ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇಸ್‌ಕೋರ್ಸ್ ಸ್ಥಳಾಂತರ: ಸರ್ಕಾರದ ದ್ವಂದ್ವ ನೀತಿ ಯಾಕೆ? ಇಲ್ಲಿದೆ ಮಾಹಿತಿ!

|
Google Oneindia Kannada News

ಬೆಂಗಳೂರು, ಸೆ. 25: ಸರ್ಕಾರದ ದ್ವಂದ್ವ ನೀತಿಯಿಂದಾಗಿ ಕಳೆದ 52 ವರ್ಷಗಳಿಂದ ಬೆಂಗಳೂರಿನಿಂದ ಹೊರಗೆ ರೇಸ್‌ಕೋರ್ಸ್ ಸ್ಥಳಾಂತರ ಸಾಧ್ಯವಾಗಿಲ್ಲ. ಸ್ಥಳಾಂತರದ ಕುರಿತು ಬರಿ ಚರ್ಚೆಗಳು ನಡೆದಿವೆಯೇ ಹೊರತು ಯಾವುದೇ ಪ್ರಯತ್ನಗಳಾಗಿಲ್ಲ. ಜೊತೆಗೆ ಸರ್ಕಾರ ರೇಸ್‌ಕೋರ್ಸ್ ವಿಚಾರದಲ್ಲಿ ದ್ವಂದ್ವನೀತಿಯನ್ನು ಅನುಸರಿಸುತ್ತಿರುವುದು ಸರ್ಕಾರದ ಸಮಿತಿಯ ವರದಿಯಿಂದಲೇ ಬಹಿರಂಗವಾಗಿದೆ.

ಬೆಂಗಳೂರಿನಲ್ಲಿ ಅತಿಕ್ರಮಣ ಎಂದು ಸ್ಲಂಗಳಿಂದ ಬಡವರನ್ನು ಒಕ್ಕಲೆಬ್ಬಿಸುವ, ಸೈಟ್‌ನಿಂದ ಒಂಚೂರು ಮುಂದೆ ಬಂದಿದ್ದರೂ ಮನೆಯನ್ನು ಜೆಸಿಬಿಗಳಿಂದ ಬೀಳಿಸುವ ಸರ್ಕಾರಕ್ಕೆ, ರೇಸ್‌ಕೋರ್ಸ್ ಸ್ಥಳಾಂತರ ಮಾಡಲು ಕಾನೂನಿನಲ್ಲಿ ಅವಕಾಶ ಇದ್ದರೂ ಅದನ್ನು ಮಾಡದೇ ಇರುವುದು ಕೂಡ ನಿಗೂಢವಾಗಿದೆ. ಒಂದೆಡೆ ಭೂಬಾಡಿಗೆ ಕಟ್ಟಿಲ್ಲ ಎಂದು ಸುಪ್ರಿಂಕೋರ್ಟ್ ಮೊರೆ ಹೋಗಿರುವ ರಾಜ್ಯ ಸರ್ಕಾರ, ಮತ್ತೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರೇಸ್‌ಕೋರ್ಸ್ ಲೈಸನ್ಸ್‌ ನವೀಕರಣಕ್ಕೆ ಅನುಮೋದನೆ ಕೊಟ್ಟಿರುವುದು ವಿಷಾದನೀಯ ಎಂದು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ತಿಳಿಸಿದೆ.

ಮೈಸೂರು ರೇಸ್ ಕೋರ್ಸ್ ಲೈಸೆನ್ಸಿಂಗ್ ಆ್ಯಕ್ಟ್ 1952ನ್ನು ರೇಸ್‌ಕೋರ್ಸ್ ಉಲ್ಲಂಘನೆ ಮಾಡಿದೆ. ಆದರೂ ರೇಸ್‌ಕೋರ್ಸ್ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಯಾಕೆ ಮುಂದಾಗುತ್ತಿಲ್ಲ ಎಂಬುದು ನಿಗೂಢ ರಹಸ್ಯವಾಗಿದೆ. ಮತ್ತೊಂದೆಡೆ ಬಾಡಿಗೆ ವಸೂಲಿ, ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಇಲಾಖೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಆದರೆ ಪ್ರಕರಣ ದಾಖಲಿಸಿ 9 ತಿಂಗಳಾದರೂ ಅರ್ಜಿ ವಿಚಾರಣೆಗೆ ಬಂದಿಲ್ಲ. ಆ ಬಗ್ಗೆ ಕೋರ್ಟ್‌ ಗಮನೆ ಸೆಳೆಯಲು ರಾಜ್ಯ ಕಾನೂನು ಇಲಾಖೆ ಗಮನ ಹರಿಸದೇ ಇರುವುದು ಸೋಜಿಗಕ್ಕೆ ಕಾರಣವಾಗಿದೆ. ಒಟ್ಟಾರೆ ರೇಸ್‌ಕೋರ್ಸ್ ಪ್ರಹಸನದ ವಿವರ ಇಲ್ಲಿದೆ!

