ಬಳ್ಳಾರಿ: 39 ಮಾನವ ಕಳ್ಳ ಸಾಗಣಿಕೆದಾರರಿಗೆ 10 ವರ್ಷ ಜೈಲು

By: ಅನುಶಾ ರವಿ
Subscribe to Oneindia Kannada

ಬಳ್ಳಾರಿ, ಜನವರಿ 18: ಮಾನವ ಕಳ್ಳ ಸಾಗಣಿಕೆ ಪ್ರಕರಣವೊಂದರಲ್ಲಿ 39 ಅಪರಾಧಿಗಳಿಗೆ ಬಳ್ಳಾರಿ ಜಿಲ್ಲಾ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾನವ ಕಳ್ಳ ಸಾಗಣೆದಾರರು ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದಾಗಿದೆ.

ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ 87 ಜನ ದೋಷಿಗಳು ಎಂದು ಬಳ್ಳಾರಿ ಜಿಲ್ಲಾ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿತ್ತು. ಇದೀಗ 87 ಅಪರಾಧಿಗಳಲ್ಲಿ 39 ಜನರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 2.47 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

A rare victory: 39 traffickers handed 10 years imprisonment

ಕಳೆದ ಮೂರು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆದು ಕೊನೆಗೂ ಈ ಮಹತ್ವದ ತೀರ್ಪು ಹೊರ ಬಿದ್ದಿದೆ. ವಿಚಾರಣೆ ವೇಳೆ ಅಪರಾಧಿಗಳು ಕಳ್ಳ ಸಾಗಣೆಯಲ್ಲಿ ಮಧ್ಯವರ್ತಿಗಲಾಗಿದ್ದರು ಮತ್ತು ಮಾರಾಟದಲ್ಲಿ ತೊಡಗಿದ್ದರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿತ್ತು. ಇವರೆಲ್ಲಾ ಮನುಷ್ಯರ ಕಳ್ಳತನ, ಸಾಗಾಟ ಮತ್ತು ವೇಶ್ಯಾಗೃಹಗಳಿಗೆ ಯುವತಿಯರನ್ನು ಪೂರೈಸುವ ನೀಚ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಬಳ್ಳಾರಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಎಚ್. ಧರ್ವಾಡ್ಕರ್ ಅಪರಾಧಿಗಳಿಗೆ, ಐಪಿಸಿ ಸೆಕ್ಷನ್ 366, 366ಎ, 366ಬಿ, 368, 370, 370ಎ, 372, 373 ಹಾಗೂ ಅಮಾನವೀಯ ಕಳ್ಳ ಸಾಗಣೆ (ತಡೆ) ಕಾಯಿದೆಯ ಸೆಕ್ಷನ್ 3, 4, 5, 6, 7, 9 ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಖಾಯಿದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಶಿಕ್ಷೆ ನೀಡಿದರು.

ಮೂರು ವರ್ಷಗಳ ಸುಧೀರ್ಘ ವಿಚಾರಣೆ

2013ರಲ್ಲಿ ಬಳ್ಳಾರಿ ಪೊಲೀಸರು ವೇಶ್ಯಾಗೃಹಗಳ ಮೇಲೆ ದಾಳಿ ಮಾಡಿ 43 ಯುವತಿಯರನ್ನು ರಕ್ಷಿಸಿದ್ದರು. ಇದರಲ್ಲಿ 21 ಅಪ್ರಾಪ್ತ ಯುವತಿಯರೂ ಸೇರಿದ್ದರು. ಮಾನವ ಸಾಗಣೆ ವಿರೋಧಿ ಸರಕಾರೇತರ ಸಂಸ್ಥೆ (ಎನ್ಜಿಒ) ಯ ಮಾಹಿತಿಯ ಮೇರೆ ಪೊಲೀಸರು ಈ ದಾಳಿ ನಡೆಸಿದ್ದರು.

ಮುಂದೆ ಯುವತಿಯರ ಮಾರಾಟದ ಈ ಬೃಹತ್ ಜಾಲದ ಹಿಂದಿದ್ದ 87 ಜನರಲ್ಲಿ 51 ಜನರನ್ನು ಬಂಧಿಸುವಲ್ಲಿಯೂ ಪೊಲೀಸರು ಸಫಲರಾಗಿದ್ದರು. ಇವರೆಲ್ಲರನ್ನು ಡಿಸಿ ನಗರ ಪ್ರದೇಶದಲ್ಲಿ ಬಂಧಿಸುವ ವೇಳೆ ಇನ್ನೂ ಹಲವು ಸಂತ್ರಸ್ತರನ್ನೂ ಪೊಲೀಸರು ರಕ್ಷಿಸಿದ್ದರು. ಜತೆಗೆ 4.59 ಲಕ್ಷ ರೂಪಾಯಿಗಳನ್ನೂ ವಶಕ್ಕೆ ಪಡೆದುಕೊಂಡಿದ್ದರು. ರಕ್ಷಿಸಲಾದ ಯುವತಿಯರಲ್ಲಿ ಬಾಂಗ್ಲಾದೇಶದ 7 ಯುವತಿಯರು ಹಾಗೂ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಒರಿಸ್ಸಾ ಸೇರಿದಂತೆ ದೇಶದ ನಾನಾ ಭಾಗಗಳ ಯುವತಿಯರಿದ್ದರು.

ಪ್ರಕರಣದಲ್ಲಿ ರಕ್ಷಿಸಲಾಗಿದ್ದ ಯುವತಿಯರನ್ನು ಬೆಂಗಳೂರಿನಲ್ಲಿರುವ ಸರಕಾರದ ಪಾಲನಾ ಕೇಂದ್ರಗಳಿಗೆ ಕಳುಹಿಸಲಾಗಿತ್ತು. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In human trafficking case 39 of the total 87 accused were sent to 10 years imprisonment and fined Rs 2.47 lakh by the District and Sessions Court in Ballari.
Please Wait while comments are loading...