ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ

Posted By:
Subscribe to Oneindia Kannada

ಎಲ್ಲವೂ ಆ ಮನೆಯ ಹಿರಿಯರು ಅಂದುಕೊಂಡ ಹಾಗೆ ನಡೆದಿದ್ದರೆ 14 ವರ್ಷದ ತುಳಸಿಗೆ ಮದುವೆ ಮುಗಿದು 3 ತಿಂಗಳಾಗಿರುತ್ತಿತ್ತು. ಆ ಪುಟ್ಟ ಹುಡುಗಿಯ ದಿಟ್ಟತನ ಆಕೆಯನ್ನು ಕೈ ಹಿಡಿದಿದೆ. ಬೆಳಗಾವಿ ಜಿಲ್ಲೆಯ ಕಲಖಂಬ ಗ್ರಾಮದಲ್ಲಿ ಈಗ ಉಳಿದವರು ಈ ಪೋರಿಯನ್ನು ಬೆರಗು ಕಣ್ಣಿನಿಂದ ನೋಡುತ್ತಾರೆ.

'ನಮ್ಮ ಗ್ರಾಮದ ನಿಯಮವೇ ಹಾಗಿದೆ. ಹೆಣ್ಣುಮಕ್ಕಳು ಋತುಮತಿ ಆಗುವ ಒಂದೆರಡು ವರ್ಷದ ಮುಂಚೆ ಮದುವೆ ಆಗಿಬಿಡಬೇಕು. ಆದರೆ ನಾನು ಮದುವೆ ನಿರಾಕರಿಸಿದೆ. ಕಾನೂನು ಕಾರಣ ಹೇಳಿ ಗ್ರಾಮದ ಹಿರಿಯರನ್ನು ಹೆದರಿಸಿದೆ. ಅವರಿಗೆ ನನ್ನ ನಡವಳಿಕೆ ವಿಲಕ್ಷಣ ಎನಿಸಿತು, ನನ್ನ ಮೇಲೆ ಕೂಗಾಡಿದರು' ಎಂದು ಹೇಳುವ ತುಳಸಿಗೆ ಈ ಗ್ರಾಮದ ಅನಿಷ್ಟ ಪದ್ಧತಿ ಬಗ್ಗೆ ಅಸಾಧ್ಯ ಸಿಟ್ಟಿದೆ.

ಬಾಲಕಿ ತುಳಸಿ ಸುಡುಗಾಡು ಸಿದ್ಧರ ಸಮುದಾಯಕ್ಕೆ ಸೇರಿದವಳು. ಈ ಸಮುದಾಯದವರು ಪರಿಶಿಷ್ಟ ಜಾತಿಗೆ ಸೇರುತ್ತಾರೆ. 2013ರಲ್ಲಿ 15 ವರ್ಷದ ಬಾಲಕನೊಬ್ಬನ ಜತೆಗೆ ತುಳಸಿಯ ನಿಶ್ಚಿತಾರ್ಥ ಆಗಿತ್ತು. ಆಗ ಆಕೆಗೆ 11 ವರ್ಷ.

Story of a girl who stopped her marriage

'ನನಗೆ ಗೊತ್ತಿತ್ತು, ಈ ರೀತಿ ನಿಶ್ಚಿತಾರ್ಥ ಮಾಡುವುದು ತಪ್ಪು. ಆದರೆ ಬೇಡ ಅನ್ನೋಷ್ಟು ಧೈರ್ಯ ನನಗಿರಲಿಲ್ಲ. ನಾನು ಹುಟ್ಟಿದ ಕೆಲವು ವರ್ಷಕ್ಕೆ ಜಾತಿಯ ಹಿರಿಯರು ನನ್ನ ಮದುವೆಯನ್ನ ಆ ಹುಡುಗನ ಜೊತೆಗೆ ನಿರ್ಧರಿಸಿದರು ಎಂದು ಅಪ್ಪ-ಅಮ್ಮ ಹೇಳಿದರು' ಎಂದು ಅಮಾಯಕವಾಗಿ ನುಡಿಯುತ್ತಾಳೆ ತುಳಸಿ.

