ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲಿಗೆ ನಗರಿ ಹೂವಿನಹಡಗಲಿಯಲ್ಲಿ ಕಲ್ಲರಳಿ ಕಲೆಯಾಗಿ...

By ಜಿ.ಎಂ. ರೋಹಿಣಿ
|
Google Oneindia Kannada News

ಬಳ್ಳಾರಿ, ಆಗಸ್ಟ್ 03: ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಮಲ್ಲಿಗೆ ನಗರಿ ಹೂವಿನಹಡಗಲಿ ಪಟ್ಟಣದಲ್ಲಿ ರಾಜ್ಯ ಶಿಲ್ಪಕಲಾ ಅಕಾಡೆಮಿ ಮತ್ತು ರಂಗಭಾರತಿ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶಿಲ್ಪ ಕಲಾ ಶಿಬಿರದಲ್ಲಿ ಕೊಪ್ಪಳ, ಬಳ್ಳಾರಿ, ಸಿರಗುಪ್ಪ, ಉತ್ತರ ಕನ್ನಡ, ಬಾಗಲಕೋಟೆ, ಬಾಗಳಿ ಸೇರಿದಂತೆ ವಿವಿಧ ಜಿಲ್ಲೆಗಳ ಕಲಾವಿದರು, ಸ್ಥಳೀಯ ಶಿಲ್ಪಿಗಳು ಶಿಲ್ಪ ಕೆತ್ತನೆಯಲ್ಲಿ ಸಕ್ರಿಯರಾಗಿದ್ದರು.

ಶಿಲ್ಪ ಕಲೆಯ ಕೆತ್ತನೆಗಾಗಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಶಿಲೆಗಳನ್ನು ತರಿಸಿಕೊಳ್ಳಲಾಗಿದ್ದು, ಶಿಲ್ಪಿಗಳೆಲ್ಲರೂ ಕೆತ್ತನೆಯಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಪ್ರತಿ ಶಿಲ್ಪಿಯೂ ಹಂಪೆಯ ಗತ ವೈಭವ, ಅಜಂತಾ -ಎಲ್ಲೋರದ ಗುಹೆಗಳು, ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಕೆತ್ತನೆಗಳನ್ನು ವೈವಿಧ್ಯಮಯವಾದ ಭಂಗಿಗಳಲ್ಲಿ ರೂಪಿಸುತ್ತಿದ್ದರು.

ಮೈಸೂರು ಕಲಾವಿದನ ಕೈಯಲ್ಲಿ ಅರಳುತ್ತಿವೆ ಸ್ವರ್ಣ ದೇವರ ಮೂರ್ತಿಮೈಸೂರು ಕಲಾವಿದನ ಕೈಯಲ್ಲಿ ಅರಳುತ್ತಿವೆ ಸ್ವರ್ಣ ದೇವರ ಮೂರ್ತಿ

ಒಟ್ಟಿನಲ್ಲಿ ಇಲ್ಲಿ ಹೊಸ ಕಲ್ಪನೆಯ ಶಿಲ್ಪಿಗಳು ಭವಿಷ್ಯದ ರೂವಾರಿಗಳಾಗಿ ರೂಪುಗೊಳ್ಳುತ್ತಿದ್ದರು. ಕಲ್ಲು, ಉಳಿ, ಸುತ್ತಿಗೆಯ ಸದ್ದು ಶಿಬಿರದಲ್ಲಿ ಸಂಗೀತದ ನಾದವನ್ನು ಸ್ಮರಿಸುತ್ತಿದೆ. ಈ ಸದ್ದು ಶಿಬಿರದ ಆಸುಪಾಸು ನುಸುಳುವವರ ಕಿವಿಗಳಿಗೆ ಬಿದ್ದು, ಒಂದಿಷ್ಟು ಹೊತ್ತು ಕಾಲಕಳೆದು, ಮುಂದಕ್ಕೆ ಹೋಗುವಂತೆ ಮಾಡಿದೆ.

ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

ಏಕ ಶಿಲೆಯಲ್ಲಿ ಎಂಟು ಅಡಿ ಎತ್ತರದಲ್ಲಿ ರೂಪುಗೊಳ್ಳುತ್ತಿರುವ ಶಿಲ್ಪಗಳು ಅನೇಕರ ಮನಸೂರೆಗೊಳ್ಳುತ್ತಿವೆ. ಶಿಲ್ಪಿಗಳೂ ಸ್ಪರ್ಧೆಗೆ ಬಿದ್ದವರಂತೆ, ಕಲ್ಲು ಕಟಿದು, ಶಿಲ್ಪವನ್ನು ಹೊರತರುವಲ್ಲಿ ತಲ್ಲೀನರಾಗಿದ್ದಾರೆ.

