ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ ಎಎಪಿ

|
Google Oneindia Kannada News

ಬೆಂಗಳೂರು ಜು.1: ಸೇವಾ ಖಾಯಮಾತಿ, ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಆಮ್‌ ಆದ್ಮಿ ಪಕ್ಷದ ಬೆಂಬಲ ಸೂಚಿಸಿದೆ. ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಎಲ್ಲ ಮುಖಂಡರು ಶುಕ್ರವಾರ ಬೆಂಬಲ ವ್ಯಕ್ತಪಡಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, "ಆಮ್‌ ಆದ್ಮಿ ಪಾರ್ಟಿಯು ದೆಹಲಿ ಹಾಗೂ ಪಂಜಾಬ್‌ನಲ್ಲಿ ಪೌರ ಕಾರ್ಮಿಕರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದೆ. ಅನೇಕರನ್ನು ಶಾಸಕರನ್ನಾಗಿ ಮಾಡಿದೆ. ಈ ಮೂಲಕ ಪೌರ ಕಾರ್ಮಿಕರ ಭಾವನೆಗಳಿಗೆ ರಾಜಕೀಯ ಬಲ ದೊರಕಿಸಿಕೊಡುವಲ್ಲಿ ಪಕ್ಷ ಸಫಲವಾಗಿದೆ" ಎಂದರು.

"ಕರ್ನಾಟಕದಲ್ಲಿನ ಆಡಳಿತಾರೂಢ ಬಿಜೆಪಿಗೆ ಪೌರ ಕಾರ್ಮಿಕರ ನೋವು ಕಾಣಿಸುತ್ತಿಲ್ಲ. ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಿರಲಿ, ಸಮಸ್ಯೆಗೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನು ಪ್ರದರ್ಶಿಸಿಲ್ಲ. ಹೀಗಾಗಿ ಪೌರ ಕಾರ್ಮಿಕರು ಪದೇಪದೇ ಪ್ರತಿಭಟನೆ ನಡೆಸುತ್ತಿದ್ದರೂ ಗಮನಹರಿಸಿದ ಬಿಜೆಪಿ ಸರ್ಕಾರವು ಮೊಂಡುತನ ಪ್ರದರ್ಶಿಸುತ್ತಿದೆ" ಎಂದು ಅವರು ವಾಗ್ದಾಳಿ ನಡೆಸಿದರು.

ಪೌರ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಕೊಡಿ

ಪೌರ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಕೊಡಿ

ರಾಜಧಾನಿಯ ಸ್ವಚ್ಛತೆ ಮತ್ತು ನೈರ್ಮಲ್ಯತೆಗಾಗಿ ಶ್ರಮಿಸುವ ಪೌರಕಾರ್ಮಿಕರಿಗೆ ಸರ್ಕಾರ ಸಮರ್ಪಕ ಅಗತ್ಯ ಸಲಕರಣೆಗಳನ್ನು ನೀಡಿಲ್ಲ. ನಿತ್ಯ ಕಾರ್ಯಕ್ಕೆ ಸುರಕ್ಷತಾ ಕವಚಗಳು, ನಿವೃತ್ತಿ ಸೇವಾ ಸೌಲಭ್ಯಗಳು, ಸಮಾನ ಕೆಲಸಕ್ಕೆ ಸಮಾನ ವೇತನ, ಗ್ರಾಚ್ಯುಟಿ, ಹೆರಿಗೆ ಭತ್ಯೆ, ರಜಾ ದಿನಗಳನ್ನು ನೀಡಬೇಕು. ಅವರನ್ನು ನೇರ ನೇಮಕಾತಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕಿದೆ.

