ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?

|
Google Oneindia Kannada News

ಬೆಂಗಳೂರು, ಆ.6 : ಅರ್ಕಾವತಿ ಬಡಾವಣೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗುದ್ದಾಟ ನಡೆಯುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕನಸಿನ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅರ್ಕಾವತಿ ಬಡಾವಣೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ್ದು 2003ರ ಸೆಪ್ಟೆಂಬರ್ ನಲ್ಲಿ. ಕರ್ನಾಟಕದಲ್ಲಿ ನಂತರ ಹಲವು ಸರ್ಕಾರಗಳು ಬದಲಾವಣೆಯಾದವು. ಅರ್ಕಾವತಿ ಬಡಾವಣೆ ಬಗ್ಗೆಯೂ ಹಲವಾರು ಅಪಸ್ವರಗಳು ಕೇಳಿಬಂದವು. ಸದ್ಯ ಬಡಾವಣೆಯ 11 ಸಾವಿರ ನಿವೇಶನಗಳು ಹಂಚಿಕೆಯ ಹಂತಕ್ಕೆ ಬಂದಿದ್ದು, ಮತ್ತೊಂದು ವಿವಾದ ಹುಟ್ಟಿಕೊಂಡಿದೆ.

ಅರ್ಕಾವತಿ ಯೋಜನೆಗೆ ಜಕ್ಕೂರು, ಸಂಪಿಗೆಹಳ್ಳಿ, ಥಣಿಸಂದ್ರ, ನಾಗವಾರ, ರಾಚೇನಹಳ್ಳಿ ಸೇರಿದಂತೆ 16 ಗ್ರಾಮಗಳ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಂದಾಜು 3 ಸಾವಿರಕ್ಕೂ ಹೆಚ್ಚು ರೈತರು ಜಮೀನು ಕೊಟ್ಟಿದ್ದಾರೆ. ಈ 16 ಗ್ರಾಮಗಳಲ್ಲಿ ಜನವಸತಿ ಪ್ರದೇಶ ಇರುವುದರಿಂದ ಬಡಾವಣೆ ನಿರ್ಮಾಣಕ್ಕೆ ಸೂಕ್ತವಲ್ಲ ಎಂಬ ಟೀಕೆ-ಟಿಪ್ಪಣಿಗಳು ಕೇಳಿಬಂದಿದ್ದವು.

ಹೀಗಿದೆ ಅರ್ಕಾವತಿ ಕಥೆ : 2003ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣ ಮಾಡಿ 22,000 ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಸದ್ಯ 11,000 ನಿವೇಶನಗಳು ಹಂಚಿಕೆಗೆ ಸಿದ್ಧವಾಗಿವೆ. ಯೋಜನೆಗಾಗಿ 2003ರಲ್ಲಿ 3,839 ಎಕರೆ ಭೂಮಿ ಡಿನೋಟಿಫೈ ಮಾಡಲಾಗಿತ್ತು. ಹಲವಾರು ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲವು ಭೂಮಿಯನ್ನು ಯೋಜನೆಯಿಂದ ಕೈಬಿಡಲಾಗಿದೆ. ಸದ್ಯ 2,750 ಎಕರೆಯಲ್ಲಿ ಮಾತ್ರ ಬಡಾವಣೆ ನಿರ್ಮಾಣಗೊಳ್ಳಲಿದೆ.

2003ರಲ್ಲಿ ಯೋಜನೆ ಆರಂಭ

2003ರಲ್ಲಿ ಯೋಜನೆ ಆರಂಭ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2003ರ ಸೆಪ್ಟೆಂಬರ್ ನಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿತು ಮತ್ತು ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತು. ಬಡಾವಣೆ ನಿರ್ಮಾಣಕ್ಕೆ ಒಟ್ಟು 3,893 ಎಕರೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಜಕ್ಕೂರು, ಸಂಪಿಗೆಹಳ್ಳಿ, ಥಣಿಸಂದ್ರ, ನಾಗವಾರ, ರಾಚೇನಹಳ್ಳಿ ಸೇರಿದಂತೆ 16 ಗ್ರಾಮಗಳ ಜಮೀನನ್ನು ಇದಕ್ಕಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕೋರ್ಟ್ ಮೆಟ್ಟಿಲೇರಿದ ವಿವಾದ

ಕೋರ್ಟ್ ಮೆಟ್ಟಿಲೇರಿದ ವಿವಾದ

ಬಿಡಿಎ ಮಾಡಿಕೊಂಡ 3,893 ಎಕರೆ ಭೂ ಸ್ವಾಧೀನದಲ್ಲಿ ಅಕ್ರಮ ನಡೆದಿದೆ. ಇದರಿಂದ ಭೂ ಮಾಲೀಕರಿಗೆ ನಷ್ಟ ಉಂಟಾಗಿದೆ ಎಂದು ಆರೋಪಿಸಿ ರೈತರು ಹೈಕೋರ್ಟ್ ಮೆಟ್ಟಿಲೇರಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 1,089 ಎಕರೆಯನ್ನು ಕೈಬಿಡುವಂತೆ ಆದೇಶ ನೀಡಿತು. ಇದರಿಂದ 2,750 ಎಕರೆ ಮಾತ್ರ ಯೋಜನೆಗೆ ಲಭ್ಯವಾಯಿತು.

