ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಪ್ರತಿಭಟನೆ, ಕಾಂಗ್ರೆಸ್ ನಿರ್ಲಕ್ಷ್ಯ ಸರೀನಾ?

By Kiran B Hegde
|
Google Oneindia Kannada News

ಬೆಳಗಾವಿ, ಡಿ. 8: ವಿಧಾನಸಭೆ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ 'ಒನ್ಇಂಡಿಯಾ ಕನ್ನಡ'ದ ಪ್ರಧಾನ ಸಂಪಾದಕ ಶ್ಯಾಮ ಸುಂದರ್ ಅವರು ಸೋಮವಾರ ಬಿಜೆಪಿ ಶಾಸಕ ಸಂಜಯ ಪಾಟೀಲ, ಕಾಂಗ್ರೆಸ್‌ ಶಾಸಕ ಅಶೋಕ ಪಟ್ಟಣ ಹಾಗೂ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಜೊತೆ ಸಂವಾದ ನಡೆಸಿದರು.

ಪ್ರತಿಭಟನೆ ಹೇಗೆ ಶಮನ ಮಾಡ್ತೀರಿ...?

ಅಧಿವೇಶನ ಸಂದರ್ಭ 60ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆಯುವ ಸಂಭವನೀಯತೆ ಇದೆ. ಬಿಜೆಪಿಯೂ ಪ್ರತಿಭಟನೆಗೆ ಮುಂದಾಗಿದೆ. ಇದರಿಂದ ವಿಧಾನಸಭೆ ಕಾರ್ಯಕಲಾಪ ಸರಿಯಾಗಿ ನಡೆಯಲಿದೆಯೇ ಎಂದು ಶ್ಯಾಮ್ ಸುಂದರ್ ಪ್ರಶ್ನಿಸಿದರು.

ಸಂಜಯ ಪಾಟೀಲ ಪ್ರತಿಕ್ರಿಯಿಸಿ, "ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಆದ್ದರಿಂದ ಪ್ರತಿಭಟನೆ ಅನಿವಾರ್ಯವಾಯಿತು" ಎಂದರು. ಈ ವಾದ ನಿರಾಕರಿಸಿದ ಅಶೋಕ ಪಟ್ಟಣ "ಬಿಜೆಪಿಯವರು ವಿಧಾನಸಭೆಯಲ್ಲಿ ಚರ್ಚಿಸಬಹುದಿತ್ತು" ಎಂದರು. ಇದಕ್ಕೆ ದನಿಗೂಡಿಸಿದ ಬಿ.ಡಿ. ಹಿರೇಮಠ "ಸಂವಿಧಾನದಲ್ಲಿ ಶಾಸಕರಿಗೆ ಚರ್ಚಿಸುವ ಹಕ್ಕು ನೀಡಲಾಗಿದೆ. ಸದನದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚಿಸಿ" ಎಂದು ಆಗ್ರಹಿಸಿದರು.

ಪ್ರತಿ ವರ್ಷ ನಡೆಯುತ್ತಿರುವ ಬೆಳಗಾವಿ ಅಧಿವೇಶನ 'ಚಳಿಗಾಲದ ಸಂತೆ' ಎಂಬಂತಾಗಿದೆ ಎಂದು ಶ್ಯಾಮ ಸುಂದರ್ ಟೀಕಿಸಿದರು. "ಬಿಜೆಪಿಯವರು ಚುನಾಯಿತ ಶಾಸಕರಾಗಿದ್ದರೂ 50 ಸಾವಿರ ಕಾರ್ಯಕರ್ತರೊಂದಿಗೆ ಬೀದಿಯಲ್ಲಿ ಹೋರಾಟಕ್ಕಿಳಿದಿದ್ದು ಸರಿಯೇ? ವಿಠಲ ಅರಬಾವಿ ಆತ್ಮಹತ್ಯೆ ಪ್ರಕರಣ ಮರೆತು ಬಿಟ್ಟಿರಾ. ಕಾನೂನು ಸುವ್ಯವಸ್ಥೆ ನಿಯಂತ್ರಣ ಹೇಗೆ" ಎಂದು ಪ್ರಶ್ನಿಸಿದರು.

