ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಲ್ಲಿಗೆ ಸುಗ್ಗಿ'ಯ ಸಂಭ್ರಮದಲಿ ಬಳ್ಳಾರಿಯ ಹೂವಿನಹಡಗಲಿ

By ಜಿಎಂಆರ್, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಜೂನ್ 2: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಮಲ್ಲಿಗೆ ಹೂವಿಗೆ ಐತಿಹಾಸಿಕ, ಧಾರ್ಮಿಕ ಮತ್ತು ಜಾಗತಿಕ ಮನ್ನಣೆ ಇದೆ. ಗೌರವೂ ಇದೆ. ಆದರೆ ಮಾರುಕಟ್ಟೆಯಲ್ಲಿನ ಬೆಲೆಗಳ ಏರಿತಗಳ ಮಧ್ಯೆ ಸಿಲುಕಿರುವ ಮಲ್ಲಿಗೆ ಹೂವು ಮೊಗ್ಗಾಗಿಯೇ ಬಾಡುತ್ತಿವೆ. ಮಲ್ಲಿಗೆ ಹೂವಿನ ಘಂ ಎನ್ನುವ ಸುವಾಸನೆಯು ಕಮರಿ, ಹೂ ಬಾಡುತ್ತಿದೆ.

ಹೂವಿನಹಡಗಲಿಯ ಮಲ್ಲಿಗೆಯು ತೆಪ್ಪದ ಮೂಲಕ ತುಂಗಭದ್ರಾ ನದಿಯಲ್ಲಿ ತೇಲಿ ಹೋಗಿ, ಹಂಪೆಯ ವಿರೂಪಾಕ್ಷೇಶ್ವರನ ಪೂಜೆಗೆ ಸಮರ್ಪಣೆ ಆಗುತ್ತಿದ್ದವು ಎನ್ನುವ ಪ್ರತೀಕವಿದೆ.

ಮಲ್ಲಿಗೆ ಹೂವಿನ ಪರಿಮಳದಲ್ಲಿ ತಣಿಯುವ ಮಳೆಯ ಹನಿಮಲ್ಲಿಗೆ ಹೂವಿನ ಪರಿಮಳದಲ್ಲಿ ತಣಿಯುವ ಮಳೆಯ ಹನಿ

ಹೂವಿನಹಡಗಲಿಯ ವಿವಿಧ ತಳಿಯ ಮಲ್ಲಿಗೆ ಹೂವು ಮಹಿಳೆಯರ ಮನ ಸೆಳೆಯುವುದು ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ದುಂಡು ಮಲ್ಲಿಗೆಗೆ, ಏಳು ಸುತ್ತಿನ ಮಲ್ಲಿಗೆ, ಕಾಕಡ ಮಲ್ಲಿಗೆ, ಮೈಸೂರು ಮಲ್ಲಿಗೆಗೆ ತೀವ್ರ ಸ್ಪರ್ಧೆ ನೀಡುತ್ತಿವೆ. ಮಾರುಕಟ್ಟೆಯಲ್ಲಿ ಎಷ್ಟೇ ಮಲ್ಲಿಗೆ ಇದ್ದರೂ ಹೂವಿನಹಡಗಲಿಯ ಮಲ್ಲಿಗೆಗೆ ಎಲ್ಲಿಲ್ಲದ ಬೇಡಿಕೆ!

Jasmine

ಹೂವಿನಹಡಗಲಿಯ ವಿಧವಿಧದ ಮಲ್ಲಿಗೆಗೆ ಭೌಗೋಳಿಕ ಮತ್ತು ಪಾರಂಪರಿಕ ಹಿನ್ನೆಲೆ ಇದೆ. ಪ್ರಕೃತಿಯಲ್ಲಿಯ ವೈವಿಧ್ಯಮಯ ಹವಾಗುಣ ಮತ್ತು ಮಣ್ಣಿನ ಫಲವತ್ತತೆ, ವಿಶೇಷತೆಗಳನ್ನು ಆಧರಿಸಿ ಈ ಭಾಗದಲ್ಲಿ ಮಲ್ಲಿಗೆ ಹೂವುಗಳನ್ನು ಬೆಳೆಸಲಾಗುತ್ತಿದೆ. ಇಲ್ಲಿ ಬೆಳೆದಂತೆ ನಮನಮೂನೆಯ ಮಲ್ಲಿಗೆ ಬೇರೆಲ್ಲೂ ಬೆಳೆಯುತ್ತಿಲ್ಲ ಎನ್ನುವುದು ಬೆಳೆಗಾರರ ಮತ್ತು ಕೃಷಿಕರ ಮಾತು.

ಮಲ್ಲಿಗೆಯು ತೋಟಗಾರಿಕೆ ಬೆಳೆ. ಕೃಷಿಕರಿಗೆ ಸುಲಭವಾಗಿ ಸಾಲ ಸಿಗುತ್ತದೆ. ರೈತರಿಗೆ ಬಂಡವಾಳವೂ ಕಡಿಮೆ. ಕಾರಣ ಹೂವಿನಹಡಗಲಿ ಪಟ್ಟಣ ಸೇರಿ ತಾಲೂಕಿನ ಮುದೇನೂರು, ಸೋಗಿ, ಹನಕನಹಳ್ಳಿ, ದೇವಗೊಂಡನಹಳ್ಳಿ, ಮೀರಾಕೊರ್ನಹಳ್ಳಿ, ನವಲಿ, ಕಾಗನೂರು, ಕೊಂಬಳಿ, ಕೊಯಿಲಾರಗಟ್ಟಿ, ತಿಪ್ಪಾಪುರ, ಹಗರನೂರು, ನಾಗತಿಬಸಾಪುರ, ಹೊನ್ನೂರು ಸೇರಿ ಪ್ರತಿ ಗ್ರಾಮಗಳಲ್ಲಿ ಅಂದಾಜು 500 ರಿಂದ 600 ಎಕರೆ ಪ್ರದೇಶದಲ್ಲಿ ಮಲ್ಲಿಗೆ ಹೂವನ್ನು ಬೆಳೆದು, ಪಟ್ಟಣಕ್ಕೆ ಕಳುಹಿಸಲಾಗುತ್ತಿದೆ.