'ನಿಶ್ಚಿತಾರ್ಥ ಆದ 6 ತಿಂಗಳಿಗೆ ಶಾಲೆ ಬಿಟ್ಟು, ಚಿಂದಿ ಆಯುವುದಕ್ಕೆ ಹೋಗುವುದಕ್ಕೆ ಹೇಳಿದರು. ನನಗೇನೂ ಅದು ಇಷ್ಟವಾದ ಕೆಲಸ ಏನಲ್ಲ. ಆದರೆ ನಮ್ಮದು ಬಡ ಕುಟುಂಬ. ಕೆಲಸಕ್ಕೆ ಹೋಗಲಾರೆ ಅಂತ ಸುಲಭಕ್ಕೆ ಹೇಳೋದು ಸಾಧ್ಯ ಇರಲಿಲ್ಲ.

'ಕಳೆದ ವರ್ಷ ನನ್ನ ಮದುವೆಗೆ ಮನೆಯಲ್ಲಿ ತಯಾರಿ ಶುರು ಮಾಡಿದರು. ಆಗ ನನಗೆ ಸಹಾಯಕ್ಕೆ ಬಂದವರು ನಾನು ಹೋಗುತ್ತಿದ್ದ ಡಾನ್ ಬಾಸ್ಕೋ ಶಾಲೆ ಶಿಕ್ಷಕಿ ಸಿಸ್ಟರ್ ಅನಿತಾ.

'ನನ್ನ ಮದುವೆಯ ಪ್ರಸ್ತಾವ 2015ರಲ್ಲಿ ಬಂದಾಗ ಅನಿತಾ ಅವರಿಗೆ ತಿಳಿಸಿದೆ. ನನ್ನ ಅಪ್ಪ-ಅಮ್ಮನಿಗೆ ಅವರು ತಿಳಿಸಿ ಹೇಳಿದರು. ನನಗೆ ಕೌಶಲ ತರಬೇತಿ ಕೊಡಿಸ್ತೀನಿ ಅಂತಲೂ ಹೇಳಿದರು. ಅದೇ ಸಮಯದಲ್ಲಿ ಅವರು ಬಾಲ್ಯ ವಿವಾಹದ ಬಗ್ಗೆ ಬೀದಿ ನಾಟಕ ಆಡಿಸ್ತಿದ್ದರು. ನಾನು ಆ ನಾಟಕದಲ್ಲಿ ಪೊಲೀಸ್ ಪಾತ್ರ ಮಾಡಿದ್ದೆ. ಹಳ್ಳಿಹಳ್ಳಿಗೆ ಹೋಗಿ ಆ ನಾಟಕ ಮಾಡ್ತಿದ್ದಿವಿ. ನನಗೆ ಆಗಲೇ ಗೊತ್ತಾಗಿದ್ದು: ಮಕ್ಕಳಿಗೆ ಮದುವೆ ಮಾಡೋದು ಎಲ್ಲ ಕಡೆ ಇರುವ ಸಮಸ್ಯೆ. ಎಲ್ಲ ಜಾತಿಯಲ್ಲೂ ಇದೆ. ಆ ಜಾತಿಯ ಮುಖ್ಯಸ್ಥರು ಹೇಳಿದರು ಅನ್ನೋ ಕಾರಣಕ್ಕೆ ಮದುವೆ ಮಾಡಿಬಿಡುತ್ತಾರೆ' ಎನ್ನುತ್ತಾಳೆ ತುಳಸಿ.

ತುಳಸಿ ತನ್ನ ಮದುವೆ ತಡೆದಿರೋದು ಅಷ್ಟೇ ಅಲ್ಲ, ಅವಳ ಇಬ್ಬರು ಸೋದರಿಯರು ಹಾಗೂ ಸೋದರರ ಬಾಲ್ಯ ವಿವಾಹವನ್ನೂ ತಡೆದಿದ್ದಾಳೆ. ತುಳಸಿಗೆ ತಾನು ವೈದ್ಯಳಾಗಿ, ತನ್ನ ಹಳ್ಳಿಗೆ ಸೇವೆ ಮಾಡಬೇಕು ಎಂಬ ಆಸೆ ಇದೆ.

