ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಗೊಂದು ಹಸು: ಎಎಪಿ ರವಿಕೃಷ್ಣಾ ರೆಡ್ಡಿ ವಾಗ್ದಾನ

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 8: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಕ್ಷೇತ್ರದ ಜನತೆಗೆ ಮನೆಗೊಂದು ಹಸು ನೀಡುವುದರ ಜತೆಗೆ ಸಾಕಷ್ಟು ವಾಗ್ದಾನಗಳ ಮಹಾಪೂರವನ್ನೇ ಹರಿಸಿದ್ದಾರೆ.

21-ಅಂಶಗಳ ಸೂತ್ರವನ್ನು ಸಿದ್ಧಪಡಿಸಿಕೊಂಡಿರುವ ರವಿಕೃಷ್ಣಾ ರೆಡ್ಡಿ ತಾವು ಸಂಸದರಾಗಿ ಆಯ್ಕೆಯಾದರೆ ಕ್ಷೇತ್ರವನ್ನು ಸುಭಿಕ್ಷಗೊಳಿಸುವುದಾಗಿ ವಾಗ್ದಾನ ನೀಡಿದ್ದಾರೆ. ತಕ್ಷಣಕ್ಕೆ ಇವರ ಸೂತ್ರಗಳನ್ನು ಕೂಲಂಕಶವಾಗಿ ಪರಿಶೀಲಿಸಿದರೆ ರವಿ, ಕ್ಷೇತ್ರದ ಆಳ-ಅಗಲಗಳನ್ನು ಚೆನ್ನಾಗಿ ಬಲ್ಲವರಾಗಿ ಕಂಡುಬರುತ್ತಾರೆ. ಕ್ಷೇತ್ರವನ್ನು ಮಾದರಿಯಾಗಿ ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ರವಿ ಸಾಕಷ್ಟು ಲೆಕ್ಕಾಚಾರ ಹಾಕಿಕೊಂಡಂತಿದೆ.

ಮನೆಗೊಂದು ಹಸು ನೀಡುವುದು ತನ್ನ ಕರ್ತವ್ಯ ಎಂದು ಪರಿಭಾವಿಸುವ ರವಿಕೃಷ್ಣಾ ರೆಡ್ಡಿ, ಮನೆಗೊಂದು ಹಸು ಏಕೆ ಬೇಕು ಎಂಬುದಕ್ಕೆ ತಮ್ಮದೇ ಉದಾಹರಣೆ ನೀಡುತ್ತಾರೆ. ಅದು ನಿಜಕ್ಕೂ ಹೃದಯಸ್ಪರ್ಶಿ. (ವಿವಿಧ ಪಕ್ಷಗಳ ಪ್ರಣಾಳಿಕೆಗಳು)

ಅಷ್ಟೇ ಅಲ್ಲ ಇಲ್ಲಿನ ಒಂದೊಂದೂ ಸಮಸ್ಯೆಯನ್ನು ಅಧ್ಯಯನ ಮಾಡಿದ್ದು, ಅದಕ್ಕೆಲ್ಲಾ ಪರಿಹಾರಾರ್ಥವಾಗಿ ಸಿದ್ಧಸೂತ್ರವನ್ನೂ ಹೊಂದಿದ್ದಾರೆ ಅನ್ನಿಸುತ್ತದೆ. ಒಟ್ಟಿನಲ್ಲಿ ಇದನ್ನೆಲ್ಲಾ ಸಾಕಾರಗೊಳಿಸಲು ಇವರು ಹಾಲಿ ಸಂಸದ ಡಿಕೆ ಸುರೇಶ್ ಅವರ ವಿರುದ್ಧ ಗೆದ್ದುಬರಬೇಕಷ್ಟೇ. ಕ್ಷೇತ್ರದ ಜನತೆಗಾಗಿ ಆಮ್ ಆದ್ಮಿ ರವಿಕೃಷ್ಣಾ ರೆಡ್ಡಿ ಏನೆಲ್ಲಾ ಕೊಡಮಾಡಲಿದ್ದಾರೆ ಎಂಬುದರತ್ತ ಒಂದು ನೋಟ ಇಲ್ಲಿದೆ.

ಶುದ್ಧ ನೀರು ಎಲ್ಲರ ಹಕ್ಕು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಶುದ್ಧ ನೀರು ಎಲ್ಲರ ಹಕ್ಕು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಹಲವಾರು ನದಿಗಳು ಹರಿಯುವ ಈ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಈಗ ದುಡ್ಡು ಕೊಟ್ಟು ಕುಡಿಯುವ ನೀರಿನ ಕ್ಯಾನ್‌ಗಳನ್ನು ಕೊಂಡುಕೊಳ್ಳುತ್ತಿರುವುದು ಎಂಥ ವಿಪರ್ಯಾಸ ಅಲ್ಲವೇ? ನಮ್ಮ ನೀರಿನ ಮೂಲಗಳಾದ ನದಿ, ಹಳ್ಳ, ಕೆರೆ, ಬಾವಿಗಳನ್ನು ಅಭಿವೃದ್ದಿಯ ಹೆಸರಿನಲ್ಲಿ ಹಾಳುಮಾಡಿರುವ ಉಳ್ಳವರು ಹಣ ನೀಡಿ ನೀರು ಕೊಳ್ಳುವರು. ಆದರೆ ಎಷ್ಟು ಜನಕ್ಕೆ ಹೀಗೆ ಕಾಸು ಕೊಟ್ಟು ನೀರು ಕೊಳ್ಳುವ ಶಕ್ತಿ ಇದೆ? ಕಲುಷಿತ, ಅಶುದ್ಧ ನೀರನ್ನೇ ಕುಡಿಯುತ್ತಿರುವವರಿಗೆ ಶುದ್ಧವಾದ ಕುಡಿಯುವ ನೀರನ್ನು ಒದಗಿಸುವುದು ನನ್ನ ಮೊದಲ ಆದ್ಯತೆ.