ಸಂಜಯ ಪಾಟೀಲ ಪ್ರತಿಕ್ರಿಯಿಸಿ, "ಹೊರಗೂ ಹೋರಾಡ್ತೇವೆ, ಸದನದಲ್ಲೂ ಪ್ರಶ್ನೆ ಮಾಡ್ತೇವೆ" ಎಂದು ಸ್ಪಷ್ಟಪಡಿಸಿದರು. "ಕಾಂಗ್ರೆಸ್ ಒಂದೇ ಅಲ್ಲ ಎಲ್ಲ ಪಕ್ಷಗಳೂ ರೈತರನ್ನು ನಿರ್ಲಕ್ಷಿಸಿವೆ" ಎಂದು ಬಿ.ಡಿ. ಹಿರೇಮಠ ಆರೋಪಿಸಿದರು.

"ಅಧಿವೇಶನ ಸಂದರ್ಭ ಪ್ರತಿಭಟನೆಗೆ 50ಕ್ಕಿಂತ ಹೆಚ್ಚು ಸಂಘಟನೆಗಳು ಸಜ್ಜಾಗಿವೆ. ಮುಖ್ಯಮಂತ್ರಿಗಳು ಎರಡು ದಿನ ಮೊದಲೇ ಬಂದು ಸಮಾಲೋಚನೆ ನಡೆಸಿ ಗೊಂದಲ ಬಗೆಹರಿಸಬಹುದಿತ್ತು ಅಲ್ಲವೇ?" ಎಂದು ಶ್ಯಾಮಸುಂದರ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಶೋಕ ಪಟ್ಟಣ "ಪ್ರತಿಭಟನೆ ನಡೆಸಲು ಕೊನೆ ಹಂತದಲ್ಲಿ ನಿರ್ಧರಿಸಲಾಗಿದೆ. ಈಗಲೂ ಸಮಯ ಮೀರಿಲ್ಲ. ಮಂಗಳವಾರ ಮುಖ್ಯಮಂತ್ರಿಗಳು ಬಂದ ತಕ್ಷಣ ಮಾತನಾಡಿ ಬಗೆಹರಿಸಿಕೊಳ್ಳಬಹುದು" ಎಂದರು.

"ಮುಖ್ಯಮಂತ್ರಿಗಳ ಜನತಾದರ್ಶನ ಮಾದರಿಯಲ್ಲಿ ಸಂಬಂಧಪಟ್ಟ ಮಂತ್ರಿಗಳು ಪ್ರತಿಭಟನಾಕಾರರತ್ತ ತೆರಳಿ ಸಮಸ್ಯೆ ವಿಚಾರಿಸಿಕೊಳ್ಳಬೇಕು" ಎಂದು ಬಿ.ಡಿ. ಹಿರೇಮಠ ಆಗ್ರಹಿಸಿದರು.

ಆಗ ಶ್ಯಾಮಸುಂದರ್ ಅವರು "ಸರ್ಕಾರಕ್ಕೆ ರಾಜಕೀಯೇತರ ಸಂಘಟನೆಗಳ ಜತೆ ಮಾತನಾಡಲು ಸಮಯವಿದೆಯೇ?" ಎಂದು ಪ್ರಶ್ನಿಸಿದಾಗ, ಅಶೋಕ ಪಟ್ಟಣ "ಇದೆ, ಮಾತಾಡ್ತೀವಿ. ಈಗ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತಾಡೋಣ" ಎಂದರು.

suvarna

ಅನುದಾನ ಏಕೆ ಖರ್ಚಾಗಿಲ್ಲ...?
ಆಗ ಪ್ರಶ್ನಿಸಿದ ಶ್ಯಾಮ ಸುಂದರ್ "ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಿದ್ದರಾಮಯ್ಯನವರು ಕಳೆದ ಬಜೆಟ್‌ನಲ್ಲಿ 300 ಕೋಟಿ ರೂ. ಘೋಷಿಸಿದ್ದರು. ಅದೇ ಇನ್ನೂ ಖರ್ಚಾಗಿಲ್ಲ. ಈಚೆಗೆ ಕಲ್ಬುರ್ಗಿಯಲ್ಲಿ ಮತ್ತೆ 600 ಕೋಟಿ ರೂ. ಘೋಷಿಸಿದ್ದಾರೆ. ಆದರೆ, ಈ ಎರಡೂ ಅನುದಾನಗಳು ಇನ್ನೂ ಬಿಡುಗಡೆಯೇ ಆಗಿಲ್ಲ. ಯೋಜನೆಗಳು ಜಾರಿಯಾಗಿವೆಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ" ಎಂದು ಪ್ರಶ್ನಿಸಿದರು.