ಕನಿಷ್ಠ ಭೂ ಬಾಡಿಗೆ ಕಟ್ಟದ ರೇಸ್‌ಕೋರ್ಸ್

ಕನಿಷ್ಠ ಭೂ ಬಾಡಿಗೆ ಕಟ್ಟದ ರೇಸ್‌ಕೋರ್ಸ್

ಬೆಂಗಳೂರು ರೇಸ್‌ಕೋರ್ಸ್ ಸರ್ಕಾರಕ್ಕೆ ಕಟ್ಟಬೇಕಾಗಿರುವ 36.63 ಕೋಟಿ ರೂ. ಬಾಡಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದೆ. ಅದು ಕೂಡ ರಾಜ್ಯ ಆರ್ಥಿಕ ಇಲಾಖೆ 2018-19ನೇ ಸಾಲಿನವರೆಗೆ ನಿಗದಿ ಮಾಡಿದ್ದ ಬಾಡಿಗೆ ಮೊತ್ತ ಅದಾಗಿದ್ದು, ಆ ಬಳಿಕದ ಬಾಡಿಗೆಯನ್ನು ಆರ್ಥಿಕ ಇಲಾಖೆ ಇನ್ನೂ ಲೆಕ್ಕ ಹಾಕಬೇಕಿದೆ. ರೇಸ್ ಕೋರ್ಸ್ ಲೀಸ್ ಅವಧಿ 2010ರಲ್ಲಿಯೇ ಮುಕ್ತಾಯವಾಗಿದೆ.


ಲೀಸ್ ಅವಧಿ ಮುಕ್ತಾಯವಾದ ದಿನದಿಂದ 22.09. 2010ರವರೆಗೆ ತಿಂಗಳಿಗೆ 5 ಲಕ್ಷ ರೂ. ಬಾಡಿಗೆಯನ್ನು ನಿಗದಿ ಮಾಡಲಾಗಿತ್ತು. ಆ ಮೊತ್ತ 45 ಲಕ್ಷ ರೂ.ಗಳು ಹಾಗೂ 2010-11 ರಿಂದ 2018-19ರ ಅವಧಿಗೆ 2017ರಲ್ಲಿ ನಿಗದಿ ಮಾಡಲಾಗಿದ್ದ ರೇಸ್‌ಕೋರ್ಸ್ ಆದಾಯದ ಶೇಕಡಾ 2 ರಷ್ಟು ಹಣ ಅಂದರೆ 38,51,57,015 ರೂ.ಗಳಲ್ಲಿ 2,33,46,000 ರೂ.ಗಳನ್ನು ಮಾತ್ರ ಸಂದಾಯ ಮಾಡಿದೆ. ಉಳಿದ 36.63 ಕೋಟಿ ರೂ.ಗಳು ಸೇರಿದಂತೆ 2019 ರಿಂದ ಈಗಿನವರೆಗಿನ ಬಾಡಿಗೆಯನ್ನು ವಸೂಲಿ ಮಾಡುವಲ್ಲಿ ಆರ್ಥಿಕ ಇಲಾಖೆ ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಡಿಗೆ ವಸೂಲಿಗೆ ಸುಪ್ರೀಂಕೋರ್ಟ್‌ಗೆ ಮೊರೆ

ಬಾಡಿಗೆ ವಸೂಲಿಗೆ ಸುಪ್ರೀಂಕೋರ್ಟ್‌ಗೆ ಮೊರೆ

ಬಾಡಿಗೆ ವಸೂಲಿಗೆ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಆರ್ಥಿಕ ಇಲಾಖೆ ಅಫಿಡವಿಟ್ ಸಲ್ಲಿಕೆ ಮಾಡಿದೆ. ಆದರೆ ಈವರೆಗೂ ಪ್ರಕರಣದ ವಿಚಾರಣೆ ನಡೆದಿಲ್ಲ ಎಂಬುದು ಕೂಡ ಸಮಿತಿ ವರದಿಯಲ್ಲಿದೆ. ಹೀಗಾಗಿ ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಪಾರಸು ಮಾಡಿದೆ.


ರೇಸ್‌ಕೋರ್ಸ್ ಜೊತೆಗಿನ ಸಮಸ್ಯೆ ಕುರಿತು ಸರ್ಕಾರ 14.02.2020 ರಂದು ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಅರ್ಜಿ ವಿಚಾರಣೆಗೆ ಬಂದಿಲ್ಲ. ಅರ್ಜಿ ಸಲ್ಲಿಸಿ ಈಗಾಗಲೇ 9 ತಿಂಗಳುಗಳಾಗಿವೆ. ಹೀಗಾಗಿ ರಾಜ್ಯದ ಅಡ್ವೊಕೇಟ್ ಜನರಲ್ ಅವರೊಂದಿಗೆ ಹಾಗೂ ಕಾನೂನು ಇಲಾಖೆ ತಜ್ಞರೊಂದಿಗೆ ಚರ್ಚಿಸಿ ತ್ವರಿತ ವಿಚಾರಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಆರ್ಥಿಕ ಇಲಾಖೆಗೆ ಸಮಿತಿ ಸೂಚಿಸಿದೆ.

ರೇಸ್‌ಕೋರ್ಸ್ ಪರವಾನಗಿ ರದ್ದು!