ಮನೆಗೊಂದು ಹಸು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಮನೆಗೊಂದು ಹಸು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಒಂದು ಹಸು, ಆಡು ಕುರಿಗಳಂಥ ರಾಸುಗಳು ಹೇಗೆ ಇಡೀ ಒಂದು ಕುಟುಂಬವನ್ನು ಉಳಿಸಬಲ್ಲವು ಎಂಬುದು ವ್ಯವಸಾಯದ ಕುಟಂಬದಿಂದ ಬಂದ ನನಗೆ ಚೆನ್ನಾಗಿ ಗೊತ್ತು. ತನ್ನ ಗಂಡನ ಆದಾಯಕ್ಕೆ ಕೈ ಚಾಚದೆ ತಾನು ಸಾಕಿರುವ ಹಸುಗಳ ಹಾಲು ಮಾರಿ ನನ್ನನ್ನು ಇಂಜಿನಿಯರಿಂಗ್ ಓದಿಸಿದವಳು ನನ್ನ ತಾಯಿ. ಪ್ರತಿ ಮನೆಯ ತಾಯಂದಿರಿಗೂ ಕನಿಷ್ಠ ಒಂದೊಂದು ಹಾಲು ಕೊಡುವ ಹಸು ಸಾಕುವಂತೆ ವ್ಯವಸ್ಥೆ ಮಾಡುವುದು ನನ್ನ ಕರ್ತವ್ಯ.

ಹಳ್ಳಿಗಳಲ್ಲಿ ಪರಿಪೂರ್ಣತೆಯ ಬದುಕು: ರವಿಕೃಷ್ಣಾ ರೆಡ್ಡಿ

ಹಳ್ಳಿಗಳಲ್ಲಿ ಪರಿಪೂರ್ಣತೆಯ ಬದುಕು: ರವಿಕೃಷ್ಣಾ ರೆಡ್ಡಿ

ಗ್ರಾಮಗಳೇ ಈ ದೇಶದ ಬೆನ್ನೆಲುಬು ಎಂದು ನಂಬಿರುವಾಗ ಯಾಕೆ ಎಲ್ಲರೂ ನಗರಗಳನ್ನು ಸೇರಿಕೊಳ್ಳುತ್ತಾ ಗ್ರಾಮಗಳು ಬರಿದಾಗುತ್ತಿವೆ? ಒಮ್ಮೆ ಯೋಚಿಸಿ. ಹೊಲ ಮನೆ ಇರುವ ಮನೆಯವರ ಮಕ್ಕಳೂ ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು ಪಟ್ಟಣ ಸೇರಿದ್ದಾರೆ. ನೀವು ಮತ್ತು ನಿಮ್ಮ ಮಕ್ಕಳು ನಿಮ್ಮ ನಿಮ್ಮ ಹೊಲ ಮನೆಯಲ್ಲೇ ದುಡಿದು ಘನತೆಯಿಂದ ಬದುಕುವ ಅವಕಾಶ ಕಲ್ಪಿಸುವುದು ನಿಮ್ಮ ಪ್ರತಿನಿಧಿಯಾಗಲು ಬಯಸುತ್ತಿರುವ ನನ್ನ ಕರ್ತವ್ಯ.

ಹನಿ ನೀರಾವರಿ-ತುಂತುರು ನೀರಾವರಿ: ರವಿಕೃಷ್ಣಾ ರೆಡ್ಡಿ

ಹನಿ ನೀರಾವರಿ-ತುಂತುರು ನೀರಾವರಿ: ರವಿಕೃಷ್ಣಾ ರೆಡ್ಡಿ

ನನಗೆ ಚೆನ್ನಾಗಿ ಗೊತ್ತು. ನಿಮಗೂ ದುಡಿದು ಸ್ವಾಭಿಮಾನದಿಂದ ಬದುಕುವ ಆಸೆ ಇದೆ. ಸರಿಯಾದ ಮಳೆ ಬೆಳೆ ಇಲ್ಲ. ನೀರು ಈ ಹೊತ್ತಿನ ಕೃಷಿ ಚಟುವಟಿಕೆಗಳ ದೊಡ್ಡ ಸಮಸ್ಯೆ. ಸಾಲ-ಸೋಲ ಮಾಡಿ ಸಾವಿರ ಅಡಿ ಆಳಕ್ಕೆ ಬೋರ್‌ವೆಲ್ ಕೊರೆಸಿದರೂ ಸರಿಯಾಗಿ ನೀರು ಸಿಗುತ್ತಿಲ್ಲ. ಆದರೆ ಇರುವ ಸ್ವಲ್ಪ ಪ್ರಮಾಣದ ನೀರಿನಲ್ಲೇ ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳೆಯಲು ಸಾಧ್ಯವಿದೆ. ಇತ್ತೀಚೆಗೆ ಕೆಲವು ಕಡೆ ಟಮ್ಯಾಟೋ, ಬದನೇ ಕಾಯಿ, ಹುರಳಿ ಕಾಯಿ, ಕೋಸು- ಇಂಥ ಬೆಳೆಗಳಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿದ್ದಾರೆ. ಇನ್ನು ನೀವು ಬೆಳೆಯುವ ತರಕಾರಿ, ಹಿಪ್ಪುನೇರಳೆ, ಬಾಳೆ, ಎಲೆ ತೋಟ, ತೆಂಗು ಇತ್ಯಾದಿ ಬೆಳೆಗಳಿಗೆ ಯಾಕೆ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬಾರದು? ಇಡೀ ಕ್ಷೇತ್ರದ ಕೃಷಿಯನ್ನು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗೆ ಒಳಪಡಿಸುವುದು ನನ್ನ ಕನಸು. ಇದನ್ನು ನನಸು ಮಾಡಲು ನನಗೆ ಅವಕಾಶ ಕೊಡಿ.

