• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಲಬ್ರೂಯಿ ಕಟ್ಟಡ ಒಡೆಯಲು ಮುಂದಾಗಿದ್ದು ನಿಜವೇ?

|

1850-60ರಲ್ಲಿ ನಿರ್ಮಾಣಗೊಂಡಿದ್ದ ಬೆಂಗಳೂರು ಸ್ಯಾಂಕಿ ರಸ್ತೆಯಲ್ಲಿರುವ ಪಾರಂಪರಿಕ ಬಾಲಬ್ರೂಯಿ ಅತಿಥಿಗೃಹ ಈಗ ವಿವಾದದ ಕೇಂದ್ರಬಿಂದು. ನವೆಂಬರ್ ಹದಿನೈದರಂದು ಈ ಕಟ್ಟಡ ನೆಲಸಮಗೊಳ್ಳಲು ಮಹೂರ್ತ ನಿಗದಿಯಾಗಿದ್ದು ಅಲ್ಲಿ ಲೆಜಿಸ್ಲೇಟಿವ್ ಕ್ಲಬ್ ತಲೆ ಎತ್ತಲಿದೆ ಎನ್ನುವುದೇ ಈಗ ಬಹು ಚರ್ಚೆಯ ವಿಷಯ.

ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಅತಿಥಿಗೃಹ ಕೆಡವುವ ಪ್ರಸ್ತಾವನೆ ಇತ್ತು. ಒಂದು ರೀತಿಯಲ್ಲಿ ಈ ವಿವಾದಕ್ಕೆ ನಾಂದಿ ಹಾಡಿದ್ದೇ ಅಂದಿನ ಜಗದೀಶ್ ಶೆಟ್ಟರ್ ಸರಕಾರ. ಆ ವೇಳೆ ಪರಿಸರವಾದಿಗಳು ಮತ್ತು ಸಾಹಿತಿಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಅದರ ತಂಟೆಗೆ ಸರಕಾರ ಹೋಗಿರಲಿಲ್ಲ.

ಸಿದ್ದರಾಮಯ್ಯ ಸರಕಾರ ಈಗ ಏನೇ ಸ್ಪಷ್ಟನೆ ನೀಡಿದರೂ, ಹದಿನಾಲ್ಕು ಎಕರೆ ವಿಸ್ತೀರ್ಣದ ಬಾಲಬ್ರೂಯಿ ಆವರಣದಲ್ಲಿ ಐಷಾರಾಮಿ ಲೆಜಿಸ್ಲೇಟಿವ್ ಕ್ಲಬ್ ನಿರ್ಮಿಸಲು ಸರಕಾರ ಈಗಾಗಲೇ ಹಸಿರು ತೋರಿದೆ. ಹಾಗಾಗಿ ವಿವಾದ ಮತ್ತೆ ತಲೆ ಎತ್ತಿದೆ, ಪ್ರತಿಭಟನೆಗಳೂ ನಡೆಯುತ್ತಿವೆ. ಸಾಮಾಜಿಕ ತಾಣದಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಟಿ ಬಿ ಜಯಚಂದ್ರ ನೀಡಿರುವ ಹೇಳಿಕೆ ಕೂಡಾ ವ್ಯತಿರಿಕ್ತವಾಗಿದೆ. ಯಾಕೆ ಈ ರೀತಿಯ ಸುದ್ದಿ ಹರಿದಾಡುತ್ತಿದೆಯೋ, ಸರಕಾರದ ಮುಂದೆ ಇದರ ಪ್ರಸ್ತಾವನೆಯೇ ಇಲ್ಲ, ಇದು ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. (ಬಾಲಬ್ರೂಯಿ ಅತಿಥಿ ಗೃಹ ನೆಲಸಮಗೊಳಿಸಲ್ಲ : ಸಿಎಂ)