 ಭಾಮಿಯಾ ಬುದ್ಧನ ಕೆತ್ತನೆ

ಭಾಮಿಯಾ ಬುದ್ಧನ ಕೆತ್ತನೆ

ಜ್ಞಾನ ಮತ್ತು ಶಾಂತಿಯ ಸಂಕೇತವಾಗಿರುವ ಬುದ್ಧನ ವೈವಿಧ್ಯಮಯವಾದ ಚಿತ್ರಗಳ ಕೆತ್ತನೆಗೆ ಶಿಬಿರದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಬಹುತೇಕರು ಕಲ್ಲಿನಲ್ಲಿ ಮರೆಯಾಗಿದ್ದ ಆತನನ್ನು ಹೊರ ತರುವಲ್ಲಿ ಉತ್ಸಾಹಿಗಳಾಗಿದ್ದಾರೆ. ಗಾಂಧಾರ ಶೈಲಿಯಲ್ಲಿ ಭಾಮಿಯಾ ಬುದ್ಧನ ಕೆತ್ತನೆ ನಡೆದಿದೆ.

 ಪ್ರತಿರೂಪ ಪಡೆದ ದೇವಾಲಯಗಳು

ಪ್ರತಿರೂಪ ಪಡೆದ ದೇವಾಲಯಗಳು

ಈ ಶಿಬಿರದಲ್ಲಿ ಕೇವಲ ಬುದ್ಧನಷ್ಟೇ ಹೊಳಪು ಪಡೆಯುತ್ತಿಲ್ಲ, ಜ್ಞಾನಕ್ಕೆ ದೀರ್ಘಾಯುಷ್ಯವಿದೆ ಎನ್ನುವ ತಿರುಳನ್ನು ಸಾರುವ ಗ್ರಂಥದ ಮೇಲೊಂದು ವೃಕ್ಷವೂ ಅನೇಕರ ಗಮನ ಸೆಳೆದು, ವಿಶೇಷತೆಯಿಂದ ಕೂಡಿದೆ. ಬಾದಾಮಿ ಚಾಲುಕ್ಯರ ಸ್ಮಾರಕಗಳು, ಅಜಂತಾ - ಎಲ್ಲೋರದ ಗುಹಾಂತರ ದೇವಾಲಯಗಳು, ಗುಹೆ - ಮೇಣ ಬಸದಿ ಎಲ್ಲವೂ ಇಲ್ಲಿ ಪ್ರತಿರೂಪ ಪಡೆಯುತ್ತಿವೆ.

ಪ್ರತಿಯೊಂದು ಕೆತ್ತನೆಯೂ ಶಿಲ್ಪಿಯ ತಲ್ಲೀನತೆ, ಸೂಕ್ಷ್ಮ ಮನಸ್ಸು ಮತ್ತು ಪಕ್ವತೆ ಪ್ರತಿನಿಧಿಸುತ್ತಿವೆ. ಶೈವ, ವೈಷ್ಣವ, ಜೈನ ಪಂಥದ ಕೆತ್ತನೆಗಳೂ ಮೂಡುತ್ತಿವೆ. ಐಹೊಳೆಯ ದುರ್ಗಾದೇವಿ ದೇಗುಲ ಸೂಜಿಗಲ್ಲಿನಂತೆ ಕಲಾಸಕ್ತರ ಕಣ್ಮನ ಸೆಳೆಯುತ್ತಿದೆ.

 ಒಂದಕ್ಕಿಂತ ಒಂದು ಅದ್ಭುತ

ಒಂದಕ್ಕಿಂತ ಒಂದು ಅದ್ಭುತ

ಇದು ಶ್ರೇಷ್ಠ ವಾಸ್ತು ಶಿಲ್ಪ ಕಲೆಯಾಗಿದೆ. ನಾಗರ, ವೇಸರ, ದ್ರಾವಿಡ ಮತ್ತು ಚಾಲುಕ್ಯರ ಶೈಲಿಯನ್ನು ಇಲ್ಲಿ ಬಳಕೆ ಮಾಡಿಕೊಳ್ಳಲಾಗಿದ್ದು, ವಿಭಿನ್ನವಾಗಿ ಮೂಡುತ್ತಿದೆ. ಭಾರತೀಯ ಶಿಲ್ಪಕಲೆಯ ತವರೂರಾಗಿರುವ ಪಟ್ಟದಕಲ್ಲಿನ ಅಪ್ಪರ್ ಶಿವಾಲಯ ಕೆತ್ತನೆಯಂತೂ ಉತ್ತಮವಾಗಿ ಮೂಡಿಬಂದಿದೆ. ಚಾಲುಕ್ಯರ ಲಾಂಛನವೂ ಉತ್ತಮವಾಗಿ ಬಿಂಬಿತವಾಗಿದೆ.