ಸಮುದಾಯ ಸೌರ-ವಿದ್ಯುತ್: ರವಿಕೃಷ್ಣಾ ರೆಡ್ಡಿ ವಾಗ್ದಾನ

ಸಮುದಾಯ ಸೌರ-ವಿದ್ಯುತ್: ರವಿಕೃಷ್ಣಾ ರೆಡ್ಡಿ ವಾಗ್ದಾನ

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಏರುತ್ತಿದೆ; ಯಾವುದೇ ಹೊಸ ಉತ್ಪಾದನಾ ಯೋಜನೆಗಳೂ ಪ್ರಾರಂಭವಾಗುತ್ತಿಲ್ಲ. ಹಳ್ಳಿಗಳಲ್ಲಿ ಐದಾರು ಗಂಟೆಗಳೂ ಕರೆಂಟ್ ಇರುವುದಿಲ್ಲ. ಬೋರ್‌ವೆಲ್‌ಗಳಿಗೆ ಬೇಕಾದ 3-ಫೇಸ್ ಕರೆಂಟ್ ಕೊಡುವುದಿಲ್ಲ. ಇಂತಹ ವಾತಾವರಣದಲ್ಲಿ ನಮ್ಮ ಹಳ್ಳಿಗಳಲ್ಲೇ ವಿದ್ಯುತ್ ಉತ್ಪಾದಿಸುವ, ಅವರನ್ನು ಸ್ವಾವಲಂಬಿ ಮಾಡುವ "ಸಮುದಾಯ ಸೌರ-ವಿದ್ಯುತ್" ಯೋಜನೆಗಳನ್ನು ರೂಪಿಸಬೇಕಿದೆ. ಹಳ್ಳಿಗಳ ಕೆರೆ ಅಂಗಳದಲ್ಲಿ ಆ ಊರಿನ ಬೇಡಿಕೆಗೆ ತಕ್ಕಂತೆ ಒಂದೆರಡು ಎಕರೆಯಲ್ಲಿ ಸೌರಫಲಕಗಳನ್ನು ಅಳವಡಿಸಿ, ಅವುಗಳ ಉಸ್ತುವಾರಿಯನ್ನೂ ಗ್ರಾಮಪಂಚಾಯಿತಿಗೆ ನೀಡಿ, ಇಡೀ ಊರಿನ ದೀಪ ಮತ್ತು ಬೋರ್‌ವೆಲ್ ಮೋಟಾರ್‌ಗಳ ವಿದ್ಯುತ್ ಅಗತ್ಯವನ್ನು ಅಲ್ಲಿಯೇ ಪೂರೈಸಿಕೊಳ್ಳುವ ಕ್ರಾಂತಿಕಾರಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕನಸು ನನ್ನದು.

ಅಂತರ್ಜಲ ವೃದ್ಧಿ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಅಂತರ್ಜಲ ವೃದ್ಧಿ: ರವಿಕೃಷ್ಣಾ ರೆಡ್ಡಿ ವಾಗ್ದಾನ

ನಿಮ್ಮೂರಿನ ಹಳ್ಳ ಕೊಳ್ಳ, ಕೆರೆ ಕಟ್ಟೆ, ಬಾವಿಗಳಲ್ಲಿ ನೀರು ತುಂಬಿ ತುಳುಕಾಡುತ್ತಿತ್ತು. ಆದರೆ ಈಗ ಬೇಸಿಗೆ ಬಂತೆಂದರೆ ನಿಮ್ಮ ಮನೆ ಬಳಕೆಗೆ ಮತ್ತು ನಿಮ್ಮ ದನಕರುಗಳಿಗೆ ಬೇಕಾದ ನೀರಿಲ್ಲ ಎಂದು ನೀವು ಸಂಕಟ ಪಡುತಿದ್ದೀರಿ. ನನಗೆ ನಿಮ್ಮ ಸಂಕಟ ಖಂಡಿತಾ ತಿಳಿದಿದೆ. ಯಾಕೆ ಹೀಗಾಗಿದೆ? ಕಾಡಿನ ನಾಶ, ನಗರಗಳ ಬೆಳವಣಿಗೆ, ನಿಮ್ಮೂರಿನ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ ಇವೆಲ್ಲವೂ ಅಂತರ್ಜಲವನ್ನು ನಾಶ ಮಾಡಿವೆ. ಜಲದ ಕಣ್ಣನ್ನು ಕಿತ್ತು ಹಾಕಿವೆ. ಈ ಹೊತ್ತು ದೊಡ್ಡ ದೊಡ್ಡ ನದಿ ಹೊಳೆಗಳಿರಲಿ, ಚಿಕ್ಕಪುಟ್ಟ ಹಳ್ಳಗಳನ್ನೂ ಮರಳು ದಂಧೆಯವರು ಪಾತಾಳ ಕಾಣುವಂತೆ ಅಗೆದು ಜಲದ ಗರ್ಭಗಳನ್ನೇ ಕಿತ್ತು ಎಸೆದಿದ್ದಾರೆ. ಇಂಥ ವಿನಾಶಗಳನ್ನು ತಡೆದು ಮತ್ತೆ ಅಂತರ್ಜಲ ವೃದ್ಧಿಯ ಕಡೆಗೆ ಗಮನ ಹರಿಸುವುದು ನನ್ನ ಜವಾಬ್ದಾರಿ. ಶಿಂಷಾ, ಅರ್ಕಾವತಿ, ಕಾವೇರಿ ನದಿಗಳು ಹರಿಯುವ ಈ ಕ್ಷೇತ್ರದಲ್ಲಿ ನದಿಗಳಿಂದ ಕೆರೆಗಳಿಗೆ ನೀರು ತುಂಬಿಸುವ ಮತ್ತು ಆ ನೀರನ್ನು ಹನಿನೀರಾವರಿಗೆ ಮಾತ್ರ ಬಳಸುವ ಯೋಜನೆಗಳನ್ನು ರೂಪಿಸಬೇಕಿದೆ.