ರಿಯಲ್ ಎಸ್ಟೇಟ್ ಧಣಿಗಳ ಕಣ್ಣು ಬಿತ್ತು

ರಿಯಲ್ ಎಸ್ಟೇಟ್ ಧಣಿಗಳ ಕಣ್ಣು ಬಿತ್ತು

ಯೋಜನೆ ಕೈಗೆತ್ತಿಕೊಂಡಾಗ 3,839 ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಅಂತಿಮ ಅಧಿಸೂಚನೆ ವೇಳೆ 1,089 ಎಕರೆ ಕೈಬಿಟ್ಟು, 2,750 ಎಕರೆಗೆ ಸೀಮಿತಗೊಳಿಸಲಾಯಿತು. ಯೋಜನೆಗೆ ಗ್ರಹಣ ಹಿಡಿಯುತ್ತಿದ್ದಂತೆ ಜಮೀನಿನ ಮೇಲೆ ಬಿಲ್ಡರ್ಸ್‌, ರಿಯಲ್ ಎಸ್ಟೇಟ್‌ ದಾರರ ಕಣ್ಣುಬಿತ್ತು. ವಿವಿಧ ಸರ್ಕಾರದ ಮೇಲೆ ಒತ್ತಡ ಹೇರಿ ಇವರು ಡಿನೋಟಿಫೈ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.

ಕೋರ್ಟ್ ಮಾರ್ಗಸೂಚಿ

ಕೋರ್ಟ್ ಮಾರ್ಗಸೂಚಿ

ಬಡಾವಣೆ ವಿವಾದದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಆರು ಅಂಶಗಳ ಮಾರ್ಗಸೂಚಿ ನಿಗದಿಪಡಿಸಿತು. ಈ ಆರು ಅಂಶಗಳ ವ್ಯಾಪ್ತಿಗೆ ಸೇರುವ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಬಹುದು ಎಂದು ಹೇಳಿತು. ಅದರಂತೆ ಭೂಮಿ ಹಸಿರುಪಟ್ಟಿ ವಲಯಕ್ಕೆ ಸೇರಿದ್ದರೆ, ಮನೆ ಸೇರಿ ಇನ್ನಿತರ ಕಟ್ಟಡಗಳಿದ್ದರೆ, ಶಿಕ್ಷಣ ಸಂಸ್ಥೆ, ಚಾರಿಟಬಲ್ ಟ್ರಸ್ಟ್, ಧಾರ್ಮಿಕ ಸಂಸ್ಥೆಗಳು ಇದ್ದರೆ, ನರ್ಸರಿಗಳು ನಡೆಯುತ್ತಿದ್ದರೆ, ಕಾರ್ಖಾನೆಗಳು ಇದ್ದರೆ, ಡಿನೋಟಿಫೈ ಮಾಡಿರುವ ಭೂಮಿ ಪಕ್ಕದಲ್ಲೇ ಇರುವ ಜಮೀನು ಇದ್ದರೆ ಯೋಜನೆಯಿಂದ ಕೈಬಿಡಬಹುದು ಎಂದು ಹೇಳಿದೆ.

ವಿವಾದ ಏಕೆ?

ವಿವಾದ ಏಕೆ?

ಕೋರ್ಟ್ ಮಾರ್ಗಸೂಚಿ ಅನ್ವಯ ಭೂಸ್ವಾಧೀನಾಧಿಕಾರಿಗಳು ನೀಡಿದ ವರದಿ ಆಧರದ ಮೇಲೆ 422.25 ಎಕರೆ ಜಮೀನನ್ನು ಅಧಿಸೂಚನೆಯಿಂದ ಕೈಬಿಡಲು 2013ರ ಫೆ.12ರಂದು ನಡೆದ ಬಿಡಿಎ ಆಡಳಿತ ಮಂಡಳಿ ಸಭೆ ನಿರ್ಣಯ ಕೈಗೊಂಡಿತು. ಆಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು. ಆದರೆ, ಶೆಟ್ಟರ್ ಈ ಕಡತಕ್ಕೆ ಸಹಿ ಹಾಕಿರಲಿಲ್ಲ. ಆಗ ವಿಧಾನಸಭೆ ಚುನಾವಣೆ ಅಧಿಸೂಚನೆ ಹೊರಬಿದ್ದು ನೀತಿ ಸಂಹಿತೆ ಜಾರಿಗೆ ಬಂದಿತು. ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು.

ಏನಿದು ಹಗರಣ ?

ಏನಿದು ಹಗರಣ ?