ಸಾಮ್ರಾಟ್ ಅಶೋಕನ ನಾಲ್ಕು ಸಿಂಹಗಳನ್ನು ಒಳಗೊಂಡಿರುವ ಭಾರತದ ರಾಷ್ಟ್ರಲಾಂಛನ, ಉಪವಾಸ ಆಚರಿಸುತ್ತಿರುವ ಬುದ್ಧನಿಗೆ, ದಲಿತ ಮಹಿಳೆ ಸುಜಾತ ಪಾಯಸವನ್ನು ನೀಡಿ ಈ ವ್ರತವನ್ನು ಅಂತ್ಯಗೊಳಿಸುವ ದೃಶ್ಯ ಕಲಾವಿದನಲ್ಲಿಯ ಹೃದಯ - ಮನಸ್ಸಿನ ವಿಶಾಲತೆಗಳನ್ನು ಪ್ರತಿನಿಧಿಸುತ್ತಿದೆ.

 ಕಲಾವಿದನ ಗ್ರಹಿಕೆ

ಕಲಾವಿದನ ಗ್ರಹಿಕೆ

ಹಂಪೆಯ ವಿರೂಪಾಕ್ಷ ದೇಗುಲ, ರಾಜಗೋಪುರ, ಕಮಲ್ ಮಹಲ್, ವಿಜಯ ವಿಠ್ಠಲ ದೇವಾಲಯ, ಬನ್ನಿ ಮಂಟಪ, ಆನೆ, ಕುದುರೆ ಸಾಲುಗಳು, ಪುರಂದರ ಮಂಟಪ, ಕಲ್ಲಿನರಥ ಸೇರಿದಂತೆ ಎಲ್ಲವನ್ನೂ ಏಕ ಶಿಲೆಯಲ್ಲಿ ನಾವಿಲ್ಲಿ ಕಂಡು, ಕಲಾವಿದನ ಸೂಕ್ಷ್ಮವಾದ ಪಾಲ್ಗೊಳ್ಳುವಿಕೆಯ ಪಾವಿತ್ರ್ಯತೆಯನ್ನು ನಾವಿಲ್ಲಿ ಅನುಭವಿಸಬಹುದಾಗಿದೆ.

ವ್ಯಾಳ, ಕುದುರೆ, ಸಿಂಹ, ಮೀನು, ಮೊಸಳೆ, ನವಿಲು ಮತ್ತು ಆನೆ ಸೇರಿದಂತೆ ನಾನಾ ಪ್ರಾಣಿಗಳನ್ನು ಬಳಸಿಕೊಂಡು ಶಿಲ್ಪಿ ತನ್ನ ಚಿಂತನೆಗೆ ಸವಾಲು ಹಾಕಿ, ಕಲ್ಪನೆಯನ್ನೂ ಮೀರಿ ಭಿನ್ನಭಿನ್ನವಾದ, ವೈವಿಧ್ಯಮಯವಾದ ಏಕ ಆಕೃತಿಯನ್ನು ರಚಿಸುತ್ತಿದ್ದು, ತನಗೆ ತಾನೇ ಸ್ಪರ್ಧಿ ಆಗಿರುವುದು ವಿಶೇಷ.

ಶಿಬಿರದಲ್ಲಿ ಮೂಡುತ್ತಿರುವ ಮತ್ತೊಂದು ವಿಶೇಷ ಅಂದರೆ, ಒಂದು ಎಲೆ ಮೀನಿನಲ್ಲಿ ಹಲವು ಕೈಗಳು ಪುಸ್ತಕಗಳನ್ನು ಗಟ್ಟಿಯಾಗಿ ಎತ್ತಿ ಹಿಡಿದಿದ್ದು, ಮನಸ್ಸು ಮತ್ತು ಜ್ಞಾನವನ್ನು ಗಟ್ಟಿಗೊಳಿಸುವ ಪ್ರತೀಕವಾಗಿದೆ. ಹಾಗೆಯೇ ಎಂ.ಪಿ. ಪ್ರಕಾಶ್ ಅವರನ್ನು ಪ್ರತೀ ಹಂತದಲ್ಲಿ ಸ್ಮರಿಸುವಂತೆ ಶಿಬಿರವು ರೂಪುಗೊಂಡಿದೆ.

