ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ 55 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆಯಿದೆ

By Srinath
|
Google Oneindia Kannada News

ಬೆಂಗಳೂರು, ಏ. 8: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ 423 ಅಭ್ಯರ್ಥಿಗಳ ಪೈಕಿ 55 ಮಂದಿ ಅಂದರೆ ಶೇ. 13ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಡವಿಟ್ ನಲ್ಲಿರುವ ಮಾಹಿತಿಯ ಆಧಾರದ ಮೇಲೆ ಈ ಅಂಶ ಬಹಿರಂಗವಾಗಿದೆ.

ಕರ್ನಾಟಕ ಚುನಾವಣಾ ನಿಜ ಸಮಿತಿ ಮತ್ತು ಎಡಿಆರ್ ಸಂಸ್ಥೆ (Association of Democratic Reforms) ಈ ಮಾಹಿತಿಯನ್ನು ತುಲನೆ ಮಾಡಿ, ತನ್ನದೇ ಆದ ವರದಿಯನ್ನೂ ಸಲ್ಲಿಸಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಈ ಸಂಸ್ಥೆಗಳ ಪ್ರಮುಖರಾದ ಹರೀಶ್ ದಾಸಪ್ಪ ಅವರು ಅಭ್ಯರ್ಥಿಗಳು ಕುರಿತಾದ ವರದಿಯನ್ನು ಬಿಡುಗಡೆ ಮಾಡಿದರು.

ವರದಿಯ ಪ್ರಮುಖಾಂಶಗಳು ಹೀಗಿವೆ:

adr-report-lok-sabha-poll-karnataka-55-candidates-have-criminal-record

ಕಾಂಗ್ರೆಸ್ಸಿನ 6 (ಶೇ. 21) ಬಿಜೆಪಿಯ 9 (ಶೇ.32), ಜೆಡಿಎಸ್ಸಿನ 8 (ಶೇ. 32), 194 ಸ್ವತಂತ್ರ ಅಭ್ಯರ್ಥಿಗಳ ಪೈಕಿ 14 ಮಂದಿ (ಶೇ. 7) ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಬಳ್ಳಾರಿಯ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಬೆಂಗಳೂರು ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಕೊಲೆ ಯತ್ನದಂತಹ ಆರೋಪ ಎದುರಿಸುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಎದುರಿಸುತ್ತಿರುವವರ ಪೈಕಿ ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ರಾಜಗಿರಿ ಜಿಡಿ, ಹಾಸನದ ಸ್ವತಂತ್ರ ಅಭ್ಯರ್ಥಿ ಭಾನುಪ್ರಕಾಶ್ ಕೆ ಸೇರಿದ್ದಾರೆ.

8 ಕ್ಷೇತ್ರಗಳಲ್ಲಿ ಕನಿಷ್ಟ 3 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರು ಹಾಗಾಗಿ ಇವರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 55 ಮಂದಿ ಅಭ್ಯರ್ಥಿಗಳ ಪೈಕಿ 30 ಮಂದಿ ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯ, ಪ್ರಾಣ ಬೆದರಿಕೆಯಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಗಂಭೀರ ಅಪರಾಧಗಳನ್ನು ಎದುರಿಸುತ್ತಿರುವವರ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿಯ ತಲಾ 4 ಮಂದಿ ಜೆಡಿಎಸ್ಸಿನ 3, ಪಕ್ಷೇತರರು 9 ಮಂದಿ ಇದ್ದಾರೆ.

ಇನ್ನು ಅಭ್ಯರ್ಥಿಗಳ ಆಸ್ತಿ ವಿವರ ಪ್ರಕಟಿಸಿದ ವಾಸುದೇವ ಶರ್ಮ ಅವರ ಪ್ರಕಾರ 432 ಅಭ್ಯರ್ಥಿಗಳಲ್ಲಿ 118 (ಶೇ. 27) ಅಭ್ಯರ್ಥಿಗಳು ಕೋಟ್ಯಾಧೀಶರಾಗಿದ್ದಾರೆ. ಕಾಂಗ್ರೆಸ್ 27, ಬಿಜೆಪಿಯ 26, ಜೆಡಿಎಸ್ಸಿನ 21, ಎಎಪಿಯ 12 ಅಭ್ಯರ್ಥಿಗಳು ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ.

