ಕಾರ್ಡ್ ಇರುವವರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂಬ ನಿರ್ಧಾರ ಮೂರ್ಖತನದ್ದು: ಆಮ್ ಆದ್ಮಿ ಪಕ್ಷ
ಬೆಂಗಳೂರು, ಜನವರಿ 13:ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಲು ಕಾರ್ಡ್ ಕಡ್ಡಾಯ ಮಾಡಿರುವ ಬಿಎಂಆರ್ಸಿಎಲ್ ನಿರ್ಧಾರ ಮೂರ್ಖತನದ್ದು ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಹೇಳಿದ್ದಾರೆ.
ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿ ನೀಡದೆ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಒಬ್ಬ ಪ್ರಯಾಣಿಕ ಒಂದು ಕಾರ್ಡ್ ಪಡೆಯಲು 50 ರೂ ಕೊಡಬೇಕು. ಒಂದು ಕುಟುಂಬದ 4 ಜನ ಒಮ್ಮೆ ಪ್ರಯಾಣಿಸಬೇಕೆಂದರೆ 200 ರೂ ಖರ್ಚು ಮಾಡಬೇಕು. ಪರ ಊರಿನಿಂದ ಬಂದವರು ಒಮ್ಮೆ ಮಾತ್ರ ಪ್ರಯಾಣಿಸುವ ಸಾಧ್ಯತೆ ಹೆಚ್ಚು ಇಂತಹ ಪ್ರಯಾಣಿಕರಿಂದ ಅನವಶ್ಯಕವಾಗಿ ವಸೂಲಿ ಮಾಡಲಾಗುತ್ತಿದೆ. ಈ ಕೂಡಲೇ ಕೌಂಟರ್ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಡ್ ರೀಚಾರ್ಜ್ ಮಾಡಲು ಡಿಜಿಟಲ್ ಪಾವತಿ ವ್ಯವಸ್ಥೆ ಕಲ್ಪಿಸಿದ್ದು, ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಯಾವುದೇ ನೆಟ್ವರ್ಕ್ ಸಮಸ್ಯೆಯಿಂದ ಇದು ಕೂಡ ದುಸ್ತರವಾಗಿದೆ.
ವೈ-ಫೈ ಲಭ್ಯವಿಲ್ಲ, ಸರಿಯಾದ ಮಾಹಿತಿ ನೀಡಲು ಸಿಬ್ಬಂದಿ ವ್ಯವಸ್ಥೆ ಮಾಡಿಲ್ಲ, ದೇಶದ ಎಲ್ಲಾ ಮಹಾನಗರಗಳಲ್ಲಿ ಈಗಾಗಲೇ ಮೆಟ್ರೋ ವ್ಯವಸ್ಥೆಯನ್ನು ಮಾಮೂಲಿಯಂತೆ ನಿರ್ವಹಿಸುತ್ತಿದ್ದರು ಬೆಂಗಳೂರಿನ ಅಧಿಕಾರಿಗಳ ಅಧಿಕ ಪ್ರಸಂಗವೇಕೆ ಎಂದು ಪ್ರಶ್ನಿಸಿದರು.
ಕೊರೋನಾ ಸೋಂಕು ಹರಡುತ್ತದೆ ಎಂಬುದನ್ನೇ ನೆಪ ಮಾಡಿಕೊಂಡು ಜನಸಾಮಾನ್ಯರ ಹಣವನ್ನು ದೋಚಲಾಗುತ್ತಿದೆ. ಮೆಟ್ರೋ ಕಾರ್ಪೊರೇಷನಿನ್ನ ಈ ನಿರ್ಧಾರದಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ದೂರ ಪ್ರದೇಶಗಳ ಜನರು ದಿನಂಪ್ರತಿ ಪರದಾಡುವಂತಾಗಿದೆ ಎಂದರು.
ಟೋಕನ್ ಕೊಡುವುದರಿಂದ ಕೊರೋನೊ ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಿರುವ ಅಧಿಕಾರಿಗಳು ಒಮ್ಮೆ ಬಂದು ನಿಲ್ದಾಣದಲ್ಲಿನ ಪರಿಸ್ಥಿತಿ ಗಮನಿಸಬೇಕು. ಅದಾಯ ಕಡಿತದ ನೆಪ ಹೇಳಿ ನೂರಾರು ಜನರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ.
ಇರುವ ಒಂದೇ ಕೌಂಟರ್ ಬಳಿ ನೂರಾರು ಜನರು ರೀಚಾರ್ಜ್ ಮಾಡಲು ನಿಂತಿರುತ್ತಾರೆ, ಕಾರ್ಡ್ ಪಡೆದರೂ ಸ್ಕ್ಯಾನಿಂಗ್ ಯಂತ್ರ ಬಳಸಲೇ ಬೇಕು, ಇದೆಲ್ಲದರಿಂದ ಕೊರೊನಾ ಹರಡುವುದಿಲ್ಲವೇ?
ಈ ಕೂಡಲೇ ಸ್ಥಳದಲ್ಲೇ ಟಿಕೆಟ್ ನೀಡುವ ಪದ್ದತಿಯನ್ನು ಪ್ರಾರಂಭಿಸಬೇಕು ಎಂದು ಶರತ್ ಖಾದ್ರಿ ಆಗ್ರಹಿಸಿದರು.