ಆದರೆ ಕಾನೂನು ಸಚಿವರು ನೀಡುವ ಹೇಳಿಕೆ ಇನ್ನೊಂದು. ಸುಮಾರು ನೂರಕ್ಕೂ ಹೆಚ್ಚು ಶಾಸಕರು ಪ್ರಸ್ತಾವಿತ ಕ್ಲಬ್ಬಿಗೆ ಸದಸ್ಯರಾಗಿದ್ದಾರೆ. ಬಾಲಬ್ರೂಯಿ ಆವರಣದಲ್ಲಿ ಶಾಸಕರ ಕ್ಲಬ್ ನಿರ್ಮಾಣಕ್ಕೆ ಯೋಜಿಸಿರುವುದು ನಿಜ. ಆದರೆ ಬಾಲಬ್ರೂಯಿ ಕಟ್ಟಡ ಕೆಡವಿ ಕ್ಲಬ್ ನಿರ್ಮಿಸುವುದಿಲ್ಲ. ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಜಯಚಂದ್ರ ಹೇಳಿಕೆ ನೀಡುತ್ತಾರೆ.

ಈ ಕಟ್ಟಡದ ನಿರ್ವಹಣೆ ಲೋಕೋಪಯೋಗಿ ಇಲಾಖೆಯದ್ದಾದರೂ ಇದು ಸಿಎಂ ನೇರ ಅಧೀನದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಅಡಿಯಲ್ಲಿ ಬರುತ್ತದೆ. ಮುಖ್ಯಮಂತ್ರಿಗಳು ಈಗ ಏನು ಹೇಳಿಕೆ ನೀಡಿದರೂ, ಈ ಅದ್ಭುತ ವಾಸ್ತುಶಿಲ್ಪದ ಕಟ್ಟಡದ ತಂಟೆಗೆ ಸರಕಾರ ಹೋಗಿರುವುದಂತೂ ನಿಜ.

ಸದಸ್ಯತ್ವ ಶುಲ್ಕವೆಷ್ಟು: ಶಾಸಕರು, ಸಂಸದರು, ಮಾಜಿ ಶಾಸಕರು/ಸಂಸದರಿಗೆ ಮೀಸಲಾಗಿರುವ ಈ ಪ್ರಸ್ತಾವಿತ ಮೋಜಿನ ಕ್ಲಬ್ಬಿಗೆ 10 ಸಾವಿರ ನೀಡಿ ಸದಸ್ಯತ್ವವನ್ನು ಈಗಾಗಲೇ ನೂರಕ್ಕೂ ಹೆಚ್ಚು ಜನಪ್ರತಿನಿಧಿಗಳು ಪಡೆದಿರುವುದು ಅಷ್ಟೇ ನಿಜ. 10 ಕೊಠಡಿ, ವಿಶಾಲವಾದ ಅಡುಗೆ ಕೋಣೆ, ಊಟದ ಹಾಲ್, ಈಜುಕೊಳ, ಒಳಾಂಗಣ ಕ್ರೀಡಾಂಗಣ, ಲೈಬ್ರೆರಿ, ಅತಿಥಿಗಳಿಗಾಗಿ ವಿಶೇಷವಾಗಿ ನಿರ್ಮಿಸಿರುವ ಕೊಠಡಿ, 140ಕ್ಕೂ ಹೆಚ್ಚು ಮರಗಳು ಬಾಲಬ್ರೂಯಿ ಆವರಣದಲ್ಲಿದೆ.

ಇಲ್ಲಿ ತಂಗಿದ್ದ ಗಣ್ಯರು: 1850-60ರಲ್ಲಿ ಅವಧಿಯಲ್ಲಿ ಈ ಐತಿಹಾಸಿಕ ಮತ್ತು ಪಾರಂಪರಿಕ ಬಾಲಬ್ರೂಯಿ ಕಟ್ಟಡ ನಿರ್ಮಾಣವಾಗಿತ್ತು. ಹತ್ತು ಕೊಠಡಿಗಳನ್ನು ಹೊಂದಿರುವ ಈ ಅತಿಥಿಗೃಹ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಮೆಚ್ಚಿನ ನಿವಾಸವಾಗಿತ್ತು, ಅಲ್ಲದೇ ಇಲ್ಲಿಂದಲೇ ಆಡಳಿತ ನಡೆಸುತ್ತಿದ್ದರು.

