ಫೆಬ್ರವರಿ 13ರಂದು ಮೈಲಾರದ ಗೊರವಪ್ಪನ ಕಾರಣಿಕ ಭವಿಷ್ಯ

Posted By:
Subscribe to Oneindia Kannada

ಬಳ್ಳಾರಿ, ಫೆಬ್ರವರಿ 03: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರಣಿಕೋತ್ಸವ ರಥಸಪ್ತಮಿಯಿಂದ ಬನದ ಹುಣ್ಣಿಮೆ ತನಕ ನಡೆಯಲಿದೆ.

ಫೆಬ್ರವರಿ 13ರಂದು ಮೈಲಾರದ ಗೊರವಪ್ಪನ ಕಾರಣಿಕ ಭವಿಷ್ಯವನ್ನು ಆಲಿಸಬಹುದು. ಈ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ.

ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರಣಿಕೋತ್ಸವದ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 0.5 ಟಿ ಎಂ ಸಿ ಕುಡಿಯುವ ನೀರು ಬಿಡಲು ತೀರ್ಮಾನಿಸಲಾಗಿದೆ.[ಗೊರವಯ್ಯ ನುಡಿದ ಭವಿಷ್ಯ]

ಜ. 30 ರಿಂದ ಫೆಬ್ರವರಿ 4ರವರೆಗೆ ಪ್ರತಿದಿನ 500 ಕ್ಯೂಸೆಕ್ಸ್ ಮತ್ತು ಫೆ. 5 ರಿಂದ ಫೆ. 7 ರವರೆಗೆ ಪ್ರತಿದಿನ 1500 ಕ್ಯೂಸೆಕ್ಸ್ ನಂತೆ ಒಟ್ಟು 0.5 ಟಿ.ಎಂ.ಸಿ ನೀರನ್ನು ತುಂಗಭದ್ರಾ ನದಿಗೆ ಹರಿಸಲು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನದಿ ದಂಡೆಯ ಕೆಳಮಟ್ಟದಲ್ಲಿ ಸಾರ್ವಜನಿಕರು ತಿರುಗಾಡುವುದು, ದನ ಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ. ಹಾಗೂ ಈ ಅವಧಿಯಲ್ಲಿ ರೈತ ಬಾಂಧವರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನೂ ಸಹ ನಿಷೇಧಿಸಲಾಗಿದೆ.

Mylara Karnika Utsava Hoovina Hadagali, Ballari on Feb 13

ಕ್ಷೇತ್ರದ ಬಗ್ಗೆ: ಈ ಕ್ಷೇತ್ರಕ್ಕಿರುವ ಪೌರಾಣಿಕ ಹಿನ್ನಲೆ ಏನಂದರೆ, ಹಿಂದೆ ಮಲ್ಲಾಸುರ ಮತ್ತು ಮಣಿಕಾಸುರ ರಾಕ್ಷಸ ಸಹೋದರರು ಸುಧೀರ್ಘ ತಪಸ್ಸು ನಡೆಸಿ ಮಾನವನಿಂದ ಮರಣ ಬಾರದಂತೆ ಬ್ರಹ್ಮ ದೇವರಿಂದ ವರವನ್ನು ಪಡೆದಿರುತ್ತಾರೆ.

ವರ ಪಡೆದ ನಂತರ ಸಮಾಜ ಕಂಟಕರಾದಾಗ ಮುನಿಗಳು ಶಿವನ ಮೊರೆ ಹೋಗುತ್ತಾರೆ. ಶಿವ ಮೈಲಾರನ ಅವತಾರ ತಾಳಿ ಏಳು ಕೋಟಿ ಗೊರವರನ್ನು ಕಟ್ಟಿಕೊಂಡು ಈ ರಾಕ್ಷಸರ ವಿರುದ್ದ ಯುದ್ದಕ್ಕೆ ನಿಲ್ಲುತ್ತಾನೆ. ಹತ್ತು ದಿನಗಳ ಯುದ್ದದ ನಂತರ ಮೈಲಾರ (ಶಿವ) ತನ್ನ ಶಕ್ತಿಯನ್ನು ಕಳೆದುಕೊಂಡು ಯುದ್ದರಂಗದಿಂದ ಕಾಲ್ಕಿತ್ತು ತುಂಗಭದ್ರಾ ನದಿಯಲ್ಲಿ ಅವಿತು ಕೊಳ್ಳುತ್ತಾನೆ.

ಅಲ್ಲಿ ಶಿವನ ಗಣಗಳಲ್ಲಿ ಒಂದಾದ ವೀರಭದ್ರನು ತನ್ನ ಕೇಶವನ್ನು ನೆಲಕ್ಕೆ ಸ್ಪರ್ಶಿಸಿದಾಗ ಪಂಚ ಯುದ್ದ ವೀರರು ಹುಟ್ಟಿಕೊಳ್ಳುತ್ತಾರೆ. ಅದರಲ್ಲಿ ಒಬ್ಬ ಕಂಚವೀರ. ಈತ ಇಬ್ಬರು ರಾಕ್ಷಸರನ್ನು ಸೋಲಿಸಿ ಮೈಲಾರನಿಗೆ ಒಪ್ಪಿಸುತ್ತಾನೆ.

ಮೈಲಾರ ಈ ಇಬ್ಬರೂ ರಾಕ್ಷಸರನ್ನು ಸಂಹರಿಸುತ್ತಾನೆ. ಅಂತೆಯೇ, ಶಿವ ಮೈಲಾರನ ರೂಪದಲ್ಲಿ ಗೊರವರ ಜೊತೆ ಯುದ್ದಕ್ಕೆ ಬಂದಿದ್ದರಿಂದ ಈ ಸಮುದಾಯದವರೊಬ್ಬರು ಕಟ್ಟುನಿಟ್ಟಿನ ವೃತಾಚರಣೆ ನಡೆಸಿ ಮೈಲಾರ ಉತ್ಸವದ ಕೊನೆಯ ದಿನ ದೈವವಾಣಿ ನುಡಿಯುವುದು ಸಂಪ್ರದಾಯ. ಶಿವನೇ ಇವರ ರೂಪದಲ್ಲಿ ಕಾಣಿಸಿಕೊಂಡು ಭವಿಷ್ಯ ನುಡಿಯುತ್ತಾನೆ ಎನ್ನುವುದೂ ನಂಬಿಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mylara Karnika Utsava begins on Ratha Sapthami day(Feb 03) and it will be celebrated till Banada Hunnime day. Karnika predication is on Feb 13 at Mylaralingeshwara Temple, Hoovina Hadagali, Ballari.
Please Wait while comments are loading...