ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ಯಾಟೆಗೆ ಬಂದ ಹಳ್ಳಿ ಹೈದನ ಮೆಜೆಸ್ಟಿಕ್ ಕತೆ!

By ಐ.ಟಿ ತಿಮ್ಮ
|
Google Oneindia Kannada News

'ಬೆಂಗಳೂರು' - ಒಬ್ಬೊಬ್ಬರಿಗೆ ಒಂದೊಂದು ತರಹ! ಕೆಲವರಿಗಿದು ಟ್ರಾಫಿಕ್ಕಿನ ಗೂಡು, ಕೆಲವರಿಗಿದು ಅವಕಾಶಗಳ ಜಾಡು! ಬೆಂಗಳೂರಿನೊಡನೆ ಒಬ್ಬೊಬ್ಬರ ನಂಟು, ನೆನಪು, ಅನುಭವ ಒಂದೊಂದು ಬಗೆ.

ನಮ್ಮ ಬೆಂಗಳೂರು 'ರೈಸ್ ಬಾತ್‌' ಗೂ ರಾಜಧಾನಿ!ನಮ್ಮ ಬೆಂಗಳೂರು 'ರೈಸ್ ಬಾತ್‌' ಗೂ ರಾಜಧಾನಿ!

ನನಗಂತೂ ಚಿಕ್ಕಂದಿನಲ್ಲಿ ಬೆಂಗಳೂರೊಂದು ಮಾಯಾನಗರಿ. ಟಿ.ವಿಯಲ್ಲಿ ಯಾವುದೋ ಕಾರ್ಯಕ್ರಮಗಳಲ್ಲೋ ಇಲ್ಲವೇ ಯಾವುದೋ ಸಿನೆಮಾಗಳಲ್ಲೋ ಬೆಂಗಳೂರಿನ ವಿಧಾನಸೌಧ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಹೈಕೋರ್ಟ್ ಇವುಗಳನ್ನೆಲ್ಲಾ ನೋಡಿದಾಗ, ಚಿಕ್ಕ ಊರಿನ ವಾಸಿಯಾದ ನನಗೆ ಏನೋ ಬೆರಗು. ಹೆಚ್ಚೆಂದರೆ ಎರಡು ಮೂರು ಅಂತಸ್ತಿನ ಮನೆ, ಕಟ್ಟಡಗಳಿರುವ ನಮ್ಮ ಊರೆಲ್ಲಿ, ಯುಟಿಲಿಟಿ ಬಿಲ್ಡಿಂಗ್ನಂತಹ ಗಗನಚುಂಬಿ ಕಟ್ಟಡಗಳಿರುವ ಈ ಬೆಂಗಳೂರೆಲ್ಲಿ! ಅಬ್ಬಬ್ಬಬ್ಬಾ! ಸೂಪರೋ ಸೂಪರು. ಒಮ್ಮೆಯಾದರೂ ಬೆಂಗಳೂರಿಗೆ ಭೇಟಿ‌ಕೊಡಬೇಕು, ಇವನ್ನೆಲ್ಲಾ ಕಣ್ತುಂಬಿಸಿಕೊಳ್ಳಬೇಕು ಎಂಬ ಮುಗ್ಧ ಮಹತ್ವಾಕಾಂಕ್ಷೆ ಇತ್ತು.

A magical city called Bengaluru

ಈಗ ವಿದೇಶಗಳನ್ನು, ವಿದೇಶಗಳಲ್ಲಿ ವಾಸಿಸುವ ನಮ್ಮವರ ಜೀವನವನ್ನು ನಾವು ಹೇಗೆ ಬೆರಗುಗಣ್ಣಿನಿಂದ ನೋಡುತ್ತೇವೆಯೋ ಹಾಗೆಯೇ ನಾವು ಬೆಂಗಳೂರನ್ನು, ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮವರ ಜೀವನವನ್ನು ಅತ್ಯಂತ ಭಾಗ್ಯಶಾಲಿ ಜೀವನವೆಂಬಂತೆ ನೋಡುತ್ತಿದ್ದೆವು! ಊರಿನಲ್ಲಿ ಯಾರದ್ದಾದರೂ ಮನೆಯವರು ಬೆಂಗಳೂರಿನಲ್ಲಿದ್ದಾರೆ ಎಂದರೆ ಮುಗೀತು! ಅದೊಂದು ಹೆಮ್ಮೆಯ ಸಂಗತಿಯೇ ಆಗಿತ್ತು. "ಅವ್ರ್ ಮಗ ಬೆಂಗ್ಳೂರಲ್ ಕೆಲ್ಸಕ್ ಇದ್ದ.. ನೀನೂ ಲಾಯ್ಕ್ ಮಾಡಿ ಓದಿ ಬೆಂಗ್ಳೂರಲ್ ಕೆಲ್ಸಕ್ ಸೇರಕ್ ಅಕಾ?" ಎಂಬಿತ್ಯಾದಿ‌ ಮಾತುಗಳು ಬೆಂಗಳೂರಿನ ಬಗ್ಗೆ‌ ಇರುವ ಕುತೂಹಲವನ್ನು ಆಸೆಯನ್ನು ಇಮ್ಮಡಿ ಗೊಳಿಸುತ್ತಲೇ ಇತ್ತು.

