ಬೆಂಗಳೂರು, ಮಂಗಳೂರು ನಡುವೆ ಚತುಷ್ಪಥ ರಸ್ತೆ,ಹೊಸ ಟೆಂಡರ್
ಬೆಂಗಳೂರು, ಜನವರಿ 19: ಬೆಂಗಳೂರು-ಮಂಗಳೂರು ನಡುವೆ ಅಪಘಾತರಹಿತ ರಸ್ತೆ ನಿರ್ಮಾಣವಾಗಬೇಕು ಎನ್ನುವುದು ಪ್ರಯಾಣಿಕರ ಬಹು ವರ್ಷಗಳ ಕನಸಾಗಿದೆ.
ಇದೇ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಿಸಿ ರಸ್ತೆ-ಗುಂಡ್ಯಾ ನಡುವೆ ನಾಲ್ಕು ಪಥದ ರಸ್ತೆಗೆ ಟೆಂಡರ್ ಆಹ್ವಾನಿಸಿದೆ.
ಈ ಮೊದಲು 2016ರಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು, ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟನೆ ಕಾರ್ಯ ನೆರವೇರಿಸಿದ್ದರು. ಕೆಲವು ತಾಂತ್ರಿಕ ದೋಷದಿಂದಾಗಿ ಕಾಮಗಾರಿ ಆರಂಭವಾಗಿರಲಿಲ್ಲ.
ಒಂದು ವಾರದಲ್ಲಿ ದಾಖಲೆಯ 534 ಕಿ.ಮೀ ಉದ್ದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಕೇಂದ್ರ ಸರ್ಕಾರ
ಯೋಜನೆಯು ಸುಮಾರು 1788.62 ಕೋಟಿಯದ್ದಾಗಿದೆ, ಮೊದಲ ಹಂತದಲ್ಲಿ ಅಡ್ಡಹೊಳೆಯಿಂದ ಪೆರಿಯಶಾಂತಿವರೆಗೆವ14.567 ಕಿ.ಮೀ ರಸ್ತೆಯನ್ನು 322.64 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ಎರಡನೇ ಹಂತದಲ್ಲಿ ಪೆರಿಯಶಾಂತಿಯಿಂದ ಬಿಸಿ ರಸ್ತೆವರೆಗೆ 45 ಕಿ.ಮೀ ದೂರದ ರಸ್ತೆಯನ್ನು ನಿರ್ಮಿಸಲಾಗುತ್ತದೆ.ಕಲ್ಲಡ್ಕ ನಗರಕ್ಕೆ ಎಲಿವೇಟೆಡ್ ಹೈವೇ ಬರಲಿದೆ.
ಇದೇ ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಯಾಗಲಿದೆ.
ರಾತ್ರಿ ಹೊತ್ತು ಮಂಗಳೂರಿಗೆ ಪ್ರಯಾಣ ಮಾಡಲು ಭಯವಾಗುತ್ತದೆ, ಅಪಘಾತಗಳು ಸಂಭವಿಸುವುದು ಹೆಚ್ಚು, ಇದೀಗ ಈ ನಾಲ್ಕು ಪಥದ ರಸ್ತೆ ನಿರ್ಮಾಣವಾದರೆ ಅಪಘಾತಗಳು ತಪ್ಪುತ್ತವೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಶಿರಾಡಿಘಾಟ್ನಲ್ಲಿ ಸುರಂಗ ಮಾರ್ಗ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಶಿರಾಡಿಘಾಟ್, ಚಾರ್ಮಾಡಿ ಘಾಟ್, ಸಂಪಾಜೆ ಘಾಟ್ ಅಭಿವೃದ್ಧಿಗೆ 115 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ.
ಎನ್ಎಐ ಮಾಹಿತಿ ಪ್ರಕಾರ ಸುರಂಗ ಮಾರ್ಗ 23.60 ಕಿಮೀ ಉದ್ದದ್ದಾಗಿರಲಿದೆ.ರಾಷ್ಟ್ರೀಯ ಹೆದ್ದಾರಿ 75ರ ಹಾಸನ - ಸಕಲೇಶಪುರ ಮತ್ತು ಗುಂಡ್ಯ- ಬಿ. ಸಿ. ರೋಡ್ ನಡುವಣ ಚತುಷ್ಪಥ ಹೆದ್ದಾರಿ ಕಾಮಗಾರಿ ಎರಡೂವರೆ ವರ್ಷಗಳಿಂದ ಸ್ಥಗಿತಗೊಂಡಿದೆ. 2018ರ ಮಳೆಗಾಲಕ್ಕೆ ಮುನ್ನ ಹೆದ್ದಾರಿ ಕಾಮಗಾರಿ ಸ್ಥಗಿತ ಮಾಡಲಾಗಿತ್ತು. 2017 ಮಾರ್ಚ್ ನಲ್ಲಿ ಭರದಿಂದ ಆರಂಭಗೊಂಡ ಹೆದ್ದಾರಿ ಕಾಮಗಾರಿ ಒಂದು ವರ್ಷ ಆಗುವುದಕ್ಕೂ ಮೊದಲೇ ಸ್ಥಗಿತ ಆಗಿತ್ತು.
ಮಂಗಳೂರು - ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ನೆಲಮಂಗಲ - ಹಾಸನ ನಡುವೆ ನಾಲ್ಕು ಪಥಗಳ ಕಾಮಗಾರಿ ಪೂರ್ಣಗೊಂಡು ಹಲವು ವರ್ಷಗಳು ಕಳೆದಿವೆ. ಹಾಸನದಿಂದ ಸಕಲೇಶಪುರ ಮಾರನಹಳ್ಳಿ ತನಕ ಹೊಸ ಹೆದ್ದಾರಿ ಅಗಲೀಕರಣ ಆಗಬೇಕಾಗಿದೆ.
ಅನಂತರ ಶಿರಾಡಿ ಘಾಟಿನ ಬಹುತೇಕ ಪ್ರದೇಶ ಸೇರಿದಂತೆ ಗುಂಡ್ಯ ತನಕ ಎರಡು ಪಥಗಳ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ. ಗುಂಡ್ಯದಿಂದ ಉಪ್ಪಿನಂಗಡಿ - ಮಾಣಿ - ಬಿ. ಸಿ. ರೋಡು ತನಕ ನಾಲ್ಕು ಪಥಗಳ ಹೆದ್ದಾರಿ ನಿರ್ಮಾಣ ಆಗಬೇಕು. ಬಿ. ಸಿ. ರೋಡಿನಿಂದ ಮಂಗಳೂರು ನಂತೂರು ಸರ್ಕಲ್ ತನಕ ಕೇರಳ - ಗೋವಾ ಹೆದ್ದಾರಿಯನ್ನು ಸಂಪರ್ಕಿಸಲು ಕಳಪೆ ದರ್ಜೆಯ ನಾಲ್ಕು ಪಥಗಳ ರಸ್ತೆಗೆ ಇದೀಗ ಒಂದು ದಶಕ ತುಂಬಿದೆ.
ಈ ಮಳೆಗಾಲಕ್ಕೆ ಮುನ್ನ ಶಿರಾಡಿ ಘಾಟಿ ಪ್ರದೇಶದ 27 ಕಿ.ಮೀ. ರಸ್ತೆಯನ್ನು ಹೊರತುಪಡಿಸಿ ಬೆಂಗಳೂರು- ಮಂಗಳೂರು ನಡುವಣ ಹೆದ್ದಾರಿ ಸಂಪೂರ್ಣ ನಾಲ್ಕು ಪಥಗಳ ಹೆದ್ದಾರಿ ಆಗಬೇಕಾಗಿತ್ತು.