ಬಿ.ಡಿ. ಹಿರೇಮಠ ಮಾತನಾಡಿ, "ಅನೇಕ ಸರ್ಕಾರಗಳು ಬಂದು ಹೋದವು. ನಂಜುಂಡಪ್ಪ ವರದಿ ಪ್ರಕಾರ ಅನುದಾನ ಬಿಡುಗಡೆ ಮಾಡಿದ್ದರೆ ಜನ ಉದ್ಧಾರವಾಗ್ತಿದ್ರು. ಆದರೆ, ಇಲ್ಲಿನ ಜನಪ್ರತಿನಿಧಿಗಳು ಬೆಂಗಳೂರಿನ ಕಾವೇರಿ ನೀರು ಕುಡಿದ ತಕ್ಷಣ ಕಾವೇರಿಬಿಡುತ್ತಾರೆ. ಉತ್ತರ ಕರ್ನಾಟಕವನ್ನು ಮರೆತುಬಿಡುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಮೈಸೂರಿಗೆ ಬಿಡುಗಡೆ ಮಾಡಿದಂತೆ ಉತ್ತರ ಕರ್ನಾಟಕಕ್ಕೆ ಅನುದಾನ ನೀಡುವುದಿಲ್ಲ. ತಾರತಮ್ಯ ಮಾಡಲಾಗುತ್ತಿದೆ. ಇಂತಹ ಅನ್ಯಾಯ ಹೋಗಲಾಡಿಸಲು ಕಾಂಗ್ರೆಸ್ ಸರ್ಕಾರ ಆಲೋಚಿಸಿದೆಯೇ" ಎಂದು ಶ್ಯಾಮ ಸುಂದರ್ ಪ್ರಶ್ನಿಸಿದಾಗ, ಬಿ.ಡಿ. ಹಿರೇಮಠ ಬೆಂಬಲಿಸಿದರು.

"ಆಲೋಚಿಸಿದ್ದೇವೆ, ರೈತರಿಗೆ ಅನುಕೂಲ ಕಲ್ಪಿಸಲು ಕಬ್ಬಿಗೆ ದರ ನಿಗದಿಪಡಿಸಿದೆವು. ಆದರೆ, ಮಾಲೀಕರು ಕೊಡಲಿಲ್ಲ" ಎಂದು ಅಶೋಕ ಪಟ್ಟಣ ಸಮರ್ಥಿಸಿಕೊಂಡರು.

"ಜನಪ್ರತಿನಿಧಿಗಳ ನಿರ್ಲಕ್ಷದಿಂದ ಉತ್ತರ ಕರ್ನಾಟಕ ವಿಷದ ನಾಡಾಗಿದೆ" ಎಂದು ಬಿ.ಡಿ. ಹಿರೇಮಠ ಆರೋಪಿಸಿದರು.

"ಹಿರೇಮಠ ಅವರು ಹೋರಾಟದಲ್ಲಿ ಯಶಸ್ವಿಯಾಗದಿದ್ದರೆ ಗಡ್ಡ ಬೋಳಿಸಲ್ಲ ಎಂದಿದ್ದಾರೆ. ಬಹುಶಃ ಅವರು ಜೀವನದಲ್ಲಿಯೇ ಗಡ್ಡ ಬೋಳಿಸಲು ಸಾಧ್ಯವಾಗದಿರಬಹುದು. ಸಮಸ್ಯೆ ಅಷ್ಟು ಆಘಾದವಾಗಿದೆ" ಎಂದು ಶ್ಯಾಮಸುಂದರ್ ಟೀಕಿಸಿದರು.

ಇವು ಸರ್ಕಾರದ ಸವಾಲುಗಳು:
"ಅಧಿವೇಶನ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವುದು, ಪ್ರತಿಭಟನೆ ನಿಲ್ಲಿಸಲು ಕಡೇ ಕ್ಷಣದ ಯತ್ನ ಹಾಗೂ ಸದನದಲ್ಲಿ ಕೇಳಲಿರುವ 1,600 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಮುಂದಿರುವ ಸವಾಲು" ಎಂದು ಶ್ಯಾಮ ಸುಂದರ್ ಹೇಳಿದರು.

"ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಂತಹ ಪ್ರವಾಸಿ ಸ್ಥಳಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಇಲ್ಲಿನ ಜನಪ್ರತಿನಿಧಿಗಳೆಲ್ಲ ಏನು ಮಾಡುತ್ತಿದ್ದೀರಿ? ನಿಮಗೆ ಆತ್ಮಾಭಿಮಾನ ಇಲ್ಲವೇ?" ಎಂದು ಶ್ಯಾಮಸುಂದರ್ ಟೀಕಿಸಿದರು.

"ಬೇರೆ ಸ್ಥಳದವರೇ ಮುಖ್ಯಮಂತ್ರಿ ಆಗ್ತಾರೆ. ಆದ್ದರಿಂದ ಉತ್ತರ ಕರ್ನಾಟಕ ನಿರ್ಲಕ್ಷ ಮಾಡ್ತಾರೆ" ಎಂದು ಹಿರೇಮಠ ಟೀಕಿಸಿದರು. "ಹಾಗೇನೂ ಇಲ್ಲ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದರೂ ಅಭಿವೃದ್ಧಿ ಆಗಲಿಲ್ಲ" ಎಂದು ಅಶೋಕ ಪಟ್ಟಣ ಸಮರ್ಥನೆ ನೀಡಿದರು.

"ಜನಪ್ರತಿನಿಧಿಗಳು ಕೇವಲ ಮಾತಾಡ್ತಾರೆ, ಕೆಲಸ ಮಾಡಲ್ಲ ಎಂದು ಬೆಳಗಾವಿ ಜನ ಆರೋಪಿಸಿದ್ದಾರೆ" ಎಂದು ಶ್ಯಾಮಸುಂದರ್ ಹೇಳಿದಾಗ, "ರಾಜಕೀಯದಲ್ಲಿ ಕೆಲಸ ಮಾಡುವವರು, ಮಾಡದವರು ಇಬ್ಬರೂ ಇದ್ದಾರೆ" ಎಂದು ಸಂಜಯ ಪಾಟೀಲ ಪ್ರತಿಕ್ರಿಯಿಸಿದರು.

ಉತ್ತರ ಕರ್ನಾಟಕಕ್ಕೆ ತಾರತಮ್ಯ ಏಕೆ?
"ಹಾಸನದ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯನ್ನು ಪರ್ಮನೆಂಟ್ ಮಾಡ್ತಾರೆ, ಬೆಳಗಾವಿಯಲ್ಲಿ ಪರ್ಮನೆಂಟ್ ಮಾಡಲ್ಲ ಏಕೆ?" ಎಂದು ಶ್ಯಾಮಸುಂದರ್ ಪ್ರಶ್ನಿಸಿದರು.

ಬಿ.ಡಿ. ಹಿರೇಮಠ ಪ್ರತಿಕ್ರಿಯಿಸಿ, ಕಾಂಗ್ರೆಸ್, ಬಿಜೆಪಿ ಎಲ್ಲ ಸರ್ಕಾರಗಳೂ ಅಧಿಕಾರಿಗಳು ಹೇಳಿದಂತೆ ಕೇಳ್ತಾರೆ ಎಂದು ಆರೋಪಿಸಿದರು.

ಅಶೋಕ ಪಟ್ಟಣ ಮಾತನಾಡಿ, ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತಂದು ಪರಿಹರಿಸಲು ಯತ್ನಿಸುತ್ತೇವೆ ಎಂದರು.

ಬಿ.ಡಿ. ಹಿರೇಮಠ ಪ್ರತಿಕ್ರಿಯಿಸಿ, ಸದನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆ ಕುರಿತು ಚರ್ಚೆ ಮಾಡದಿದ್ದರೆ ಡಿ. 15ರಿಂದ ಉಪವಾಸ ಕೂರ್ತೇವೆ. ವಿಧಾನಸೌಧ ನಿಧಾನಸೌಧವಾಗಬಾರದು ಎಂದು ಎಚ್ಚರಿಕೆ ನೀಡಿದರು.

ಆಗ ಮಾತನಾಡಿದ ಅಶೋಕ ಪಟ್ಟಣ, "ನಾನೋರ್ವ ಶಾಸಕನಾಗಿ ಹಿರೇಮಠ ಅವರು ಸಲ್ಲಿಸಿರುವ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಾಮಾಣಿಕವಾಗಿ ಚರ್ಚೆ ಮಾಡುತ್ತೇನೆ" ಎಂದು ಭರವಸೆ ನೀಡಿದರು.