ಎಲೆಕ್ಟ್ರಾನಿಕ್ ಸಿಟಿಯ ಪುರಾತನ ಹೆಸರು ಏನಿತ್ತು ಗೊತ್ತಾ?ಎಲೆಕ್ಟ್ರಾನಿಕ್ ಸಿಟಿಯ ಪುರಾತನ ಹೆಸರು ಏನಿತ್ತು ಗೊತ್ತಾ?

ನಾನು ಒಂಬತ್ತನೇ ತರಗತಿಯಲ್ಲಿದ್ದಾಗ, ರಜಾ ದಿನಗಳಲ್ಲಿ, ಕಾರು ಚಾಲಕರಾದ ನನ್ನ ದೊಡ್ಡಪ್ಪನಿಗೆ ಬೆಂಗಳೂರಿಗೆ ಹೋಗುವ ಬಾಡಿಗೆ ಬಂತು. ಅವರು "ಕಾರಲ್ಲಿ ಜಾಗವಿದೆ. ಬೆಂಗಳೂರಿನಲ್ಲಿ ಚಿಕ್ಕಪ್ಪನ ಮನೆಯಲ್ಲಿ ಒಂದಿಷ್ಟು ದಿನ ಇದ್ದು ಬರುವ ಆಸೆ ಇದ್ದರೆ ಬಾ" ಎಂದರು. ನನಗೋ ಸ್ವರ್ಗಕ್ಕೆ ಮೂರೇ ಗೇಣು! ನನ್ನ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಅಪ್ಪ ಅಮ್ಮನ ಹತ್ತಿರ ಪರ್ಮಿಷನ್ ಗಿಟ್ಟಿಸಿಕೊಂಡು, ಬೆಂಗಳೂರಿನಲ್ಲಿದ್ದ ಚಿಕ್ಕಪ್ಪನಿಗೆ ಮತ್ತು ಅಕ್ಕನಿಗೆ ಕರೆ ಮಾಡಿ ನಾನು ಬೆಂಗಳೂರಿಗೆ ಬರುವ ವಿಷಯ ತಿಳಿಸಿ ದೊಡ್ಡಪ್ಪನ ಜೊತೆ ಹೊರಟೇ ಬಿಟ್ಟೆ.

ಬೆಂಗಳೂರು ದೊಡ್ಡ ಊರು, ಚಿಕ್ಕ ಪುಟ್ಟ ಊರಿನಿಂದ ಬಂದವರಿಗೆ ದಿಗಿಲು ಹುಟ್ಟಿಸಿ ಕಳೆದು ಹೋಗುವಂತೆ ಮಾಡುತ್ತದೆ ಎಂಬ ಮಾತಿದ್ದರೂ ಬೆಂಗಳೂರಿನ ಬಗ್ಗೆ ಒಂದು ಧೈರ್ಯದ ಸಿದ್ಧ ಸೂತ್ರ ನನ್ನ ಬಳಿ ತಯಾರಿತ್ತು. ಅದೇನೆಂದರೆ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ನಿಂದ ಎಲ್ಲಾ ಕಡೆಗೂ ಬಸ್ ಸಿಗುತ್ತದೆ ಹಾಗೂ ಎಲ್ಲಾ ಏರಿಯಾಗಳಿಂದ ಮೆಜೆಸ್ಟಿಕ್ ಗೆ ಬಸ್ಸು ಸಿಗುತ್ತದೆ ಎಂಬುದು! ಹಾಗಾಗಿ, ಹಾಗೂ ಹೀಗೂ ಮಾಡಿ ಮೆಜೆಸ್ಟಿಕ್ ತಲುಪಿ ಬಿಟ್ಟರೆ ಮನೆ ಸೇರಬಹುದಾದ್ದರಿಂದ ಕಳೆದು ಹೋಗುವ ಭಯವಿಲ್ಲ ಎಂಬ ಆತ್ಮವಿಶ್ವಾಸವಿತ್ತು.

