ಬೆಳಗಾವಿ ಅಧಿವೇಶನದಲ್ಲಿ 15 ವಿಧೇಯಕಗಳಿಗೆ ಒಪ್ಪಿಗೆ

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್, 3: ನವೆಂಬರ್ 21 ರಿಂದ ಆರಂಭವಾದ 14ನೇ ವಿಧಾನ ಸಭೆಯ 12ನೇ ಬೆಳಗಾವಿ ಸುವರ್ಣವಿಧಾನಸೌಧ ಅಧಿವೇಶನದಲ್ಲಿ ಒಟ್ಟು 15ವಿಧೇಯಕಗಳನ್ನು ಮಂಡಿಸಲಾಗಿದೆ. ಇದರ ಪೈಕಿ 15ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಹಾಗೂ 2015ರಲ್ಲಿ ಮಂಡಿಸಲಾದ ಒಂದು ವಿಧೇಯಕವನ್ನು ಹಿಂಪಡೆಯಲಾಗಿದೆ. ಎಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದರು.

ಕಲಾಪ ನಡೆದ ಒಟ್ಟು ಅವಧಿಯ ಸುಮಾರು ಅರ್ಧದಷ್ಟು ಸಮಯ ರಾಜ್ಯದ ಬರಗಾಲ ಪರಿಸ್ಥಿತಿ ಹಾಗೂ ಮಹದಾಯಿ ವಿವಾದ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ. ಒಟ್ಟು 9 ದಿನಗಳ ಕಾಲ 49ಗಂಟೆ 15ನಿಮಿಷಗಳ ಕಾಲ ಕಲಾಪ ನಡೆದಿದೆ.

Speaker Koliwada adjournes Belagavi winter session on Saturday

ಈ ಅವಧಿಯಲ್ಲಿ ರಾಜ್ಯದ ಬರಗಾಲ ಮತ್ತು ಕುಡಿಯುವ ನೀರಿನ ಪರಿಸ್ಥಿತಿ ಕುರಿತು 11 ಗಂಟೆ 34ನಿಮಿಷಗಳ ಕಾಲ ಚರ್ಚೆ ಮಾಡಲಾಗಿದೆ. ಈ ವಿಶೇಷ ಚರ್ಚೆಯಲ್ಲಿ 32 ಸದಸ್ಯರು ಭಾಗವಹಿಸಿದ್ದರು. ಇದೇ ರೀತಿ ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆಯ ವಿಶೇಷ ಚರ್ಚೆಯಲ್ಲಿ 20ಸದಸ್ಯರು ಭಾಗಿಯಾಗಿ, 11ಗಂಟೆ 37ನಿಮಿಷಗಳ ಕಾಲ ಚರ್ಚೆ ಮಾಡಲಾಗಿದೆ.

ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಮಂತ್ರಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂಬ ನಿರ್ಣಯವನ್ನು ಸದನ ಕೈಗೊಂಡಿದೆ. ಸದನದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿರುವ 2015-16ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು ಹಾಗೂ 2016-17ನೇ ಸಾಲಿನ ಪೂರಕ ಅಂದಾಜುಗಳ 2ನೇ ಕಂತು, ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಸದನದಲ್ಲಿ ಮಂಡಿಸಲಾಯಿತು. ಪೂರಕ ಅಂದಾಜುಗಳ 2ನೇ ಕಂತನ್ನು ಡಿಸೆಂಬರ್ 2ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ.

ಸಮಿತಿಗಳ ವರದಿ ಮಂಡನೆ

ಈ ಅಧಿವೇಶನದಲ್ಲಿ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಗಳ ನಿಯಮಾವಳಿಗಳ ತಿದ್ದುಪಡಿಗಳಿಗೆ ಸಂಬಂಧಿಸಿದ ಜಂಟಿ ನಿಯಮಾವಳಿ ಸಮಿತಿಯ ಮಧ್ಯಂತರ ವರದಿ. ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 5ನೇ ವರದಿ.

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 6ನೇ ವರದಿ. ಅರ್ಜಿಗಳ ಸಮಿತಿಯ 22ನೇ ವರದಿ. ಸರ್ಕಾರದ ಭರವಸೆಗಳ ಸಮಿತಿಯ 6ನೇ ವರದಿ. ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ 10ನೇ ಮತ್ತು 11ನೇ ವರದಿ ಮತ್ತು ನೈಸ್ ಸದನ ಸಮಿತಿ ವರದಿಯನ್ನು ಸದನಕ್ಕೆ ಒಪ್ಪಿಸಲಾಗಿದೆ.

ಪ್ರಶ್ನೋತ್ತರ ಅವಧಿ

ಅಧಿವೇಶನದಲ್ಲಿ ಸ್ವೀಕರಿಸಲಾದ ಒಟ್ಟು 2527 ಪ್ರಶ್ನೆಗಳ ಪೈಕಿ 2140 ಪ್ರಶ್ನೆಗಳನ್ನು ಅಂಗೀಕರಿಸಲಾಗಿದೆ. ಸದನದಲ್ಲಿ ಉತ್ತರಿಸುವ 150ಪ್ರಶ್ನೆಗಳ ಪೈಕಿ 148ಕ್ಕೆ ಲಿಖಿತ ಉತ್ತರ ನೀಡಲಾಗಿದೆ. 1938 ಪ್ರಶ್ನೆಗಳ ಪೈಕಿ 1761ಪ್ರಶ್ನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ. 52ಪ್ರಶ್ನೆಗಳ ಸೂಚನಾ ಪತ್ರಗಳು ತಿರಸ್ಕೃತಗೊಂಡಿದ್ದು 387 ಪ್ರಶ್ನೆಗಳ ಸೂಚನಾ ಪತ್ರಗಳು ಹೆಚ್ಚುವರಿಯಾಗಿ ಸ್ವೀಕರಿಸಲಾಗಿದೆ.

ಶೂನ್ಯವೇಳೆಯಲ್ಲಿ 32ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ನಿಯಮ 351ರಡಿಯಲ್ಲಿ ಸ್ವೀಕರಿಸಲಾದ 120 ಸೂಚನೆಗಳಲ್ಲಿ 90ಸೂಚನೆಗಳು ಅಂಗೀಕೃತಗೊಂಡು 69ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಪ್ರಸ್ತುತ ಅಧಿವೇಶನದಲ್ಲಿ 1ಖಾಸಗಿ ಸದಸ್ಯರ ವಿಧೇಯಕವನ್ನು ಸದನದಲ್ಲಿ ಚರ್ಚಿಸಿದೆ. ಸರ್ಕಾರದ ಉತ್ತರದ ನಂತರ ವಿಧೇಯಕವನ್ನು ಹಿಂಪಡೆಯಲಾಗಿದೆ.

ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಧನ್ಯವಾದ ಸಲ್ಲಿಸಿದರು. ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Speaker Koliwada adjourned Belagavi winter session on Saturday, 15 bills passed in this session says Koliwada.
Please Wait while comments are loading...