ಅಲ್ಲದೇ, ಅಗತ್ಯವಿರುವಲ್ಲಿ ಅವರಿಗಾಗಿ ಶೌಚಾಲಯ ನಿರ್ಮಾಣ ಮಾಡಬೇಕು. ಅವರಿಗೆ ರಜಾ ಸೌಲಭ್ಯ ನೀಡಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಹಣ ನೀಡಬೇಕು. ಇಂತಹ ವ್ಯವಸ್ಥೆ ಇಲ್ಲದೇ ತೊಂದರೆಗೀಡಾದ ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸುವತ್ತ ಗಮನ ನೀಡಬೇಕು" ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಖಾಯಂ ನೇಮಕ ಮಾಡಿಕೊಳ್ಳಿ

ಖಾಯಂ ನೇಮಕ ಮಾಡಿಕೊಳ್ಳಿ

ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಮಾತನಾಡಿ, "ಪ್ರತಿಭಟನಾನಿರತ ಪೌರ ಕಾರ್ಮಿಕರಿಗೆ ಆಮ್‌ ಆದ್ಮಿ ಪಾರ್ಟಿಯ ಸಂಪೂರ್ಣ ಬೆಂಬಲವಿದೆ. ಒಂದು ದಿನ ಪೌರ ಕಾರ್ಮಿಕರು ಕೆಲಸಕ್ಕೆಂದು ರಸ್ತೆಗಿಳಿಯದೇ ಹೋದರೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಭಣಗೊಂಡು ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ. ಸಫಾಯಿ ಕರ್ಮಾಚಾರಿ, ಸ್ವೀಪರ್ ಸೇರಿದಂತೆ ಪೌರ ಕಾರ್ಮಿಕರಿಗೆ ಅಲ್ಪ ಪ್ರಮಾಣದ ವೇತನ ನೀಡಲಾಗುತ್ತಿದೆ. ಇದರಿಂದ ಮೂಲ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರನ್ನು ಖಾಯಂ ನೇಮಕಾತಿ ಮಾಡಬೇಕು" ಎಂದು ಒತ್ತಾಯಿಸಿದರು.

ಕೆಲವರು ಮಾತ್ರ ಪೌಕಾರ್ಮಿಕರು

ಕೆಲವರು ಮಾತ್ರ ಪೌಕಾರ್ಮಿಕರು

2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ಅನುಮೋದನೆ ನೀಡಿತೇ ಹೊರತು ಅನುಷ್ಠಾನಕ್ಕೆ ತರಲಿಲ್ಲ. ಬಳಿಕ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಕೂಡ ಈ ಬಗ್ಗೆ ಗಮನ ಹರಿಸಲಿಲ್ಲ. ಪೌರ ಕಾರ್ಮಿಕರ ವಿಶೇಷ ನೇಮಕಾತಿ ನಿಯಮ 2017ರಲ್ಲಿ ರಸ್ತೆ ಸ್ವಚ್ಛಗೊಳಿಸುವವರನ್ನು ಮಾತ್ರ ಪೌರ ಕಾರ್ಮಿಕರೆಂದು ಪರಿಗಣಿಸಲಾಗಿದೆ ಎಂದು ಎಎಪಿ ಪಕ್ಷ ಆರೋಪಿಸಿದೆ.

ಇತರ ಕಾರ್ಮಿಕರಿಗೂ ಸರ್ಕಾರಿ ಸೌಲಭ್ಯ ಸಿಗಲಿ

ಇತರ ಕಾರ್ಮಿಕರಿಗೂ ಸರ್ಕಾರಿ ಸೌಲಭ್ಯ ಸಿಗಲಿ

ಪೌರ ಕಾರ್ಮಿಕರಂತೆ ನಗರದ ಸೌಂದರ್ಯಕ್ಕಾಗಿ ಸಹಾಯಕ ಗುತ್ತಿಗೆ ಆಧಾರದಲ್ಲೇ ವರ್ಷಗಳಿಂದಲೂ ಬದುಕು ಸಾಗಿಸುತ್ತಿರುವ ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರು, ಕಸ ತೆಗೆಯುವವರು, ಕಸದ ಲಾರಿ ಚಾಲಕರು, ಕಸ ಲೋಡ್ ಮಾಡುವವರು ಸೇರಿದಂತೆ ಇನ್ನಿತರ ಕಾರ್ಮಿಕರು ನಗರದಲ್ಲಿದ್ದಾರೆ. ಅವರಿಗೂ ಸಹ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮುಖಂಡರು ಮನವಿ ಮಾಡಿದರು.

English summary
Aam Admi Party Karnataka extended support for BBMP poura karmika's protest at Freedom park. Poura karmika's urge the governemnt to fulfill various demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X