ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಕ್ಸಿಜನ್ ಕೊರತೆ : ಸೋನು ಸೂದ್ ಟ್ರಸ್ಟ್ ನಿಂದ ಆಕ್ಸಿಜನ್ ತರಿಸಿದ ಪೊಲೀಸ್ ಅಧಿಕಾರಿ

|
Google Oneindia Kannada News

ಬೆಂಗಳೂರು, ಮೇ. 04: ಅದೊಂದು ಖಾಸಗಿ ಆಸ್ಪತ್ರೆ. ಆಕ್ಸಿಜನ್ ಕೊರತೆಯಾಗಿ ಆಗಲೇ ಒಬ್ಬರು ಉಸಿರು ನಿಲ್ಲಿಸಿದ್ದರು. ಹದಿನೆಂಟು ಮಂದಿ ಕೊರೊನಾ ಸೋಂಕಿತರು ಉಸಿರು ನಿಲ್ಲಿಸುವ ಆತಂಕ. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಎಲ್ಲಾ ಪ್ರಯತ್ನ ಮಾಡಿ ಕೈ ಚೆಲ್ಲಿ ಕೂತಿತ್ತು. ರಾತ್ರಿ ಪಾಳಿ ಕೆಲಸದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಬಂದ ಒಂದು ಕರೆ ಇಡೀ ಪರಿಸ್ಥಿತಿಯನ್ನೇ ಬದಲಾಯಿಸಿಬಿಟ್ಟಿತು. ಮಧ್ಯರಾತ್ರಿಯಲ್ಲಿ ಆ ಇನ್‌ಸ್ಪೆಕ್ಟರ್ ಚಿತ್ರನಟ ಸೋನು ಸೂದ ಟ್ರಸ್ಟ್‌ನಿಂದ ಆಕ್ಸಿಜನ್ ತರಿಸಿ ಹದಿನೆಂಟು ಮಂದಿಯ ಜೀವ ಉಳಿಸಿ "ಆಪತ್ಬಾಂಧವ " ಆಗಿದ್ದಾರೆ. ಪೂರ್ಣ ಚಂದ್ರ ತೇಜಸ್ವಿಯ ಸಾಹಿತ್ಯ ಪ್ರೇಮಿ ಆ ಪೊಲೀಸ್ ಅಧಿಕಾರಿಯ ಮಾನವೀಯತೆ ಇದೀಗ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಹೌದು. ಆ ಪೊಲೀಸ್ ಅಧಿಕಾರಿ ಬೇರೆ ಯಾರೂ ಅಲ್ಲ. ಯಲಹಂಕ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಪಿ. ಸತ್ಯನಾರಾಯಣ. ಕುವೆಂಪು, ತೇಜಸ್ವಿ ಸಾಹಿತ್ಯ ಪ್ರೇಮಿ ಸತ್ಯನಾರಾಯಣ್ ಈ ಹಿಂದೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಯಲಹಂಕ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆ.ಪಿ. ಸತ್ಯನಾರಾಯಣ ಅವರಿಗೆ ಒಂದು ಮೊಬೈಲ್ ಕರೆ ಬಂದಿತ್ತು. ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅರ್ಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿದೆ. ಒಬ್ಬ ಕೊರೊನಾ ಸೋಂಕಿತ ರೋಗಿ ಸಾವನ್ನಪ್ಪಿದ್ದಾನೆ. ಉಳಿದ ಹದಿನೆಂಟು ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು.

ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಅವರು, ತನ್ನ ಸಂಪರ್ಕ ಸಂಖ್ಯೆ ಬಳಿಸಿ ಹಲವಾರು ಆಸ್ಪತ್ರೆಗಳನ್ನು ಅಲೆದಾಡಿದ್ದಾರೆ. ಎಲ್ಲೂ ಒಂದು ಸಿಲಿಂಡರ್ ಆಕ್ಸಿಜನ್ ಸಿಕ್ಕಿಲ್ಲ. ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತೆರೆದಿರುವ ಎಮೆರ್ಜೆನ್ಸಿ ಕೋವಿಡ್ ರೆಸ್ಪಾನ್ಸ್ ಕಂಟ್ರೋಲ್ ರೂಮ್‌ನ ನೆರವಿನಿಂದ ಬಾಲಿವುಡ್ ನಟ ಸೋನು ಸೂದ್ ಅವರ ಟ್ರಸ್ಟ್‌ನ್ನು ಸಂಪರ್ಕಿಸಿದ್ದಾರೆ. ಅಲ್ಲಿಂದ ಬರೋಬ್ಬರಿ ಹದಿನೈದು ಸಿಲಿಂಡರ್ ತರಿಸಿದ್ದಾರೆ ಕೇವಲ ಮೂರು ತಾಸಿನೊಳಗೆ ಹದಿನೈದು ಸಿಲಿಂಡರ್ ಅರ್ಕಾ ಆಸ್ಪತ್ರೆಗೆ ಒದಗಿಸಿದ್ದಾರೆ.