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಬಿ ಡಿ ಜತ್ತಿ ಬೆಂಗಳೂರಿಗೆ ಬಂದಾಗ ಇಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಅಲ್ಲದೇ, ಇದು ಮಾಜಿ ಸಿಎಂ ನಿಜಲಿಂಗಪ್ಪ ಮತ್ತು ಎಸ್ ಆರ್ ಬೊಮ್ಮಾಯಿ ಅವರ ಅಧಿಕೃತ ಮನೆಯಾಗಿತ್ತು ಕೂಡಾ.

ನೂರು ಕೋಟಿ ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಹತ್ತು ಹಲವು ಸೌಲಭ್ಯವಿರುವ ಈ ಲೆಜೆಸ್ಲೇಟಿವ್ ಕ್ಲಬ್ಬಿನ ರೂಪುರೇಷೆ ಈಗಾಗಲೇ ಒಂದು ಹಂತಕ್ಕೆ ಬಂದಿರುವುದಂತೂ ನಿಜ. ಮದ್ಯಪಾನಕ್ಕೆ ಅಲ್ಲಿ ಸದ್ಯ ಅವಕಾಶ ನೀಡದೇ ಇರಲು ಸರಕಾರ ನಿರ್ಧರಿಸಿದೆ ಎನ್ನುವ ಸುದ್ದಿಯೂ ಇದೆ.

ಆದರೆ, ಜನಪ್ರತಿನಿಧಿಗಳಿಂದ ಒತ್ತಡ ಬಂದರೆ ಮದ್ಯಪಾನದ ವಿಚಾರದಲ್ಲಿ ಸರಕಾರ ಯೋಚಿಸಲು ನಿರ್ಧರಿಸಿದೆ ಎನ್ನುವ ಸುದ್ದಿಯನ್ನು ಪ್ರಮುಖ ದೈನಿಕವೊಂದು ಪ್ರಕಟಿಸಿದೆ.

ಶಾಸಕರ ಮನರಂಜನೆಗೆ ಬಾಲಬ್ರೂಯಿ ಕಟ್ಟಡವನ್ನೂ ಬಳಸಬಹುದು. ಆದರೆ ಇದನ್ನು ಒಡೆಯುವ ಉದ್ದೇಶ ಇಲಾಖೆಯಲ್ಲಿಲ್ಲ, ಅಗತ್ಯ ಬಿದ್ದಲ್ಲಿ ಕಟ್ಟಡವನ್ನು ನವೀಕರಿಸಬಹುದು ಎಂದು ಲೋಕೋಪಯೋಗಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.

ಬಾಲಬ್ರೂಯಿ ಎನ್ನುವ ಪಾರಂಪರಿಕ ಕಟ್ಟಡ ಜನಪ್ರತಿನಿಧಿಗಳ ಮೋಜಿನ ತಾಣವಾಗದೇ ಇರಲಿ, ನಮ್ಮ ನಿಮ್ಮ ತೆರಿಗೆ ಹಣ ಪೋಲಾಗದಿರಲಿ. ಈ ಕಟ್ಟಡದ ತಂಟೆಗೆ ಹೋಗುವುದಿಲ್ಲ ಎನ್ನುವ ಸಿದ್ದರಾಮಯ್ಯ ತಾವು ನೀಡಿದ್ದ ಹೇಳಿಕೆಗೆ ಅಂಟಿಕೊಳ್ಳಲಿ ಎನ್ನುವುದು ಎಲ್ಲರ ಆಶಯ.

English summary
Iconic Balabrooie guest house in heart of Bangalore faces demolition, wish Chief Minister Siddaramaiah stand on his statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more