ಕಣದಲ್ಲಿರುವ 4 ಅಭ್ಯರ್ಥಿಗಳು ತಮ್ಮ ಬಳಿ ಯಾವುದೇ ಆಸ್ತಿ ಇಲ್ಲ ಎಂದೂ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿದಿರುವ ಬೀದರಿನ ಮಿರ್ಜಾ ಷಫಿ ಬೇಗ್, ಉಡುಪಿ-ಚಿಕ್ಕಮಗಳೂರಿನ ಮಂಜುನಾಥ್ ಜಿ, ಹಾವೇರಿ ಕ್ಷೇತ್ರದ ಸರ್ವಜನ ಪಾರ್ಟಿಯ ಬಸವಂತಪ್ಪ ಹೊನ್ನಪ್ಪ ಹುಲ್ಲಟ್ಟಿ ತಮ್ಮ ಬಳಿ ಯಾವುದೇ ಆಸ್ತಿ ಇಲ್ಲ ಎಂದು ಘೋಷಿಸಿದ್ದಾರೆ.

ಕಾಂಗ್ರೆಸ್‌ನ 28 ಅಭ್ಯರ್ಥಿಗಳ ಆಸ್ತಿ ಸರಾಸರಿ 293. 93 ಕೋಟಿ ರೂ, ಬಿಜೆಪಿಯ 28 ಅಭ್ಯರ್ಥಿಗಳ ಆಸ್ತಿ ಸರಾಸರಿ 15 ಕೋಟಿ, ಜೆಡಿಎಸ್ಸಿನ 25 ಅಭ್ಯರ್ಥಿಗಳ ಆಸ್ತಿ ಸರಾಸರಿ 31 ಕೋಟಿ, ಎಎಪಿಯ 28 ಅಭ್ಯರ್ಥಿಗಳ ಆಸ್ತಿ ಸರಾಸರಿ 9 ಕೋಟಿ ರೂ ಇದೆ.

15 ಅಭ್ಯರ್ಥಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ 50 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಆಸ್ತಿ ಹೊಂದಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ 7,710 ಕೋಟಿ ರೂ, ಬೆಂಗಳೂರು ಗ್ರಾಮೀಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್ ಪ್ರಭಾಕರ್ ರೆಡ್ಡಿ 224 ಕೋಟಿ, ಬೆಂಗಳೂರು ಕೇಂದ್ರದ ಎಎಪಿ ಅಭ್ಯರ್ಥಿ ವಿ ಬಾಲಕೃಷ್ಣ 189 ಕೋಟಿ ರೂ ಆಸ್ತಿ ಘೋಷಿಸಿದ್ದಾರೆ.

51 ಅಭ್ಯರ್ಥಿಗಳು ಒಂದು ಲಕ್ಷ ರೂ. ಗಿಂತ ಕಡಿಮೆ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. 215 ಅಭ್ಯರ್ಥಿಗಳು ಸಾಲ ಇದೆಯೆಂದೂ ಹೇಳಿಕೊಂಡಿದ್ದಾರೆ. 177 ಅಭ್ಯರ್ಥಿಗಳು ಆದಾಯ ತೆರಿಗೆ ವಿವರ ನೀಡಿದ್ದು 22 ಅಭ್ಯರ್ಥಿಗಳು 50 ಲಕ್ಷಕ್ಕೂ ಹೆಚ್ಚು ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.

255 ಅಭ್ಯರ್ಥಿಗಳು ತಮ್ಮ ಆದಾಯ ತೆರಿಗೆ ವಿವರ ಘೋಷಿಸಿಲ್ಲ. ಒಂದು ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ 4 ಅಭ್ಯರ್ಥಿಗಳು ಪ್ಯಾನ್ ಸಂಖ್ಯೆ ನಮೂದಿಸಿಲ್ಲ.

190 ಅಭ್ಯರ್ಥಿಗಳು ಪಿಯುಸಿ ಒಳಗಿನ ಶಿಕ್ಷಣ ಪಡೆದಿದ್ದರೆ, 217 ಪದವಿ ಮತ್ತು ಮೇಲ್ಪಟ್ಟ ಶಿಕ್ಷಣ ಪಡೆದಿದ್ದಾರೆ. 6 ಅಭ್ಯರ್ಥಿಗಳು ಶಾಲಾ ಶಿಕ್ಷಣವನ್ನೇ ಪಡೆದಿಲ್ಲ. 261 ಅಭ್ಯರ್ಥಿಗಳು 25-55 ವರ್ಷದೊಳಗಿನವರಾದರೆ 150 ಅಭ್ಯರ್ಥಿಗಳ ವಯಸ್ಸು 51 ರಿಂದ 70, 17 ಅಭ್ಯರ್ಥಿಗಳು 71 ರಿಂದ 80 ವರ್ಷದವರು. ಒಬ್ಬ ಅಭ್ಯರ್ಥಿ ಮಾತ್ರ 80 ವರ್ಷ ಮೇಲ್ಪಟ್ಟವರಾಗಿದ್ದಾರೆ.

English summary
Lok Sabha election 2014- 55 candidates in Lok Sabha fray in Karnataka have criminal records Says an NGO, Association of Democratic Reforms after analysing the affidavits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X