A police officer who saved eighteen lives by providing oxygen

ಹಾಸಿಗೆಗಳ ಮೇಲೆ ಅದಾಗಲೇ ಒದ್ದಾಟ ಆರಂಭಿಸಿದ್ದ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಸಿದ್ದಾರೆ. ಈ ಮೂಲಕ ಹದಿನೆಂಟು ಜೀವಗಳಿಗೆ ಉಸಿರು ನೀಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಪ್ರಶಂಸೆಗೆ ಕಾರಣರಾಗಿದ್ದಾರೆ. ಸತ್ಯನಾರಾಯಣ್ ಮಧ್ಯ ರಾತ್ರಿಯಲ್ಲಿ ಮಾನವೀಯ ಸೇವೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಆಕ್ಸಿಜನ್ ಇಲ್ಲದೇ ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 24 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಮಧ್ಯರಾತ್ರಿಯಲ್ಲಿ ಆಕ್ಸಿಜನ್ ಪೂರೈಸುವ ಮೂಲಕ ಪೊಲೀಸ್ ಸಮವಸ್ತ್ರಕ್ಕೆ ಹೊಸ ಗೌರವ ತಂದು ಕೊಟ್ಟಿದ್ದಾರೆ.

ಆದ್ರೆ ಒಳಿತಾಗಲಿ ಅಷ್ಟೇ : ಕರ್ನಾಟಕ ಲೋಕಾಯುಕ್ತದಲ್ಲಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಸತ್ಯನಾರಾಯಣ್, ಸ್ವಯಂ ಪ್ರೇರಿತವಾಗಿ ಲೋಕಾಯುಕ್ತದಿಂದ ಹೊರ ನಡೆದಿದ್ದರು. ಐದು ನೂರು ರೂಪಾಯಿ, ಸಾವಿರ ರೂಪಾಯಿಗೆ ಕೆಳ ಮಟ್ಟದ ಅಧಿಕಾರಿಗಳನ್ನು ಟ್ರ್ಯಾಪ್ ಮಾಡುವುದರಿಂದ ಆದ ಅನುಭವಗಳ ಬಗ್ಗೆ ತನ್ನ ಅಪ್ತರ ಬಳಿ ಹಂಚಿಕೊಂಡಿದ್ದರು. ತನ್ನ ಕೈಯಲ್ಲಾದಷ್ಟು ಸೇವೆ ಮಾಡಲು ಪೊಲೀಸ್ ಸೇವೆ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಲೋಕಾಯುಕ್ತದಿಂದ ಹೊರಗೆ ಬಂದಿದ್ದರು. ಆನಂತರ ಸಿಸಿಬಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Recommended Video

ಬೆಡ್ ಬ್ಲಾಕಿಂಗ್ ದಂಧೆ.. ತೇಜಸ್ವಿ ಸೂರ್ಯಗೆ ಪಾಠ ಹೇಳಿದ ಸಿದ್ದರಾಮಯ್ಯ | Oneindia Kannada

ಕೊರೊನಾ ಮೊದಲನೇ ಅಲೆ ಬಂದಾಗ ಎಲ್ಲಾ ಕಡೆ ಸಂಚಾರ ಸ್ಥಗಿತಗೊಂಡಿತ್ತು. ಬೆಂಗಳೂರು ತುಮಕೂರು ರಸ್ತೆಯ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಬಳಿ ನೂರಾರು ಹೊರ ರಾಜ್ಯದ ಕಾರ್ಮಿಕರು ನೆರೆದಿದ್ದರು. ತಮ್ಮ ಊರುಗಳಿಗೆ ಕಳುಹಿಸಲು ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸರ ಮೇಲೆ ಹಲ್ಲೆ ಮಾಡಲು ಕಾರ್ಮಿಕರು ಮುಂದಾಗಿದ್ದರು. ಈ ವೇಳೆ ರಾಷ್ಟ್ರಗೀತೆ ಹಾಡುವ ಮೂಲಕ ಕೆ.ಪಿ. ಸತ್ಯನಾರಾಯಣ ಗಲಾಟೆಯನ್ನು ಶಾಂತಗೊಳಿಸಿದ್ದರು. ಬಳಿಕ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಮಾನವೀಯತೆ ಮರೆಯುವ ಮೂಲಕ ಸುದ್ದಿಯಾಗಿದ್ದರು.

English summary
Yelahanka police inspector Sathyanarayana saved 18 lives by providing oxygen to private hospital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X