ಲಂಚವಿಲ್ಲದೆ ಸರ್ಕಾರಿ ಸವಲತ್ತು : ರವಿಕೃಷ್ಣಾ ರೆಡ್ಡಿ ವಾಗ್ದಾನ

ಲಂಚವಿಲ್ಲದೆ ಸರ್ಕಾರಿ ಸವಲತ್ತು : ರವಿಕೃಷ್ಣಾ ರೆಡ್ಡಿ ವಾಗ್ದಾನ

ಎಂದಾದರೂ ನಿಮ್ಮ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ನಿಮಗೆ ತಲುಪಬೇಕಾದ ಸರ್ಕಾರಿ ಸವಲತ್ತುಗಳನ್ನು ಪಾರದರ್ಶಕವಾಗಿ, ನ್ಯಾಯಬದ್ಧವಾಗಿ ತಲುಪಿಸಿವೆಯೇ? ನಮ್ಮೆದುರಿನ ನರಕಗಳಂತೆಯೇ ಕಾಣುವ ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳಲ್ಲಿ ನಿಮ್ಮ ಕೆಲಸಗಳು ಲಂಚವಿಲ್ಲದೆ, ಅಲೆದಾಟವಿಲ್ಲದೆ ಸುಲಭವಾಗಿ ಆಗುತ್ತಿವೆಯೇ? ಇದನ್ನು ಬದಲಿಸಿ, ಎಲ್ಲ ಸರ್ಕಾರಿ ಸವಲತ್ತು ಮತ್ತು ಸೌಲಭ್ಯಗಳನ್ನು ಪಾರದರ್ಶಕವಾಗಿ ನಿಮಗೆ ತಲುಪಿಸಿವುದು ನನ್ನ ಆದ್ಯ ಕರ್ತವ್ಯ.

ಕನಿಷ್ಠ ಅಗತ್ಯಗಳ ಪೂರೈಕೆ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಕನಿಷ್ಠ ಅಗತ್ಯಗಳ ಪೂರೈಕೆ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಕೊಳ್ಳುವ ಪ್ರತೀ ವಸ್ತುವಿಗೂ ನೀವು ತೆರಿಗೆ ಕಟ್ಟುತ್ತೀರಿ. ಆದರೆ ನಿಮ್ಮ ಊರುಗಳಿಗೆ ಉತ್ತಮವಾದ ರಸ್ತೆಗಳು ಇವೆಯೇ? ನಿಮ್ಮ ನಿತ್ಯದ ವ್ಯವಹಾರ ಓಡಾಟಗಳಿಗೆ ನಿಮ್ಮ ಮಕ್ಕಳ ಕೆಲಸ-ವಿದ್ಯಾಭ್ಯಾಸಗಳಿಗೆ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ಸುಗಳು ಬರುತ್ತಿವೆಯೇ? ನಿಮ್ಮ ಪ್ರತಿನಿಧಿಯಾಗಲು ಬಯಸಿರುವ ನಾನು ಇವು ನಿಮಗೆ ಒದಗಿಸಬೇಕಾದ ಕನಿಷ್ಠ ಅಗತ್ಯಗಳು ಎಂದು ನಂಬಿದ್ದೇನೆ ಹಾಗೂ ಇದನ್ನು ತಪ್ಪದೆ ಈಡೇರಿಸುತ್ತೇನೆ.

ಗುಣಮಟ್ಟದ ಸರ್ಕಾರಿ ಶಾಲಾ-ಕಾಲೇಜು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಗುಣಮಟ್ಟದ ಸರ್ಕಾರಿ ಶಾಲಾ-ಕಾಲೇಜು: ರವಿಕೃಷ್ಣಾ ರೆಡ್ಡಿ ವಾಗ್ದಾನ

ನಿಮ್ಮ ಮಕ್ಕಳು ಓದುತ್ತಿರುವ ಸರ್ಕಾರಿ ಶಾಲೆ ಕಾಲೇಜುಗಳಿಗೆ ಆಗಾಗ ಹೋಗಿ ಬರುವ ರೂಢಿ ನಿಮಗೆ ಇದೆಯೇ? ಅಲ್ಲಿ ನಿಮ್ಮ ಮಕ್ಕಳಿಗೆ ಸರಿಯಾದ ಶೌಚಾಲಯಗಳು ಹಾಗೂ ಕುಡಿಯುವ ನೀರು ಲಭ್ಯ ಇರುವುದೇ? ಖಂಡಿತಾ ಇರಲಾರದು. ಮುಂದೆ ಈ ದೇಶದ ಆಸ್ತಿ ಮತ್ತು ಶಕ್ತಿಗಳಾಗಲಿರುವ ನಿಮ್ಮ ಮಕ್ಕಳ ಶಾಲಾ-ಕಾಲೇಜುಗಳ ಸವಲತ್ತುಗಳ ಕಡೆಗೆ ನಿಗಾ ಇಡುವುದು ನನ್ನ ಕರ್ತವ್ಯ.

