತ ನೀಡುತ್ತದೆ ಎಂದು ನನ್ನಲ್ಲಿ ಭರವಸೆ ಮೂಡಿತ್ತು. ಆಗ ನನಗೆ ಅನ್ನಿಸಿದ್ದು ಪ್ರಮಾಣಿಕ ಮತ್ತು ಒಳ್ಳೆಯ ಜನ ಎಎಪಿ ಜತೆ ಕೈಜೋಡಿಸುವುದಕ್ಕೆ ಇದು ಸಕಾಲ ಅನ್ನಿಸಿತು. ಇಲ್ಲವಾದಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡ ಮಾಡುವುದು ಸಾಧ್ಯವಿಲ್ಲ ಎಂದೆನಿಸಿತು. ಹಾಗಾಗಿ ಮೊದಲು ನಾನೇ ಚುನಾವಣೆಗೆ ಇಳಿದೆ.

ಸಾರ್ವಜನಿಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ನಿಮ್ಮ ಸ್ಟಷ್ಟ ಅನಿಸಿಕೆ ಏನು?
ವಿ ಬಾಲಕೃಷ್ಣನ್: ನೋಡಿ ಬೆಂಗಳೂರಿನಲ್ಲಿ ನಾನು ಎಲ್ಲೇ ಕಾಲಿಡಲಿ, ಅಲ್ಲೆಲ್ಲಾ ಸಮಸ್ಯೆಗಳು ಸಾರ್ವತ್ರಿಕವಾಗಿ ಕಾಡುತ್ತಿವೆ- ಕೆಟ್ಟ ರಸ್ತೆಗಳು, ಪಾದಚಾರಿ ಮಾರ್ಗಗಳೆ ಇಲ್ಲ, ಇನ್ನು ಕಸ ಸಮಸ್ಯೆಯಂತೂ ವಿಪರೀತವಾಗಿದೆ. ಅದರ ಜತೆಗೆ ನೀರಿಲ್ಲ; ವಿದ್ಯುತ್ ಇಲ್ಲ ಅನ್ನುತ್ತಿದ್ದಾರೆ ಜನ. ಅಸಲಿಗೆ ಇವೆಲ್ಲಾ ಸ್ಥಳೀಯ ಆಡಳಿತ ಸಮಸ್ಯೆಗಳು. ಆದರೆ ಇಂದು ಸಂಸದೀಯ ವಿಷಯಗಳಾಗಿ ಮಾರ್ಯಪಟ್ಟಿವೆ. ಇದು ದುರಂತವೇ ಸರಿ.
ಇವುಗಳನ್ನು ಸುಧಾರಿಸಲು ಅನೇಕ ಯೋಜನೆಗಳಿವೆ. ಆದರೆ ಏನ್ಮಾಡೋಣ ಪರಿಣಾಮಕಾರಿ ಆಡಳಿತ ಇಲ್ಲವಾಗಿದೆ. ಯೋಜನೆಗಳು ಜಾರಿಯಾಗುತ್ತಿಲ್ಲ. ಸ್ಥಳೀಯ ಕಾರ್ಪೊರೇಟರ್/ ಶಾಸಕ ಜನರತ್ತ ತಿರುಗಿ ನೋಡುತ್ತಿಲ್ಲ. ಹಾಗಾಗಿ ಈ ಸಮಸ್ಯೆಗಳು ಸಂಸದೀಯ ಚುನಾವಣೆ ವಿಷಯಗಳಾಗಿ ಮಾರ್ಪಟ್ಟಿವೆ. ಇದು ನಾಡಿನ ಜನರ ದೌರ್ಭಾಗ್ಯವೇ ಸರಿ.

ನಿಮ್ಮ ಕಾರ್ಪೊರೇಟ್ ಕಂಪನಿಯ ಅನುಭವ ಸಾರ್ವಜನಿಕ ಸೇವೆಗೆ ಹೇಗೆ ಬಳಕೆಯಾಗುತ್ತದೆ?
ವಿ ಬಾಲಕೃಷ್ಣನ್ ಪ್ರತಿಕ್ರಿಯೆ: ಓಹ್, ಖಂಡಿತಾ ನನ್ನ ಕಾರ್ಪೊರೇಟ್ ಅನುಭವವನ್ನು ಇಲ್ಲೂ ಬಳಸಿಕೊಳ್ಳುವೆ. ನನಗೆ ಹಿಂದಿನ ದುರುದೃಷ್ಟಾಂತಗಳು ಯಾವುವೂ ಇಲ್ಲ. ದೂರದೃಷ್ಟಿ ಇದೆ ಅಷ್ಟೇ. ಸ್ಪಷ್ಟ/ ಹೊಸ ಚಿಂತನೆಗಳು ಇವೆ. ಸಮಸ್ಯೆಗಳನ್ನು ಪರಿಹರಿಸಲು ಇಷ್ಟು ಸಾಕು. ಇನ್ನು ಕಾರ್ಪೊರೇಟ್ ಕಲ್ಚರಿನಲ್ಲಿ ಹೇಳುವುದಾದರೆ ಜಾಗತಿಕ ಮಟ್ಟದ ಕಂಪನಿಯಲ್ಲಿ ಅನೇಕ ಸಂಕೀರ್ಣ ಪರಿಸ್ಥಿತಿ/ಸಮಸ್ಯೆಗಳನ್ನು ನಿಭಾಯಿಸಿದ್ದೇನೆ. ಇದೆಲ್ಲಾ ನನ್ನ ಕೈಹಿಡಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಈಗ ಹೇಳಿ, ಬೆಂಗಳೂರು ಜನ ರಾಜಕೀಯವಾಗಿ ಸೂಕ್ಷ್ಮಮತಿಗಳು ಅನಿಸುತ್ತದಾ, ನಿಮಗೆ?
ವಿ ಬಾಲಕೃಷ್ಣನ್ ಪ್ರತಿಕ್ರಿಯೆ: ಯಸ್, ಬೆಂಗಳೂರು ಜನ ರಾಜಕೀಯವಾಗಿ ಸೂಕ್ಷ್ಮಮತಿಗಳೇ. ನನ್ನ ಕ್ಷೇತ್ರದಲ್ಲಿ ಸಂಚರಿಸುವಾಗ ಇದು ನನ್ನ ಅನುಭವಕ್ಕೆ ಬಂದಿದೆ. ಇಂದಿನ ದುಃಸ್ಥಿತಿಗೆ ಹಿಂದಿನ ರಾಜಕೀಯ ನಾಯಕರು/ ಪಕ್ಷಗಳು ಕಾರಣ ಎಂಬುದು ಅವರಿಗೆ ವೇದ್ಯವಾಗಿದೆ. ತಕ್ಷಣ ಆಮೂಲಾಗ್ರ ಬಲಾವಣೆ ಬಯಸುತ್ತಿದ್ದಾರೆ.