 ಇವರೇ ನೋಡಿ ಆ ಶಿಲ್ಪಿಗಳು

ಇವರೇ ನೋಡಿ ಆ ಶಿಲ್ಪಿಗಳು

ಶಿಲ್ಪಿಗಳಾದ ರಾಮನಗರದ ರಾಮಮೂರ್ತಿ, ಟಿ.ಆರ್. ಪ್ರಸನ್ನಕುಮಾರ್, ವಿಜಯಪುರದ ಡಾ.ಮಹಾಂತೇಶ ಪಲದಿನ್ನಿ, ಬಾಗಲಕೋಟೆಯ ವೆಂಕಪ್ಪ ಆರ್.ಕೋಳಿ, ಮೌನೇಶ ಆಚಾರ್ ಸಿರುಗುಪ್ಪ, ಕೃಷ್ಣಾಚಾರಿ ಕೊಪ್ಪಳ, ಮಂಡ್ಯದ ಸಂದೀಪ, ದೀಪಕ್ ಕುಮಾರ್, ಬಾಗಳಿಯ ಪ್ರಕಾಶ ಆಚಾರ್, ಹೂವಿನಹಡಗಲಿಯ ಗಿರೀಶ, ಮೈಸೂರಿನ ಮಹಾದೇವ್ ಆರ್., ರಾಜಶೇಖರ್ ಪಿ. ಚಿತ್ರದುರ್ಗ, ಶಿವಪ್ರಸಾದ್ ರಾಮನಗರ, ಕೊಟ್ರೇಶ ಬಿ.ಹೂವಿನಹಡಗಲಿ., ಸಿದ್ದಲಿಂಗಸ್ವಾಮಿ, ಮಂಜುನಾಥ ರಾಮನಗರ, ಪ್ರಸನ್ನಕುಮಾರ್ ಚಿಕ್ಕಮಗಳೂರು, ದೇವೇಂದ್ರಪ್ಪ ಸೋಗಿ ಸೇರಿದಂತೆ 20ಕ್ಕೂ ಹೆಚ್ಚು ಹಿರಿಯ ಕಿರಿಯ ಶಿಲ್ಪಿಗಳು ಈ ಆಕರ್ಷಕ ಕೆತ್ತನೆಗಳನ್ನು ರಚಿಸುತ್ತಿದ್ದಾರೆ.

 ಶುಕ್ರವಾರ ಸಮಾರೋಪ

ಶುಕ್ರವಾರ ಸಮಾರೋಪ

ಪ್ರತಿಯೊಬ್ಬರೂ ಪ್ರತಿಭಾವಂತರೇ ಆಗಿದ್ದು, ತಮ್ಮ ಕಲಾ ನೈಪುಣ್ಯತೆಯನ್ನು ಸಾಬೀತು ಮಾಡುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ಅವರ ಉಳಿ, ಕಣ್ಣಿನ ದೃಷ್ಟಿ, ಹೃದಯದ ಮಾತುಗಳಿಗೆ ಸ್ಪಂದಿಸುತ್ತಿರುವ ಕಲೆ - ಕಲಾವಿದ ಮತ್ತು ಕೆತ್ತನೆಗಳ ಮಧ್ಯೆ ಅತ್ಯುತ್ತಮವಾದ ಶಿಲ್ಪ ಮೂಡುತ್ತಿರುವುದು ವಿಶೇಷ.

ಜುಲೈ 31 ರಿಂದ ಪ್ರಾರಂಭವಾಗಿರುವ ಈ ಶಿಬಿರ ಆಗಸ್ಟ್ 3ರ ಶುಕ್ರವಾರ ಸಮಾರೋಪಗೊಂಡಿದೆ. ಶಿಬಿರ ನಡೆದ ಇಪ್ಪತ್ತು ದಿನಗಳೂ ತಪ್ಪದೇ ಎಂ.ಪಿ. ಪ್ರಕಾಶ್ ಅವರ ಸ್ಮರಣೆ, ಅವರ ದೂರದೃಷ್ಟಿ, ವೈಚಾರಿಕತೆಗಳ ಕನವರಿಕೆ ನಡೆದಿದೆ. ಶಿಬಿರದಲ್ಲಿ ಎಂ.ಪಿ. ಪ್ರಕಾಶ್ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎನ್ನವುದು ಶಿಬಿರಾರ್ಥಿಗಳ ನಂಬಿಕೆ.

English summary
A state-level sculpture art camp was organized in the town of Huvina Hadagali in Bellary district. Here's a brief description of what the carvings were in the camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X