ಬೆಂಗಳೂರಿನ ವಿವಿಧೆಡೆ ಎರಡು ದಿನ ವಿದ್ಯುತ್ ಕಡಿತ
ಬೆಂಗಳೂರು, ನವೆಂಬರ್ 26: ನಿವಾರ್ ಚಂಡಮಾರುತದಿಂದಾಗಿ ಬೆಂಗಳೂರು ಅಕ್ಷರಶಃ ಥಂಡಿ ಹಿಡಿದಿದೆ. ಚಳಿ, ಗಾಳಿಯ ವಾತಾವರಣ ಸೃಷ್ಟಿಯಾಗಿದ್ದು, ಇನ್ನು ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ಸಂಜೆ ವೇಳೆ ಭಾರಿ ಮಳೆಯ ನಿರೀಕ್ಷೆಯಿದ್ದು, ಶುಕ್ರವಾರ ಕೂಡ ಮಳೆ ಅಬ್ಬರಿಸಬಹುದು. ಜೋರಾಗಿ ಮಳೆ ಸುರಿಯುವುದರಿಂದ ಹೊರಗೆ ಓಡಾಡದೆ ಮನೆಯ ಒಳಗೇ ಕುಳಿತು ಸಮಯ ಕಳೆಯೋಣ ಎಂದು ಬೆಂಗಳೂರಿಗರು ಲೆಕ್ಕಾಚಾರ ಹಾಕಿದರೆ ಸ್ವಲ್ಪ ಕಷ್ಟ. ಏಕೆಂದರೆ ಶುಕ್ರವಾರ ನಗರದ ಅನೇಕ ಕಡೆಗಳಲ್ಲಿ ವಿದ್ಯುತ್ ಇರುವುದಿಲ್ಲ.
ಬೆಂಗಳೂರಿನ ಹಲವು ಭಾಗಗಳಲ್ಲಿ ಬೆಸ್ಕಾಂ ಶುಕ್ರವಾರ ಮತ್ತು ಶನಿವಾರ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯಗಳನ್ನು ನಡೆಸಲಿದೆ. ಮುಖ್ಯವಾಗಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ಹೇಳಿಕೆ ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ಕಡಿತ?
ವಿವೇಕಾನಂದ ನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ ಪೂರ್ವ, ಕತ್ರಿಗುಪ್ಪೆ ಮುಖ್ಯರಸ್ತೆ, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಐಟಿಐ ಲೇಔಟ್, ವಿದ್ಯಾಪೀಠ ವೃತ್ತ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್ ಕಡಿತವಾಗಲಿದೆ.
ಹೊಸಕೆರೆಹಳ್ಳಿ, ಮೂಕಾಂಬಿಕ ನಗರ 7ನೇ ಬ್ಲಾಕ್, ಬನಶಂಕರಿ 3ನೇ ಹಂತ, ವೆಂಕಟಪ್ಪ ಲೇಔಟ್, ದತ್ತಾತ್ರೇಯ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ಪೂರೈಕೆ ಇರುವುದಿಲ್ಲ.