ಪ್ರತೀ ಹಳ್ಳಿಗೂ ಕಂಪ್ಯೂಟರ್ ಇರುವ ಗ್ರಂಥಾಲಯ: ರವಿಕೃಷ್ಣಾ ರೆಡ್ಡಿ

ಪ್ರತೀ ಹಳ್ಳಿಗೂ ಕಂಪ್ಯೂಟರ್ ಇರುವ ಗ್ರಂಥಾಲಯ: ರವಿಕೃಷ್ಣಾ ರೆಡ್ಡಿ

ಪ್ರತೀ ಗ್ರಾಮ ಪಂಚಾಯಿತಿಗಳಲ್ಲೂ ಇರುವ ಗ್ರಂಥಾಲಯಗಳನ್ನು ಮೇಲ್ಮಟ್ಟಕ್ಕೆ ಏರಿಸಿ, ಕನಿಷ್ಠ ಇಪ್ಪತ್ತು ಮಂದಿಯಾದರೂ ಒಟ್ಟಿಗೆ ಕುಳಿತುಕೊಳ್ಳುವಷ್ಟು ವಿಶಾಲವಾಗಿ ಗ್ರಂಥಾಲಯಗಳನ್ನು ಆಧುನಿಕವಾಗಿ ರೂಪಿಸುವುದು, ದಿನ ಪತ್ರಿಕೆಗಳನ್ನು ಓದಲು ಅವಕಾಶ ಸೃಷ್ಠಿಸುವುದು, ಮುಖ್ಯವಾಗಿ ಪಂಚಾಯಿತಿಗೆ ಹತ್ತು ಕಂಪ್ಯೂಟರ್ ಇರುವ ಲ್ಯಾಬ್ ಒಂದನ್ನು ಅಳವಡಿಸುವುದು ನನ್ನ ಕನಸು.

ರೇಷ್ಮೆ ಸೀರೆ ತಯಾರಿಸುವ ಉದ್ಯಮ: ರವಿಕೃಷ್ಣಾ ರೆಡ್ಡಿ

ರೇಷ್ಮೆ ಸೀರೆ ತಯಾರಿಸುವ ಉದ್ಯಮ: ರವಿಕೃಷ್ಣಾ ರೆಡ್ಡಿ

ಈ ಕ್ಷೇತ್ರದ ಎಲ್ಲ ತಾಲ್ಲೂಕುಗಳೂ ರೇಷ್ಮೆ ಬೆಳೆಗೆ ತುಂಬ ಹೆಸರುವಾಸಿ. ನಿಮ್ಮ ಗೂಡಿಗೆ ವೈಜ್ಞಾನಿಕವಾದ ಬೆಲೆ ದೊರಕುವಂತೆ ಮಾಡುವುದು, ಪ್ರತೀ ತಾಲ್ಲೂಕಿನಲ್ಲೂ ಸರ್ಕಾರಿ ರೇಷ್ಮೆ ನೂಲು ತೆಗೆಯುವ ಘಟಕಗಳನ್ನು ಆರಂಭಿಸುವುದು, ಕ್ಷೇತ್ರದಲ್ಲಿ ರೇಷ್ಮೆ ಸೀರೆ ತಯಾರಿಸುವ ಸರ್ಕಾರಿ ಉದ್ಯಮವೊಂದನ್ನು ಸ್ಥಾಪಿಸುವುದು ನನ್ನ ಮುಂದಿರುವ ಗುರಿ. ಈ ಕ್ಷೇತ್ರದ ಶ್ರೀಮಂತ ಜನ ತಮ್ಮ ಮನೆಗಳ ಮದುವೆ ಕಾರ್ಯಗಳಿಗೆ ದೂರದ ಕಂಚಿಗೆ ಸೀರೆ ತರಲು ಹೋಗುತ್ತಾರೆ. ರೇಷ್ಮೆ ಬೆಳೆಯುವ ಮತ್ತು ರೇಷ್ಮೆ ಸೀರೆಯ ಮಗ್ಗಗಳ ಈ ಕ್ಷೇತ್ರದಲ್ಲಿಯೇ ಅವರು ಉತ್ತಮ ಸೀರೆಗಳನ್ನು ಕೊಳ್ಳುವಂತಹ ಮಾರುಕಟ್ಟೆ ಸೃಷ್ಟಿಸಬೇಕು.

ವೀಳ್ಯೆದೆಲೆ ಬೆಳೆಗಾರರ ಕಷ್ಟ ನಿವಾರಣೆ: ರವಿಕೃಷ್ಣಾ ರೆಡ್ಡಿ

ವೀಳ್ಯೆದೆಲೆ ಬೆಳೆಗಾರರ ಕಷ್ಟ ನಿವಾರಣೆ: ರವಿಕೃಷ್ಣಾ ರೆಡ್ಡಿ

ವೀಳ್ಯೆದೆಲೆ ಬೆಳೆಯುವುದನ್ನು ಈ ಕ್ಷೇತ್ರದ ಕೆಲವು ಕುಟುಂಬಗಳು ದೇವರನ್ನು ಪೂಜಿಸುವ ಕಾರ್ಯದಂತೆ ಪರಮ ಪವಿತ್ರ ಎಂದು ನಂಬಿ ಎಲೆತೋಟಗಳನ್ನು ಕಾಪಾಡುತ್ತಿದ್ದಾರೆ. ನೀರಿನ ಕೊರತೆ ಮತ್ತು ಬೆಳೆಗೆ ಉತ್ತಮ ವಾತಾವರಣಗಳಿಲ್ಲದ ಕಾರಣ ಅತ್ಯಂತ ಸೂಕ್ಷ್ಮ ಬೆಳೆಯಾದ ವೀಳ್ಯೆದೆಲೆಯನ್ನು ಬೆಳೆಯುವವರು ಇಂದು ಕಡುಕಷ್ಟದಲ್ಲಿದ್ದಾರೆ. ಇವರ ಬಿಕ್ಕಟ್ಟುಗಳನ್ನು ನಿವಾರಿಸುವುದು ನನ್ನ ಕರ್ತವ್ಯ.

ಖಾಸಗಿ ಶಾಲೆಗಳ ಸುಧಾರಣೆ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಖಾಸಗಿ ಶಾಲೆಗಳ ಸುಧಾರಣೆ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನವೋದಯ ಮತ್ತು ಮೊರಾರ್ಜಿ ದೇಸಾಯಿ ಶಾಲೆಗಳು ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುವುದು, ಖಾಸಗಿ ಶಾಲೆಗಳ ಶುಲ್ಕದ ಬಗೆಗೆ ಹಾಗೂ ಖಾಸಗೀ ಶಾಲೆ ಕಾಲೇಜುಗಳ ಮೀಸಲಾತಿ ಪಾಲನೆಯ ಬಗೆಗೆ ಗಮನಕೊಡುವುದು ನನ್ನ ಪಾಲಿನ ಕರ್ತವ್ಯ.