ರೇಸ್‌ಕೋರ್ಸ್ ಪರವಾನಗಿ ರದ್ದು!

ಮೈಸೂರು ರೇಸ್‌ಕೋರ್ಸ್ ಲೈಸನ್ಸಿಂಗ್ ಆ್ಯಕ್ಟ್ 1952 (ಈಗ ಕರ್ನಾಟಕ ರೇಸ್‌ಕೋರ್ಸ್‌ಗಳಿಗೆ ಪರವಾನಗಿ ನೀಡುವ ಕಾಯ್ದೆ 2020) ಮತ್ತು ಮೈಸೂರು ರೇಸ್‌ಕೋರ್ಸ್ ಲೈಸನ್ಸಿಂಗ್ ರೂಲ್ಸ್ 1952 (ಈಗ ಕರ್ನಾಟಕ ರೇಸ್‌ಕೋರ್ಸ್‌ಗಳಿಗೆ ಪರವಾನಗಿ ನೀಡುವ ನಿಯಮಗಳು 2020) ನಿಯಮಗಳನ್ನು ರೇಸ್‌ಕೋರ್ಸ್ ಉಲ್ಲಂಘನೆ ಮಾಡಿರುವುದರಿಂದ ಆರ್ಥಿಕ ಇಲಾಖೆಗೆ ಪರವಾನಗಿ ರದ್ದು ಮಾಡುವ ಅಧಿಕಾರವಿದೆ.


ಆದರೆ ಸಿಎಂ ಯಡಿಯೂರಪ್ಪ ಅವರ ಅನುಮೋದನೆ ಪಡೆದು ಪರವಾನಗಿಯನ್ನು ನವೀಕರಣ ಮಾಡಲಾಗಿದೆ. ಹೀಗಾಗಿ ಪರವಾನಗಿಯನ್ನು ರದ್ದು ಮಾಡಲು ಹಣಕಾಸು ಇಲಾಖೆಯ ಮಂತ್ರಿಯೂ ಆಗಿರುವ ಸಿಎಂ ಯಡಿಯೂರಪ್ಪ ಅವರ ಅನುಮೋದನೆ ಅಗತ್ಯವಾಗಿದೆ. ಹೀಗಾಗಿ ಅವರ ಗಮನಕ್ಕೆ ತಂದು ತಕ್ಷಣ ಸೂಕ್ತಕ್ರಮಕೈಗೊಳ್ಳಬೇಕೆಂದು ಸಮಿತಿ ಹಣಕಾಸು ಇಲಾಖೆಗೆ ಸೂಚಿಸಿದೆ.


ಆದರೆ ಪರವಾನಗಿ ರದ್ದು ಮಾಡುವ ಅಧಿಕಾರವಿದ್ದರೂ ಮಾಡದೇ ಇರುವುದಕ್ಕೆ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತೀವ್ರ ವಿಷಾದ ವ್ಯಕ್ತಪಡಿಸಿದೆ.

Recommended Video

ಇದೆ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಗೆ ಮುಜುಗರ ಆಗಿದು | Oneindia Kannada
ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಶಿಫಾರಸು

ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಶಿಫಾರಸು

ನಗರದ ಬೆಂಗಳೂರು ಟರ್ಫ್ ಕ್ಲಬ್ ಅನ್ನು ನಗರದ ಮಿತಿಯಿಂದಾಚೆಗೆ ಸ್ಥಳಾಂತರಿಸುವಂತೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿಯು ತನ್ನ ನಾಲ್ಕನೇ ವರದಿಯಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದ್ದು, ಸ್ಥಳಾಂತರ ಕುರಿತಂತೆ 1968ರಿಂದಲೂ ಚರ್ಚಿಸಲಾಗುತ್ತಿದೆ. ಇಲ್ಲಿಯವರೆಗೂ ಸ್ಥಳಾಂತರಿಸಲು ಯಾವುದೇ ಯೋಜನೆಯನ್ನು ಕಾರ್ಯರೂಪಗೊಳಿಸಿಲ್ಲ.


ಅಲ್ಲದೇ, ಬೆಂಗಳೂರು ನಗರ ಜನಸಂದಣಿ ಹಾಗೂ ವಾಹನ ದಟ್ಟಣೆಯು ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದ್ದರಿಂದ ಟರ್ಫ್ ಕ್ಲಬ್ ಸ್ಥಳವನ್ನು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದರಿಂದ ಪರಿಸರ ಸಮತೋಲನ, ವಾಯು ಮಾಲಿನ್ಯ ಹಾಗೂ ಹಸಿರು ಹೊದಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದಂತಾಗುತ್ತದೆ ಆದ್ದರಿಂದ ಅತ್ಯಾಧುನಿಕ ಸೌಲಭ್ಯವುಳ್ಳ ಉದ್ಯಾನವನವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುವಂತೆ ಸಮಿತಿ ಹೇಳಿದೆ.

English summary
The Public Accounts Committee has recommended to the government to relocation the Bangalore Turf Club beyond the city limits. The Committee has proposed this in its fourth report, which has been discussed since 1968 on relocation. To date, no plan to relocate has been implemented. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X