ಇಲ್ಲಿಯ ಮಲ್ಲಿಗೆ ಕೃಷಿಕರು ಪ್ರತಿ ನವಂಬರ್ ಕೊನೆಯ ವಾರ, ಇಲ್ಲವೇ ಡಿಸೆಂಬರ್ ಮೊದಲ ವಾರದಲ್ಲಿ ಗಿಡಗಳ ಕಟಾವ್ ಮಾಡಿ, ಏಪ್ರಿಲ್ ಮೊದಲ ವಾರದಿಂದ ಹೂವು ಕೀಳಲು ಶುರು ಮಾಡುತ್ತಾರೆ. ಒಂದರ್ಥದಲ್ಲಿ ಏಪ್ರಿಲ್ ಮೊದಲ ವಾರದಿಂದ 'ಮಲ್ಲಿಗೆ ಸುಗ್ಗಿ' ಶುರುವಾಗಿ ಆಗಸ್ಟ್ - ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳಲಿದೆ.

Jasmine

ಪ್ರತಿ ಎಕರೆಗೆ ಕನಿಷ್ಠ ಅಂದಾಜು 25 ರಿಂದ 30 ಸಾವಿರ ರುಪಾಯಿ ಬಂಡವಾಳದ ಅಗತ್ಯವಿದೆ. ನಿತ್ಯ 50 - 75 ಕೆ.ಜಿ. ಇಳುವರಿ ಪಡೆಯುವ ಸಾಧ್ಯತೆಗಳಿವೆ. ಪ್ರತಿ ಕೆ.ಜಿ ಹೂವು (ಮೊಗ್ಗೆ, ಮೊಗ್ಗು) ಕೀಳಲು 20 ರಿಂದ 75 ರುಪಾಯಿ ವ್ಯಯವಾಗುತ್ತಿದ್ದು, ಬೇಡಿಕೆ ಆಧರಿಸಿ, ಕೃಷಿಕರ ಕೂಲಿಯೂ ಹೆಚ್ಚಲಿದೆ. ದೊಡ್ಡ ಪ್ರಮಾಣದ ಕೂಲಿಯನ್ನು ಕೆ.ಜಿ.ಗಟ್ಟಲೆ ನೀಡಿದರೂ, ಕೂಲಿಗಳು ಸಕಾಲಕ್ಕೆ ಸಿಗುತ್ತಿಲ್ಲ ಎನ್ನುವುದು ಅನೇಕರ ನೋವು.

ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಗದಗ, ಶಿವಮೊಗ್ಗ, ರಾಣೆಬೆನ್ನೂರು ಸೇರಿ ರಾಜ್ಯದಾದ್ಯಂತ ಇರುವ ಹೂವಿನ ಮಂಡಿಗಳಿಗೆ ಹೂವನ್ನು ಮಾರಾಟಗಾರರು ಕಳುಹಿಸುತ್ತಾರೆ. ಹೂವನ್ನು ರವಾನೆ ಮಾಡುವಾಗ ರೈತರು ಸಾಕಷ್ಟು ಎಚ್ಚರ ವಹಿಸುತ್ತಾರೆ. ಪ್ರತಿ ಮಾರುಕಟ್ಟೆಯಲ್ಲೂ ಹೂವಿನಹಡಗಲಿಯ ಮಲ್ಲಿಗೆ ಮೊಗ್ಗುಗೆ ಪ್ರತ್ಯೇಕ ಬೆಲೆ ನಿಗದಿ ಆಗುತ್ತದೆ. ಸಾಕಷ್ಟು ಬೇಡಿಕೆ ಇರುವ ಈ ಹೂವಿಗೆ ಪ್ರತ್ಯೇಕ ಗ್ರಾಹಕರೂ ಇರುವುದು ವಿಶೇಷ.

ಹೂವಿನಹಡಗಲಿ ಮಲ್ಲಿಗೆ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಎಸ್. ಹಾಲೇಶ್, 'ಮಲ್ಲಿಗೆ ಹೂವಿಗೆ ಸೂಕ್ತ ಬೆಂಬಲ ಬೆಲೆ ಮತ್ತು ವೈಜ್ಞಾನಿಕ ಬೆಲೆ ನಿಗದಿ ಮಾಡುವ ಪದ್ಧತಿ ಜಾರಿಗೆ ಬರಬೇಕಿದೆ. ಹೂವನ್ನು ಬಹುಕಾಲ ಸಂರಕ್ಷಿಸಲು ಆಧುನಿಕ ತಂತ್ರಜ್ಞಾನದ ಹವಾನಿಯಂತ್ರಿತ ಘಟಕವನ್ನು ಸರಕಾರವೇ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಮಲ್ಲಿಗೆ ಕೃಷಿಕರು ಕ್ರಮೇಣ ಕರಗಿ, ಹೂವು ಬೆಳೆಯೂ ಕಮರುತ್ತದೆ' ಎನ್ನುತ್ತಾರೆ.

English summary
Here is the identity of Ballari district Hoovinahadagali with Jasmine flower. It is famous in all over the Karnataka. What are the need of farmers right now? Here is the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X