ಉತ್ತಮ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳು

ಉತ್ತಮ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳು

ಈ ಕ್ಷೇತ್ರದ ಎಲ್ಲ ತಾಲ್ಲೂಕು ಹಾಗೂ ಕೆಲ ಹೋಬಳಿ ಕೇಂದ್ರಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸ್ಥಾಪನೆಯಾಗಿವೆ. ಈ ವರ್ಷದಿಂದ ಸಾತನೂರಿನಲ್ಲೂ ಒಂದು ಕಾಲೇಜು ಆರಂಭವಾಗಲಿದೆ. ಬಹುಪಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲ ಅತ್ಯಗತ್ಯ ಮೂಲಭೂತ ಸೌಕರ್ಯವಿರುವ ಕಟ್ಟಡಗಳೇ ಇಲ್ಲ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿ.ಯು. ಕಾಲೇಜುಗಳ ಕಟ್ಟಡಗಳಲ್ಲಿ ಪದವಿ ತರಗತಿಗಳು ನಡೆಯುತ್ತಿವೆ. ಇನ್ನು ಕುಡಿಯುವ ನೀರು, ಶೌಚಾಲಯ, ಅಗತ್ಯ ತರಗತಿ ಕೊಠಡಿಗಳು, ಅಧ್ಯಾಪಕ ಮತ್ತು ಕಚೇರಿ ಸಿಬ್ಬಂದಿ ಇಲ್ಲವೇ ಇಲ್ಲ. ನಿಮ್ಮ ಮಕ್ಕಳು ಹಾಗೂ ನಮ್ಮ ದೇಶದ ಹೊಸ ತಲೆಮಾರು ಹೀಗೆ ಕಾಲೇಜಿನ ವಾತಾವರಣವೇ ಇಲ್ಲದ ಕಡೆ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಇಂಥ ಉನ್ನತ ಶಿಕ್ಷಣ ಕೇಂದ್ರಗಳನ್ನು ಸುಧಾರಿಸುವುದು, ಉತ್ತಮ ಮಟ್ಟಕ್ಕೆ ಏರಿಸುವುದು ನನ್ನ ಪರಮ ಗುರಿ.

ಪ್ರತೀ ಮನೆಗೂ ಶೌಚಾಲಯ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಪ್ರತೀ ಮನೆಗೂ ಶೌಚಾಲಯ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಪ್ರತೀ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಿ ಈ ಕ್ಷೇತ್ರವನ್ನು ದೇಶದಲ್ಲೇ ಮಾದರೀ ಕ್ಷೇತ್ರವನ್ನಾಗಿ ಪರಿವರ್ತಿಸುವುದು ನನ್ನ ಗುರಿ.

ಹಾರೋಬೆಲೆ ಡ್ಯಾಮಿನ ಅಚ್ಚುಕಟ್ಟು ಪ್ರದೇಶ: ರವಿಕೃಷ್ಣಾ ರೆಡ್ಡಿ

ಹಾರೋಬೆಲೆ ಡ್ಯಾಮಿನ ಅಚ್ಚುಕಟ್ಟು ಪ್ರದೇಶ: ರವಿಕೃಷ್ಣಾ ರೆಡ್ಡಿ

ಹಾರೋಬೆಲೆ ಡ್ಯಾಮಿನ ಅಚ್ಚುಕಟ್ಟು ಪ್ರದೇಶಗಳಿಗೆ ವ್ಯವಸ್ಥಿತವಾಗಿ ನೀರು ಪೂರೈಸುವುದಲ್ಲದೆ ಸುತ್ತಮುತ್ತಲಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಿ, ಕೆರೆಗಳ ಹೂಳು ತೆಗೆಸಿ ಆ ಮೂಲಕ ಅಂತರ್ಜಲ ಅಭಿವೃದ್ಧಿಗೆ ಮುಂದಾಗುವುದು ನನ್ನ ಹಂಬಲ.