A magical city called Bengaluru

ದೊಡ್ಡಪ್ಪನ ಜೊತೆ ಬಂದಾಗ ಬಸವನಗುಡಿಯಲ್ಲಿದ್ದ ಚಿಕ್ಕಪ್ಪನ ಮನೆಯಲ್ಲಿ ಒಂದಿಷ್ಟು ದಿನ ಇದ್ದು, ದೊಡ್ಡ ಗಣೇಶನ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ, ವಿದ್ಯಾರ್ಥಿ ಭವನದ ಬಿಸಿ ಬಿಸಿ ಮಸಾಲೆ ದೋಸೆ, ವಿಧಾನಸೌಧ ಇತ್ಯಾದಿಗಳನ್ನೆಲ್ಲಾ ನೋಡಿ, ಸವಿದು ಚಿಕ್ಕಪ್ಪನ ಜೊತೆ ಜೆ.ಪಿ ನಗರದಲ್ಲಿದ್ದ ಅಕ್ಕನ ಮನೆಗೆ ಹೋದೆ. ಅಲ್ಲೊಂದು ಎರಡು ದಿನ ಇದ್ದು ರಾಗಿಗುಡ್ಡದ ಆಂಜನೇಯ ದೇವಸ್ಥಾನ, ಅಂಬರೀಷ್ ಅವರ ಮನೆ, ಉಮಾಶ್ರೀ ಅವರ ಮನೆ ಇತ್ಯಾದಿಗಳನ್ನು ನೋಡಿ ಚಿಕ್ಕಪ್ಪನ ಮನೆಗೆ ವಾಪಾಸ್ಸು ಹೊರಟಾಗ ಅಕ್ಕ ಆರ್.ವಿ ಡೆಂಟಲ್ ಕಾಲೇಜ್ ಬಸ್ ನಿಲ್ದಾಣಕ್ಕೆ ದಾರಿ ತೋರಿಸಿದಳು. ನಾನು ನನ್ನ ಸಿದ್ಧ ಸೂತ್ರದ ಪ್ರಕಾರ ಮೆಜಸ್ಟಿಕ್ ಹೋಗಿ ಅಲ್ಲಿಂದ ಬಸವನಗುಡಿ ಸೇರುವ ಯೋಚನೆಯಲ್ಲಿದ್ದೆ. ಅಕ್ಕ, "ಇಲ್ ಬರೋ ಎಲ್ಲಾ ಬಸ್ಸುಗಳೂ ಮೆಜಸ್ಟಿಕ್ ಗೆ ಹೋಗುತ್ತೆ. ಆದ್ರೂ ಬೋರ್ಡ್ ಒಮ್ಮೆ ನೋಡಿ ಕನ್ಫರ್ಮ್ ಮಾಡ್ಕೊಂಡು ಹತ್ತು, ಹುಶಾರು" ಎಂದಿದ್ದಳು.

ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!

ನಾನು ಎದೆಯುಬ್ಬಿಸಿಕೊಂಡು ಬಸ್ ನಿಲ್ದಾಣದಲ್ಲಿ ನಿಂತೆ. ಊರಿಗೆ ಹೋದ ಮೇಲೆ ಗೆಳೆಯರೊಂದಿಗೆ ಬಡಾಯಿ ಕೊಚ್ಚಿಕೊಳ್ಳಬೇಕಲ್ಲವೇ? ಬೆಂಗಳೂರಲ್ಲಿ ಆ ಜನನಿಬಿಡ ದೊಡ್ಡ ನಗರದಲ್ಲಿ ಒಂದು ಏರಿಯಾದಿಂದ ಇನ್ನೊಂದಕ್ಕೆ ಯಾರ ಸಹಾಯವೂ ಇಲ್ಲದೆ ನಾನೊಬ್ಬನೇ ಓಡಾಡುತ್ತಿದೆ ಎಂದು! ಬಸ್ಸಿಗೆ ಕಾಯುತ್ತಾ, ಕಂಡಕ್ಟರ್ ಕೈಗಿಡಲು ದುಡ್ಡನ್ನು, ಬೇಕಾಗಬಹುದು ಎಂದು ಚಿಲ್ಲರೆಯನ್ನೂ ಅಂಗಿಯ ಜೇಬಿನಲ್ಲಿ ಸಿದ್ಧ ಪಡಿಸಿಕೊಂಡು ನಿಂತೆ.

