ನಿಮ್ಮ ಬೈಕ್ ಕಳವಾಗಿದ್ರೆ ಇಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ !
ಬೆಂಗಳೂರು, ನವೆಂಬರ್ 26: ನಿಮ್ಮದು ಬೈಕ್ ಕಳವಾಗಿದೆಯಾ ? ಒಮ್ಮೆ ಆಗ್ನೇಯ ವಿಭಾಗದ ಮಡಿವಾಳ ಅಥವಾ ಎಲೆಕ್ಟ್ರಾನಿಕ್ ಸಿಟಿ ಪೊಲೀಸರನ್ನು ಭೇಟಿ ಮಾಡಿ ವಿಚಾರಿಸಿ. ಕಳುವಾಗಿರುವ ನಿಮ್ಮ ಬೈಕ್ ಅಲ್ಲಿ ಸಿಕ್ಕರೂ ಸಿಗಬಹುದು ! ಹೌದು. ತಮಿಳುನಾಡಿನ ಬೈಕ್ ಕದಿಯುವ ಗ್ಯಾಂಗನ ಎಡೆಮುರಿ ಕಟ್ಟಿರುವ ಆಗ್ನೇಯ ವಿಭಾಗದ ಪೊಲೀಸರು ಬರೋಬ್ಬರಿ 169 ಕದ್ದ ಬೈಕ್ ಗಳನ್ನು ಪತ್ತೆ ಮಾಡಿದ್ದಾರೆ.
ಬೆಂಗಳೂರಿಗೆ ಬಂದು ಬೈಕ್ ಗಳನ್ನು ಕದಿಯುತ್ತಿದ್ದ ತಮಿಳುನಾಡು ಮೂಲದ 39 ಆರೋಪಿಗಳನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 169 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 29 ಬೈಕ್ ಗಳು ರಾಯಲ್ ಎನ್ಫಿಲ್ಡ್ ದುಬಾರಿ ಬೆಲೆಯ ಬೈಕ್ ಗಳಾಗಿವೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ 33, ಬಂಡೇಪಾಳ್ಯದ 34, ಬೇಗೂರಿನ 35, ಅಡುಗೋಡಿಯ 13, ಹುಳಿಮಾವಿನ 13 ಬೈಕ್ ಗಳು ಪತ್ತೆಯಾಗಿವೆ.
ಕಳ್ಳತನವಾಗಿದ್ದ 50 ಲಕ್ಷ ರೂ ಪಾನ್ ಮಸಾಲಾ ತಮಿಳುನಾಡಿನಲ್ಲಿ ಪತ್ತೆ
ಇವುಗಳ ಒಟ್ಟು ಮೌಲ್ಯ 1.62 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ ಕಳುವಾಗಿದ್ದ ಬೈಕ್ ಗಳನ್ನು ವಾರಸದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮವನ್ನು ಪೊಲೀಸರ ಆಯೋಜಿಸಿದ್ದರು. ದೂರು ದಾಖಲಿಸಿದ್ದ ದೂರುದಾರರಿಗೆ ಇಂದು ಬೈಕ್ ಕೀ ಗಳನ್ನು ಹಸ್ತಾಂತರಿಸಿದರು. ಮಡಿವಾಳ ಎಸಿಪಿ ಕರಿಬಸವನಗೌಡ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಪವನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ತಮಿಳುನಾಡಿನಿಂದ ಕಾರಿನಲ್ಲಿ ಬೈಕ್ ಕದಿಯುವ ಗ್ಯಾಂಗ್ ಬರುತ್ತಿದ್ದರು. ಒಂದು ಕಾರಲ್ಲಿ ಮೂರ್ನಾಲ್ಕು ಜನ ಬಂದು ಹೊರ ವರ್ತುಲ ರಸ್ತೆಗೆ ಸಂಪರ್ಕ ಇರುವ ಏರಿಯಾಗಳಲ್ಲಿ ಮಾತ್ರ ಬೈಕ್ ಗಳನ್ನು ಕದ್ದು ತಮಿಳುನಾಡಿಗೆ ಹೋಗುತ್ತಿದ್ದರು. ಕಳೆದ ಒಂದೇ ತಿಂಗಳಲ್ಲಿ ಐದು ಠಾಣೆಗಳ ವ್ಯಾಪ್ತಿಯಲ್ಲಿ 150 ಕ್ಕೂ ಹೆಚ್ಚು ಬೈಕ್ ಗಳು ಕಳುವು ಆಗಿದ್ದವು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬೈಕ್ ಕದಿಯುತ್ತಿದ್ದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆವು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ತಮಿಳುನಾಡಿನ ಬೈಕ್ ಕದಿಯುವ ಗ್ಯಾಂಗ್ ಶಾಮೀಲಾಗಿರುವುದು ಬೆಳಕಿಗೆ ಬಂತು. ಹಲವಾರು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ 39 ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಎಚ್ಎಸ್ಆರ್ ಲೇಔಟ್ ಪೊಲೀಸರ ಕಾರ್ಯಾಚರಣೆ: ತಮಿಳುನಾಡಿನ ಪೆರ್ನಂಬಟ್ಟು ಬೈಕ್ ಕದಿಯುವ ಗ್ಯಾಂಗ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿರುವ ಮಾಹಿತಿ ಮೊದಲು ಪೊಲೀಸರಿಗೆ ಸಿಕ್ಕಿರಲಿಲ್ಲ. ಬೈಕ್ ಕದಿಯುವ ದೃಶ್ಯವೊಂದು ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿತ್ತು ಅದರ ಜಾಡು ಹಿಡಿದು ತನಿಖೆ ನಡೆಸಿದ ಎಚ್ಎಸ್ಆರ್ ಲೇಔಟ್ ಠಾಣೆ ಇನ್ಸ್ಪೆಕ್ಟರ್ ಮುನಿರೆಡ್ಡಿ ನೇತೃತ್ವದ ಪೊಲೀಸರ ತಂಡ ಐವರು ಆರೋಪಿಗಳನ್ನು ಬಂಧಿಸಿದೆ. ಮತ್ತೊಂದು ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಎರಡು ಪ್ರಕರಣದಲ್ಲಿ 46 ಬೈಕ್ ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಕೀರ್ ಹುಸೇನ್, ಯೂಸಫ್, ಅಸ್ಗರ್, ಅಮ್ದಜ್, ವಸೀಂ, ಬಂಧಿತರು. ಮೂಲತಃ ತಮಿಳುನಾಡಿನವರಾದ ಇವರು ಕಾರಿನಲ್ಲಿ ಬೆಂಗಳೂರಿಗೆ ಬರುತ್ತಾರೆ. ಬೈಕ್ ಕದ್ದು ಹೊರ ವಲಯದ ವರಗೂ ಮತ್ತೊಂದು ಬೈಕ್ ಮೂಲಕ ಟೋಯಿಂಗ್ ಮಾಡಿ ಕದ್ದೊಯ್ತಿದ್ದರು. ಅವರ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಖಚಿತ ಮಾಹಿತಿ ಆಧರಿಸಿ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿಯುವಲ್ಲಿ ಎಚ್ಎಸ್ಆರ್ ಲೇಔಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.