ಕಣ್ವ ಡ್ಯಾಂ ಪುನರುಜ್ಜೀವನ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಕಣ್ವ ಡ್ಯಾಂ ಪುನರುಜ್ಜೀವನ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಕಣ್ವ ನದಿ ಚನ್ನಪಟ್ಟಣದ ಕಣ್ಣು. ಈ ಕ್ಷೇತ್ರ ಬಹುಪಾಲು ಕೆರೆ ಬಾವಿಗಳಲ್ಲಿ ನೀರು ತುಂಬಿ ತುಳುಕುವುದಕ್ಕೆ, ಅಂತರ್ಜಲದ ಮಟ್ಟ ಸುಸ್ಥಿತಿಯಲ್ಲಿದ್ದುದ್ದಕ್ಕೆ ಕಾರಣವಾಗಿದ್ದ ಕಣ್ವ ಇಂದು ಬತ್ತಿ ಹೋಗಿದೆ. ಸುಮಾರು ಒಂದು ಟಿ.ಎಂ.ಸಿ. ಅಷ್ಟು ನೀರು ಸಂಗ್ರಹಿಸುತ್ತಿದ್ದ ಕಣ್ವ ಡ್ಯಾಂ ಸಂಪೂರ್ಣ ಬರಿದಾಗಿದೆ. ಯಾಕೆ ಹೀಗಾಯ್ತು? ಕಣ್ವ ನದಿಗುಂಟ ನಡೆದು ನೋಡಿದರೆ ಗೊತ್ತಾಗುತ್ತದೆ. ಮರಳಿಗಾಗಿ ನದಿಯ ಗರ್ಭವನ್ನು ಸೀಳಿಬಿಟ್ಟಿದ್ದಾರೆ. ಅದರ ಜಲಮೂಲವೇ ಮರಳು ಮಾಫಿಯಾದಿಂದ ನಾಶವಾಗಿದೆ. ಕಣ್ವ ನದೀಪಾತ್ರ ಹಾಗೂ ಅಣೆಕಟ್ಟಿನ ಅಚ್ಚುಕಟ್ಟು ವ್ಯಾಪ್ತಿಯ ತೋಟಗಳಲ್ಲಿ ಫಲಬಿಡುತ್ತಿದ್ದ ತೆಂಗಿನ ಮರಗಳು ಸುಳಿ ಒಣಗಿ ಬಾಡಿ ನಿಂತಿವೆ. ಈಗಾಗಲೇ ಕಾರ್ಯರೂಪಕ್ಕೆ ಬರುತ್ತಿರುವ ಇಗ್ಗಲೂರು ಬ್ಯಾರೇಜ್ ಯೋಜನೆಯ ಅಣೆಕಟ್ಟೆಯಿಂದ, ಕಣ್ವ ಡ್ಯಾಮನ್ನು ಪುನರುಜ್ಜೀವಗೊಳಿಸುವುದು, ಸುತ್ತಲಿನ ಕೆರೆಕುಂಟೆಗಳಿಗೆ ನೀರು ಭರ್ತಿ ಮಾಡಿಸಿವುದು, ಹಾಳುಬಿದ್ದಿರುವ ತೆಂಗಿನ ತೋಟಗಳನ್ನು ಅಭಿವೃದ್ಧಿ ಮಾಡುವುದು, ನನ್ನ ಕರ್ತವ್ಯ

ಕೆರೆ ಒತ್ತುವರಿಗಳ ತೆರವು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಕೆರೆ ಒತ್ತುವರಿಗಳ ತೆರವು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಬೆಂಗಳೂರಿನ ನೀರಿನ ಸಮಸ್ಯೆ ನೀಗಿಸಲು ಕೆರೆ ಒತ್ತುವರಿಗಳನ್ನು ತೆರವುಗೊಳಿಸಿ, ಮಳೆ ನೀರನ್ನು ವೈಜ್ಞಾನಿಕವಾಗಿ ಬಳಸುವ ವ್ಯವಸ್ಥೆ ಮಾಡಬೇಕಿದೆ. ಇಡೀ ನಗರದ ಬಹುಪಾಲು ನೀರಿನ ಅಗತ್ಯಗಳನ್ನು ಮಳೆ ನೀರು ನಿವಾರಿಸಬಹುದಾಗಿದೆ. ಆದರೆ ಕೊಳಚೆ ನೀರು ಮತ್ತು ಮಳೆ ನೀರು ಬೇರ್ಪಡದೆ ಒಂದೇ ಕೆರೆ-ಕಾಲುವೆಗಳಿಗೆ ಹರಿಯುವುದರಿಂದ ಇದು ಸಾಧ್ಯವಾಗುತ್ತಿಲ್ಲ. ಇದನ್ನು ಸಾಧ್ಯ ಮಾಡುವ ಮೂಲಕ ಬೆಂಗಳೂರಿನ ಮುಂದಿನ ದಿನಗಳ ನೀರಿನ ಸಮಸ್ಯೆಯನ್ನು ಇಂದೇ ನಿವಾರಿಸಬೇಕಿದೆ.

ಕೋಮು ಸೌಹಾರ್ದ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಕೋಮು ಸೌಹಾರ್ದ: ರವಿಕೃಷ್ಣಾ ರೆಡ್ಡಿ ವಾಗ್ದಾನ

ಅನೇಕ ಉಪ ಕಸುಬುಗಳು, ಕರಕುಶಲ ಕಲೆಗಳು, ಸಣ್ಣ ವ್ಯಾಪಾರಗಳನ್ನು ನಡೆಸುವ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಇಲ್ಲಿದ್ದಾರೆ. ರೇಷ್ಮೆ ನೂಲು ತೆಗೆಯುವ, ಬೀಡಿ ಸುತ್ತುವ, ಊದು ಬತ್ತಿ ತಯಾರಿಸುವಂತಹ ಇವರ ಸಣ್ಣ ವ್ಯಾಪಾರ ವ್ಯಾವಹಾರಗಳಿಗೆ ಪೂರಕ ಸಹಾಯಗಳನ್ನು ಮಾಡಬೇಕಿದೆ. ಅಲ್ಲದೆ ಮತೀಯ ಆತಂಕಗಳು, ಗಲಭೆಗಳು ಇಲ್ಲದ ಸೌಹಾರ್ದ ವಾತಾವರಣವನ್ನು ನಿರ್ಮಿಸುವುದು ನನ್ನ ಮತ್ತೊಂದು ಪ್ರಧಾನ ಆದ್ಯತೆ.