ಒಂದು ಬಸ್ ಬಂತು. ಅಕ್ಕ, ಎಲ್ಲಾ ಬಸ್ಸೂ ಮೆಜಸ್ಟಿಕ್ಗೇ ಹೋಗತ್ತೆ ಎಂದಿದ್ದರೂ ಆ ಬಸ್ ಬೋರ್ಡಿನಲ್ಲಿ ಮೆಜೆಸ್ಟಿಕ್ ಎಂದು ಬರೆದಿರಲಿಲ್ಲ. ಹತ್ತದೆ ಕಾದೆ. ಸುಮಾರು ಅರ್ಧ ಘಂಟೆಗಳ ಕಾಲ - ಬಸ್ಸು ಬರುವುದು, ನಿಲ್ದಾಣದಲ್ಲಿ ನಿಂತವರೆಲ್ಲಾ ಹತ್ತುವುದು, ನಾನು ಮೆಜಸ್ಟಿಕ್ ಗೆ ಹೋಗುವ ಬಸ್ಸಲ್ಲ ಎಂದು ಪೆಚ್ಚು ಮೋರೆ ಹಾಕಿ ಮುಂದಿನ ಬಸ್ಸಿಗೆ ಕಾಯುವುದು - ಹೀಗೆಯೇ ಸಾಗಿತ್ತು. ಒಮ್ಮೆಲೇ ಅಕ್ಕ ತಪ್ಪು ನಿಲ್ದಾಣಕ್ಕೆ ತಂದು ನಿಲ್ಲಿಸಿರಬಹುದೇ ಎಂದು ನಡು ಬೀದಿಯಲ್ಲಿ ಹೊಸ ಅನುಮಾನವೊಂದು ಮನೆ ಮಾಡಲು ಶುರು ಮಾಡಿತು.

A magical city called Bengaluru

ಅಷ್ಟರಲ್ಲಿ ಒಂದು ಬಸ್ಸು ಬರುವುದು ಕಾಣಿಸಿತು. ಯಾರ ಬಳಿಯಾದರೂ ಕೇಳಿ ಖಾತ್ರಿ ಮಾಡಿಕೊಳ್ಳುವುದು ಒಳಿತು ಎಂದೆಣಿಸಿ, ಯಾರ್ಯಾರ ಬಳಿಯೋ ಕೇಳಿದರೆ ನಾ ಕೇಳಿದ ಪ್ರಶ್ನೆಗೆ ಅವರು ಇಂಗ್ಲೀಷಿನಲ್ಲಿ ಉತ್ತರವಿತ್ತರೆ ನಾನು ಬೆಪ್ಪುತಕ್ಕಡಿಯಂತೆ ಮುಖ ಮುಖ ನೋಡಬೇಕಾದೀತು ಎಂದು ಯಾರಿಗೆ ಕನ್ನಡ ಬರಬಹುದು ಎಂದೆಲ್ಲ ಮೀನಾಮೇಷ ಎಣಿಸಿ, ಅಂದಾಜಿಸಿ ಒಬ್ಬರನ್ನು ಕೇಳಿಯೇ ಬಿಟ್ಟೆ. "ಸರ್ ಈ ಬಸ್ ಮೆಜೆಸ್ಟಿಕ್ ಹೋಗತ್ತಾ" ಎಂದು. ಅವ್ರು "ಹೂಂ ಹೋಗತ್ತೆ" ಎಂದು ಬಸ್ ಹತ್ತಲು ಮುನ್ನಡೆದರು. ನಾನು ಅವರು ಹೇಳಿದ್ದಾರಲ್ಲಾ ಎಂಬ ಮಾತಿನ ಭರವಸೆಯ ಮೇಲೆ ಬಸ್ ಹತ್ತಿದೆ. ನನಗೆ ನಂಬಿಕೆ ಬಂದಿದ್ದು ಮಾತ್ರ ಕಂಡಕ್ಟರ್ ಮೆಜೆಸ್ಟಿಕ್ ಗೆ ಟಿಕೆಟ್ ಕೊಟ್ಟಾಗಲೇ!