ಆಯ್ತು, ಜನ ಬಾಲಕೃಷ್ಣನ್ ಅವರನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕು?
ವಿ ಬಾಲಕೃಷ್ಣನ್ ಪ್ರತಿಕ್ರಿಯೆ: ನಾನೂ ಅಂತಲ್ಲ. ಯಾರನ್ನೇ ಆಗಲಿ ಆರಿಸಿ ಆದರೆ ಅವರು ಪ್ರಾಮಾಣಿಕರಾಗಿರಬೇಕು. ಜನರ ಸಮಸ್ಯೆಗಳ ಜತೆ ಚೆಲ್ಲಾಟ ಆಡುವಂತಾಗಿರಬಾರದು. ಅಷ್ಟಕ್ಕೂ ನಮ್ಮ AAP ಪಕ್ಷವು ವಿಫಲಗೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಕಾಣಿಸಿಕೊಂಡಿದೆ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. 16 ವರ್ಷ corporate sectorನಲ್ಲಿ ಬೆವರು ಹರಿಸಿ, ಈ ಹಂತಕ್ಕೆ ಬಂದಿರುವೆ. ಮುಂದೆ ನಾನು ಇನ್ಫೋಸಿಸ್ ಕಂಪನಿ CEO ಆಗುವವನಿದ್ದೆ. ಆದರೆ ಆರಾಮದಾಯಕ ಬದುಕನ್ನು ಪಕ್ಕಕ್ಕಿಟ್ಟು ಸಾರ್ವಜನಿಕ ಸೇವೆಗೆ ಮುಡಿಪಾಗಿರುವೆ.

ನೀವು ಬೆಂಗಳೂರಿಗೆ ಬರುವ ಮುಂಚೆ (1985) ತಮಿಳುನಾಡಿನಲ್ಲಿ ನಿಮ್ಮ ತಂದೆಯವರು DMK ಪಕ್ಷದ ಜತೆ ಗುರುತಿಸಿಕೊಂಡಿದ್ದರು. ಅದರ ಬಗ್ಗೆ ಹೇಳಿ...
ವಿ ಬಾಲಕೃಷ್ಣನ್ ಪ್ರತಿಕ್ರಿಯೆ: ಹೌದು ನಮ್ಮ ತಂದೆಯವರು ರಾಜಕೀಯದಲ್ಲಿದ್ದರು. ಆದರೆ ಈ 3 ದಶಕಗಳ ನಂತರ AAP ಎಂಬ ಪ್ರಾಮಾಣಿಕ ಪಕ್ಷ ಅಸ್ತಿತ್ವಕ್ಕೆ ಬಂದಿದ್ದರಿಂದ ಮಾತ್ರವೇ ನಾನು ರಾಜಕೀಯಕ್ಕೆ ಬರುವಂತಾಗಿದೆ. ಇಂದು ಜನ ಪ್ರಾಮಾಣಿಕರಿಗೆ ಮಣೆ ಹಾಕುವುದು ಅನಿವಾರ್ಯವಾಗಿದೆ. AAP ಪ್ರಯತ್ನಗಳು ವಿಫಲವಾಗಬಾರದು. ಜನ ಇದನ್ನು ಮರೆಯಬಾರದು.

ನಾನು ಸಾಕಷ್ಟು ಚಿಂತನೆ ನಡೆಸಿದ ಬಳಿಕವೇ AAP ಮೂಲಕ ರಾಜಕೀಯಕ್ಕೆ ಬಂದಿರುವೆ. ನನ್ನ ಆಲೋಚನೆಗಳು ಸ್ಪಷ್ಟವಾಗಿವೆ. ಜನ ಕೈಬಿಡುವುದಿಲ್ಲವೆಂಬ ನಂಬಿಕೆ ನನಗಿದೆ. ಜನರ ಪ್ರತಿಕ್ರಿಯೆ ನೋಡುತ್ತಿದ್ದರೆ ಆಪ್ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕನಿಷ್ಠ 3 ಸ್ಥಾನಗಳಲ್ಲಿ ಗೆಲ್ಲುವುದು ಖಂಡಿತ. All the best Mr. V Balakrishnan.

English summary
Lok Sabha Election 2014 - Bangalore Central AAP candidate, ex Infosys Chief V Balakrishnan exclusive interview to Oneindia-kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X