"ಬಿಜೆಪಿಯವರು ಪ್ರತಿಭಟನೆ, ಕಳಂಕಿತರ ರಾಜಿನಾಮೆಗೆ ಆಗ್ರಹ ಹೊರತುಪಡಿಸಿ ಇನ್ನೇನು ಮಾಡ್ತೀರಿ" ಎಂದು ಶ್ಯಾಮಸುಂದರ್ ಪ್ರಶ್ನಿಸಿದರು.
ಸಂಜಯ ಪಾಟೀಲ ಉತ್ತರಿಸಿ "ಕಸ್ತೂರಿ ರಂಗನ್ ವರದಿ ಕುರಿತು ಪ್ರಸ್ತಾಪ ಮಾಡುತ್ತೇವೆ" ಎಂದರು.

ಆಗ ಶ್ಯಾಮಸುಂದರ್ "ಸದನದಲ್ಲಿ ಶಾಸಕರ ಉಪಸ್ಥಿತಿ ಅತ್ಯಂತ ಮುಖ್ಯ" ಎಂದು ಎಚ್ಚರಿಸಿದರು.

ರೈತರಿಗೆ ವೈಜ್ಞಾನಿಕ ಬೆಲೆ ಕೊಡಿ...
ರೈತರೆಂದರೆ ಕಬ್ಬು ಬೆಳೆಗಾರರಷ್ಟೇ ಅಲ್ಲ. ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಿ. ಇದಕ್ಕಾಗಿ ಸಾವಿರಾರು ಕೋಟಿ ರೂ. ನಿಗದಿಪಡಿಸಿ ಎಂದು ಶ್ಯಾಮಸುಂದರ್ ಆಗ್ರಹಿಸಿದರು.

ಇದನ್ನು ಬಿ.ಡಿ. ಹಿರೇಮಠ ಬೆಂಬಲಿಸಿದರು. ಅಲ್ಲದೆ, "ಅಧಿಕಾರಿಗಳು ಹೇಳಿದಂತೆ ಕೇಳುವುದನ್ನು ಜನಪ್ರತಿನಿಧಿಗಳು ನಿಲ್ಲಿಸಬೇಕು" ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ ಪಟ್ಟಣ,"ಎಲ್ಲ ಸರ್ಕಾರದಲ್ಲೂ ಇದ್ದ ಅಧಿಕಾರಿಗಳು ಒಂದೇ. ನೀವು ಮುಖ್ಯಮಂತ್ರಿ ಆಗಿದ್ರೂ ಹಾಗೇ ಮಾಡ್ತಿದ್ರಿ" ಎಂದು ಸಮರ್ಥಿಸಿದರು.

"ಸಿದ್ದರಾಮಯ್ಯ ಅವರು ಹೋರಾಟಗಾರರಾಗಿದ್ದಾಗ ಇದ್ದ ಕೆಚ್ಚೆದೆ ಈಗಿಲ್ಲ" ಎಂದು ಬಿ.ಡಿ. ಹಿರೇಮಠ ಟೀಕಿಸಿದರು.

ಸಂಜಯ ಪಾಟೀಲ ಮಾತನಾಡಿ, "ಸದನದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ನಿವಾರಣೆಗೆ ಚರ್ಚೆ ಆಗಬೇಕು. ಅಧಿವೇಶನ ಸಂತೆಯಂತೆ ಆಗಬಾರದು. ಪ್ರತಿಭಟನೆಗಳಿಗೆ ನ್ಯಾಯ ಸಿಗಬೇಕು" ಎಂದು ಆಗ್ರಹಿಸಿದರು.

ಕೊನೆಯಲ್ಲಿ ಮಾತನಾಡಿದ ಶ್ಯಾಮ ಸುಂದರ್ "ಎಲ್ಲರೂ ಅವರವರ ಕೆಲಸ ಮಾಡಿದರೆ ಸಾಕು, ಅಭಿವೃದ್ಧಿಯಾಗುತ್ತದೆ" ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಬೆಳಗಾವಿಯ ತಾಪಮಾನದ ಕುರಿತು ತಿಳಿಸಿ, ನಗರದಲ್ಲಿ ಸೋಮವಾರ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಎಂದು ತಿಳಿಸಿದರು.

English summary
Oneindia Kannada chief editor Sham Sundar questioned protest of BJP and negligence of Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X