ಕಾಮಗಾರಿ ಪ್ರಾಮಾಣಿಕತೆ, ಪಾರದರ್ಶಕತೆ: ರವಿಕೃಷ್ಣಾ ರೆಡ್ಡಿ

ಕಾಮಗಾರಿ ಪ್ರಾಮಾಣಿಕತೆ, ಪಾರದರ್ಶಕತೆ: ರವಿಕೃಷ್ಣಾ ರೆಡ್ಡಿ

ಭ್ರಷ್ಟತೆಯ ನಿವಾರಣೆಯೇ ನಮ್ಮ ಪಕ್ಷದ ಧ್ಯೇಯ. ನಿಮ್ಮೂರುಗಳಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳು, ಚರಂಡಿಗಳು, ಸರ್ಕಾರಿ ಕಟ್ಟಡಗಳು, ಚೆಕ್ ಡ್ಯಾಮ್‌ಗಳು ಮೊದಲಾದ ಕಾಮಗಾರಿಗಳ ಗುಣಮಟ್ಟವನ್ನು ನೀವು ಎಂದಾದರೂ ಪರೀಕ್ಷಿಸಿದ್ದೀರ? ಇಲ್ಲ ಅಲ್ಲವೇ? ಇವುಗಳೆಲ್ಲ ನಿಮ್ಮ ಆಸ್ತಿಗಳೇ ಮತ್ತು ಇದನ್ನು ಪರೀಕ್ಷಿಸುವುದು ನಿಮ್ಮ ಕರ್ತವ್ಯ . ಅಲ್ಲವೆ? ಅವು ಖಂಡಿತಾ ಗುಣಾತ್ಮಕವಾಗಿಲ್ಲ. ಅಧಿಕಾರಿಗಳು, ಇಂಜಿನಿಯರ್‌ಗಳು, ಜನ ಪ್ರತಿಗಳು, ಮಂತ್ರಿಗಳು, ಕಂಟ್ರಾಕ್ಟ್‌ದಾರರು ಈ ಎಲ್ಲರ ಕಮಿಷನ್‌ಗಳನ್ನು ಭರ್ತಿ ಮಾಡಿ ಸುಸ್ತಾಗಿರುವ ಕಾಮಗಾರಿಗಳು ಇನ್ನೆಲ್ಲಿ ಗುಣಾತ್ಮಕವಾಗಿರಲು ಸಾಧ್ಯ? ಇಂಥ ಕಾಮಗಾರಿಗಳಲ್ಲಿ ಪ್ರಾಮಾಣಿಕ, ಪಾರದರ್ಶಕತೆಗಳನ್ನು ಕಾಪಾಡುವುದು ನನ್ನ ಗುರಿ.

ನನ್ನ ಕರ್ತವ್ಯ ಹಾಗೂ ಕನಸುಗಳು: ರವಿಕೃಷ್ಣಾ ರೆಡ್ಡಿ ವಾಗ್ದಾನ

ನನ್ನ ಕರ್ತವ್ಯ ಹಾಗೂ ಕನಸುಗಳು: ರವಿಕೃಷ್ಣಾ ರೆಡ್ಡಿ ವಾಗ್ದಾನ

ಈ ಎಲ್ಲ ಭರವಸೆಗಳೂ ನಿಮ್ಮ ಇಂದಿನ ಅಗತ್ಯಗಳನ್ನು ಕುರಿತದ್ದೇ ಆಗಿವೆ. ಇವುಗಳ ಜೊತೆಗೇ ನಿಮ್ಮ ಪ್ರತಿನಿಧಿಗಳು ಲೋಕಸಭೆಯಲ್ಲಿ ದೇಶ ಎದುರಿಸುತ್ತಿರುವ ಇತರ ಸಮಸ್ಯೆಗಳ ಬಗೆಗೂ ಗಮನಹರಿಸಿ ಚರ್ಚಿಸಬಲ್ಲವರಾಗಿರಬೇಕಿದೆ. ನನ್ನ ವಿದ್ಯಾರ್ಹತೆ ಮತ್ತು ದೇಶ-ವಿದೇಶಗಳಲ್ಲಿನ ನನ್ನ ಕೆಲಸದ ಅನುಭವ ನನಗೆ ಆ ತಯಾರಿ ನೀಡಿವೆ ಎಂದು ನಂಬಿದ್ದೇನೆ. ಇಂದಿಗೆ ನಮಗೆ ಅಷ್ಟೇನು ಮಹತ್ವದ್ದು ಅನ್ನಿಸದ ಭೂ-ತಾಪಮಾನ ಏರಿಕೆ ಮತ್ತು ಭೂ-ವಾತಾವರಣದ ಬದಲಾವಣೆಯ ಸಮಸ್ಯೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ನಮ್ಮ ಭವಿಷ್ಯತ್ತಿನ ಮೇಲೆ ಹಾಗೂ ಮುಂದಿನ ಪೀಳಿಗೆಯ ಮೇಲೆ ಅತ್ಯಂತ ಘೋರ ಪರಿಣಾಮ ಉಂಟುಮಾಡಲಿದೆ. ಮಳೆಯ ದಿನಚರಿ ಹಳಿತಪ್ಪಲಿದೆ, ನಮ್ಮ ನೈಸರ್ಗಿಕ ಸಂಪತ್ತು ಖಾಲಿಯಾಗಿರುತ್ತದೆ. ಹಾಗಾಗಿ ನೀವು ಆಯ್ಕೆ ಮಾಡಲಿರುವ ಲೋಕಸಭಾ ಸದಸ್ಯನಿಗೆ ನಿಮ್ಮ ಸದ್ಯದ ಸಮಸ್ಯೆಗಳು ಮಾತ್ರವಲ್ಲದೆ, ಮುಂದಿನ ಒಂದೆರಡು ದಶಕಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಅರಿವೂ ಇರಬೇಕಾಗುತ್ತದೆ. ಆತ ಜಗತ್ತು ಎದುರಿಸುವ ಸಮಸ್ಯೆಗಳನ್ನೂ ಅರ್ಥಮಾಡಿಕೊಳ್ಳಬೇಕಿದೆ. ಆ ಎಲ್ಲ ಅರ್ಹತೆಗಳೂ ನನ್ನಲ್ಲಿವೆ ಎಂದು ನಾನು ನಂಬಿದ್ದೇನೆ.

English summary
Lok Sabha Elections 2014- Bangalore Rural Candidate Ravi Krishna Reddy releases separate manifesto. Ravi Krishna Reddy Yesterday (April 7) released a separate manifesto for his constituency along with AAP Spokesperson Shantala Damle, Mahantesh Arali and other party members. While addressing the media Shri Ravi Krishna Reddy also said that the fight in Bangalore rural constituency is only between Congress & Aam Aadmi Party and he is very much confident of winning in his constituency by seeing people’s overwhelming response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X