ಸರ್ಕಾರಿ ಆಸ್ತಿ ಮಾರಾಟ: ಅಧಿಕಾರಿಗಳಿಗೆ ಈಗ ಎಸಿಬಿ ಕಾಟ
ಬೆಂಗಳೂರು, ಜನವರಿ 13: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸರ್ಕಾರಿ ಗೋಮಾಳ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಪರಭಾರೆ ಮಾಡಿ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅನ್ನಪೂರ್ಣೇಶ್ವರಿ ನಗರದಲ್ಲಿ ನೆಲೆಸಿರುವ ರಾಜಸ್ವ ನಿರೀಕ್ಷಕಿ ಬಿ.ಕೆ. ಆಶಾ, ಶೀರಸ್ತೇದಾರ್ ಪಿ.ಎಸ್.ಆರ್. ಪ್ರಸಾದ್ ಅವರ ವಿಜಯನಗರ ಹಾಗೂ ತುಮಕೂರಿನಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ. ಬಿಲ್ಡರ್ ಕೆ.ವಿ ನಾಯ್ಡು ಎಂಬುವರ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ ನಡೆಸಿ ಯಲಹಂಕದ ಚಿಕ್ಕಬೆಟ್ಟಹಳ್ಳಿ ಗ್ರಾಮದ ಸರ್ಕಾರಿ ಭೂಮಿ ಪರಭಾರೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಘಟಕದ ಅಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್ ಅವರ ಮಾರ್ಗದರ್ಶನದಲ್ಲಿ ಎಸಿಬಿ ದಾಳಿ ನಡೆದಿದ್ದು, ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ಯಲಹಂಕ ಹೋಬಳಿ ಚಿಕ್ಕಬೆಟ್ಟಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಭೂಮಿ ಇದ್ದು, ಇದರಲ್ಲಿ ಕೆಲ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ರೈತರಿಗೆ ಭೂ ಮಂಜೂರುಮಾಡಲು ನಿರಾಕರಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಮೂಲ ಕಡತವೇ ಇಲ್ಲ ಎಂದು ಹೇಳಿದ್ದರು. ಈ ಗೋಮಾಳ ಮಂಜೂರಾತಿ ಮಾಡದೇ ಅಕ್ರಮ, ಕಡತ ನಾಪತ್ತೆಯಾಗಿರುವ ಬಗ್ಗೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಸಂಬಂಧ ತೀರ್ಪು ನೀಡಿದ್ದ ನ್ಯಾಯಾಲಯ, ಯಾವುದೇ ಕಾರಣಕ್ಕೂ ವಿವಾದಿತ ಭೂಮಿಯನ್ನು ಪರಭಾರೆ ಮಾಡದಂತೆ ಸೂಚಿಸಿತ್ತು. ಹೊರತಾಗಿಯೂ ಈ ಅಧಿಕಾರಿಗಳು ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದರು. ಈ ಕುರಿತು ದೊಡ್ಡಬೆಟ್ಟಹಳ್ಳಿ ನಿವಾಸಿಯೊಬ್ಬರು ದೂರು ನೀಡಿದ್ದರು.
ದೂರಿನ ಮೇರೆಗೆ ಎಸಿಬಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಬಿಲ್ಡರ್ ಗಳಿಗೆ ಮಾರಾಟ ಮಾಡಿದ್ದರು. ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಸಂಗತಿ ಬಯಲಾಗಿತ್ತು. ಈ ಕರಿತು ದೂರು ದಾಖಲಿಸಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಬ್ಬರು ಅಧಿಕಾರಿಗಳು ಹಾಗೂ ಒಬ್ಬ ಖಾಸಗಿ ವ್ಯಕ್ತಿ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಧು ಎಸಿಬಿ ಬೆಂಗಳೂರು ನಗರ ಘಟಕದ ಎಸ್ಪಿ ಕುಲದೀಪ್ ಕುಮಾರ್ ತಿಳಿಸಿದ್ದಾರೆ.