ನ್ಯಾಯಾಲಯದ ಮಾರ್ಗಸೂಚಿಯಂತೆ ಡಿನೋಟಿಫಿಕೇಷನ್ ನಡೆದಿಲ್ಲ. ಬಿಡಿಎ ಕೈಕೊಂಡ ನಿರ್ಣಯದಲ್ಲಿಯೂ ದೋಷಗಳು ಇವೆ. ಸರ್ಕಾರ ಮಧ್ಯವರ್ತಿಗಳ ಲಾಬಿಗೆ ಮಣಿದಿದೆ. ಬಿಡಿಎ ಕೈಗೊಂಡ ನಿರ್ಣಯ ಪ್ರಕಾರ 422.25 ಎಕರೆಯನ್ನು ಅಧಿಸೂಚನೆಯಿಂದ ಕೈಬಿಡಬೇಕಿತ್ತು. ಆದರೆ ಸಿದ್ದರಾಮಯ್ಯ ಹೆಚ್ಚುವರಿಯಾಗಿ 119 ಎಕರೆ ಸೇರಿಸಿ 541.25 ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಶೆಟ್ಟರ್ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಹೇಳುವುದೇನು?

ಮುಖ್ಯಮಂತ್ರಿ ಹೇಳುವುದೇನು?

ನಮ್ಮ ಸರ್ಕಾರ ಒಂದು ಗುಂಟೆ ಜಮೀನು ಡಿನೋಟಿಫೈ ಮಾಡಿಲ್ಲ. ಜಗದೀಶ್ ಶೆಟ್ಟರ್ ಅಧಿಕಾರ ಅವಧಿಯಲ್ಲಿ ಬಿಡಿಎ ನಿರ್ಣಯ ಕೈಗೊಂಡಂತೆ ಅಧಿಸೂಚನೆಯಿಂದ ಜಮೀನು ಕೈಬಿಡಲಾಗಿದೆ. ಇದರ ಜತೆಗೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಡಿನೋಟಿಫಿಕೇಷನ್ ಸೇರಿಸಿ ಮರು ಪರಿಷ್ಕೃತ ಯೋಜನೆ ಸಿದ್ಧಪಡಿಸಿ 2014ರ ಜೂನ್ 18ರಂದು ಒಟ್ಟು 983.33 ಎಕರೆ ಜಮೀನನ್ನು ಅಧಿಸೂಚನೆಯಿಂದ ಕೈಬಿಡಲಾಗಿದೆ. ಇದೆಲ್ಲವೂ ನ್ಯಾಯಾಲಯದ ಮಾರ್ಗಸೂಚಿಯಂತೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ.

ಬಡಾವಣೆ ನಿರ್ಮಾಣಕ್ಕೆ ಭೂಮಿ ಕೊರತೆ

ಬಡಾವಣೆ ನಿರ್ಮಾಣಕ್ಕೆ ಭೂಮಿ ಕೊರತೆ

2,750 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುವುದು ಎಂಬ ಅಂತಿಮ ಅಧಿಸೂಚನೆ ಹೊರಬಿದ್ದಿದೆ. ಇದರಲ್ಲಿ ಭೂಮಿ ನೀಡಿದ ರೈತರಿಗೆ ಪರಿಹಾರದ ರೂಪದಲ್ಲಿ ಶೇ.40ಷ್ಟು ಭೂಮಿ ನೀಡಬೇಕು. ಉಳಿದ ಭೂಮಿಯಲ್ಲಿ ಶೇ.45ರಷ್ಟು ಭಾಗ ರಸ್ತೆ ಹಾಗೂ ಇನ್ನಿತರ ಮೂಲಸೌಕರ್ಯಕ್ಕೆ ವಿನಿಯೋಗಿಸಬೇಕಾಗುತ್ತದೆ. ಆದ್ದರಿಂದ ಯೋಜನೆಗೆ ಭೂಮಿಯ ಕೊರತೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ಫೇಸ್ ಬುಕ್ ನಲ್ಲಿ ಹೋರಾಟ

ಫೇಸ್ ಬುಕ್ ನಲ್ಲಿ ಹೋರಾಟ

ಅರ್ಕಾವತಿ ಬಡಾವಣೆ ನಿವೇಶನದ ಬಗ್ಗೆ ಫೇಸ್ ಬುಕ್ ನಲ್ಲಿ ಹೋರಾಟ ಆರಂಭವಾಗಿದೆ. ನಿವೇಶನಗ ಹಂಚಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ವಿನಿಮಯವಾಗುತ್ತಿದೆ. ವಿವರ ಇಲ್ಲಿದೆ ನೋಡಿ. [ಚಿತ್ರಕೃಪೆ : arkavathy.layout ಫೇಸ್ ಬುಕ್]

English summary
De-notification of land in Arkavathy Layout sparked controversy in Karnataka. BJP demanding a CBI investigation on this. CM Siddaramaiah ordered for judicial inquiry. Here is a details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X