ಬೆಳಗಾವಿಯಲ್ಲಿರುವ ಸ್ಪಂದನ ಸಂಸ್ಥೆಯ ನಿರ್ದೇಶಕಿ ಸುಶೀಲಾ ಅವರು ಹೇಳುವ ಪ್ರಕಾರ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ವಿಪರೀತವಾಗಿದೆ. ವಲಸೆ, ರಕ್ಷಣೆ ಸೇರಿದಂತೆ ಬಾಲ್ಯವಿವಾಹಕ್ಕೆ ಹಲವು ಕಾರಣಗಳಿವೆ. ಆದರೆ ಹಲವು ಹೆಣ್ಣುಮಕ್ಕಳ ಮದುವೆಯು ಆಯಾ ಜಾತಿ ಮುಖ್ಯಸ್ಥರು 'ಸಂಪ್ರದಾಯ'ದ ಹೆಸರಿನಲ್ಲಿ ಮಾಡಿಸುತ್ತಾರೆ.

ಕಳೆದ ವರ್ಷ ಬೆಳಗಾವಿ ಜಿಲ್ಲೆಯೊಂದರಲ್ಲೇ ಸ್ಪಂದನ ಸಂಸ್ಥೆ ಕನಿಷ್ಠ 50 ಬಾಲ್ಯವಿವಾಹಗಳನ್ನು ತಡೆದಿದೆ. ಮದುವೆಯಾದ ಐವರು ಬಾಲಕಿಯರನ್ನು ರಕ್ಷಿಸಲಾಗಿದೆ. ಹಲವು ಪ್ರಕರಣದಲ್ಲಿ ಹಳ್ಳಿಗರು ಮಧ್ಯರಾತ್ರಿ ಹೊತ್ತಿನಲ್ಲಿ ಮಕ್ಕಳ ಮದುವೆ ಮಾಡಿದ್ದಾರೆ ಎಂದು ಸುಶೀಲಾ ಹೇಳುತ್ತಾರೆ.

ಶೇ 40ರಷ್ಟು ಬಾಲಕಿಯರಿಗೆ 18 ವರ್ಷ ತುಂಬುವ ಮುಂಚೆಯೇ ಮದುವೆ ಅಗುತ್ತದೆ. ಈ ಪೈಕಿ ಶೇ 15ರಷ್ಟು ಹುಡುಗಿಯರು ತಾಯಿಯೂ ಆಗಿಬಿಡುತ್ತಾರೆ. 2006ರಲ್ಲೇ ಬಾಲ್ಯವಿವಾಹ ನಿಷೇಧಿಸಿದ್ದರೂ 2012ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಒಂದು ಪ್ರಕರಣ ಕೂಡ ದಾಖಲಾಗಿರಲಿಲ್ಲ. ನಾವು ಆ ವರ್ಷ ಎರಡು ಪ್ರಕರಣ ದಾಖಲಿಸಿದಿವಿ. ಪೊಲೀಸರಿಗೂ ಈ ಬಗ್ಗೆ ಅರಿವಿರಲಿಲ್ಲ. ಅವರಲ್ಲಿ ಕೆಲವರಿಗೆ ಕಾನೂನಿನ ಬಗ್ಗೆ ಕೂಡ ಗೊತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ.

ಮೂರು ವರ್ಷದ ಅವಧಿಯಲ್ಲಿ ಸಮುದಾಯದ ಹಿರಿಯರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ತುಳಸಿಯ ವಿಚಾರಕ್ಕೆ ಬರುವುದಾದರೆ, 'ನನ್ನ ಐವರು ಗೆಳತಿಯರಿಗೆ ಈ ಮಧ್ಯೆ ಮದುವೆಯಾಗಿದೆ. ಅವರ್ಯಾರನ್ನೂ ಮನೆಯಿಂದ ಆಚೆ ನಾನು ನೋಡೇ ಇಲ್ಲ. ನನಗೆ ಅವರ ಥರ ಬದುಕೋದು ಇಷ್ಟ ಇಲ್ಲ' ಎನ್ನುತ್ತಾಳೆ ಆ ಬಾಲಕಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It is a story of a girl Tulasi from Kalakhamb village, Belagavi district. Who stopped her marriage by protestiong against her elders.
Please Wait while comments are loading...