ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ಕು ದಿನಗಳ ಕಾಲ ಆಟೋ ರಿಕ್ಷಾ ಬಂದ್

By Mahesh
|
Google Oneindia Kannada News

ಬೆಂಗಳೂರು, ಜ.19: ಆಟೋ ಗ್ಯಾಸ್ ದರ ಹೆಚ್ಚಳ ಖಂಡಿಸಿ, ಆಟೋ ಚಾಲಕರು ಮಧ್ಯರಾತ್ರಿಯಿಂದ ಮಧ್ಯರಾತ್ರಿ ತನಕ ಒಂದು ದಿನ ಮುಷ್ಕರ ಮಾಡಿ ಫಲಸಿಗದ ಕಾರಣ ರೊಚ್ಚಿಗೆದ್ದಿದ್ದಾರೆ. ಬೆಲೆ ಏರಿಕೆ ಖಂಡಿಸಿ ಸೋಮವಾರ(ಜ.20) ರಿಂದ ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಲು ವಿವಿಧ ಆಟೋರಿಕ್ಷಾ ಸಂಘಟನೆಗಳು ಮುಂದಾಗಿವೆ.

ಆಟೋ ಎಲ್ ಪಿಜಿ ಸಿಲಿಂಡರ್ ದರ ಇಳಿಕೆಗೆ ಆಗ್ರಹಿಸಿ ಜ.6ರಂದು ಒಂದು ದಿನ ಪ್ರತಿಭಟನೆ ನಡೆಸಿದ್ದ ಬೆಂಗಳೂರು ನಗರ ಆಟೋ ಚಾಲಕರು ಸೋಮವಾರದಿಂದ ಮತ್ತೆ ನಾಲ್ಕು ದಿನ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ವಿವಿಧ ಆಟೋ ಚಾಲಕರ ಸಂಘಟನೆಗಳ ನಡುವೆ ಒಮ್ಮತ ಇನ್ನೂ ಮೂಡಿಲ್ಲ. ಆದರೆ, ಮುಷ್ಕರ ನಡೆಸುವುದು ನಿಶ್ಚಿತ ಎಂದು ಆದರ್ಶ ಆಟೊ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಎಂ.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರ ಡಿ.31ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಆಟೋ ಗ್ಯಾಸ್ ದರದಲ್ಲಿ 11.50 ರೂ. ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ದಿಢೀರನೆ 54.58ರೂ. ಇದ್ದ ಎಲ್ ಪಿಜಿ ಗ್ಯಾಸಿನ ಬೆಲೆ ಹೆಚ್ಚಳವಾಗಿತ್ತು. ಪ್ರಸ್ತುತ ದರ 65.58 ರು.ಗೆ ಏರಿದೆ. ಬೆಲೆ ಏರಿಕೆಯಿಂದ ಜೀವನೋಪಾಯ ಕಷ್ಟವಾಗಿದ್ದು, ಸರ್ಕಾರ ಕೂಡಲೇ ಗ್ಯಾಸ್ ದರ ಇಳಿಸ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಮಂಜುನಾಥ್ ತಿಳಿಸಿದರು.[ಮುಷ್ಕರ : ಮಧ್ಯರಾತ್ರಿಯಿಂದ ಮಧ್ಯರಾತ್ರಿ ತನಕ]

Four Day Autos strike in Bangalore From Monday

ಮುಷ್ಕರದ ದಿನ ಫ್ರೀಡಂಪಾರ್ಕ್ ನಲ್ಲಿ ವಿವಿಧ ಆಟೋ ಸಂಘಟನೆ ಕಾರ್ಯಕರ್ತರು ಬೃಹತ್ ಸಭೆ ಸೇರಿ, ಅಲ್ಲಿಂದ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ, ಆಟೋ ಗ್ಯಾಸ್ ದರ ಹೆಚ್ಚಳ ನಿರ್ಣಯವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಲಾಗುವುದು ಎಂದು ಮಂಜುನಾಥ್ ಹೇಳಿದ್ದಾರೆ.

ಜ.20ರಿಂದ 24ರವರೆಗೆ ಆಟೋ ಚಾಲಕರ ಧರಣಿ ನಡೆಯಲಿದ್ದು, ಈ ನಾಲ್ಕು ದಿನ ಆಟೋ ಅವಲಂಬಿತ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಬಿಎಂಟಿಸಿ ಬಸ್ ಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ.

ಬೇಡಿಕೆಗಳೇನು?: ಆಟೋ ಗ್ಯಾಸ್ ಬೆಲೆ ನಿಯಂತ್ರಣಗೊಳಿಸಿ ರಾಜ್ಯ ಸರಕಾರ ವಿಸುವ ಸೆಸ್ ಕಡಿಮೆ ಮಾಡಬೇಕು. ಆರ್ ಟಿಒ ಪೊಲೀಸರು ಆಟೋಗಳ ಮೇಲೆ ದಾಖಲಿಸಿರುವ ಕೇಸ್ ಗಳನ್ನು ರದ್ದುಪಡಿಸಬೇಕು. ಎಲ್ಲ ಆಟೋಚಾಲಕರಿಗೆ ಬಿಡಿಎ ಮತ್ತು ಹೌಸಿಂಗ್ ಬೋರ್ಡ್ ನಿಂದ ಮನೆ ನೀಡುವ ಯೋಜನೆ ರೂಪಿಸಬೇಕು. ಆಟೋ ಗ್ಯಾಸ್ ದರ ಇಳಿಕೆ ಮತ್ತು ಪ್ರತಿ ಲೀಟರ್ ಆಟೋ ಎಲ್ ಪಿಜಿ ಮೇಲೆ ವಿಧಿಸಲಾಗುತ್ತಿರುವ ಶೇ.14.5ರಷ್ಟು ವ್ಯಾಟ್ ಕಡಿಮೆ ಮಾಡಬೇಕು.

ಎರಡು ಸ್ಟ್ರೋಕ್ ಆಟೊಗಳಿಗೆ ಡಿಜಿಟಲ್ ಮೀಟರ್ ಉಚಿತವಾಗಿ ನೀಡಬೇಕು. ಮತ್ತು ಹಳೆ ಆಟೋಗಳ ಬದಲಿಗೆ ಹೊಸ ಆಟೋರಿಕ್ಷಾ ಕೊಳ್ಳಲು 30 ಸಾವಿರ ರೂ. ಸಹಾಯ ಧನ ನೀಡಬೇಕು. ನಿರುದ್ಯೋಗಿ ಅಲ್ಪ ಸಂಖ್ಯಾತ, ಹಿಂದುಳಿದ ವರ್ಗಗಳ ಯುವಕರಿಗೆ ಆಟೊ ಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ನೀಡಬೇಕೆಂದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಕರ್ನಾಟಕ ರಾಜೀವ್‌ಗಾಂಧಿ ಆಟೋ ಚಾಲಕರ ವೇದಿಕೆ, ಜೈ ಕರ್ನಾಟಕ ಆಟೋ ಘಟಕ, ಕರವೇ ಆಟೋ ಘಟಕ, ಕರ್ನಾಟಕ ಜನಾಶ್ರಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಬೃಹತ್ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಮತ್ತು ಅಖಿಲ ಕರ್ನಾಟಕ ಶ್ರಮಜೀವಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತಿತರ ಸಂಘಟನೆಗಳು ಬೆಂಬಲ ನೀಡುವ ನಿರೀಕ್ಷೆಯಿದೆ.

English summary
Bangaloreans will be in trouble as auto rickshaw drivers decided to go on strike from Monday, Jan 19. According to sources, it would be a 4-days strike against LPG price hike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X