ಟಿಕೆಟ್ ಹಿಡಿದು ನಿಂತು ನಡೆದದ್ದೆಲ್ಲ ಅವಲೋಕಿಸಿದಾಗಲೇ ನನಗೆ ಹೊಳೆದದ್ದು ನಾನು ಎಂತಹ ದಡ್ಡ ಶಿಖಾಮಣಿ ಎಂದು. ನಾನು ಅಷ್ಟೊಂದು ಬಸ್ ಗಳನ್ನು ಹತ್ತದೇ ಸುಮ್ಮನೇ ನಿಲ್ಲಲು ಕಾರಣವೇನೆಂದರೆ ಬೋರ್ಡ್ ನಲ್ಲಿ ಮೆಜೆಸ್ಟಿಕ್ ಎಂದು ಇರದೆ, 'ಕೆಂಪೇಗೌಡ ಬಸ್ ನಿಲ್ದಾಣ' ಎಂದು ಇದ್ದದ್ದು. ಮೆಜೆಸ್ಟಿಕ್ ಗೆ ಕೆಂಪೇಗೌಡ ಬಸ್ ನಿಲ್ದಾಣ ಅನ್ನುತ್ತಾರೆ ಎನ್ನುವ ಒಂದೇ ಒಂದು ಕಾಮನ್ ಸೆನ್ಸ್ ನನಗಿದ್ದು ಬಿಟ್ಟಿದ್ದರೆ ನಾನು ಅಷ್ಟೋತ್ತಿಗಾಗಲೇ ಮೆಜೆಸ್ಟಿಕ್ ತಲುಪಾಗುತ್ತಿತ್ತು!

ಇದರೊಡನೆ ಇನ್ನೊಂದು ಪೆಚ್ಚಾದ ಸಂಗತಿ ಎಂದರೆ, ನನ್ನ ಸಿದ್ಧ ಸೂತ್ರ ಹಿಡಿದು, ಅದೇ ಪರಮ ಸತ್ಯ ಎಂದು ನಂಬಿ ಬಸವನಗುಡಿಯಿಂದ ಜಯನಗರ, ಜೆ.ಪಿ ನಗರ ಎಲ್ಲಿ ಹೋಗಬೇಕಾದರೂ ಮೆಜೆಸ್ಟಿಕ್ ಹೋಗಿ ಅಲ್ಲಿಂದ ಬಸ್ಸು ಹಿಡಿದು ವಿನಾಕಾರಣ ಬೆಂಗಳೂರು ದರ್ಶನ ಮಾಡಿಸಿಕೊಂಡಿದ್ದು! ಈಗ, ಮೆಜೆಸ್ಟಿಕ್ ಮೇಲೆ ಹೋಗದೆ ಬಸವನಗುಡಿಯಿಂದಲೇ ನೇರವಾಗಿ ಹೋದರೆ ಅವುಗಳು ಎಷ್ಟು ಸನಿಹ ಎಂಬ ವಿಚಾರ ನೆನಪಾದಾಗ, ಯಾವುದೇ ಬಸ್ಸಿನಲ್ಲಿ 'ಕೆಂ.ಬ.ನಿ' ಎಂದು ಓದಿದಾಗ ನನ್ನ ಮೂರ್ಖತನದ ನೆನಪಾಗುತ್ತದೆ. ನಗು ಚಿಮ್ಮುತ್ತದೆ.

ದೊಡ್ಡ ಊರಿಗೆ ಚಿಕ್ಕ ಊರಿನಿಂದ ಬಂದಾಗ ಇಂತಹ ಘಟನೆಗಳು ಸಹಜ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ನಗೆ ಪಾಟಲಾಗದೆ ಉಳಿಯಲು ಯಾರ ಬಳಿಯೂ ಹೇಳದೆ ಸುಮ್ಮನಾಗುವೆ! ಆದರೆ ಈಗ ಕೊನೆಗೂ ಜಗಜ್ಜಾಹೀರು ಮಾಡಿಬಿಟ್ಟೆ! ಹಾಹಾ! ನೀವು ಯಾವುದಾದರೂ ದೊಡ್ಡ ಊರಿಗೆ ಹೋದಾಗ ಇಂತಹ ಫಜೀತಿ ಅನುಭವಿಸಿದ್ದೀರಾ? ಹೌದಾದರೆ ಅನುಭವ ಹಂಚಿಕೊಳ್ಳಿ!

English summary
Bengaluru is still feels like a magical city for village lads. Catching a bus, roaming around the city without any confusion is not a cup of tea for many who come to the city with an amazement. IT Thimma recalls his first date with Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X