ರೂಪಾ ವಿರುದ್ಧ ಐವತ್ತು ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ, ಎಚ್ಚರಿಕೆ
ಬೆಂಗಳೂರು, ಜುಲೈ 27: ರೂಪಾ ಡಿ.ಮೌದ್ಗೀಲ್ ಅವರಿಗೆ ಡಿಜಿಪಿ ಸತ್ಯನಾರಾಯಣರಾವ್ ಪರ ವಕೀಲರು ನೋಟಿಸ್ ನೀಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿಕೆ ಶಶಿಕಲಾಗೆ ವಿಶೇಷ ಆತಿಥ್ಯ ನೀಡುವುದಕ್ಕೆ ಎರಡು ಕೋಟಿ ರುಪಾಯಿ ಲಂಚವನ್ನು ಪಡೆಯಲಾಗಿದೆ ಎಂದು ಡಿಐಜಿ ರೂಪಾ ಆರೋಪ ಮಾಡಿದ್ದರು.
ಇದೀಗ ನೋಟಿಸ್ ತಲುಪಿದ ಮೂರು ದಿನದೊಳಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರೂಪಾ ವಿರುದ್ಧವಾಗಿ ಐವತ್ತು ಕೋಟಿ ರುಪಾಯಿ ಮೌಲ್ಯದ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ವಕೀಲರಾದ ಪುತ್ತಿಗೆ ಆರ್. ರಮೇಶ್ ಅವರು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾರಿಂದ ಲಂಚ ಪಡೆಯಲಾಗಿದೆ ಎಂದು ಡಿಐಜಿ ಡಿ.ರೂಪಾ ಆರೋಪಿಸಿದ್ದರು.
ಕಳೆದ ಜುಲೈ 12ರಂದು ರೂಪಾ ಮಾಡಿದ್ದ ಆರೋಪ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಗಿದೆ. ಅದರ ಬಳಿಕವೂ ಆರೋಪ ಮಾಡುತ್ತಲೇ ಇದ್ದಾರೆ. ಇದರಿಂದ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ನನ್ನ ಕಕ್ಷಿದಾರರ (ಸತ್ಯನಾರಾಯಣ ರಾವ್) ಗೌರವ, ಘನತೆಗೆ ಧಕ್ಕೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.